ತರಕಾರಿ ಮಾರುಕಟ್ಟೆ ಮಳಿಗೆ ಅಕ್ರಮ ಹಂಚಿಕೆ

ಶಿವಮೊಗ್ಗ: ವಿನೋಬ ನಗರ ತರಕಾರಿ ಮಾರುಕಟ್ಟೆ ಮಳಿಗೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಹಿಂದಿನ ಸಭೆಯಲ್ಲಿ ಮೇಯರ್ ಹಾಗೂ ಆಯುಕ್ತರು ನೀಡಿದ ಭರವಸೆಯಂತೆ ಪಟ್ಟಿ ಬದಲಾಯಿಸಿಲ್ಲ. ಹಳೆಯ ಪಟ್ಟಿಯನ್ನೇ ಜಿಲ್ಲಾಧಿಕಾರಿ ಅನುಮೋದನೆಗೆ ಕಳುಹಿಸಲಾಗಿದೆ.
ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಈ ರೀತಿ ಆರೋಪಿಸಿದರು.
ವಿನೋಬನಗರ ತರಕಾರಿ ಮಾರುಕಟ್ಟೆ ಮಳಿಗೆಗಳ ಫಲಾನುಭವಿ ಗಳ ಪಟ್ಟಿ ಪುನರ್ ಪರಿಶೀಲಿಸಿ, ಅರ್ಹರಿಗೆ ವಿತರಿಸಲಾಗುವುದು ಎಂದು ಮೇಯರ್ ಎಸ್.ಕೆ.ಮರಿಯಪ್ಪ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಪಾಲಿಕೆ ವತಿಯಿಂದ ₹ 81 ಲಕ್ಷ ವೆಚ್ಚದಲ್ಲಿ ವಿನೋಬ ನಗರ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಮಳಿಗೆ ಹಂಚಿಕೆಯಲ್ಲಿ ಆರೋಪ ಕೇಳಿಬಂದಿದೆ.
ಅಲ್ಲದೇ, ಈಗಾಗಲೇ ನೆಹರೂ ರಸ್ತೆಯಲ್ಲಿ ಪಾಲಿಕೆ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ, ಮೀನು ಮಾರುಕಟ್ಟೆಗಳೂ ಖಾಲಿ ಇದೆ. ಕೇವಲ ಕಟ್ಟಡ ನಿರ್ಮಾಣ ಮಾಡಿ ಆದಾಯ ಗಳಿಸದಿದ್ದರೆ ಹೇಗೆ? ಹೀಗಾದರೆ, ಪಾಲಿಕೆಗೂ ಒಳ್ಳೆಯ ಹೆಸರು ಬರುವುದಿಲ್ಲ. ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚ ಆಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ವಾಣಿಜ್ಯ ಮಳಿಗೆಗಳು ನಿಜವಾದ ಫಲಾನುಭವಿಗಳಿಗೆ ದೊರಕಬೇಕು. ವಿನೋಬ ನಗರದ ತರಕಾರಿ ಮಾರುಕಟ್ಟೆ ಮಳಿಗೆ ಹಂಚಿಕೆ ಪಟ್ಟಿ ರದ್ದುಪಡಿಸಿ, ಸಂಪೂರ್ಣ ಹೊಸ ಪಟ್ಟಿ ಸಿದ್ಧಪಡಿಸಬೇಕು. ಆ ಸ್ಥಳದಲ್ಲಿ ಲಕ್ಷ್ಮೀ ಚಿತ್ರಮಂದಿರದ ಬಳಿಯ ವ್ಯಾಪಾರಸ್ಥರಿಗೆ ಮಳಿಗೆ ನೀಡಬೇಕು ಎಂದು ತಾಕೀತು ಮಾಡಿದರು.
ಪಾಲಿಕೆ ಸದಸ್ಯೆ ರೇಣುಕಾ ನಾಗರಾಜ್ ಮಾತನಾಡಿ, ತರಕಾರಿ ಮಾರುಕಟ್ಟೆ ಮಳಿಗೆ ಹಂಚಿಕೆ ಮಾಡು ವಾಗ ಅರ್ಹರನ್ನು ಗಣನೆಗೆ ತೆಗೆದು ಕೊಂಡಿಲ್ಲ. ಅಂಗವಿಕಲರನ್ನೂ ನಿರ್ಲಕ್ಷ್ಯ ಮಾಡಲಾಗಿದೆ. ಕೂಡಲೇ, ಹಳೇ ಪಟ್ಟಿ ರದ್ದುಪಡಿಸುವಂತೆ ಆಗ್ರಹಿಸಿದರು.
‘ನೆಹರೂ ರಸ್ತೆಯ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣ ಹಲವು ವರ್ಷಗಳಿಂದ ಖಾಲಿ ಉಳಿದಿದೆ. ಆ. 16ರಂದು ಬಾಡಿಗೆ ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದು ಮೇಯರ್ ಮಾಹಿತಿ ನೀಡಿದರು.
ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಸ್ವಯಂಘೋಷಿತ ಆಸ್ತಿ ತೆರಿಗೆ ವಿಚಾರದಲ್ಲೂ ಸಾಕಷ್ಟು ಅಕ್ರಮ ನಡೆದಿದೆ. ಅಕ್ರಮ ತಡೆಗಟ್ಟಲು ಯಾರಿಗೂ ಆಸಕ್ತಿ ಇಲ್ಲ.
ಆಸ್ತಿ ತೆರಿಗೆ ಕಟ್ಟಿದ್ದಕ್ಕೆ ರಶೀದಿ ನೀಡುತ್ತಾರೆ. ಆದರೆ, ಕಟ್ಟಿದ ಹಣ ಪಾಲಿಕೆಗೆ ಜಮಾ ಆಗುತ್ತಿದೆಯೋ, ಇಲ್ಲವೋ, ಗೊತ್ತಾಗುತ್ತಿಲ್ಲ. ಅಂತರ್ಜಾಲದ ಮೂಲಕ ತೆರಿಗೆ ಪಾವತಿಗೆ ವ್ಯವಸ್ಥೆ ಕಲ್ಪಿಸಬೇಕು. ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸದಸ್ಯೆ ಸುನೀತಾ ಅಣ್ಣಪ್ಪ ಮಾತನಾಡಿ, ವಸತಿ ಯೋಜನೆಯಲ್ಲೂ ಗೊಂದಲಗಳಿವೆ. ಈ ಕುರಿತು ಎಲ್ಲಾ ಪಾಲಿಕೆ ಸದಸ್ಯರಿಗೂ ಸಮಗ್ರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಎನ್.ಜೆ.ರಾಜಶೇಖರ್ ಮಾತನಾಡಿ, ನಗರ ವ್ಯಾಪ್ತಿಯ ನೀರಿನ ದರ ಏರಿಕೆ ಮಾಡಬಾರದು ಎಂದು ತಾಕೀತು ಮಾಡಿದರು.
ಸದಸ್ಯ ಮೋಹನ್ ರೆಡ್ಡಿ ಹಾಗೂ ರಘು ಮಾತನಾಡಿ, ವಿನೋಬನಗರ ಡಿವಿಎಸ್ ಶಾಲೆಯ ಜಾಗ ಪಾಲಿಕೆಗೆ ಸೇರಿದೆ. ಆದರೆ, ಸಂಸ್ಥೆಯಿಂದ ಪಾಲಿಕೆಗೆ ಬರಬೇಕಾದ ಬಾಡಿಗೆ ಈವರೆಗೂ ಪಾವತಿಯಾಗಿಲ್ಲ. ಈ ಕುರಿತು ಹಲವು ಬಾರಿ ನೋಟಿಸ್ ಕೊಡಲಾಗಿದೆ. ಕೂಡಲೇ, ಶಾಲೆಯ ಜಾಗ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಮೇಯರ್ ಪ್ರತಿಕ್ರಿಯೆ ನೀಡಿ, ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಬಾಡಿಗೆ ಹಣ ₹ 80 ಲಕ್ಷವಲ್ಲ, ₹ 2 ಕೋಟಿ ಬಾಕಿ ಇದ್ದರೂ ಬಿಡುವುದಿಲ್ಲ. ವಸೂಲಿ ಮಾಡುತ್ತೇವೆ ಎಂದರು.
ಈಚೆಗೆ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸಲಾಯಿತು. ಹಸಿರೀಕರಣ ಮಾಸದ ಅಂಗವಾಗಿ ಲಾಂಛನ ಬಿಡುಗಡೆ ಮಾಡಲಾಯಿತು. ಪಾಲಿಕೆ ಆಯುಕ್ತೆ ತುಷಾರ ಮಣಿ, ಉಪ ಮೇಯರ್ ಮಂಗಳಾ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ಪಂಡಿತ್ ವಿ ವಿಶ್ವನಾಥ್ ಉಪಸ್ಥಿತರಿದ್ದರು.
ಪೊಲೀಸ್ ಸಭೆಗೆ ಆಹ್ವಾನವಿರಲಿಲ್ಲ...
ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ಡಿಎಆರ್ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಸಭೆಯಲ್ಲಿ ಪಾಲಿಕೆ ಆಯುಕ್ತರು ಭಾಗವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಬೇಕು.
ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ಪಾಲಿಕೆ ಅನುದಾನ ನೀಡಿತ್ತು. ಆದರೆ, ಇದುವರೆಗೂ ಉದ್ಘಾಟನೆಯಾಗಿಲ್ಲ ಎಂದು ದೂರಿದರು. ಅದಕ್ಕೆ ಪಾಲಿಕೆ ಸದಸ್ಯ ಎನ್.ಜೆ. ರಾಜಶೇಖರ್ ದನಿಗೂಡಿಸಿದರು.
ಪಾಲಿಕೆ ಆಯುಕ್ತೆ ತುಷಾರಮಣಿ ಮಾತನಾಡಿ, ಎಸ್ಪಿ ಅವರು ಸಭೆಗೆ ಭಾಗವಹಿಸುವಂತೆ ಯಾವುದೇ ಆಹ್ವಾನ ನೀಡಿಲ್ಲ. ಹಾಗಾಗಿ, ಹೋಗಿರಲಿಲ್ಲ ಎಂದು ಪ್ರತಿಕ್ರಿಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.