ತರಳಬಾಳು ಹುಣ್ಣಿಮೆ -2011 ಸಮಾರಂಭದಲ್ಲಿ ಸಿದ್ದಗಂಗಾಶ್ರೀ ಅಭಿಮತ.

7

ತರಳಬಾಳು ಹುಣ್ಣಿಮೆ -2011 ಸಮಾರಂಭದಲ್ಲಿ ಸಿದ್ದಗಂಗಾಶ್ರೀ ಅಭಿಮತ.

Published:
Updated:

ಬೆಂಗಳೂರು: ‘ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ಬಡತನ ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಪರಿಹಾರವೆಂದರೆ ಜನರು ಶ್ರಮ ಜೀವಿಗಳಾಗಬೇಕು’ ಎಂದು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.‘ಬಸವಣ್ಣನವರ ಕಾಯಕ- ದಾಸೋಹದ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಮಾಜ ಜಾಗೃತಿಯತ್ತ ಚಿಂತನೆ ನಡೆಸಬೇಕಾದ ಅಗತ್ಯವಿದೆ. ತರಳಬಾಳು ಹುಣ್ಣಿಮೆಯಂಥ ಕಾರ್ಯಕ್ರಮಗಳನ್ನು ವರ್ಷಕ್ಕೊಮ್ಮೆ ಆಯೋಜಿಸುವ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನುಡಿದರು.‘ಭಾರತ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೂರು ಸಾವಿರ ವರ್ಷಗಳಿಂದ ಅಪಾರ ಸಾಧನೆ ಮಾಡಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲೂ ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವ ಬಗ್ಗೆ ಆತ್ಮಾವಲೋಕನ ನಡೆಯಬೇಕು. ಜನರನ್ನು ಶಿಕ್ಷಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಮಠಗಳು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿರುವುದು ಶ್ಲಾಘನೀಯ’ ಎಂದರು.ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಮನಸ್ಸಿನ ಆರೊಗ್ಯ ಚೆನ್ನಾಗಿದ್ದರೆ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡಬಹುದು. ದೇಶದಲ್ಲಿ ಪರಿಪೂರ್ಣ ಆರೋಗ್ಯವಂತರ ಪ್ರಮಾಣ ಶೇ. 25ರಷ್ಟಿದ್ದು, ಯಾವುದೇ ಸಮಸ್ಯೆಗೆ ಸ್ಪಂದಿಸದ ಇಂಥವರಿಂದ ಸಾಮಾಜಿಕ ಚಿಂತನೆ ಅಸಾಧ್ಯ. ತಾಳ್ಮೆ, ಮುಗುಳ್ನಗೆ, ಗಾಂಭೀರ್ಯ ಇದ್ದಾಗ, ಸಾಮಾಜಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದರು.ಚಿಂತಕ ಡಾ.ಗುರುರಾಜ ಕರಜಗಿ ಅವರು, ‘ಬಾಳಿಗೊಂದು ನಂಬಿಕೆ’ ವಿಚಾರವಾಗಿ ಮಾತನಾಡಿ, ಮನುಷ್ಯನ ಬದುಕಿಗೆ ನಂಬಿಕೆ ಮುಖ್ಯ. ತಮ್ಮ ಬಗೆಗೆ ಮೊದಲು ನಂಬಿಕೆ ಇರಬೇಕು, ಇದರಿಂದ ಆತ್ಮವಿಶ್ವಾಸ ಬಲಗೊಳ್ಳುತ್ತದೆ. ನಾವು ಮಾಡುವ ಕೆಲಸದಲ್ಲಿ ನಂಬಿಕೆ ಇರಬೇಕು. ಸ್ವಾರ್ಥಕ್ಕಾಗಿ ಬದುಕುವುದನ್ನು ಬಿಡಬೇಕು. ದೇವರು ಇದ್ದಾನೆ ಎಂಬ ನಂಬಿಕೆ ಇದ್ದರೆ, ಎಂತಹ ಮಹತ್ಕಾರ್ಯವನ್ನೂ ಸಾಧಿಸಬಹುದು ಎಂದರು.ಸಚಿವ ಡಾ.ವಿ.ಎಸ್. ಆಚಾರ್ಯ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಸಚಿವ ಜಗದೀಶ ಶೆಟ್ಟರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry