ತರಕಾರಿ ಮಾರುಕಟ್ಟೆ ಉದ್ಘಾಟನೆ ಎಂದು?

7

ತರಕಾರಿ ಮಾರುಕಟ್ಟೆ ಉದ್ಘಾಟನೆ ಎಂದು?

Published:
Updated:

ಬೀದರ್: ನಗರದ ಹೊರವಲಯದ ಹೈದರಾಬಾದ್ ರಸ್ತೆಯಲ್ಲಿನ ಹಳ್ಳದಕೇರಿ ಸಮೀಪ ನೂತನವಾಗಿ ನಿರ್ಮಿಸಲಾದ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಇದರೊಂದಿಗೆ, ಉಸ್ಮಾನ್‌ಗಂಜ್‌ನಲ್ಲಿರುವ ತರಕಾರಿ ಮತ್ತು ಹಣ್ಣು ಮಾರುಕಟ್ಟೆಯು ಹೊಸ ಮಳಿಗೆಗಳಿಗೆ ಸ್ಥಳಾಂತರವಾಗುವ ಕಾಲ ಸನ್ನಿಹಿತವಾದಂತಾಗಿದೆ.ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 15 ಮಳಿಗೆಗಳ ಮುಂಭಾಗದ ನೆಲಹಾಸು ಮತ್ತಿತರ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ.`15 ದಿನಗಳ ಒಳಗೆ ಮಾರುಕಟ್ಟೆಯನ್ನು ಉದ್ಘಾಟಿಸಲು ಉದ್ದೇಶಿದ್ದು, ಈ ಸಂಬಂಧ ಎಪಿಎಂಸಿ ನಿರ್ದೇಶಕರನ್ನು ಭೇಟಿ ಮಾಡಿ ದಿನಾಂಕ ನಿಗದಿಪಡಿಸಲಾಗುವುದು' ಎಂದು ಬೀದರ್ ಕಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಚನ್ನಮಲ್ಲಪ್ಪ ಹಜ್ಜರಗಿ ತಮ್ಮನ್ನು ಸಂಪರ್ಕಿಸಿದ  ಪ್ರಜಾವಾಣಿ ಗೆ ತಿಳಿಸಿದರು.ನಗರದ ಉಸ್ಮಾನಗಂಜ್‌ನಲ್ಲಿ ಇರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಕಿರಿದಾಗಿದ್ದರಿಂದ ಎರಡು ವರ್ಷದ ಹಿಂದೆ ಹಳ್ಳದಕೇರಿ ಬಳಿಯ ಐದು ಎಕರೆ ಪ್ರದೇಶದಲ್ಲಿ 4 ಕೋಟಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನ ನೀಡಲಾಗಿತ್ತು. ಸಂಕೀರ್ಣದ ಆರಂಭಿಕ ಅಂದಾಜು ವೆಚ್ಚ 4.1 ಕೋಟಿ ಆಗಿದ್ದು, ಇದರಲ್ಲಿ ಸಮಿತಿಯ ಪಾಲು ರೂ. 3.8 ಕೋಟಿ  ಇದ್ದರೆ;  ಮಿಷನ್‌ನ ಪಾಲು ರೂ. 1.2 ಕೋಟಿ  ಆಗಿತ್ತು. ಬಳಿಕ ಎಪಿಎಂಸಿ ಹೆಚ್ಚುವರಿ ಅಂದಾಜು ರೂ. 1 ಕೋಟಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.ನೂತನ ಮಾರುಕಟ್ಟೆಯಲ್ಲಿ 38 ಮಳಿಗೆ, ಕಚೇರಿ ಕಟ್ಟಡ, ಮುಚ್ಚಿರುವ ಹರಾಜು ಕಟ್ಟೆ, ಸಿ.ಸಿ. ರಸ್ತೆ, ನೀರಿನ ಟ್ಯಾಂಕ್, ಸಾಮೂಹಿಕ ಶೌಚಾಲಯ, ಡಸ್ಟ್ ಬೀನ್, ದಾರಿ ದೀಪ ಸೇರಿದಂತೆ ಬಹುತೇಕ ಕೆಲಸ ಮುಗಿದಿದೆ. ಮಳಿಗೆಗಳ ದರ ನಿಗದಿಗಾಗಿ ಈಗಾಗಲೇ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ದರ ನಿಗದಿಯಾದ ಬಳಿಕ ಟೆಂಡರ್ ಕರೆದು ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.ಉಸ್ಮಾನ್‌ಗಂಜ್‌ನಲ್ಲಿರುವ ಮಾರುಕಟ್ಟೆ ತೀರಾ ಚಿಕ್ಕದಾಗಿದ್ದು, ವ್ಯಾಪಾರ ವಹಿವಾಟಿಗೆ ಸಾಕಾಗುತ್ತಿಲ್ಲ. ಹೊಸ ಮಾರುಕಟ್ಟೆಯಿಂದ ರೈತರು, ವ್ಯಾಪಾರಿಗಳಿಗೆ ಅನುಕೂಲ ಆಗಲಿದೆ. ಕರ ವಸೂಲಿ ಸಮರ್ಪಕ ನಡೆದು ಸಮಿತಿಗೂ ಆದಾಯ ಬರಲಿದೆ. ಅಲ್ಲದೆ, ಮಾರುಕಟ್ಟೆ ಸಂಪೂರ್ಣ ಸಮಿತಿಯ ನಿಯಂತ್ರಣದಲ್ಲಿ ಇರಲಿದೆ ಎಂದು ಹೇಳಿದರು.ಹೊಸ ಮಾರುಕಟ್ಟೆಯಲ್ಲಿ ಹೋಲ್‌ಸೇಲ್ ವ್ಯಾಪಾರ ಮಾತ್ರ ನಡೆಯಲಿದೆ. ವಿದ್ಯುನ್ಮಾನ ತೂಕದ ಯಂತ್ರ ಸೇರಿದಂತೆ ರೈತರ ಅನುಕೂಲಕ್ಕಾಗಿ ವಿವಿಧ ಸೌಲಭ್ಯ ಇರಲಿವೆ. ಒಟ್ಟಾರೆ ಮಾರುಕಟ್ಟೆಯಿಂದ ರೈತರು ಮತ್ತು ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ ಎಂದರು.ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ ಅವರನ್ನು ಸಂಪರ್ಕಿಸಿದಾಗ, ಉಸ್ಮಾನಗಂಜ್ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ ಆಗುತ್ತಿತ್ತು. ಬೆಲೆ ನಿಗದಿ, ಕರ ವಸೂಲಿ ಸೇರಿದಂತೆ ಯಾವುದೇ ವಿಚಾರದಲ್ಲಿ ನಿಯಂತ್ರಣ ಇರಲಿಲ್ಲ. ನೂತನ ಮಾರುಕಟ್ಟೆಯಿಂದ ರೈತರಿಗೆ ಲಾಭವಾಗಬಹುದು ಎಂದು ಅಭಿಪ್ರಾಯಪಟ್ಟರು.ಕಟ್ಟಡ ನಿರ್ಮಾಣ ಪೂರ್ಣವಾಗಿದ್ದರಿಂದ ಸಮಿತಿ ಸಾಧ್ಯವಾದಷ್ಟು ಬೇಗ ಉದ್ಘಾಟನೆ ನೆರವೇರಿಸಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry