ಸೋಮವಾರ, ಮೇ 23, 2022
22 °C

ತರಕಾರಿ; ಅದೆಷ್ಟು ದುಬಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ವಾರದ ತರಕಾರಿ ಮಾರುಕಟ್ಟೆಗೆ ಬಂದ ಗ್ರಾಹಕರು ತುಂಬಿದ ಕಿಸೆ ಖಾಲಿ ಮಾಡಿಕೊಂಡು ಅರ್ಧ ಚೀಲ ತರಕಾರಿ ಕೊಂಡು ಹೋದರು. ಅಬ್ಬಾ ತರಕಾರಿ ಅದೆಷ್ಟು ದುಬಾರಿ! ತರಕಾರಿ ದರ ಕೇಳಿ ಎಲ್ಲಿ ಗಿರಾಕಿ ತಪ್ಪಿ ಹೋದರೆ ಎಂಬ ಭಯ ವ್ಯಾಪಾರಿಗೆ, ಹೀಗಾಗಿ ಏನಿದ್ದರೂ ಮಾರ್ಕೆಟ್‌ನಲ್ಲಿ ಈಗ ಕಾಲು ಕೆ.ಜಿ. ವ್ಯವಹಾರ.ಯಾವುದೇ ತರಕಾರಿ ದರ ಕೇಳಿದರೂ ವ್ಯಾಪಾರಿಗಳು ಕಾಲು ಕೆ.ಜಿ.ಯ ದರ ಹೇಳಿ ಗ್ರಾಹಕರನ್ನು ಸಮಾಧಾನಿಸಲು ಪ್ರಯತ್ನಿಸುವ ಸಂಗತಿ ಮಂಗಳವಾರದ ವಾರದ ಸಂತೆಯಲ್ಲಿ ಕಂಡುಬಂತು. ತರಕಾರಿ ಕೆ.ಜಿ.ಯ ಕನಿಷ್ಠ ದರ 20 ರೂಪಾಯಿ.

 

ಹಿಂದಿನ ವಾರದ ಸಂತೆಯಲ್ಲಿ ರೂ 80 ಒಂದು ಕೆ.ಜಿ. ದರವಿದ್ದ ಬೀನ್ಸ್ ಈ ಸಂತೆಯಲ್ಲಿ ಬರೋಬ್ಬರಿ ರೂ 120. ವಾರದ ಹಿಂದೆ 60 ರೂಪಾಯಿಗೆ ಒಂದು ಕೆ.ಜಿ.ಕ್ಯಾರೇಟ್ ಸಿಗುತ್ತಿತ್ತು. ಈ ವಾರದ ಸಂತೆಯಲ್ಲಿ ಕ್ಯಾರೇಟ್ ದರ ರೂ 80. ತೊಂಡೆಕಾಯಿ, ಬೆಂಡೆಕಾಯಿ, ಟೊಮೆಟೋ ದರ ಮಾತ್ರ ಕೆ.ಜಿ.ಗೆ ರೂ 20. ನವಿಲುಕೋಸು, ದೊಡ್ಡಮೆಣಸು ಕೆ.ಜಿ.ಗೆ ರೂ 40 ಆದರೆ ಬದನೆಕಾಯಿ ಹಾಗೂ ಹೂಕೋಸು ಒಂದು ಕೆ.ಜಿ.ಗೆ 30 ರೂಪಾಯಿ.ಬೆಳಗಾವಿ ಜಿಲ್ಲೆ ಮತ್ತು ಬೆಂಗಳೂರು ಮಾರುಕಟ್ಟೆ ಶಿರಸಿಗೆ ಮುಖ್ಯವಾಗಿ ತರಕಾರಿ ಪೂರೈಸುವ ಕೇಂದ್ರಗಳು. ಬೆಳಗಾವಿಯಿಂದ ಪ್ರತಿವಾರ ಮೂರು ಟ್ರಿಪ್ ಹಾಗೂ ಬೆಂಗಳೂರಿನಿಂದ ಒಂದು ಟ್ರಿಪ್ ತರಕಾರಿ ನಗರಕ್ಕೆ ಬರುತ್ತದೆ. ನಗರದಲ್ಲಿರುವ ಸುಮಾರು 40ರಷ್ಟು ಪ್ರಮುಖ ತರಕಾರಿ ವ್ಯಾಪಾರಸ್ಥರಿಂದ ಪ್ರತಿ ವಾರ ಸುಮಾರು 100ರಿಂದ 120 ಟನ್ ತರಕಾರಿ ವ್ಯಾಪಾರ ನಡೆಯುತ್ತದೆ.`ನಾವು ನೇರವಾಗಿ ಬೆಂಗಳೂರು ಅಥವಾ ಬೆಳಗಾವಿ ಮಾರುಕಟ್ಟೆಯಿಂದ ತರಕಾರಿ ತರುತ್ತೇವೆ. ತರಕಾರಿ ವ್ಯಾಪಾರವೇ ನಮ್ಮ ಉದ್ಯೋಗ. ಹೋಲ್‌ಸೇಲ್ ಮಾರುಕಟ್ಟೆಯಲ್ಲೇ ತರಕಾರಿ ದರ ದುಬಾರಿಯಾಗಿದೆ. ಒಂದು ಕ್ವಿಂಟಾಲ್ ಕ್ಯಾರೇಟ್ ದರ ರೂ 5500ರಿಂದ 6,000 ಇದೆ. ಮೊದಲನೇ ದರ್ಜೆಯ ತರಕಾರಿ ಆಗಿದ್ದರೆ ಅದು ಇನ್ನೂ ದುಬಾರಿ~ ಎನ್ನುತ್ತಾರೆ ಹಾನಗಲ್‌ನ ಬಸವರಾಜ.ಶಿರಸಿ, ಸಿದ್ದಾಪುರ, ಕಾರವಾರ, ಹಾನಗಲ್‌ನ ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡುವ ಬಸವರಾಜ ಅನುಭವದ ಪ್ರಕಾರ, `ತರಕಾರಿ ಖರೀದಿ ತೀರಾ ಕಡಿಮೆಯಾಗಿದೆ. `ತೀರಾ ಅನಿವಾರ್ಯ ಇದ್ದರೆ ಮಾತ್ರ ಗ್ರಾಹಕರು ತರಕಾರಿ ಒಯ್ಯುತ್ತಾರೆ. ಪ್ರತಿ ವಾರ ನಾವು 2 ಗೋಣಿಚೀಲ ಕ್ಯಾರೇಟ್ ತರುತ್ತಿದ್ದೆವು.ಈ ಬಾರಿ ಎಂಟು ಕೆ.ಜಿ. ಮಾತ್ರ ತಂದರೂ ಅರ್ಧವೂ ಖರ್ಚಾಗಿಲ್ಲ. ಬೀನ್ಸ್‌ಅನ್ನು ಈ ವಾರ ತರುವ ಗೋಜಿಗೇ ಹೋಗಿಲ್ಲ. ಹೊಸ ತರಕಾರಿ ಬರುವ ತನಕ ತರಕಾರಿ ದರ ಹೀಗೆಯೇ~ ಎನ್ನುತ್ತಾರೆ. ತರಕಾರಿ ಬೆಲೆ ಹೆಚ್ಚಳವಾದರೆ ಹಳ್ಳಿ ಜನ ತರಕಾರಿ ಒಯ್ಯಲು ಹಿಂದೇಟು ಹಾಕುತ್ತಾರೆ. ಮನೆಯಲ್ಲಿ ಶುಭ ಕಾರ್ಯವಿದ್ದರೆ ಅನಿವಾರ್ಯವಾಗಿ ತರಕಾರಿ ಕೊಂಡು ಹೋಗುತ್ತಾರೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.