ತಮ್ಮದೇ ಸಚಿವಾಲಯ ದೂಷಿಸಿದ ಜೈರಾಮ್ ರಮೇಶ್

7

ತಮ್ಮದೇ ಸಚಿವಾಲಯ ದೂಷಿಸಿದ ಜೈರಾಮ್ ರಮೇಶ್

Published:
Updated:

ನವದೆಹಲಿ (ಪಿಟಿಐ): ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಮ್ಮಿಕೊಂಡಿರುವ `ಸಂಪೂರ್ಣ ನೈರ್ಮಲ್ಯೀಕರಣ ಅಭಿಯಾನ~ ಕೇವಲ `ಸಾಂಕೇತಿಕ~ ಅಭಿಯಾನವಾಗಿ ಮಾರ್ಪಟ್ಟಿದ್ದು, ಬಯಲು ಶೌಚಾಲಯವನ್ನು ನಿಯಂತ್ರಿಸಲು ಯಶಸ್ವಿಯಾಗಿಲ್ಲ ಎಂದು  ಸಚಿವ ಜೈರಾಮ್ ರಮೇಶ್ ಆರೋಪಿಸಿದ್ದಾರೆ.ತಮ್ಮದೇ ಸಚಿವಾಲಯದ ಕಾರ್ಯವೈಖರಿಯನ್ನು ದೂಷಿಸಿ ಹೇಳಿಕೆ ನೀಡಿರುವ ಅವರು, ಶೌಚಾಲಯ ನಿರ್ಮಾಣಕ್ಕೆಂದು ಅಭಿಯಾನದ ಮೂಲಕ ಬಡವರಿಗೆ ಕೇವಲ ಮೂರು ಸಾವಿರ ರೂಪಾಯಿ ನೀಡಲಾಗುತ್ತಿದೆ, ಇದರಿಂದ ಅವರು `ನಿಷ್ಪ್ರಯೋಜಕ ಶೌಚಾಲಯ~ಗಳನ್ನು ಮಾತ್ರ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ.ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತಗೊಳಿಸಬೇಕಾದಲ್ಲಿ ಶೌಚಾಲಯಗಳ ಸ್ಥಿತಿ ಸುಧಾರಿಸಬೇಕು. ಸಿಕ್ಕಿಂ ಈ ದಿಸೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಹಿಮಾಚಲ ಪ್ರದೇಶ ಸಂಪೂರ್ಣ ಗುರಿ ಸಾಧಿಸುವಲ್ಲಿ ಹೆಜ್ಜೆ ಇಡುತ್ತಿದೆ ಎಂದರು.ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ ಸಿದ್ಧಪಡಿಸಿರುವ ಏಷ್ಯಾ- ಪೆಸಿಫಿಕ್ ರಾಷ್ಟ್ರಗಳ ಸಹಸ್ರಮಾನದ ಗುರಿ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೇವಲ ಲಾಭದಾಯಕ ಚಟುವಟಿಕೆಗಳತ್ತ ಗಮನಹರಿಸುತ್ತಿರುವ ಮಹಿಳಾ ಸ್ವಸಹಾಯ ಗುಂಪುಗಳು ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.ಗ್ರಾಮಗಳಲ್ಲಿ ಶೌಚಾಲಯ  ನಿರ್ಮಾಣಕ್ಕೆ 8000 ರೂಪಾಯಿ ಖರ್ಚಾಗುತ್ತದೆ. ಹೀಗಿರುವಾಗ ಸರ್ಕಾರದ ನಿಯಮಗಳಿಗನುಸಾರ ಕೇವಲ 3000 ರೂಪಾಯಿ ನೀಡಿದರೆ ಬಳಕೆಯೋಗ್ಯ ಶೌಚಾಲಯ ನಿರ್ಮಾಣ ಆಗುವುದಾದರೂ ಹೇಗೆ ಸಾಧ್ಯ? ಅದಕ್ಕೆ ಅವುಗಳೀಗ ಗೋದಾಮುಗಳಾಗಿ ಮಾರ್ಪಟ್ಟಿವೆ ಎಂದು ವಿಷಾದಿಸಿದರು.ಅಭಿಯಾನಕ್ಕಾಗಿ ಸರ್ಕಾರ ಕನಿಷ್ಠ ಮೊತ್ತವನ್ನು ಮಂಜೂರು ಮಾಡಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಯೋಜನೆಯ ಮಹತ್ವವನ್ನು ಅರಿತು ಅದನ್ನು ಸಮಗ್ರ ಯೋಜನೆಯಾಗಿ ಪರಿಗಣಿಸಿ ಸರ್ಕಾರ ಅನುದಾನವನ್ನು ಹೆಚ್ಚಿಸಬೇಕಾಗಿದೆ. ಸಂಪೂರ್ಣ ನಿರ್ಮಲೀಕರಣ ಅಭಿಯಾನವನ್ನು 1999ರಲ್ಲಿ ಜಾರಿಗೆ ತರಲಾಗಿದ್ದು ದೇಶದ 607 ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.ಶೌಚಾಲಯ ಬೇಡ, ಮೊಬೈಲ್ ಬೇಕು: ಪ್ರಸ್ತುತ ಗ್ರಾಮೀಣ ಮಹಿಳೆಯರು ಮೊಬೈಲ್ ಫೋನ್‌ಗಳಿಗೆ ಬೇಡಿಕೆ ಇಡುತ್ತಾರೆ, ಆದರೆ ಶೌಚಾಲಯಗಳನ್ನು ಮಾತ್ರ ಕೇಳುವುದಿಲ್ಲ. ಪರಿಸರ ನೈರ್ಮಲ್ಯೀಕರಣ ಪ್ರಮುಖವಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಮನೋಭಾವವನ್ನು ನಾವು ಕಾಣುತ್ತಿದ್ದೇವೆ ಎಂದು ರಮೇಶ್ ಅವರು ತಿಳಿಸಿದರು.ಸಚಿವರು ವಿಷಾದದಿಂದ ನೀಡಿದ ಈ ಹೇಳಿಕೆ ಸಭಿಕರ ಮುಜುಗರಕ್ಕೆ ಕಾರಣವಾಯಿತು.

`ದೊಡ್ಡ ವಿರೋಧಾಭಾಸದ ಕೇಂದ್ರವಾಗಿರುವ ಭಾರತದಲ್ಲಿ ನೈರ್ಮಲ್ಯೀಕರಣ ಗಂಭೀರವಾದ ಸಮಸ್ಯೆಯಾಗಿದೆ. ಇಲ್ಲಿ ಒಂದೆಡೆ ಸುಮಾರು ಶೇ 60ರಷ್ಟು ಮಂದಿ ಬಯಲು ಶೌಚಾಲಯವನ್ನೇ ಬಳಸುತ್ತಿದ್ದಾರೆ, ಇನ್ನೊಂದೆಡೆ 70 ಕೋಟಿಯಷ್ಟು ಮೊಬೈಲ್ ಫೋನ್‌ಗಳು ಬಳಕೆಯಲ್ಲಿವೆ. ನಾವು ಶೌಚಾಲಯಗಳನ್ನು ನಿರ್ಮಿಸಿಕೊಟ್ಟರೂ ಅವು ಸರಿಯಾಗಿ ಬಳಕೆಯಾಗುತ್ತಲೇ ಇಲ್ಲ~ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry