ತಮಿಳುನಾಡು ವಿಧಾನಸಭೆಯಿಂದ ಡಿಎಂಕೆ ಶಾಸಕರ ಅಮಾನತು

ಚೆನ್ನೈ (ಪಿಟಿಐ): ಸುಗಮ ಕಲಾಪಕ್ಕೆ ಸಹಕಾರ ನೀಡದ ಕಾರಣಕ್ಕೆ 80ಕ್ಕೂ ಹೆಚ್ಚು ಡಿಎಂಕೆ ಶಾಸಕರನ್ನು ತಮಿಳುನಾಡು ವಿಧಾನಸಭೆಯಿಂದ ಬುಧವಾರ ಅಮಾನತುಗೊಳಿಸಲಾಗಿದೆ.
ಸದನದಲ್ಲಿ ಗದ್ದಲ ಎಬ್ಬಿಸಿದ ಡಿಎಂಕೆ ಶಾಸಕರನ್ನು ಒಂದು ವಾರ ಕಾಲ ಅಮಾನತುಗೊಳಿಸಿ ಸ್ಪೀಕರ್ ಪಿ. ಧನಪಾಲ್ ಆದೇಶಿಸಿದ್ದಾರೆ.
ಆಡಳಿತಾರೂಢ ಎಐಎಡಿಎಂಕೆ ಹಾಗೂ ವಿರೋಧ ಪಕ್ಷ ಡಿಎಂಕೆ ನಡುವಿನ ಜಿದ್ದಾಜಿದ್ದಿಯಿಂದ ಬುಧವಾರ ವಿಧಾನಸಭಾ ಕಲಾಪದ ವೇಳೆ ತೀವ್ರ ಗದ್ದಲ ಉಂಟಾಯಿತು.
ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರ ‘ನಮಕ್ಕು ನಾಮೆ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಶುರುವಾಯಿತು.
ಡಿಎಂಕೆ ಸದಸ್ಯರು ಸ್ಟಾಲಿನ್ ಪರ ವಹಿಸಿ ಏರಿದ ದನಿಯಲ್ಲಿ ಮಾತನಾಡಿದರು. ಎಐಎಡಿಎಂಕೆ ಹಾಗೂ ಡಿಎಂಕೆ ಸದಸ್ಯರ ಮಧ್ಯೆ ಆರೋಪ – ಪ್ರತ್ಯಾರೋಪಗಳು ನಡೆದು ಸದನದಲ್ಲಿ ಗದ್ದಲ ಹೆಚ್ಚಾಯಿತು.
ಡಿಎಂಕೆ ಸದಸ್ಯರು ಸ್ಪೀಕರ್ ಪಿ. ಧನಪಾಲ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಗದ್ದಲ ನಿಲ್ಲಿಸಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡದೆ ಇದ್ದರೆ ಸದನದಿಂದ ಹೊರಹಾಕಿಸಬೇಕಾಗುತ್ತದೆ ಎಂಬ ಸ್ಪೀಕರ್ ಎಚ್ಚರಿಕೆಯನ್ನು ಡಿಎಂಕೆ ಸದಸ್ಯರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಗದ್ದಲ ಹೆಚ್ಚಾದ್ದರಿಂದ ಹಣಕಾಸು ಸಚಿವ ಒ. ಪನ್ನೀರ್ಸೆಲ್ವಂ ಅವರು ಡಿಎಂಕೆ ಪಕ್ಷದ ಸದಸ್ಯರನ್ನು ಅಮಾನತುಗೊಳಿಸುವ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಸ್ಪೀಕರ್ ಅವರು ಅಮಾನತು ಆದೇಶ ಹೊರಡಿಸಿದರೂ ಸದನದಿಂದ ಹೊರಹೋಗದ ಕೆಲ ಡಿಎಂಕೆ ಶಾಸಕರನ್ನು ಮಾರ್ಷಲ್ಗಳು ಹೊತ್ತು ಹೊರಹಾಕಿದರು.
ಎಂ.ಕೆ. ಸ್ಟಾಲಿನ್ ಅವರನ್ನು ಮಾರ್ಷಲ್ಗಳು ಸದನದಿಂದ ಹೊರಹಾಕಿದ ದೃಶ್ಯ:
WATCH: DMK MLAs marshalled out of the Tamil Nadu assembly after speaker suspended them for one week.https://t.co/S0FNr6jc5M
— ANI (@ANI_news) August 17, 2016
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.