ತರಬೇತಿ ಕೇಂದ್ರದಿಂದ ತೊಂದರೆ: ಆರೋಪ

7

ತರಬೇತಿ ಕೇಂದ್ರದಿಂದ ತೊಂದರೆ: ಆರೋಪ

Published:
Updated:
ತರಬೇತಿ ಕೇಂದ್ರದಿಂದ ತೊಂದರೆ: ಆರೋಪ

ಬೆಂಗಳೂರು: ತರಬೇತಿಯಲ್ಲಿರುವ ಯೋಧರ ಸಮರಾಭ್ಯಾಸವು ಸ್ಥಳೀಯ ನಿವಾಸಿಗಳಿಗೆ ತೊಂದರೆ ತಂದೊಡ್ಡುತ್ತಿರುವ ಪರಿಸ್ಥಿತಿಯು ದೇವರಜೀವನಹಳ್ಳಿ ಬಳಿಯ ಬಂಗಾರಿಗಿರಿ ಲೇಔಟ್‌ನಲ್ಲಿ ನಿರ್ಮಾಣವಾಗಿದೆ.`ಬಂಗಾರಿಗಿರಿ ಲೇಔಟ್ ಸಮೀಪದ ಪ್ಯಾರಚ್ಯೂಟ್ ರಿಜಿಮೆಂಟ್ ತರಬೇತಿ ಕೇಂದ್ರದಲ್ಲಿ ಯೋಧರು ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ. ತರಬೇತಿನಿರತ ಯೋಧರು ಹಾರಿಸುವ ಗುಂಡುಗಳು ಮನೆಯಂಗಳಕ್ಕೆ ಬಂದು ಬೀಳುತ್ತಿವೆ. ಅಲ್ಲದೇ, ಅವರು ರಾತ್ರಿಯಿಡೀ ಅಭ್ಯಾಸ ನಡೆಸುವುದರಿಂದ ಗುಂಡಿನ ಸದ್ದಿಗೆ ನಮ್ಮ ನಿದ್ರೆ ಹಾಳಾಗುತ್ತಿದೆ' ಎಂಬುದು ಸ್ಥಳೀಯರ ಆರೋಪ.`ತರಬೇತಿ ಕೇಂದ್ರದ ಸಮೀಪವೇ ನಮ್ಮ ಮನೆ ಇದೆ. ನಮ್ಮ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯೋಧರು ದಿನವಿಡೀ ಅಭ್ಯಾಸ ನಡೆಸುತ್ತಿದ್ದು, ಗುಂಡಿನ ಸದ್ದಿನಿಂದ ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಎಂಬ ಆತಂಕ ಎದುರಾಗಿದೆ. ಅಲ್ಲದೇ, ಗುಂಡುಗಳು ಮನೆಯ ಸಮೀಪವೇ ಬಂದು ಬೀಳುತ್ತಿರುವುದರಿಂದ ಇಲ್ಲಿ ಆಟವಾಡುವ ಮಕ್ಕಳ ಪ್ರಾಣಕ್ಕೆ ಅಪಾಯವಾಗುವ ಭಯ ಆವರಿಸಿದೆ' ಎಂದು ಸ್ಥಳೀಯರೊಬ್ಬರು ದೂರಿದರು.`ಗುಂಡಿನ ಸದ್ದಿನಿಂದ ರಾತ್ರಿ ಇಡೀ ನಿದ್ರೆ ಬರುವುದಿಲ್ಲ. ಪ್ರತಿದಿನ ಇದೇ ಪರಿಸ್ಥಿತಿ ಎದುರಿಸಬೇಕಾಗಿದೆ. ಗುಂಡಿನ ಸದ್ದು ಕೇಳಿ ನಾಯಿಗಳು ಭಯದಿಂದ ಕೂಗುತ್ತಿರುತ್ತವೆ' ಎಂದು ವೃದ್ಧ ದಂಪತಿ ಅಳಲು ತೋಡಿಕೊಂಡರು. `ತರಬೇತಿ ಸ್ಥಳವನ್ನು ಬದಲಾಯಿಸುವಂತೆ  ಪ್ಯಾರಚೂಟ್ ರಿಜಿಮೆಂಟ್ ತರಬೇತಿ ಕೇಂದ್ರದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ನಮ್ಮ ಮನವಿಗೆ ಅವರು ಸ್ಪಂದಿಸುತ್ತಿಲ್ಲ' ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.`ಗುಂಡು ಮನೆಗಳ ಸಮೀಪ ಬಂದು ಬೀಳುತ್ತಿದ್ದ ಕಾರಣ ಸ್ಥಳೀಯರು ಈ ಹಿಂದೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ತರಬೇತಿ ಕೇಂದ್ರದ ಗೋಡೆಯನ್ನು ಒಂದು ಅಡಿ ಮೇಲೆರಿಸಿತ್ತು. ಇತ್ತೀಚೆಗೆ ಮತ್ತೆ ಗೋಡೆಯ ಎತ್ತರವನ್ನು ಆರು ಅಡಿ ಏರಿಸಿದ್ದು, ಈಗ ಗೋಡೆ 30 ಅಡಿ ಎತ್ತರವಿದೆ. ಆದರೆ, ರಾತ್ರಿಯಿಡೀ ಅಭ್ಯಾಸ ನಡೆಸುವುದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ' ಎಂದು ಮೂಲಗಳು ತಿಳಿಸಿವೆ.`ಈ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು' ಎಂದು ರಕ್ಷಣಾ ಇಲಾಖೆಯ ಅಧಿಕಾರಿ ಎಂ.ಎಸ್.ಪಾಟೀಲ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry