ತರಂಗಾಂತರ ಕುಣಿಕೆ: ವೊಡಾಫೋನ್, ಏರ್ ಟೆಲ್ ಕಚೇರಿಗಳ ಮೇಲೆ ಸಿಬಿಐ ದಾಳಿ

7

ತರಂಗಾಂತರ ಕುಣಿಕೆ: ವೊಡಾಫೋನ್, ಏರ್ ಟೆಲ್ ಕಚೇರಿಗಳ ಮೇಲೆ ಸಿಬಿಐ ದಾಳಿ

Published:
Updated:
ತರಂಗಾಂತರ ಕುಣಿಕೆ: ವೊಡಾಫೋನ್, ಏರ್ ಟೆಲ್ ಕಚೇರಿಗಳ ಮೇಲೆ ಸಿಬಿಐ ದಾಳಿ

ನವದೆಹಲಿ (ಪಿಟಿಐ): ಪ್ರಮೋದ್ ಮಹಾಜನ್ ಅವರು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ ತರಂಗಾಂತರ ಹಂಚಿಕೆ ಅಕ್ರಮಗಳು ನಡೆದ ಆಪಾದನೆಗಳಿಗೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಶ್ಯಾಮಲ್ ಘೋಷ್, ವೊಡಾಫೋನ್ ಮತ್ತು ಏರ್ ಟೆಲ್ ದೂರಸಂಪರ್ಕ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ, ಶನಿವಾರ ಮುಂಬೈಯಲ್ಲಿನ ವೊಡಾಫೋನ್ ಕಚೇರಿ ಹಾಗೂ ಗುಡಗಾಂವದಲ್ಲಿನ ಏರ್ ಟೆಲ್ ಕಚೇರಿಗಳ ಮೇಲೆ ದಾಳಿ ನಡೆಸಿ ತೀವ್ರ ಶೋಧ ನಡೆಸಿತು.ಘೋಷ್ ಹೊರತಾಗಿ ಭಾರತ ಸಂಚಾರ ನಿಗಮ ಲಿಮಿಟೆಡ್ ಮಾಜಿ ನಿರ್ದೇಶಕ ಜೆ.ಆರ್. ಗುಪ್ತ  ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಕರಣ ದಾಖಲಿಸಿದ ಬೆನ್ನಲ್ಲೇ ಸಿಬಿಐ ತಂಡಗಳು ವೊಡಾಫೋನ್ ನ ಮುಂಬೈ ಕಚೇರಿ ಮತ್ತು ಏರ್ ಟೆಲ್ ನ ಗುಡಗಾಂವ್ ಕಚೇರಿ, ಘೋಷ್ ಮತ್ತು ಗುಪ್ತ ಅವರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡವು ಎಂದು ಸುದ್ದಿ ಸಂಸ್ಥೆ ಹೇಳಿದೆ.

ದಾಳಿಗಳಿಗೆ ಪ್ರತಿಕ್ರಿಯಿಸಿದ ಭಾರ್ತಿ ಏರ್ ಟೆಲ್, ತಾನು ಕಾರ್ಪೋರೇಟ್ ಆಡಳಿತಕ್ಕೆ ಸಂಬಂಧಿಸಿದಂತೆ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದ್ದು, ನಿಯಮಾವಳಿಗಳನ್ನು ಪಾಲಿಸಿರುವುದಾಗಿ ತಿಳಿಸಿದೆ.

 ~ನಮಗೆ ಸರ್ಕಾರದ ಘೋಷಿತ ನೀತಿಗನುಗುಣವಾಗಿ ಕಾಲ ಕಾಲಕ್ಕೆ ತರಂಗಾಂತರ ಮಂಜೂರಾತಿ ಮಾಡುತ್ತಾ ಬರಲಾಗಿದೆ ಎಂಬುದನ್ನು ಸ್ಪಷ್ಟ ಶಬ್ಧಗಳಲ್ಲಿ ಹೇಳಬಯಸುತ್ತೇವೆ~ ಎಂದು ಭಾರ್ತಿ ಏರ್ ಟೆಲ್ ವಕ್ತಾರರು ಪ್ರತಿಪಾದಿಸಿದರು.

~ನಾವು ಎಲ್ಲ ವಿವರಗಳು ಮತ್ತು ಪತ್ರವ್ಯವಹಾರದ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸುತ್ತಿದ್ದೇವೆ. ಮುಂದೆಯೂ ಈ ವಿಚಾರದಲ್ಲಿ ಯಾವುದೇ ಅಗತ್ಯ ಬೆಂಬಲವನ್ನು ನೀಡುತ್ತೇವೆ~ ಎಂದು ಅವರು ನುಡಿದರು.

ಪ್ರತಿಕ್ರಿಯೆಗಾಗಿ ವೊಡಾಫೋನ್ ವಕ್ತಾರರನ್ನು ಸಂಪರ್ಕಿಸಿದಾಗ ಬೆಳವಣಿಗೆಗಳ ಬಗ್ಗೆ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.

ಮಹಾಜನ್ ಅವಧಿಯಲ್ಲಿ ಕೆಲವು ಕಂಪೆನಿಗಳಿಗೆ ನಿಗದಿತ ಮಿತಿಗಿಂತ ಹೆಚ್ಚಿನ ತರಂಗಾಂತರ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry