ಸೋಮವಾರ, ಅಕ್ಟೋಬರ್ 14, 2019
28 °C

ತರಳಬಾಳು ಪ್ರಾಥಮಿಕ ಶಾಲೆಯಲ್ಲಿ ಪೊಲೀಸರ ಪಾಠ!

Published:
Updated:

ಹರಪನಹಳ್ಳಿ: ಶಾಲೆಯ ತರಗತಿ ಕೊಠಡಿಯಲ್ಲಿ ಶಿಕ್ಷಕರ ಪಾಠ-ಪ್ರವಚನ ಬೋಧನೆ ನಿತ್ಯ-ನಿರಂತರವಾಗಿ ನಡೆದಿರುತ್ತದೆ. ಆದರೆ, ಇಂದು ಅಲ್ಲಿನ ಮಕ್ಕಳಿಗೆ ಸಾಮಾನ್ಯಜ್ಞಾನದ ತಿಳಿವಳಿಕೆಯ ಶಿಕ್ಷಣ ಬೋಧಿಸುವ ವಿಶೇಷ ಶಿಕ್ಷಕರ ಆಗಮನವಾಗಿತ್ತು. ಖಾಕಿ ಪ್ಯಾಂಟ್-ಷರ್ಟ್, ಸೊಂಟಕ್ಕೆ ಬಿಗಿದುಕೊಂಡಿದ್ದ ಚರ್ಮದ ಬೆಲ್ಟ್, ತಲೆಯ ಮೇಲೆ ಅಶೋಕ ಚಕ್ರದ ಟೊಪ್ಪಿಗೆ...ಸಮವಸ್ತ್ರ ಧರಿಸಿದ ಶಿಕ್ಷಕರು ಗುಂಪು ಅಲ್ಲಿ ನೆರೆದಿದ್ದರು.ಇದೇನು? ಸಮವಸ್ತ್ರ ಧರಿಸಿದ ಪೊಲೀಸರ ಬೋಧನೆಯಾ? ಖಂಡಿತಾ ಹೌದು. ಪಟ್ಟಣದ ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆಯಲ್ಲಿ ಪೊಲೀಸ್ ಇಲಾಖೆಯ ಸಮವಸ್ತ್ರ ಧರಿಸಿದ ಪೊಲೀಸರು ವಿಶೇಷ ಶಿಕ್ಷಕರಾಗಿ ಆಗಮಿಸಿದ್ದರು. ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆ ಹಾಗೂ ಸ್ಥಳೀಯ ಪೊಲೀಸ್ ಇಲಾಖೆ ಆಶ್ರಯದಲ್ಲಿ ರಸ್ತೆ ಸುರಕ್ಷಿತಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ `ರಸ್ತೆ ಸಂಚಾರ ಮತ್ತು ಸುರಕ್ಷತೆ~ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ನಡೆದ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗಳು ಉಪನ್ಯಾಸ ನೀಡಿದರು. ಪ್ರಾತ್ಯಕ್ಷಿತೆಯ ಮೂಲಕ ಸಂಚಾರಿ ನಿಯಮ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಉಪನ್ಯಾಸ ಮಂಡಿಸಿದ ಸಿಪಿಐ ಬಿ.ಎಸ್. ಬಸವರಾಜ್ ಮಾತನಾಡಿ, ಮನುಷ್ಯನ ಜೀವ ಅಮೂಲ್ಯವಾಗಿದ್ದು, ರಸ್ತೆಸಂಚಾರಿ ನಿಯಮಗಳ ಅನುಪಾಲನೆಯಲ್ಲಿ ನಿರ್ಲಕ್ಷ್ಯತೆ ತೋರುತ್ತಿರುವ ಪರಿಣಾಮ ಸಂಭವಿಸುವ ಅಪಘಾತಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆ. ಸುರಕ್ಷಿತ ಸಂಚಾರ ದೃಷ್ಟಿಯಿಂದ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಚಿಹ್ನೆ ಹಾಗೂ ನಿಯಮಗಳನ್ನು ಚಾಚುತಪ್ಪದೇ ಅನುಸರಿಸುವುದರಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು.ಜತೆಗೆ, ವಾಹನ ಚಲಾಯಿಸುವ ಸಮಯದಲ್ಲಿ ಮೊಬೈಲ್ ಸಂಭಾಷಣೆ, ಮದ್ಯಪಾನ ಮಾಡಿ ಚಲಾಯಿಸುವುದು. ಇದ್ದಕ್ಕಿದಂತೆ ಸಿಗ್ನಲ್‌ರಹಿತ ಮಾರ್ಗ ಬದಲಾವಣೆ ಹಾಗೂ ರಸ್ತೆ ವಿಭಜಕಗಳನ್ನು ಉಲ್ಲಂಘಿಸುವುದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಮಕ್ಕಳಲ್ಲಿ ಅರಿವಿನ ಪ್ರಜ್ಞೆ ಮೂಡಿಸಿದರು.ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ವಾಹನದಟ್ಟಣೆಯೂ ಅಧಿಕವಾಗಿದೆ. ಅದರಲ್ಲಿಯೂ ಶಾಲಾಪೂರ್ವ ಹಾಗೂ ಮುಕ್ತಾಯದ ಅವಧಿಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು ಕಿಕ್ಕಿರುದಿರುತ್ತವೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿರುವ ಸಂಚಾರಿ ಚಿಹ್ನೆಗಳ ಅನುಸರಿಸಿ, ಜಾಗೃತಿ ವಹಿಸುವಂತೆ ಮಕ್ಕಳಿಗೆ ತಿಳಿಸಿದರು.ಪೊಲೀಸರು ಸಂಚಾರಿ ನಿಯಮಗಳ ಕುರಿತು ಮಂಡಿಸಿದ ಪ್ರಾತ್ಯಕ್ಷಿತೆಯ ಮಾಹಿತಿಯನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಾಸಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿವಿಧ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಎಸ್‌ಐ ವಸಂತ್ ಅಸ್ಸಾದಿ, ಯಶವಂತಕುಮಾರ್ ಜಾಧವ್, ಪ್ರೊಬೇಷನ್ ಪಿಎಸ್‌ಐ ಎಂ.ಎಂ. ಮಹಾಂತೇಶ್ ಹಾಗೂ ಪೊಲೀಸ್ ಸಿಬ್ಬಂದಿ ರಸ್ತೆ ಸಂಚಾರಿ ನಿಯಮ ಕುರಿತು ಪ್ರಾತ್ಯಕ್ಷಿತೆ ತೋರಿಸಿದರು.ಎಚ್‌ಪಿಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಆರ್. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್. ನಂಜಪ್ಪ, ಪತ್ರಕರ್ತ ಬಿ. ರಾಮಪ್ರಸಾದ್ ಗಾಂಧಿ ಇತರರು ಉಪಸ್ಥಿತರಿದ್ದರು. ಶಿಕ್ಷಕರಾದ ವಿಜಯಕುಮಾರ್ ಸ್ವಾಗತಿಸಿದರು. ವಿನೋದ್ ವಂದಿಸಿದರು. ಉಷಾದೇವಿ ಕಾರ್ಯಕ್ರಮ ನಿರೂಪಿಸಿದರು.  

Post Comments (+)