ತರಳಬಾಳು ಹುಣ್ಣಿಮೆ ನಡೆದು ಬಂದ ದಾರಿ

7

ತರಳಬಾಳು ಹುಣ್ಣಿಮೆ ನಡೆದು ಬಂದ ದಾರಿ

Published:
Updated:
ತರಳಬಾಳು ಹುಣ್ಣಿಮೆ ನಡೆದು ಬಂದ ದಾರಿ

ಸಿರಿಗೆರೆ: ನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತರಳಬಾಳು ಬೃಹನ್ಮಠ ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಾ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ.

ಶರಣರ ಸಂದೇಶಗಳನ್ನು ನಾಟಕ ಮತ್ತು ವಚನ ಬಳಗಗಳ ಮೂಲಕ ದೇಶಾದ್ಯಂತ ಪಸರಿಸಿರುವ ಹಿರಿಮೆಗೆ ಪಾತ್ರವಾಗಿದೆ. ಇದಿಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ಗ್ರಾಮೀಣ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಬೃಹನ್ಮಠ ಆಗಿನಿಂದಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಮಹಿಳೆಯರು ಹೆಚ್ಚು ಸುಶಿಕ್ಷಿತ ರಾಗುವಂತೆ ಪ್ರೋತ್ಸಾಹಿಸಿರುವುದು ಶ್ಲಾಘನೀಯ.ಇಷ್ಟೆಲ್ಲಾ ಬೃಹತ್ ಇತಿಹಾಸ ಹೊಂದಿರುವ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ 50ರ ದಶಕಕ್ಕಿಂತಲೂ ಹಿಂದೆಯೇ ಬೃಹನ್ಮಠದಲ್ಲಿಯೇ ನಡೆಯುತ್ತಿದ್ದ `ದಸರಾ ಉತ್ಸವ'ವನ್ನು ತಿಪಟೂರಿನ ಹಿರಿಯ ಗಾಂಧಿವಾದಿ `ಸಿರುಮ' ಎಂದೇ ಖ್ಯಾತರಾಗಿದ್ದ ಎಸ್.ಆರ್. ಮಲ್ಲಪ್ಪ ಅವರು `ತರಳಬಾಳು ಹುಣ್ಣಿಮೆ ಮಹೋತ್ಸವ' ಎಂದು ನಾಮಕರಿಸಿ ಅಲ್ಲಿಂದ ಮುಂದೆ ನಾಡಿನ ವಿವಿಧ ಭಾಗಗಳಲ್ಲಿ ಈ ಉತ್ಸವ ಸಮಾಜದ ಜನತೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಮೇಲೆ ಬರುವಂತೆ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪ್ರೋತ್ಸಾಹಿಸಿದರು.

ನಂತರದ ದಿನಗಳಲ್ಲಿ ಲಿಂಗೈಕ್ಯ ಶ್ರೀಗಳ ಆಶಯದಂತೆ ಈಗಿನ ಪೀಠಾಧಿಪತಿ  ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ತರಳಬಾಳು ಶಾಖಾಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹರಳಕಟ್ಟ ಶಾಖಾಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸಿದ್ದಯ್ಯ ಅವರುಗಳ ಸಹಕಾರದಿಂದ ನಾಡಿನ ನಾನಾ ಭಾಗಗಳಲ್ಲಿ ಹುಣ್ಣಿಮೆ ಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ.ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಭಾಗವಹಿಸಿದ್ದ ನಾಡಿನ ಹಲವಾರು ಚಿಂತಕರು, ಸಾಹಿತಿಗಳು, ವಿಮರ್ಶಕರು, ರಾಜಕಾರಣಿಗಳು, ಕಲಾವಿದರ ಅನಿಸಿಕೆಯಂತೆ ಇದೊಂದು `ನಡೆದಾಡುವ ವಿಶ್ವವಿದ್ಯಾನಿಲಯ' ಎಂದೇ ಕರೆಸಿಕೊಂಡಿದೆ.

1950ರಲ್ಲಿ ಆಗಿನ ಮೈಸೂರು ರಾಜ್ಯ ಸರ್ಕಾರದ ಮಂತ್ರಿಗಳಾಗಿದ್ದ ಜಗಳೂರಿನ ಮುಸ್ಲಿಂ ಬಾಂಧವ ಜೆ. ಇಮಾಮ್‌ಸಾಬ್ ಅವರ ಕೋರಿಕೆಯ ಮೇರೆಗೆ ಜಗಳೂರಿನಲ್ಲಿ ಹುಣ್ಣಿಮೆ ಮಹೋತ್ಸವ ಆಚರಿಸಲ್ಪಟ್ಟು ಮೊದಲ ಬಾರಿಗೆ ಸಿರಿಗೆರೆಯಿಂದ ಹೊರಗಿನ ಸ್ಥಳಗಳಲ್ಲಿ ಆಚರಿಸುವ ಒಂದು ಪರಿಪಾಠವನ್ನು ಮಹೋತ್ಸವ ಪಡೆಯಿತು. ಅಂದಿನಿಂದ ಇಂದಿನವರೆಗೆ ನಡೆದ ಈ ಮಹೋತ್ಸವ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ನಡೆದಿರುವುದು ಗಮನಾರ್ಹ.ಬೃಹನ್ಮಠವು ತರಳಬಾಳು ಹುಣ್ಣಿಮೆಯನ್ನು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಪರಿಗಣಿಸದೆ ನಾಡಿಗೆ ಬಂದೆರಗಿದ ಬರಗಾಲ, ಪ್ರವಾಹ, ಅಗ್ನಿ ಅನಾಹುತಗಳು ಮುಂತಾದ ಪ್ರಕೃತಿ ವಿಕೋಪಗಳಿಗೂ ಸ್ಪಂದಿಸುತ್ತಾ, ಸಮಾರಂಭವನ್ನು ಸರಳವಾಗಿ ಆಚರಿಸಿ ಹೆಚ್ಚಿನ ಧನ, ಧಾನ್ಯ ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಾ ಬಂದಿದೆ.

1986ರಲ್ಲಿ ಬರಗಾಲದ ಅಂಗವಾಗಿ ಮಹೋತ್ಸವವನ್ನು ರದ್ದುಗೊಳಿಸಿ ಜಾನುವಾರುಗಳಿಗೆ ಮೇವು ಸಂಗ್ರಹಣಾ ಕಾರ್ಯಕ್ರಮ, 2004ರಲ್ಲಿ ಬರಪೀಡಿತ 10 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನ, 2007ರಲ್ಲಿ ಬರ ಪರಿಹಾರ ಕಾರ್ಯಕ್ರಮ, 2010ರಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ರಮ, ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಸಹಾಯಹಸ್ತ ಚಾಚಿರುವ ನಿದರ್ಶನಗಳಿವೆ.ಇಂತಹ ಮಹೋನ್ನತ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಬೃಹನ್ಮಠ ಕಳೆದ ವರ್ಷ ಕಡೂರಿನಲ್ಲಿ ನಡೆದಿತ್ತು. ಈ ವರ್ಷ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ನಡೆಯಬೇಕಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿರುವ ಕಾರಣಕ್ಕೆ ಈ ಬಾರಿ ಸಿರಿಗೆರೆಯ್ಲ್ಲಲೇ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಸಿದ್ಧತೆಗಳು ಭರದಿಂದ ಸಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry