ಬುಧವಾರ, ಜೂನ್ 16, 2021
23 °C

ತರಕಾರಿ ಸುರಿದು ರೈತರ ಪ್ರತಿಭಟನೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ತರಕಾರಿ ಬೆಳೆಗಳ ಬೆಲೆ ಇಳಿಕೆ, ಪುರಸಭೆ ಅಧಿಕಾರಿಗಳು ರೈತರಿಂದ ಸುಂಕ ವಸೂಲಿ ಮಾಡುವ ಕ್ರಮ ಖಂಡಿಸಿ ಸೋಮವಾರ ತಾಲ್ಲೂಕಿನ ರೈತರು ಪಟ್ಟ­ಣದ ಸಂತೆ ಬೀದಿಯ ಮುಖ್ಯ ರಸ್ತೆಗೆ ಟೊಮೊಟೊ, ಬದನೆಕಾಯಿ ಸುರಿದು ಪ್ರತಿಭಟನೆ ನಡೆಸಿದರು.ಹದಿನೈದು ಕೆ.ಜಿ. ಟೊಮೊಟೊ ₨ 5, 30 ಕೆ.ಜಿ ಬದನೆಕಾಯಿ ₨10ಕ್ಕೆ ಮಾರಾ­ಟ­ವಾಗುತ್ತಿದೆ. ಹಳ್ಳಿ­ಗಳಿಂದ ಪಟ್ಟಣಕ್ಕೆ ತರುವ ಸಾಗಣ ವೆಚ್ಚವೂ ಲಭಿಸು­ತ್ತಿಲ್ಲ. ರೈತರಿಂದ ಕೆ.ಜಿ ಟೊಮೊಟೊ 35 ಪೈಸೆಗೆ ಕೊಂಡ ವ್ಯಾಪಾರಿಗಳು ₨ 2ಕ್ಕೆ ಮಾರಿಕೊಳ್ಳುತ್ತಿದ್ದಾರೆ.ರೈತರು ಹಗಲಿರುಳು ಶ್ರಮಿಸಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹಲ ರೈತರು ತಾವು ಬೆಳೆದ ಟೊಮೊಟೊ, ಬದನೆಕಾಯಿ ಬೆಳೆ ಕಟಾವು ಮಾಡದೆ ಹೊಲದಲ್ಲೇ ಬಿಟ್ಟಿದ್ದಾರೆ. ಕೆಲವರು ಕುರಿ, ಮೇಕೆ ಮೇಯಲು ಬಿಟ್ಟಿದ್ದಾರೆ. ತಾವು ಬೆಳೆಗಾಗಿ ವ್ಯಯಿಸಿದ ಹಣವೂ ಬಾರದೆ ಸಾಲದ ಶೂಲಕ್ಕೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಆದರೆ ಪುರಸಭೆ ಅಧಿಕಾರಿಗಳು ರೈತರಿಂದ ಸುಂಕ ವಸೂಲಿ ಮಾಡಿ ಲಾಭ ಮಾಡಿಕೊಳ್ಳುವ ಯೋಜನೆ ರೂಪಿಸುತ್ತಿದ್ದಾರೆ. ಈಚೆಗೆ ಉಪವಿಭಾಗಾಧಿಕಾರಿ­ಗಳಿಗೆ ರೈತರಿಂದ ಸುಂಕ ವಸೂಲು ಮಾಡಬಾರದು ಎಂದು ಮನವಿ ಸಲ್ಲಿಸಿ ಸುಂಕ ವಸೂಲಿಗೆ ಕರೆಯಲಾ­ಗಿದ್ದ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು.ಸುಂಕ ವಸೂಲು ಮಾಡುವುದನ್ನು ಶಾಶ್ವತವಾಗಿ ರದ್ದುಪಡಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ರೈತರು ಬೆಳೆದ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸಿ ಸಂಕಷ್ಟದಲ್ಲಿರುವ ರೈತರಿಗೆ ಅಭಯ ಹಸ್ತ ನೀಡಬೇಕು. ಟೊಮೊಟೊ, ಬದನೆಕಾಯಿ ಇನ್ನಿತರ ತರಕಾರಿ ಬೆಳೆಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ, ಶೀತಲೀಕರಣ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ನರಸಿಂಹರೆಡ್ಡಿ, ಸಂಚಾಲಕ ಬಡಪ್ಪ, ಖಜಾಂಚಿ ಅಂಜಯ್ಯ, ಹನುಮಂತರಾಯಪ್ಪ, ಶಿವಾರೆಡ್ಡಿ, ಪವನ್ ರಾಜ್, ಪಾಳೇಗಾರ ಲೋಕೇಶ್, ಶ್ರೀರಾಮಸೇನೆ ಅಧ್ಯಕ್ಷ ಕಾವಲಗೆರೆ ರಾಮಾಂಜಿನಪ್ಪ, ರೈತ ಲಿಂಗಪ್ಪ, ರೊಪ್ಪ ಶಿವ, ಈರಣ್ಣ, ಕಂಬದೂರು ಚಂದ್ರಣ್ಣ ಇತರರು ಉಪಸ್ಥಿತರಿದ್ದರು.ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಂತೆಗೆ ತಂದಿದ್ದ ಟೊಮೊಟೊ, ಬದನೆಕಾಯಿಯನ್ನು ರೈತರು ನಿರಾಸೆಯಿಂದ ರಸ್ತೆಗೆ ಸುರಿಯುತ್ತಿದ್ದರೆ. ಕೆಲವರು ಸುರಿದ ತರಕಾರಿಯನ್ನು ಚೀಲಕ್ಕೆ ತುಂಬಿಕೊಂಡು ಹೋಗುತ್ತಿದ್ದರು. ಮತ್ತೆ ಕೆಲ ರೈತರು  ಶನಿಮಹಾತ್ಮ ವೃತ್ತದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ವಾಹನದಲ್ಲಿದ್ದ ಟೊಮೊಟೊ ರಸ್ತೆಗೆ ಸುರಿಯುತ್ತಾ ಸಾಗಿದರು. ಪಟ್ಟಣದ ರಸ್ತೆಗಳೆಲ್ಲ ಟೊಮೊಟೊ ಮಯವಾಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.