ತರಕಾರಿ ಬೆಲೆ ಗಗನಕ್ಕೆ; ಗ್ರಾಹಕರ ಪರದಾಟ

5

ತರಕಾರಿ ಬೆಲೆ ಗಗನಕ್ಕೆ; ಗ್ರಾಹಕರ ಪರದಾಟ

Published:
Updated:

ಶ್ರೀನಿವಾಸಪುರ: ತರಕಾರಿ ಬೆಲೆ ಈಗ ಗಗನಕ್ಕೇರಿದೆ. ತರಕಾರಿ ಖರೀದಿಯು ವೆಚ್ಚದಾಯಕವಾಗಿ ಪರಿಣಮಿಸಿದೆ. ಆದರೂ ಗ್ರಾಹಕರು ಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ.  ಶ್ರೀನಿವಾಸಪುರದ ಸಂತೆಯಲ್ಲಿ ತರಕಾರಿ ಬೆಲೆ ಕೇಳಿ ಮೂಗಿನ ಮೇಲೆ ಬೆರಳಿಟ್ಟುಕೊಂಡವರೇ ಹೆಚ್ಚು. ಬೀನ್ಸ್ ಕೆಜಿಯೊಂದಕ್ಕೆ ರೂ. 60, ಬೆಂಡೆಕಾಯಿ ರೂ.40, ಆಲೂಗಡ್ಡೆ, ಹೀರೆಕಾಯಿ ರೂ. 30, ಬದನೆಕಾಯಿ ರೂ.20, ಟೊಮೆಟೊ ರೂ. 20, ಬೆರಳು ಗಾತ್ರದ ಕೊತ್ತಂಬರಿ ಸೊಪ್ಪು ಕಟ್ಟು ರೂ. 15. ಹೀಗೆ ಎಲ್ಲ ತರಕಾರಿ ಹಾಗೂ ಸೊಪ್ಪಿನ ಬೆಲೆಗಳಲ್ಲೂ ಗಣನೀಯ ಏರಿಕೆ ಕಂಡಿವೆ. ಬಹುತೇಕ ಕೃಷಿ ಕೊಳವೆ ಬಾವಿಗಳು ಬೇಸಿಗೆಯಲ್ಲಿ ಬತ್ತಿಹೋಗಿರುವುದರಿಂದ ಮಾರುಕಟ್ಟೆಗೆ ತರಕಾರಿ ಆವಕದ ಪ್ರಮಾಣ ಕುಸಿದಿದೆ. ಇದು ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಇಷ್ಟಾದರೂ ಮಾರುಕಟ್ಟೆಗೆ ಒಳ್ಳೆ ತರಕಾರಿ ಬರುತ್ತಿಲ್ಲ. ಈಗ ಮದುವೆ ಹಾಗೂ ಉತ್ಸವಗಳ ಕಾಲವಾಗಿರುವುದರಿಂದ ತರಕಾರಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ಅನುಗುಣವಾಗಿ ಸರಕು ಸಿಗುತ್ತಿಲ್ಲ. ಇನ್ನು ಕೊತ್ತಂಬರಿ ಸೊಪ್ಪು ಈಚೆಗೆ ಸುರಿದ ಮಳೆಯಿಂದ ಹಾಳಾಗಿದೆ. ಆದ್ದರಿಂದ ಅದರ ಬೆಲೆಯೂ ಗಗನಕ್ಕೇರಿದೆ.ಈರುಳ್ಳಿ ಮಾತ್ರ ಕೆಜಿಯೊಂದಕ್ಕೆ ರೂ. 8 -10ರ ಆಜೂ ಬಾಜೂ ಇದೆ. ಬೆಳ್ಳುಳ್ಳಿ ಬೆಲೆಯೂ ಹೆಚ್ಚೇನಿಲ್ಲ. ಉತ್ತಮ ಗುಣಮಟ್ಟದ ಒಂದು ಕೆ.ಜಿ. ಬೆಳ್ಳುಳ್ಳಿ ಬೆಲೆ ರೂ. 30 ಮಾತ್ರ. ಇವನ್ನು ಹೊರತುಪಡಿಸಿದರೆ ಯಾವುದೇ ತರಕಾರಿ-ಸೊಪ್ಪಿನ ಬೆಲೆ ಕೈಗೆಟುಕುವಂತಿಲ್ಲ ಎಂದು ಗ್ರಾಹಕರು ನೋವು ತೋಡಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry