ತರಂಗಾಂತರ: ನೂತನ ದೂರಸಂಪರ್ಕ ನೀತಿ ಘೋಷಣೆ

7

ತರಂಗಾಂತರ: ನೂತನ ದೂರಸಂಪರ್ಕ ನೀತಿ ಘೋಷಣೆ

Published:
Updated:
ತರಂಗಾಂತರ: ನೂತನ ದೂರಸಂಪರ್ಕ ನೀತಿ ಘೋಷಣೆ

ನವದೆಹಲಿ (ಪಿಟಿಐ): ದೂರಸಂಪರ್ಕ ಸೇವಾ ಕಂಪೆನಿಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ನೂತನ ದೂರಸಂಪರ್ಕ ನೀತಿಯನ್ನು (ಎನ್‌ಟಿಪಿ) ಸರ್ಕಾರ ಬುಧವಾರ ಘೋಷಿಸಿದೆ.ಈ ನೂತನ ನೀತಿಯನ್ವಯ ದೂರ ಸಂಪರ್ಕ ಸೇವಾ ಕಂಪೆನಿಗಳು ಹೆಚ್ಚಿನ ತರಂಗಾಂತರವನ್ನು ಪಡೆಯುವ ಸ್ವಾತಂತ್ರ್ಯ ಹೊಂದಿರುತ್ತವೆ. ಅಲ್ಲದೇ ಅವುಗಳಿಗೆ ಸ್ವಾಧೀನ ಮತ್ತು ವಿಲೀನ ಪ್ರಕ್ರಿಯೆಗೆ ಅನುಮತಿಯನ್ನೂ ನೀಡಲಾಗುತ್ತದೆ. ಮಾತ್ರವಲ್ಲ, ಎಲ್ಲ ಸೇವೆಗಳಿಗೂ ಏಕರೂಪದ ಪರವಾನಗಿ ಶುಲ್ಕ ವಿಧಿಸಲಾಗುತ್ತದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್, ಹೊಸ  ನೀತಿಯ ಕೆಲವು ಭಾಗಗಳನ್ನು ಮಾತ್ರ ಘೋಷಿಸಿದರು. ಪ್ರತಿ ಸೇವಾ ಕಂಪೆನಿಗೆ ದೆಹಲಿ, ಮುಂಬೈ ಹೊರತುಪಡಿಸಿ ಜಿಎಸ್‌ಎಂ ತಂತ್ರಜ್ಞಾನಕ್ಕಾಗಿ 2ಗಿ8 ಮೆಗಾಹರ್ಟ್ಸ್‌ನಷ್ಟು (ಜೋಡಿ ತರಂಗಾಂತರ) ತರಂಗಾಂತರಗಳ ಮಿತಿ ವಿಧಿಸಲಾಗುವುದು ಎಂದು ಅವರು ಹೇಳಿದರು.ದೆಹಲಿ ಮತ್ತು ಮುಂಬೈಯಲ್ಲಿ ಮಾತ್ರ ಈ ಮಿತಿ 2ಗಿ10 ಮೆಗಾಹರ್ಟ್ಸ್‌ನಷ್ಟಾಗಿರುತ್ತದೆ ಎಂದೂ ಹೇಳಿದರು. ಪ್ರಸ್ತುತ ಜಿಎಸ್‌ಎಂ ತರಂಗಾಂತರದ ಮಿತಿ 6.2 ಮೆಗಾಹರ್ಟ್ಸ್‌ನಷ್ಟಾಗಿದೆ ಎಂದರು.ಆದರೆ ಮುಕ್ತ ಮಾರುಕಟ್ಟೆಯಲ್ಲಿ ಕಂಪೆನಿಗಳು ನಿರ್ಬಂಧಿತ ಮಿತಿಗಿಂತಲೂ ಹೆಚ್ಚುವರಿ ತರಂಗಾಂತರವನ್ನು ಪಡೆಯಬಹುದಾದರೂ ಅದಕ್ಕಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಾಗುತ್ತದೆ ಎಂದು  ಸ್ಪಷ್ಟಪಡಿಸಿದರು.

ಹೊಸ ನೀತಿಯಿಂದ ಗ್ರಾಹಕರ ಮೇಲಾಗುವ ಪರಿಣಾಮಗಳ ಬಗ್ಗೆ ಕೇಳಿದ ಪ್ರಶ್ನೆಗೆ, ತರಂಗಾಂತರಗಳ ಫಲಪ್ರದ ಬಳಕೆಯಿಂದ ಗ್ರಾಹಕರು ಕೈಗೆಟಕುವ ದರದಲ್ಲಿ ಉತ್ತಮ ಸೇವೆ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.ಎಲ್ಲ ತರಂಗಾಂತರಗಳನ್ನು ಪರವಾನಗಿಗಳಿಂದ ಮುಕ್ತಗೊಳಿಸಲಾಗುವುದು. ಹಿಂದಿನ ದೂರಸಂಪರ್ಕ ನೀತಿಯಡಿ ತರಂಗಾಂತರಗಳನ್ನು ಪಡೆದಿದ್ದ ಹಳೆಯ ಸೇವಾ ಕಂಪೆನಿಗಳಿಗೆ ತರಂಗಾಂತರ ಶುಲ್ಕ ವಿಧಿಸುವ ಹಾಗೂ ಈ ಕಂಪೆನಿಗಳು ಹೆಚ್ಚುವರಿ ತರಂಗಾಂತರಗಳಿಗೆ ಒಂದೇ ಬಾರಿ ಶುಲ್ಕ ಪಾವತಿಸುವ ಕುರಿತು ಆಮೇಲೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ಇತ್ತೀಚೆಗೆ 122 ತರಂಗಾಂತರಗಳ ಪರವಾನಗಿಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.ಪರವಾನಗಿಗಳ ನವೀಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಹತ್ತು ವರ್ಷಗಳಿಗೊಮ್ಮೆ ಅವುಗಳನ್ನು ನವೀಕರಿಸಬಹುದಾಗಿದೆ ಎಂದೂ ಸಿಬಲ್ ತಿಳಿಸಿದರು.ದೂರಸಂಪರ್ಕ ಕ್ಷೇತ್ರದಲ್ಲಿ ವಿಲೀನ ಮತ್ತುಸ್ವಾಧೀನ ಪ್ರಕ್ರಿಯೆ ಕುರಿತು ಉದಾರ ನಿಲುವನ್ನು ಘೋಷಿಸಿದ ಅವರು, ವಿಲೀನಕ್ಕೆ ಮುಂದಾಗುವ ಕಂಪೆನಿಗಳು ಶೇ 35ರಷ್ಟು ಷೇರುಗಳನ್ನು ಹೊಂದಿರಬೇಕಾಗುತ್ತದೆ ಎಂದರು. ಇದಕ್ಕೂ ಮುನ್ನ ಟ್ರಾಯ್, ಕಂಪೆನಿಗಳು ಶೇ 60ರಷ್ಟು ಷೇರು ಹೊಂದಬೇಕು ಎಂದು ಶಿಫಾರಸು ಮಾಡಿತ್ತು.

ಈ ಸಂಬಂಧ ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದೂ  ಸಚಿವರು ಭರವಸೆ ನೀಡಿದರು.ಮಿಶ್ರ ಪ್ರತಿಕ್ರಿಯೆ: ಹೊಸ ದೂರಸಂಪರ್ಕ ನೀತಿಯನ್ನು ಸ್ವಾಗತಿಸಿರುವ ದೇಶದ ಪ್ರಮುಖ ದೂರಸಂಪರ್ಕ ಕಂಪೆನಿಯಾದ ಭಾರ್ತಿ ಏರ್‌ಟೆಲ್, `ದೂರಸಂಪರ್ಕ ಕ್ಷೇತ್ರದ ದೀರ್ಘಕಾಲೀನ ಅಭಿವೃದ್ಧಿ ದೃಷ್ಟಿಯಿಂದ ಹೊಸ ನೀತಿಯು ಪ್ರೋತ್ಸಾಹದಾಯಕ ಕ್ರಮವಾಗಿದೆ. ಈಗಾಗಲೇ ತುಂಬಿ ತುಳುಕುತ್ತಿರುವ ದೂರಸಂಪರ್ಕ ಮಾರುಕಟ್ಟೆಯನ್ನು ಸಂಘಟಿಸುವಲ್ಲಿ ಇದು ಹೊಸ ಹಾದಿಯನ್ನು ತೆರೆಯಲಿದೆ~ ಎಂದು ಅಭಿಪ್ರಾಯಪಟ್ಟಿದೆ. ವಿಭಿನ್ನ ಕಂಪೆನಿಗಳ ನಡುವೆ ಒಂದೇ ವೃತ್ತದಲ್ಲಿ ತರಂಗಾಂತರ ಹಂಚಿಕೆಗೂ ಹೊಸ ನೀತಿ ಅನುಮತಿ ನೀಡುತ್ತ್ದ್ದಿದರೂ, 3ಜಿ ತರಂಗಾಂತರಗಳನ್ನು ಇದರಿಂದ ಹೊರತುಪಡಿಸಿದೆ.ಈ ರೀತಿ ಹಂಚಿಕೆಗೆ ಭಾರಿ ಮೊತ್ತದ ಶುಲ್ಕ ವಿಧಿಸಿರುವುದು ಇದರ ಬಳಕೆಗೆ ತಡೆಯೊಡ್ಡಲಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಪುನರ್‌ಪರಿಶೀಲನೆ ನಡೆಸುತ್ತ ದೆಂದು ಆಶಿಸುವುದಾಗಿ ಏರ್‌ಟೆಲ್ ಹೇಳಿದೆ.  `ಈ ಹೊಸ ನೀತಿ ಟ್ರಾಯ್ ಶಿಫಾರಸಿನನ್ವಯ ಘೋಷಣೆಯಾಗಿದ್ದರೂ ಶೇ 8ರಷ್ಟು ಏಕರೂಪದ ಪರವಾನಗಿ ದರ ನಿಗದಿಪಡಿಸಿರುವುದು ನಮಗೆ ಆಘಾತ ತಂದಿದೆ. ದರದಲ್ಲಿ ಮತ್ತಷ್ಟು ಇಳಿಕೆಯಾಗುವುದೆಂದು ನಾವು ನಂಬಿದ್ದೆವು~ ಎಂದು ಜಿಎಸ್‌ಎಂ ನಿರ್ವಾಹಕರ ಕೂಟದ ಸಿಒಎಐ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಮ್ಯಾಥ್ಯೂಸ್ ಅಭಿಪ್ರಾಯಪಟ್ಟಿದ್ದಾರೆ.ಅರ್ಜಿ ತಿರಸ್ಕೃತ: ಈ ಮಧ್ಯೆ 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಸಂಸ್ಥೆಯ ಅಧಿಕಾರಿಗಳು ಇದೇ 22ರಂದು ಕೇಂದ್ರ ತನಿಖಾ ಸಂಸ್ಥೆಯ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಆದೇಶಿಸಿ ಜಾರಿಗೊಳಿಸಲಾದ ಸಮನ್ಸ್‌ಗೆ ತಡೆ ನೀಡಬೇಕು ಎಂದು ಕೋರಿ ಎಸ್ಸಾರ್ ಗ್ರೂಪ್ ಮತ್ತು ಲೂಪ್ ಟೆಲಿಕಾಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.ಬಹುಕೋಟಿ ಹಗರಣದಲ್ಲಿ ತಮ್ಮ ಮೇಲೆ ನೇರವಾದ ಭ್ರಷ್ಟಾಚಾರ ಆರೋಪವನ್ನು ಹೊರಿಸಿಲ್ಲವಾದ್ದರಿಂದ, ಈ ಕುರಿತು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ವ್ಯಾಪ್ತಿಯನ್ನು ಕಂಪೆನಿಗಳು ಅರ್ಜಿಯಲ್ಲಿ ಪ್ರಶ್ನಿಸಿದ್ದವು.

ಈ ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ವಿಭಾಗೀಯ ಪೀಠ ಅನುಮತಿ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry