ತರಬೇತಿ ಉಚಿತ; ಉದ್ಯೋಗ ಖಚಿತ

ಬುಧವಾರ, ಜೂಲೈ 17, 2019
24 °C

ತರಬೇತಿ ಉಚಿತ; ಉದ್ಯೋಗ ಖಚಿತ

Published:
Updated:

ಗುಲ್ಬರ್ಗ: ಉಚಿತ ತರಬೇತಿ. ಖಚಿತ ಉದ್ಯೋಗಾವಕಾಶ. ತರಬೇತಿ ಪಡೆಯಲು ಶುಲ್ಕ ತೆರಬೇಕಿಲ್ಲ. ಊಟ, ವಸತಿಯ ಚಿಂತೆಯೂ ಇಲ್ಲ...ಸಂಕಷ್ಟ ಎದುರಿಸುವ ಮಹಿಳೆಯರಿಗೆ ಧೈರ್ಯ ಹಾಗೂ ಆತ್ಮವಿಶ್ವಾಸವನ್ನಷ್ಟೇ ಅಲ್ಲ; ಆದಾಯ ಗಳಿಸಿ ಕುಟುಂಬದ ಆರ್ಥಿಕ ನೆಮ್ಮದಿಗೆ ನೆರವಾಗುವ ವಿಶಿಷ್ಟ ಯೋಜನೆಯಿದು. ಬೆಂಗಳೂರು ಹೊರತುಪಡಿಸಿದರೆ ಗುಲ್ಬರ್ಗದಲ್ಲಿ ಮಾತ್ರ ಇದು ಲಭ್ಯ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ನೆರವಿನೊಂದಿಗೆ ಚೆನ್ನೈ ಮೂಲದ `ಎವರಾನ್ ಸ್ಕಿಲ್ ಡೆವಲಪ್‌ಮೆಂಟ್ ಲಿಮಿಟೆಡ್~ ನಡೆಸುತ್ತಿರುವ ಯೋಜನೆಯಿದು. ಮಹಿಳೆಯರ ಸಬಲೀಕರಣದ ಉದ್ದೇಶವಿರುವ ಈ ಯೋಜನೆಗೆ ಕೈಜೋಡಿಸಿರುವುದು ಗುಲ್ಬರ್ಗದ ಸಮತಾ ಲೋಕ ಶಿಕ್ಷಣ ಸಮಿತಿ.ಶರಣಸಿರಸಗಿಯ ಅಂಬಿಗರ ಚೌಡಯ್ಯ ನಗರದಲ್ಲಿ ಸಮಿತಿಯು ಇದಕ್ಕಾಗಿಯೇ ಕಟ್ಟಡವೊಂದನ್ನು ನಿರ್ಮಿಸಿದೆ. ಅತ್ಯಾಧುನಿಕ ತಂತ್ರಜ್ಞಾನದ 32 ಹೊಲಿಗೆ ಯಂತ್ರಗಳು ಇಲ್ಲಿವೆ. ಮೇ17ರಂದು ಆರಂಭವಾದ ತರಬೇತಿಯ ಮೊದಲ ತಂಡದಲ್ಲಿ 30 ಮಹಿಳೆಯರು ಇಲ್ಲಿ ತರಬೇತಿ ಪಡೆದಿದ್ದಾರೆ. ಜಿಲ್ಲೆಯ ವಿವಿಧೆಡೆಗಳಿಂದ ಬರುವ ಮಹಿಳೆಯರಿಗೆ ಇಲ್ಲಿ ತರಬೇತಿ ಜತೆಗೆ ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ತರಬೇತಿ ಪಡೆದ ಬಳಿಕ ಉದ್ಯೋಗ ಹುಡುಕುವುದೇ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಆದರೆ ಅದು ಇಲ್ಲಿಲ್ಲ. ತರಬೇತಿ ಮುಗಿಯುತ್ತಲೇ ಶೇ 100 ಉದ್ಯೋಗ ಖಚಿತ. ಪ್ರಮಾಣಪತ್ರದ ಜತೆಗೆ ಉದ್ಯೋಗದ ನೇಮಕಾತಿ ಆದೇಶ ಕೂಡ ದೊರಕುತ್ತದೆ. ಇನ್ನು ಉದ್ಯೋಗ ನೀಡುವ ಕಂಪೆನಿಯು ವೇತನದ ಜತೆಗೆ ವಸತಿ, ಊಟ, ಆರೋಗ್ಯ, ಮನೋರಂಜನೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಕೆಲಸ ಮಾಡುತ್ತ, ಕೌಶಲವನ್ನು ಹೆಚ್ಚಿಸಿಕೊಂಡಂತೆಲ್ಲ ಕಾರ್ಮಿಕರ ವೇತನವೂ ಹೆಚ್ಚುತ್ತ ಹೋಗುತ್ತದೆ.“ಗುಲ್ಬರ್ಗ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಜವಳಿ ಪಾರ್ಕ್‌ಗೆ ಸಾಕಷ್ಟು ಸಂಖ್ಯೆಯ ಕಾರ್ಮಿಕರ ಅಗತ್ಯವಿದೆ. ಹೀಗಾಗಿ ಎವರಾನ್ ಸಂಸ್ಥೆಯ ಈ ಯೋಜನೆ ಸಾವಿರಾರು ಮಹಿಳಾ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುತ್ತದೆ. ಆರಂಭದಲ್ಲಿ ಬೇರೆಡೆ ಕೆಲಸ ಮಾಡಿ, ಕೌಶಲ ಹೆಚ್ಚಿಸಿಕೊಂಡರೆ ಕಾರ್ಮಿಕರಿಗೆ ಇನ್ನಷ್ಟು ಸಹಕಾರಿಯಾಗಲಿದೆ” ಎಂದು ಸಮತಾ ಲೋಕ ಶಿಕ್ಷಣ ಸಮಿತಿ ಅಧ್ಯಕ್ಷ ಬಿ.ಆರ್.ಪಾಟೀಲ ಹೇಳುತ್ತಾರೆ.ಉದ್ಯೋಗ ಆದೇಶ: ಮೊದಲ ತಂಡದಲ್ಲಿ ತರಬೇತಿ ಪಡೆದ 30 ಮಹಿಳೆಯರಿಗೆ ಸೋಮವಾರ ಪ್ರಮಾಣಪತ್ರ ವಿತರಿಸಲಾಯಿತು. ಇದರ ಜತೆಗೆ ಸಿಕ್ಕಿದ್ದು ಹೈದರಾಬಾದಿನ `ಸೂರ್ಯಕಿರಣ್ ಇಂಟರ್‌ನ್ಯಾಷನಲ್ ಲಿಮಿಟೆಡ್~ ನೀಡಿದ ಉದ್ಯೋಗದ ನೇಮಕಾತಿ ಆದೇಶ. ಆರಂಭದಲ್ಲಿ ರೂ. 2800 ವೇತನ, ಉಚಿತ ಊಟ ಹಾಗೂ ವಸತಿಯ ಜತೆಗೆ ಆರೋಗ್ಯ, ಭವಿಷ್ಯನಿಧಿ, ಇಎಸ್‌ಐ, ವಿಮೆಯಂಥ ಸೌಲಭ್ಯವನ್ನು ಕಂಪೆನಿ ಒದಗಿಸಲಿದೆ.ಕಂಪೆನಿಯ ಜನರಲ್ ಮ್ಯಾನೇಜರ್ ಚಮಿಂದಾ ಮಾತನಾಡಿ, “ನಮ್ಮ ಕಂಪೆನಿಯಲ್ಲಿ ವಿವಿಧ ರಾಜ್ಯಗಳಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಮೆರಿಕ, ಇಂಗ್ಲಂಡ್ ಸೇರಿದಂತೆ ಅನೇಕ ದೇಶಗಳಿಗೆ ನಮ್ಮ ಉತ್ಪನ್ನ ರಫ್ತಾಗುತ್ತಿದೆ” ಎಂದರು.ಆದ್ಯತೆ: “ಸಮತಾ ಸಮಿತಿ ಆರಂಭಿಸಿರುವ ತರಬೇತಿ ಕೇಂದ್ರದಲ್ಲಿ ಪ್ರತಿ ತಿಂಗಳೂ 50ರಿಂದ 60 ಜನರಿಗೆ ಹೊಲಿಗೆ ತರಬೇತಿ ಕೊಡುವ ಉದ್ದೇಶ ನಮ್ಮದು. ಬಿಪಿಎಲ್ ಕುಟುಂಬ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ತರಬೇತಿಯಲ್ಲಿ ಆದ್ಯತೆ ಕೊಡುವಂತೆ ಸರ್ಕಾರ ಸೂಚಿಸಿದೆ.ಮಹಿಳೆಯರು ಇದರ ಸದುಪಯೋಗ ಪಡೆಯಬೇಕು” ಎಂದು `ಎವರಾನ್~ ಮುಖ್ಯಸ್ಥ ಶ್ರೀಧರ ಮನವಿ ಮಾಡಿದರು. ಐದು ವರ್ಷಗಳ ಕಾಲ ಕೆಲಸ ಮಾಡುವ ಯುವತಿಯರು ಮದುವೆಯಾಗುವ ಸಂದರ್ಭದಲ್ಲಿ ಕಂಪೆನಿಯು ಅವರಿಗೆ ಒಂದು ಲಕ್ಷ ರೂಪಾಯಿ ಕೊಡಲಿದೆ ಎಂದು ಹಿರಿಯ ಸಲಹೆಗಾರ ಎಂ.ಆರ್.ಜಗನ್ನಾಥ್ ಪ್ರಕಟಿಸಿದರು. ಎಚ್‌ಕೆಡಿಬಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಪ್ರಮಾಣಪತ್ರ ವಿತರಿಸಿ, “ಮೊದಲ ತಂಡ ಉತ್ತಮವಾಗಿ ಕೆಲಸ ಮಾಡಿ, ಇತರರಿಗೂ ಪ್ರೇರಣೆ ನೀಡಲಿ” ಎಂದು ಹಾರೈಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry