ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಶಿಗ್ಗಾವಿ ಸಜ್ಜು

ಶಿಗ್ಗಾವಿ (ಹಾವೇರಿ ಜಿಲ್ಲೆ): ಧಾರ್ಮಿಕ, ಸಾಮಾಜಿಕ ಚಿಂತನಾ ಸಮಾವೇಶವೆಂದೇ ಹೇಳಲಾಗುವ ತರಳಬಾಳು ಹುಣ್ಣಿಮೆ ಮಹೋತ್ಸವ ಇದೇ 6 ರಿಂದ 9 ದಿನಗಳ ಕಾಲ ಇಲ್ಲಿ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.
ತಹಶೀಲ್ದಾರ್ ಕಚೇರಿ ಬಳಿ ೨೦ ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಅದರಲ್ಲಿ ಕನಕದಾಸ ಮಹಾಮಂಟಪ, ಸಂತ ಶಿಶುನಾಳ ಷರೀಫ್ ಮಹಾವೇದಿಕೆ ಮತ್ತು ರಾವಬಹದ್ದೂರ್ ಅರಟಾಳು ರುದ್ರಗೌಡ ಮಹಾದ್ವಾರ ನಿರ್ಮಿಸಲಾಗಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಗಣ್ಯರು ಹಾಗೂ ಧಾರ್ಮಿಕ ಮುಖಂಡರಿಗೆ ಸ್ವಾಗತಕೋರುವ ಬ್ಯಾನರ್, ಬಂಟಿಂಗ್ಸ್ ಹಾಗೂ ಫ್ಲೆಕ್ಸ್ಬೋರ್ಡ್ಗಳು ಎಲ್ಲೆಡೆ ರಾರಾಜಿಸುತ್ತಿವೆ.
‘ಸಮಾರಂಭದಲ್ಲಿ ೨೫ ರಿಂದ ೩೦ ಸಾವಿರ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ನಿತ್ಯವೂ ಸುಮಾರು ೧೫ ರಿಂದ ೨೦ ಸಾವಿರ ಜನರು ಬರುವ ನಿರೀಕ್ಷೆ ಇದ್ದು, 9ನೇ ದಿನ ಒಂದು ಲಕ್ಷಕ್ಕೂ ಅಧಿಕ ಜನರು ಬರುವ ಸಾಧ್ಯತೆಯಿದೆ’ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರತಿ ನಿತ್ಯ ಕಾರ್ಯಕ್ರಮಕ್ಕೆ ಬರಲಿರುವ ಶರಣರಿಗೆ, ಸಾಹಿತಿಗಳಿಗೆ ಹಾಗೂ ಸ್ವಾಮೀಜಿಗಳಿಗೆ ಮತ್ತು ರಾಜಕಿಯ ಮುಖಂಡರಿಗೆ ಶಿಗ್ಗಾವಿ ಪಟ್ಟಣದ ಗಣ್ಯರ ಮನೆಯಲ್ಲಿ ವಸತಿ ಕಲ್ಪಿಸಲಾಗಿದೆ. ಅಲ್ಲದೇ, ರಾಜ್ಯ, ರಾಷ್ಟ್ರ ಮಟ್ಟದ ಗಣ್ಯರಿಗೆ ಹಾವೇರಿ, ಹುಬ್ಬಳ್ಳಿ ನಗರದಲ್ಲಿ ವಸತಿ ಸೌಲಭ್ಯ ವ್ಯವಸ್ಥೆ ಹಾಗೂ ಗಣ್ಯರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ.
ಕೃಷಿ ಪ್ರದರ್ಶನ, ಹೋಟೆಲ್, ಪುಸ್ತಕ ಪ್ರದರ್ಶನ ಹಾಗೂ ವ್ಯಾಪಾರ ಸೇರಿದಂತೆ ಇತರ ವಹಿವಾಟಿಗೆ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರ ಮನರಂಜನೆಗಾಗಿ ೬ ರಿಂದ ೭ ಎಕರೆ ಭೂಮಿಯಲ್ಲಿ ಮನರಂಜನಾ ಆಟದ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ.
‘ವಿವಿಧ ರಾಜ್ಯಗಳ ರಾಜಕೀಯ ಮುಖಂಡರು, ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ಕವಿಗಳು, ಜಾನಪದ ಕಲಾವಿದರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ’ ಎಂದು ಬುಧವಾರ ಸಿದ್ಧತೆಗಳ ವೀಕ್ಷಿಸಿದ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಸಿರಿಗೆರೆ ತರಳಬಾಳು ಆಡಳಿತಾಧಿಕಾರಿ ಡಾ.ಸಿದ್ಧೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಟಿ.ಇನಾಮತಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.