ತರಂಗಾಂತರ ಹಂಚಿಕೆ: ಮುಕ್ತ ಹರಾಜು ನೀತಿ

7

ತರಂಗಾಂತರ ಹಂಚಿಕೆ: ಮುಕ್ತ ಹರಾಜು ನೀತಿ

Published:
Updated:

ಬೆಂಗಳೂರು: ಇನ್ನು ಮುಂದೆ ರೇಡಿಯೊ ತರಂಗಾಂತರ ಹಂಚಿಕೆಯನ್ನು ಮುಕ್ತ ಹರಾಜು ಪ್ರಕ್ರಿಯೆ ಮೂಲಕವೇ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.   2ಜಿ~ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 122 ಪರವಾನಗಿಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ, `ಮೊದಲು ಬಂದವರಿಗೆ ಮೊದಲ ಆದ್ಯತೆ~ ನೀತಿಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. ತರಂಗಾಂತರ ಮಾರಾಟವನ್ನು ಮುಕ್ತ ಹರಾಜು ಪ್ರಕ್ರಿಯೆ  ಮೂಲಕ  ನಡೆಸಲಾಗುವುದು. ಆಯಾ ದೂರಸಂಪರ್ಕ ವೃತ್ತಕ್ಕೆ ಅನುಗುಣವಾಗಿ ನ್ಯಾಯೋಚಿತ ದರ ನಿಗದಿಪಡಿಸಲಾಗುವುದು  ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ರಾಜ್ಯ ಸಚಿವ ಸಚಿನ್ ಪೈಲಟ್ ತಿಳಿಸಿದರು. ಸೋಮವಾರ ಇಲ್ಲಿ ಭಾರತೀಯ ಸೆಮಿಕಂಡಕ್ಟರ್ಸ್ ಅಸೋಸಿಯೇಷನ್‌ನ   ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಅವರು, ತರಂಗಾಂತರ ಹಂಚಿಕೆ ಅಥವಾ ದೂರವಾಣಿ ಕಂಪೆನಿಗಳಿಗೆ ಪರವಾನಿಗೆ ನೀಡಲು  ಇನ್ನು ಮುಂದೆ ಮುಕ್ತ ಹರಾಜು ನೀತಿ ಅನುಸರಿಸಲಾಗುವುದು ಎಂದರು. `2ಜಿ~ ತೀರ್ಪಿನಿಂದ ದೂರವಾಣಿ ಚಂದಾದಾರರು ಹೆಚ್ಚು ವಿಚಲಿತರಾಗುವ ಅಗತ್ಯವಿಲ್ಲ. ಪರವಾನಗಿ ರದ್ದುಗೊಂಡ ಕಂಪೆನಿಗಳಿಂದ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಮೂಲಕ ಸೇವಾ ಸಂಸ್ಥೆ ಬದಲಿಸಲು ಚಂದಾದಾರರಿಗೆ  ನಾಲ್ಕು ತಿಂಗಳ ಕಾಲಾವಕಾಶವಿದೆ. ಸರ್ಕಾರ ಕೂಡ ಚಂದಾದಾರರ  ಹಿತಾಸಕ್ತಿ ರಕ್ಷಿಸುವ ಭರವಸೆ ನೀಡುತ್ತದೆ  ಎಂದರು.ಕಾನೂನು ಹೋರಾಟ: `ಭಾರತದಲ್ಲಿ ಸೇವಾ ಪೂರೈಕೆ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಲಾಗಿದ್ದು, ಪರವಾನಗಿ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಬೃಹತ್ ನಷ್ಟ ಅನುಭವಿಸಬೇಕಾಗಿದೆ. ಚಂದಾದಾರರ ಹಿತಾಸಕ್ತಿ ಮತ್ತು ನಮ್ಮ ಹೂಡಿಕೆ ರಕ್ಷಿಸಲು ಕಾನೂನಾತ್ಮಕ ಹೋರಾಟ ನಡೆಸುವುದಾಗಿ     `ಯೂನಿನಾರ್ ಮತ್ತು ಸಿಸ್ಟೆಮಾ ಶ್ಯಾಮ್ ಕಂಪೆನಿಗಳು ಹೇಳಿವೆ. ನಾರ್ವೆ ಮತ್ತು ರಷ್ಯಾ ರಾಜತಾಂತ್ರಿಕ ಮಟ್ಟದಲ್ಲಿ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಯತ್ನ ಆರಂಭಿಸಿವೆ.ನಾರ್ವೆ ಮೂಲದ ಟೆಲಿನಾರ್ ಮತ್ತು ಯೂನಿಟೆಕ್ ಕಂಪೆನಿಯ ಜಂಟಿ ಸಹಭಾಗಿತ್ವದಲ್ಲಿ `ಯೂನಿನಾರ್~ ಸೇವೆ ಒದಗಿಸುತ್ತಿದೆ. 2ಜಿ ತರಂಗಾಂತರ ಸೇವೆಗಾಗಿ ಕಂಪೆನಿ ಈಗಾಗಲೇ ಷೇರುಗಳ ಮೂಲಕ ರೂ 6,100 ಕೋಟಿ ಮತ್ತು ಕಾರ್ಪೊರೇಟ್ ಖಾತರಿ ಮೂಲಕ ರೂ8 ಸಾವಿರ ಕೋಟಿ ಹೂಡಿಕೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry