ತರಕಾರಿ ಬೆಲೆ ಸತತ ಹೆಚ್ಚುತ್ತಲೇ ಇದೆ

7

ತರಕಾರಿ ಬೆಲೆ ಸತತ ಹೆಚ್ಚುತ್ತಲೇ ಇದೆ

Published:
Updated:
ತರಕಾರಿ ಬೆಲೆ ಸತತ ಹೆಚ್ಚುತ್ತಲೇ ಇದೆ

ತುಮಕೂರು: ತರಕಾರಿ ಬೆಲೆ ಗಗನಕ್ಕೇರಿದ್ದು, ಜನತೆ ಕೊಳ್ಳಲು ತತ್ತರಿಸ ತೊಡಗಿದ್ದಾರೆ. ಹದಿನೈದು ದಿನದಿಂದ ಈಚೆಗೆ ತರಕಾರಿ ಬೆಲೆ ಜರ‌್ರನೆ ಏರ ತೊಡಗಿರುವುದು ಸಾಮಾನ್ಯ ಜನರನ್ನು ಕಂಗಾಲಾಗಿಸಿದೆ.ಜಿಲ್ಲೆಯಲ್ಲಿ ಮೂರುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ತರಕಾರಿ ಬೆಳೆಯುವಲ್ಲಿ ಜಿಲ್ಲೆ ಸಬಲೀಕರಣ ಗೊಂಡಿಲ್ಲ. ತಿಪಟೂರು, ತುಮಕೂರು ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆದರೆ, ಉಳಿದ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಕ್ಲಸ್ಟರ್‌ಗಳಂತೆ ತರಕಾರಿ ಬೆಳೆಗಾರರಿದ್ದಾರೆ.ತುಮಕೂರು ತಾಲ್ಲೂಕಿನ ಜನರಿಗೆ ಬೆಂಗಳೂರು ಮಾರುಕಟ್ಟೆ ಸಮೀಪ ಇರುವ ಕಾರಣ ಬೆಂಗಳೂರು ಮಾರುಕಟ್ಟೆಯಲ್ಲಿ ದರ ಅಲ್ಪ ಸ್ವಲ್ಪ ಹೆಚ್ಚಿದ್ದರೂ ಅಲ್ಲಿಗೆ ತರಕಾರಿ ಸಾಗಿಸುತ್ತಾರೆ. ಅತ್ತ ತಿಪಟೂರು ಭಾಗದಲ್ಲಿ ಚಿಕ್ಕಮಗಳೂರು, ಮಂಗಳೂರು ಮಾರುಕಟ್ಟೆಗೆ ಅದರಲ್ಲೂ ವಿಶೇಷವಾಗಿ ಹುರಳಿಕಾಯಿ ಹೋಗುತ್ತಿದೆ.ಹಾಸನ, ಬೆಂಗಳೂರು, ಬೆಳಗಾವಿ, ದಾಬಸಪೇಟೆಯಿಂದ ಸಾಕಷ್ಟು ಬಗೆಯ ತರಕಾರಿ ಜಿಲ್ಲೆಗೆ ಬರುತ್ತಿದೆ. ಬೇಡಿಕೆಗೆ ಸಮನಾಗಿ ಮಾರು ಕಟ್ಟೆಗೆ ತರಕಾರಿ ಬಾರದೆ ಬೆಲೆ ವಿಪರೀತ ಹೆಚ್ಚಳವಾಗಲು ಕಾರಣ ಎನ್ನಲಾಗಿದೆ. ಅಲ್ಲದೆ ಬೆಲೆ ಹೆಚ್ಚಳಕ್ಕೆ ಮಧ್ಯವರ್ತಿಗಳ ಹಾವಳಿ ಕೂಡ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.`ಅಂತರ್ಜಲ ಕುಸಿತ, ವಿದ್ಯುತ್ ಸಮಸ್ಯೆಯೂ ತರಕಾರಿ ಉತ್ಪಾದನೆ ಕುಸಿತಕ್ಕೆ ಕಾರಣ. ಈ ಕಾರಣದಿಂದಾಗಿ ತರಕಾರಿ ಬೆಳೆಗಾರರು ಬೆಳೆ ಯುವ ಪ್ರದೇಶವನ್ನೇ ಕಡಿಮೆ ಮಾಡಿರುವುದು ಉತ್ಪಾದನೆ ಕುಸಿತಕ್ಕೆ ಕಾರಣ~ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಸಾದ್ ತಿಳಿಸಿದರು. ಮದುವೆ ಸೀಸನ್ ಕೂಡ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.ಕಳೆದ ಹದಿನೈದು ದಿನಕ್ಕೆ ಹೋಲಿಸಿದರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಶೇ 30ರಿಂದ ಶೇ 50ರಷ್ಟು ಹೆಚ್ಚಳಗೊಂಡಿದೆ. ಹದಿನೈದು ದಿನದ ಹಿಂದೆ ರೂ. 30 ಇದ್ದ ಹುರುಳಿಕಾಯಿ ಈಗ ರೂ. 70ಕ್ಕೆ ಹೆಚ್ಚಿದೆ.ಬದನೆಕಾಯಿ ರೂ. 10ರಿಂದ ರೂ. 40ಕ್ಕೆ ಜಿಗಿದಿದೆ. ದಪ್ಪ ಮೆಣಸಿನ ಕಾಯಿ ರೂ. 40ರಿಂದ ರೂ. 70ಕ್ಕೆ ಏರಿದೆ. ಟೊಮೆಟೊ ಮಾತ್ರ ಕೈಗೆಟಕುವ ಬೆಲೆಯಲ್ಲಿದ್ದು, ಉಳಿದ ತರಕಾರಿ ಬೆಲೆ `ಆಕಾಶ~ಕ್ಕೆ ಚಿಮ್ಮಿದೆ.ಬೇಸಿಗೆಯಲ್ಲಿ ವೃದ್ಧರಿಂದ ಹಿಡಿದು ಎಲ್ಲರಿಗೂ ಅತಿ ಪ್ರಮುಖವಾಗಿ ಬೇಕಾದ ಸೊಪ್ಪು ಬೆಲೆ ಕೇಳುವಂತೆಯೇ ಇಲ್ಲ. ಒಂದು ಸಣ್ಣ ಮೆಂತೆ ಸೊಪ್ಪಿನ ಕಟ್ಟು ರೂ. 20 ಆಗಿದೆ. ಕೊತಂಬರಿ ಸೊಪ್ಪಿನ ಕಟ್ಟು ರೂ. 40 ಆಗಿದೆ.ಮಾರುಕಟ್ಟೆಗೆ ಒಂದು ನೂರು ರೂಪಾಯಿ ತೆಗೆದು ಕೊಂಡು ಹೋದರೂ ಒಂದು ಸಣ್ಣ ಕುಟುಂಬಕ್ಕೆ ಬೇಕಾಗುವಷ್ಟು ಸೊಪ್ಪು ಖರೀದಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ಉಂಟಾಗಿದೆ.ಬಡವರು ಇದ್ದುದ್ದರಲ್ಲೇ ಕಡಿಮೆ ದರ ಇರುವ ಟೊಮೆಟೊ, ಬದನೆ ಕಾಯಿ ಬಿಟ್ಟರೆ ಬೇರೆ ತರಕಾರಿಯತ್ತ ಕಣ್ಣೆತ್ತಿ ನೋಡುವ ಧೈರ್ಯ ಮಾಡುತ್ತಿಲ್ಲ. ಮಧ್ಯಮ ವರ್ಗದ ಜನತೆ ಕೆ.ಜಿ ಗಟ್ಟಲೆ ತರಕಾರಿ ಕೊಳ್ಳುತ್ತಿದ್ದವರು ಯಾವುದೇ ತರಕಾರಿ ಕೊಂಡರೂ ಕಾಲು ಕೆ.ಜಿ (250 ಗ್ರಾಂ) ಮೇಲೆ ಕೊಳ್ಳುತ್ತಿಲ್ಲ, ಇದರಿಂದ ವ್ಯಾಪಾರವೇ ಬರ್ಬ ತ್ತಾಗಿದೆ ಎಂದು ನಗರದ ಸಿದ್ಧಿವಿನಾಯಕ ತರಕಾರಿ ಮಾರುಕಟ್ಟೆ ಚಿಲ್ಲರೆ ಮಾರಾಟಗಾರರು `ಪ್ರಜಾವಾಣಿ~ಗೆ ತಿಳಿಸಿದರು.ಗ್ರಾಹಕರಂತೆ ಚಿಲ್ಲರೆ ಮಾರಾಟಗಾರರಿಗೂ ಸಂಕಷ್ಟ ತಂದಿದೆ. ಕೆ.ಜಿ ಗಟ್ಟಲೆ ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗತೊಡಗಿದೆ. ವ್ಯಾಪಾರವೇ ಇಲ್ಲವಾಗಿದೆ ಎಂದು ಚಿಲ್ಲರೆ ವ್ಯಾಪಾರಿ ಲಕ್ಷ್ಮಮ್ಮ ಅಳಲು ತೋಡಿಕೊಂಡರು.ತರಕಾರಿ ಕೊಳ್ಳಲು ಆಗದಷ್ಟು ಬೆಲೆ ಹೆಚ್ಚಳ ವಾಗಿದೆ. ರೈತರಿಗೆ ಸಿಗುವ ಬೆಲೆ ಕೂಡ ಕಡಿಮೆ. ಆದರೆ ಮಧ್ಯವರ್ತಿ ವ್ಯಾಪಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಡೆಯಾಕ ಬೇಕು ಎಂದು ಗ್ರಾಹಕ ಕುಮಾರ್ ನೋವು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry