ಶನಿವಾರ, ಏಪ್ರಿಲ್ 10, 2021
29 °C

ತಮಿಳುನಾಡು ವಿಧಾನಸಭೆ ಚುನಾವಣೆ ಶಾಂತಿಯುತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನಡೆದ 14ನೇ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಂಕೆಗಳೆರಡೂ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿವೆ.ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅಧಿಕಾರಕ್ಕೆ ಬಂದರೆ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆಯ ಸುಳಿವನ್ನು ನೀಡಿದ್ದಾರೆ.ಮತದಾನದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉದಯಿಸುವ ಸೂರ್ಯ (ಡಿಎಂಕೆ)ನನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ನಮ್ಮದೇ ಸ್ವತಂತ್ರ ಅಥವಾ ಸಮ್ಮಿಶ್ರ ಸರ್ಕಾರವಾಗಬಹುದು, ಒಟ್ಟಿನಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸೀಟುಗಳನ್ನು ನಾವು ಗೆಲ್ಲುತ್ತೇವೆ’ ಎಂದು ಸಮ್ಮಿಶ್ರ ಸರ್ಕಾರ ರಚನೆಯ ಸಂಭಾವ್ಯದ ಸುಳಿವು ನೀಡಿದರು.

 

‘ಸರ್ಕಾರದ ಇವರೆಗಿನ ಜನಪ್ರಿಯ ಕಾರ್ಯಕ್ರಮಗಳು ಮತ್ತು ಒಟ್ಟಾರೆ ಆಡಳಿತ ಗುಣಮಟ್ಟದ ಆಧಾರದಲ್ಲಿ ಸುಮಾರು 200 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ’ ಎಂದು ಕರುಣಾ ಪುತ್ರ ಮತ್ತು ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದರು.ಅತ್ತ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಪ್ರಚಂಡ ಗೆಲುವಿನ ವಿಶ್ವಾ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ನೇಹಿತೆ ಶಶಿಕಲಾ ಅವರೊಂದಿಗೆ ಮತದಾನದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನಮಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಹಣ ಬಲ ಪ್ರಯೋಗ ನಡೆದಿದೆ. ಆಯೋಗ ವಶಪಡಿಸಿಕೊಂಡಿರುವ 50 ಕೋಟಿ ರೂ ಹಣ ‘ಮಂಜುಗಡ್ಡೆಯ ತುಣುಕು’ ಮಾತ್ರವಷ್ಟೆ. ಮತದಾರರನ್ನು ಸೆಳೆಯಲು ಸುಮಾರು 5 ಸಾವಿರ ಕೋಟಿಗೂ ಅಧಿಕ ಹಣ ಚಲಾವಣೆಯಾಗಿದೆ ಎಂದು ಆರೋಪಿಸಿದರು.ಆದರೆ ಜನರು ಸರ್ಕಾರದ ಬದಲಾವಣೆ ಬಯಸಿರುವುದರಿಂದ ಈ ಕುರಿತು ನಾನು ಹೆಚ್ಚು ಚಿಂತಿಸುವುದಿಲ್ಲ. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಡಿಎಂಕೆ ಸರ್ಕಾರವನ್ನು ಕಿತ್ತೊಗೆದು ಎಐಎಡಿಎಂಕೆಯನ್ನು ಅಧಿಕಾರಕ್ಕೆ ತರಲು ಅವರು ನಿರ್ಧರಿಸಿದ್ದಾರೆ.

2ಜಿ ತರಂಗಾಂತರ ಹಂಚಿಕೆ ಹಗರಣ ಮತ್ತು ಇತರ ಹಗರಣಗಳು ಮತದಾರನ ಮೇಲೆ ಪರಿಣಾಮ ಬೀರಿದೆ ಎಂದು ಪ್ರತಿಪಾದಿಸಿದರು.ಭದ್ರತಾ ಸಿಬ್ಬಂದಿಗೆ ಭತ್ಯೆ ನಿರಾಕರಣೆ: ಭದ್ರತಾ ಸಿಬ್ಬಂದಿಗಳಿಲ್ಲದಿದ್ದರೆ ಹಿಂಸಾಚಾರ ನಡೆಸಲು ಸಾಧ್ಯವಾಗುತ್ತದೆ ಎಂಬ ದುರುದ್ದೇಶದಿಂದ ಆಡಳಿತಾರೂಢ ಡಿಎಂಕೆ ಭದ್ರತಾ ಸಿಬ್ಬಂದಿಗಳಿಗೆ ದಿನಭತ್ಯೆ ನೀಡಲು ನಿರಾಕರಿಸಿತ್ತು ಎಂದು ಜಯಲಲಿತಾ ಆರೋಪಿಸಿದ್ದಾರೆ.

 

ವಿಧಾನಸಭೆ ಚುನಾವಣೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ದಿನಭತ್ಯೆ 300 ರೂ ಗಳನ್ನು ನೀಡಲು ಮುಖ್ಯ ಕಾರ್ಯದರ್ಶಿಗಳು ನಿರಾಕರಿಸಲಿದ್ದರು ಅಥವಾ ಈಗಾಗಲೇ ನಿರಾಕರಿಸಿದ್ದಾರೆ ಎಂಬಂತಹ ಮಾಹಿತಿ ತಮಗೆ ಲಭ್ಯವಾಗಿದೆ. ಚುನಾವಣಾ ಆಯೋಗ ಇದನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸರ್ಕಾರ ಭತ್ಯೆ ನಿರಾಕರಿಸಿದ್ದರಿಂದ ಭದ್ರತಾ ಸಿಬ್ಬಂದಿ ಇಂದಿನಿಂದ ಮುಷ್ಕರ ನಡೆಸಲು ಚಿಂತನೆ ನಡೆಸಿದ್ದರು. ಇದು ಡಿಎಂಕೆಯ ಕುತಂತ್ರವಾಗಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡು ಗಲಭೆ ಸೃಷ್ಟಿಸಿ ನಕಲಿ ಮತಗಳನ್ನು ಪಡೆಯುವುದು ಅದರ ಉದ್ದೇಶವಾಗಿತ್ತು ಎಂದು ಅವರು ಆರೋಪಿಸಿದರು.ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಪ್ರವೀಣ್ ಕುಮಾರ್ ಅವರಿಗೆ ತಪ್ಪು ಮಾಹಿತಿ ಲಭ್ಯವಾಗಿದೆ  ಎಂದು ಹೇಳಿದರು.

 

ರಜನಿ ಮತ ಚಲಾವಣೆ

ತಮಿಳು ನಟ ರಜನಿಕಾಂತ್ ಸ್ಟೆಲ್ಲಾ ಮೆರಿಸ್ ಕಾಲೇಜ್ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಬಳಿಕ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳಿಂದ ಜನರು ಕಂಗೆಟ್ಟಿದ್ದಾರೆ ಎಂದು ಹೇಳಿದರು.ಟಿವಿ ಛಾಯಾಗ್ರಾಹಕನೊಬ್ಬ ರಜನಿ ಮತಚಲಾಯಿಸುವುದನ್ನು ಸೆರೆ ಹಿಡಿದ ಕೋನದಿಂದ ಅವರು ಯಾವ ಪಕ್ಷದ ಚಿನ್ಹೆಯ ಮುಂಭಾಗದಲ್ಲಿರುವ ಗುಂಡಿ ಒತ್ತಿದ್ದಾರೆ ಎಂಬುದು ವಾಹಿನಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ಹೇಳಲಾಗಿದೆ. ಆದರೆ ಅಂತಹ ದೃಶ್ಯದ ತುಣುಕನ್ನು ತಾವು ವೀಕ್ಷಿಸಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

 

ಡಿಎಂಡಿಕೆ ಸಂಸ್ಥಾಪಕ, ನಟ ವಿಜಯಕಾಂತ್ ಪತ್ನಿ ಪ್ರೇಮಲತಾ ಅವರೊಂದಿಗೆ ವಿರುಗಂಬಕ್ಕಂ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕೇಂದ್ರ ಸಚಿವರಾದ ಎಂ.ಕೆ.ಆಳಗಿರಿ, ಪಿ.ಚಿದಂಬರಂ, ಎಸ್.ಎಸ್ ಪಳನಿಮನಿಕ್ಕಂ, ಎಂಡಿಎಂಕೆ ಮುಖ್ಯಸ್ಥ ವೈಕೋ ಮುಂತಾದ ಪ್ರಮುಖ ರಾಜಕೀಯ ಮುಖಂಡರು ಮತದಾನದಲ್ಲಿ ಭಾಗವಹಿಸಿದ್ದರು.ಡಿಎಂಕೆ ಸದಸ್ಯನ ಬಂಧನ

 

ಕೊಯಮತ್ತೂರು (ಪಿಟಿಐ): ಮತದಾರರಿಗೆ ಅಕ್ರಮವಾಗಿ ಹಣ ಹಂಚಿಕೆ ಮಾಡುತ್ತಿದ್ದ ಆರೋಪದಲ್ಲಿ ನೀಲಗಿರಿ ಜಿಲ್ಲೆಯ ಕೂನುರ್ ವಿಧಾನಸಭೆ ಕ್ಷೇತ್ರದ ಗ್ರಾಮವೊಂದರ ಡಿಎಂಕೆ ಬೆಂಬಲಿತ ಸರಪಂಚ್‌ನನ್ನು ಬಂಧಿಸಲಾಗಿದೆ. ರಾಮಚಂದ್ ಪಂಚಾಯಿತಿ ಮುಖ್ಯಸ್ಥ ಭೋಜನ್ ವಿರುದ್ಧ ಎಐಎಡಿಎಂಕೆ ಕಾರ್ಯಕರ್ತರು ನೀಡಿದ ದೂರಿನನ್ವಯ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಘರ್ಷಣೆ: ಇಬ್ಬರಿಗೆ ಗಾಯ

ಮದುರೆ (ಪಿಟಿಐ
): ಡಿಎಂಕೆ ಅಭ್ಯರ್ಥಿಯಿಂದ ಅನಧಿಕೃತ ಕಾರು ಬಳಕೆ ಕುರಿತಂತೆ ಮೇಲೂರು ಕ್ಷೇತ್ರದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಅಭ್ಯರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತದಾನ ವಿಳಂಬ

ನೀಲಗಿರಿ ಜಿಲ್ಲೆಯ ನಾಗಂಪಲ್ಲಿಯಲ್ಲಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಕಾರಣ ಮತದಾನ ಮೂರು ಗಂಟೆಗೂ ಅಧಿಕ ವಿಳಂಬದ ಬಳಿಕ ಆರಂಭವಾಯಿತು. ತಾವು ಮತಗಟ್ಟೆಯ ಬಳಿ ಬಾರದಂತೆ ತಡೆಯುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಆ ಪ್ರದೇಶದಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

 

ಬೆಂಕಿ ಹಚ್ಚಿದ್ದಕ್ಕಾಗಿ ಅಧಿಕಾರಿಗಳು ಕ್ಷಮೆ ಕೇಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಆದರೆ ಆರೋಪ ನಿರಾಕರಿಸಿದ ಅಧಿಕಾರಿಗಳು ಇದು ಆಕಸ್ಮಿಕ ಘಟನೆಯಾಗಿದ್ದು ಬೇಸಗೆಯಲ್ಲಿ ಇದು ಸಹಜವಾಗಿ ಸಂಭವಿಸುತ್ತಿರುತ್ತದೆ ಎಂದು ಸ್ಪಷ್ಟನೆ ನೀಡಿದರು.

 

ಕಾಂಗ್ರೆಸ್ ಮುಖಂಡನ ಪತ್ನಿಹೆಸರು ಪಟ್ಟಿಯಿಂದ ಕಾಣೆ

ಚೆನ್ನೈ (ಐಎಎನ್‌ಎಸ್): ಚುನಾವಣಾ ಪಟ್ಟಿಯಲ್ಲಿ  ಹೆಸರು ಇಲ್ಲದ ಕಾರಣ ತಮಿಳುನಾಡಿನ ಕಾಂಗ್ರೆಸ್ ಮುಖ್ಯಸ್ಥ ಕೆ.ವಿ. ತಂಗಬಾಲು ಅವರ ಪತ್ನಿ ಜಯಂತಿ ಮತದಾನದಿಂದ ವಂಚಿತರಾದರು.

 

ವೆಲಚರಿ ಮತಕೇಂದ್ರದಲ್ಲಿ ಮತದಾರರ ಮಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದ್ದರಿಂದ ಜಯಂತಿ ನಿರಾಶೆಯಿಂದ ಹಿಂದಿರುಗಿದರು. ಮೈಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ನೇಮಕಗೊಂಡಿದ್ದ ಜಯಂತಿ ಅವರ ನಾಮಪತ್ರ ಅಪೂರ್ಣವಾಗಿದ್ದರಿಂದ ತಿರಸ್ಕೃತಗೊಂಡಿತ್ತು.

ಮತಹಾಕದೆ ಮರಳಿದ ನಟಿ

ಕೊಚ್ಚಿ (ಪಿಟಿಐ): ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತು ಕಾಯುವ ತಾಳ್ಮೆಯಿಲ್ಲದೆ ನೇರವಾಗಿ ಒಳನುಗ್ಗಲು ಯತ್ನಿಸಿ ಮತದಾರನೊಬ್ಬನ ಆಕ್ರೋಶಕ್ಕೆ ಗುರಿಯಾದ ಮಲಯಾಳಂನ ಖ್ಯಾತ ನಟಿ ಕಾವ್ಯಾ ಮಾಧವನ್ ಮತ ಹಾಕದೆ ಮರಳಿದ ಪ್ರಸಂಗ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

 

ತನ್ನ ಪೋಷಕರೊಂದಿಗೆ ಮತದಾನಕ್ಕೆ ತೆರಳಿದ್ದ ಕಾವ್ಯಾ ಸಾಲಿನಲ್ಲಿ ನಿಂತುಕೊಳ್ಳದೆ ನೇರವಾಗಿ ಮತದಾನ ನಡೆಯುವ ಕೊಠಡಿಗೆ ತೆರಳಿದರು. ನಟಿಯ ಈ ವರ್ತನೆಯಿಂದ ಕುಪಿತನಾದ ಮತದಾರನೊಬ್ಬ ಅದನ್ನು ಪ್ರಶ್ನಿಸಿ ಪ್ರತಿಭಟಿಸಿದ. ಇದರಿಂದ ಕಾವ್ಯಾ ಮತದಾನ ಮಾಡದೆ ಹಿಂದಿರುಗಿದರು ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.