ತರಂಗಾಂತರ ಹಂಚಿಕೆ: ತನಿಖೆ ವಿಳಂಬಕ್ಕೆ ಯತ್ನ

7

ತರಂಗಾಂತರ ಹಂಚಿಕೆ: ತನಿಖೆ ವಿಳಂಬಕ್ಕೆ ಯತ್ನ

Published:
Updated:

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ವಿಷಯದಲ್ಲಿ ದೂರಸಂಪರ್ಕ ಸಚಿವಾಲಯದ ಅಧಿಕಾರಿಗಳು ಸರಿಯಾಗಿ ಸಹಕಾರ ನೀಡಲಿಲ್ಲ ಮತ್ತು ಸಿವಿಸಿ ಕೈಗೊಂಡಿರುವ ತನಿಖೆ ವಿಳಂಬಗೊಳಿಸಲು ಯತ್ನಿಸಿದ್ದರು ಎಂದು ಕೇಂದ್ರ ಜಾಗೃತ ಆಯೋಗದ ಮಾಜಿ ಆಯುಕ್ತ ಪ್ರತ್ಯುಷ್ ಸಿನ್ಹಾ ಆರೋಪಿಸಿದ್ದಾರೆ.

ಸಚಿವಾಲಯವು ಆಯೋಗದ ಸಲಹೆಯನ್ನು ಪಾಲಿಸಲಿಲ್ಲ ಮತ್ತು ಹರಾಜು ಪ್ರಕ್ರಿಯೆಗೆ ವಿರುದ್ಧವಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಪ್ರಕಾರ ಪರವಾನಗಿ ವಿತರಿಸಿತು ಎಂದು ನಾಲ್ಕು ವರ್ಷಗಳ ಅಧಿಕಾರದ ಬಳಿಕ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿವೃತ್ತರಾದ ಸಿನ್ಹಾ  ಹೇಳಿದ್ದಾರೆ.

‘ವಿಚಾರಣೆ ಸಂದರ್ಭದಲ್ಲಿ ಆಯೋಗವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ದೂರಸಂಪರ್ಕ ಸಚಿವಾಲಯದ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದ್ದರು. ಆದರೂ ತನಿಖೆಗೆ ಅಗತ್ಯವಾದ ದಾಖಲೆಗಳನ್ನು ಪಡೆಯುವಲ್ಲಿ ನಾವು ಸಫಲರಾದೆವು. ತನಿಖೆಯಲ್ಲಿ ಮೇಲ್ನೋಟಕ್ಕೆ ಕೂಡ ಸರ್ಕಾರದ ನಿಯಮಗಳನ್ನು ಅನುಸರಿಸುವಲ್ಲಿ ಕೆಲವು ದೋಷಗಳಿರುವುದು ಕಂಡು ಬಂದಿತ್ತು’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ತರಂಗಾಂತರ ಹಂಚಿಕೆಗೆ ಹರಾಜು ಪ್ರಕ್ರಿಯೆಯೇ ಉತ್ತಮ ಎಂದು ಆರಂಭದಿಂದಲೂ ಕೇಂದ್ರ ಜಾಗೃತ ಆಯೋಗ ಅಭಿಪ್ರಾಯ ಪಟ್ಟಿತ್ತು. ಮೊದಲು ಬಂದವರಿಗೆ ಮೊದಲ ಆದ್ಯತೆಯ ನಿಯಮವನ್ನು ಕೂಡ ಅನುಸರಿಸಲಿಲ್ಲ. ಹಂಚಿಕೆ ಸೂಕ್ತವಾಗಿಲ್ಲ ಎಂಬುದರಲ್ಲಿ ಅನುಮಾನ ಉಳಿದಿರಲಿಲ್ಲ’ ಎಂದು ಆಗ ಸಿವಿಸಿಯ ಉನ್ನತ ಹುದ್ದೆಯಲ್ಲಿದ್ದ ಸಿನ್ಹಾ ಹೇಳಿದ್ದಾರೆ.

‘ಪ್ರಕ್ರಿಯೆಯಲ್ಲಿ ಕೆಲವು ಲೋಪಗಳಾಗಿರುವುದು, ಅರ್ಹತೆ ಇಲ್ಲದ ಕಂಪೆನಿಗಳೂ ಪರವಾನಗಿ ಪಡೆದಿರುವುದು. ಆಯೋಗದ ತನಿಖೆಯಿಂದ ತಿಳಿದು ಬಂದಿತ್ತು.‘2ಜಿ ತರಂಗಾಂತರ ಹಂಚಿಕೆಯಲ್ಲಿ ಕ್ರಿಮಿನಲ್ ಪಿತೂರಿಯ ನಿದರ್ಶನಗಳನ್ನು ತನಿಖೆ ಸಾಬೀತು ಪಡಿಸಿತ್ತು’ ಎಂದು ಸಿನ್ಹಾ ವಿವರಿಸಿದ್ದಾರೆ.

ಕರುಣಾ ನೋಟಿಸ್:  2 ಜಿ ತರಂಗಾಂತರ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ತಮ್ಮ ವಿರುದ್ಧ ಆರೋಪಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ನೋಟಿಸ್ ಕಳುಹಿಸಿದ್ದಾರೆ.

ತಮ್ಮ ವಕೀಲ ಪಿ.ಆರ್.ರಾಮನ್ ಎಂಬುವವರ ಮೂಲಕ ಸ್ವಾಮಿ ಅವರಿಗೆ ನೋಟಿಸ್ ನೀಡಿರುವ ಕರುಣಾನಿಧಿ 24 ಗಂಟೆಗಳ ಒಳಗೆ ತಮ್ಮ ಹೇಳಿಕೆ ವಾಪಸು ಪಡೆಯಬೇಕೆಂದು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry