ತರಕಾರಿ; ಸುಧಾರಿತ ತಳಿಗಳ ಕ್ಷೇತ್ರೋತ್ಸವ

7

ತರಕಾರಿ; ಸುಧಾರಿತ ತಳಿಗಳ ಕ್ಷೇತ್ರೋತ್ಸವ

Published:
Updated:

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್)ಯಲ್ಲಿ ಇತ್ತೀಚೆಗೆ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸುಧಾರಿತ ತರಕಾರಿ ತಳಿಗಳ ಬೇಸಾಯ ಕ್ರಮಗಳನ್ನು ರೈತರಿಗೆ ಪರಿಚಯಿಸುವ ಕ್ಷೇತ್ರೋತ್ಸವ ನಡೆಯಿತು.   ಸಂಸ್ಥೆಯ ಆವರಣದಲ್ಲಿನ ತಾಕುಗಳಲ್ಲಿ ನಿಖರ ಬೇಸಾಯ ಪದ್ದತಿಯಲ್ಲಿ ಬೆಳೆಯಲಾದ  ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ, ಬೆಂಡೇಕಾಯಿ, ಅಲಸಂದೆ, ಕುಂಬಳಕಾಯಿ, ಅವರೆಕಾಯಿ, ಹುರುಳಿ, ಕಲ್ಲಂಗಡಿ, ಸೊರೆಕಾಯಿ, ಮೂಲಂಗಿ, ದಂಟಿನ ಸೊಪ್ಪು ಹೀಗೆ 17 ತರಕಾರಿ ಬೆಳೆಗಳ 32 ಸುಧಾರಿತ ಸಂಕರಣ ತಳಿಗಳನ್ನು ಸಂಸ್ಥೆಯ ಕೃಷಿ ವಿಜ್ಞಾನಿಗಳು ರೈತರಿಗೆ ಪರಿಚಯಿಸಿ, ಅವುಗಳ ವೈಶಿಷ್ಟ್ಯತೆ ಹಾಗೂ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು.    ಕ್ಷೇತ್ರೋತ್ಸವದಲ್ಲಿ ತಾಕಿನಲ್ಲಿರುವ ತರಕಾರಿಗಳನ್ನು ಪ್ರತಿನಿಧಿಸುವ ಕೋಲಾರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಂದ ಸುಮಾರು 300ಕ್ಕೂ ಅಧಿಕ ಆಹ್ವಾನಿತ ರೈತರು ಭಾಗವಹಿಸಿದ್ದರು. ಜತೆಗೆ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಸುಧಾರಿತ ತರಕಾರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಸ್ಥೆಯ ಸಭಾಭವನದಲ್ಲಿ ರೈತರೊಂದಿಗೆ ಸಂಸ್ಥೆಯ ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಅಮರೀಕ್ ಸಿಂಗ್ ಸಿಧು ಅವರು `ಸಾವಯವ ಪದ್ದತಿಯಲ್ಲಿ ಗುಲಾಬಿ ಈರುಳ್ಳಿ ಕೃಷಿ~ ಕೈಪಿಡಿ ಹಾಗೂ `ಕಿಚನ್ ಗಾರ್ಡನ್~ ಬೀಜಗಳ ಕಿಟ್ ಬಿಡುಗಡೆಗೊಳಿಸಿದರು. ನಗರಗಳು ಬೆಳೆದಂತೆಲ್ಲ ಜನರಿಗೆ ಉತ್ತಮ ಗುಣಮಟ್ಟದ ತರಕಾರಿಗಳ ಲಭ್ಯತೆ ಕಷ್ಟವಾಗುತ್ತಿದೆ. ನಗರವಾಸಿಗಳು ತಮ್ಮ ಮನೆಯ ಆವರಣದಲ್ಲಿ ಚಿಕ್ಕ ಕೈತೋಟ ಬೆಳೆಸಲು ಮುಂದಾಗಬೇಕು. ಅಲ್ಲಿಯೇ ತರಕಾರಿ, ಸೊಪ್ಪುಗಳನ್ನು ಬೆಳೆದುಕೊಳ್ಳಬಹುದು. ಈ ಕುರಿತು ಸಂಸ್ಥೆ ಮುಂಬರುವ ದಿನಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.  ಸುಧಾರಿತ ಕೃಷಿ ಪದ್ದತಿ ಹಾಗೂ ಉತ್ಪಾದನಾ ತಂತ್ರಜ್ಞಾನದ ಮಹತ್ವ ಕುರಿತು ಮಾತನಾಡಿದ ತರಕಾರಿ ವಿಭಾಗದ ವಿಜ್ಞಾನಿ ಡಾ.ಎಂ.ಪ್ರಭಾಕರ್ ಅವರು `ಅನೇಕ ಕಾರಣಗಳಿಂದ ಇಂದು ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಲಭ್ಯವಿರುವ ಕಡಿಮೆ ಭೂಮಿಯಲ್ಲೇ ಪೋಷಕಾಂಶ, ನೀರು ನಿರ್ವಹಣೆ, ಏರು ಮಡಿ, ರಸಾವರಿ, ಸಮಗ್ರ ಕೀಟ ನಿರ್ವಹಣೆ ಒಳಗೊಂಡ ನಿಖರ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ರೈತರು ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ವಿಷಮುಕ್ತ ತರಕಾರಿ ಬೆಳೆಯುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ಷೇತ್ರೋತ್ಸವ ಸಹಕಾರಿಯಾಗಲಿದೆ~ ಎಂದರು. ಸಂಸ್ಥೆ ಅಭಿವೃದ್ಧಿಪಡಿಸಿರುವ ಸುಧಾರಿತ ತರಕಾರಿ ಬೆಳೆಗಳ ಕುರಿತು ಮಾಹಿತಿ ನೀಡಿದ ತರಕಾರಿ ಬೆಳೆ ವಿಭಾಗದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಎ.ಟಿ.ಸದಾಶಿವ ಅವರು ರಫ್ತಿಗೆ ಹೆಸರುವಾಸಿಯಾಗಿರುವ ಬ್ಯಾಡಗಿಯ ಮೆಣಸಿನಕಾಯಿಯ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

 

ಆದರೆ ಇತ್ತೀಚಿನ ವರ್ಷಗಳಲ್ಲಿ ಮಲ್ಲೆ ರೋಗ, ಕಾಯಿ ಕೊಳೆಯುವ ರೋಗ ಹಾಗೂ ನುಸಿ ರೋಗಗಳ ಭಾದೆಯಿಂದ ಮೆಣಸಿನಕಾಯಿ ಬೆಳೆಯ ಇಳುವರಿ ಶೇ 60ರಿಂದ 70 ರಷ್ಟು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಈ ರೋಗಗಳನ್ನು ತಡೆಗಟ್ಟಿ, ಹೆಚ್ಚು ಇಳುವರಿ ನೀಡುವ  ರೋಗ ನಿರೋಧಕ ಮೆಣಸಿನಕಾಯಿ ತಳಿ ಅಭಿವೃದ್ಧಿ ಸಂಶೋಧನೆ ಪ್ರಕ್ರಿಯೆಯು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸ ಸುಧಾರಿತ ಮೆಣಸಿನಕಾಯಿ ತಳಿ ರೈತರಿಗೆ ಪರಿಚಯಿಸಲಾಗುವುದು ಎಂದರು. ಕ್ಷೇತ್ರೋತ್ಸವಕ್ಕೆ ಭೇಟಿ ನೀಡಿದ ವರ್ತೂರಿನ ಯುವ ರೈತ ವೆಂಕಟೇಶ್ `ನಾನೀಗ ಸಂಸ್ಥೆಯ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ದೊಣ್ಣೆ ಮೆಣಸಿನಕಾಯಿ ಬೆಳೆ ಬೆಳೆದಿರುವೆ. ಇದರೊಂದಿಗೆ ಬೇರೆ ಹೊಸ ತರಕಾರಿ ತಳಿ ಬೆಳೆಯ ಬೇಕೆಂಬ ಯೋಚನೆಯಿಂದ ಇಲ್ಲಿಗೆ ಬಂದಿದ್ದೇನೆ. ಈ ಭೇಟಿಯಿಂದ ನನಗೆ ನಿಖರ ಕೃಷಿಯಲ್ಲಿ ಟೊಮ್ಯಾಟೊ ಬೆಳೆಯುವ ಹೊಸ ಯೋಚನೆ ಬಂದಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry