ಮಂಗಳವಾರ, ಮೇ 24, 2022
31 °C

ತರಳುಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ನಟರಾಜ್ ಹುಳಿಯಾರ್. ಜಾತ್ಯತೀತ ತತ್ವಕ್ಕೆ ಕಂಟಕ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ಜಾತಿಪದ್ಧತಿಗೆ ಬಲ ನೀಡಲು ಯತ್ನಿಸುವ ಸಂದರ್ಭದಲ್ಲಿ ಶರಣರು, ಇದರ ವಿರುದ್ಧ ಹೋರಾಟಕ್ಕೆ ಮುಂದಾಗಿರುವುದು ಸಂತೋಷದ ಸಂಗತಿ ಎಂದು ಗುಲ್ಬರ್ಗದ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ನಟರಾಜ್ ಹುಳಿಯಾರ್ ಮೆಚ್ಚುಗೆ ವ್ಯಕ್ತಪಡಿಸಿದರು.ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ‘ಜಾತ್ಯತೀತತೆ ಮತ್ತು ಮಾನವೀಯತೆ’ ವಿಷಯ ಕುರಿತು ಅವರು ಮಾತನಾಡಿದರು. ಆದ್ಯ ವಚನಕಾರ ದೇವರದಾಸಿಮಯ್ಯ ಅವರಿಂದ ವಚನ ಸಾಹಿತ್ಯ ಆರಂಭವಾಯಿತು. ನಂತರದ ವಚನಕಾರರಲ್ಲಿ ಪ್ರಮುಖರಾದ ಬಸವಣ್ಣನವರು ಜಾತ್ಯತೀಯತೆಯನ್ನು ಸಮಾಜದಲ್ಲಿ ಮೂಡಿಸಲು ಮುಂದಾದರು. ಅಕ್ಕ ಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರೂ ಜಾತ್ಯತೀತ ಸಮಾಜದ ಪರವಾಗಿ ನಿಂತರು ಎಂದು ಅವಲೋಕಿಸಿದರು.ಬಹುಜನರು ಬೆರೆಯದ ಸಮಾಜ ಕೊಳೆತು ಹೋಗುತ್ತದೆ. ಎಲ್ಲ ವರ್ಗಗಳ ಸೇರ್ಪಡೆಯಿಂದ ಜಾತಿ ಪದ್ಧತಿ ವಿರುದ್ಧದ ಚಳವಳಿ ಆರಂಭವಾಯಿತು. 20ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಹ ಜಾತ್ಯತೀತತೆಯನ್ನು ಪ್ರತಿಪಾದಿಸಿದ್ದಾರೆಂದು ಅವರು ಹೇಳಿದರು.ಜಾತ್ಯತೀತ ನಾಯಕನ ಹುಟ್ಟು ಗಮನಾರ್ಹವಾದುದು. ಧರ್ಮ ನಿರಪೇಕ್ಷತೆ ನಮ್ಮನ್ನು ಮುನ್ನಡೆಸುವ ಶಕ್ತಿಯಾಗಿದೆ ಎಂದು ಪ್ರತಿಪಾದಿಸಿದರು.ಕನ್ನಡ ಸಂಸ್ಕತಿಯಲ್ಲಿನ ಜಾತ್ಯತೀತತೆ ತತ್ವವನ್ನು ಕೆಲವರು  ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿಯಿಂದಷ್ಟೇ ಅಲ್ಲದೆ, ಭಾಷೆಯಿಂದಲೂ ಅಸ್ಪಶ್ಯತೆಯನ್ನು ನಗರ ಪ್ರದೇಶಗಳಲ್ಲಿ ಕಾಣುತ್ತಿದ್ದೇವೆ.  ಆದರೆ, ಧಾರ್ಮಿಕ ಸಂಸ್ಥೆಗಳಲ್ಲಿ ಇಂತಹ ಪ್ರವೃತ್ತಿ ಕಂಡು ಬರುವುದಿಲ್ಲ.  ಮನೆಯ ವಾತಾವರಣದಲ್ಲೇ ಮಕ್ಕಳು ಜಾತ್ಯತೀತರಾಗಿ ಬೆಳೆಯುವಂತಾಗಬೇಕು. ಈ ಅಂಶವನ್ನು ಪ್ರತಿಯೊಂದು ಕುಟುಂಬದ ತಾಯಂದಿರು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಇಂದು ನಾವು ಸಮಾಜವಾದ, ಸಮಾನತೆ ಬಗ್ಗೆ ಮಾತನಾಡುತ್ತೇವೆ.  ಆದರೆ, ರೂಢಿಗೆ ತರುತ್ತಿಲ್ಲ. 12ನೇ ಶತಮಾನದಲ್ಲಿ ಶರಣರು ಸಮಾಜವಾದದ ಪರವಾಗಿ ನಿಂತರು ಎಂದು ಶ್ಲಾಘಿಸಿದರು.ಅಂದು ಕಾಯಕವೇ ಕೈಲಾಸ ಎಂಬುದು ಧ್ಯೇಯ ವಾಕ್ಯವಾಗಿದ್ದರೆ, ಇಂದು ದುಡಿಯದೇ ಗಳಿಕೆಯ ಹಾದಿ ತುಳಿಯುತ್ತಿರುವುದನ್ನು ಕಾಣುತ್ತಿದ್ದೇವೆ. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಿರಿಗೆರೆ ತರಳಬಾಳುಮಠ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ತರಳಬಾಳು ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಸರ್ವ ಧರ್ಮ ಸಮನ್ವಯತೆಯನ್ನು ಪಾಲಿಸಿಕೊಂಡು ಬರುತ್ತಿರುವುದು ಹಾಗೂ ಶ್ರೀಗಳ ನೇತೃತ್ವದಲ್ಲಿ ಸರ್ವ ಧರ್ಮಗಳೊಂದಿಗೆ ಭಾವೈಕ್ಯವನ್ನು ಸಮಾಜದಲ್ಲಿ ಮೂಡಿಸುತ್ತಿರುವುದು ಗಮನಾರ್ಹ ಸಂಗತಿ ಎಂದು ಹೇಳಿದರು.  ಮನುಷ್ಯತ್ವದಿಂದ ಬದುಕುವ ಮನಃಸ್ಥಿತಿಯನ್ನು ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು,   ಮನುಷ್ಯ ಸ್ವಾರ್ಥಕ್ಕಾಗಿ ಕನಸು ಕಾಣುವ ಬದಲು ಸಮಾಜ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಏಜಾಸುದ್ದೀನ್ ಮಾತನಾಡಿ, ಧರ್ಮ ಹಾಗೂ ಜಾತಿಗಳು ದೊಡ್ಡವು ಎಂಬ ಏಣಿ ಏರಿದ್ದೇವೆ. ಇಂತಹ ಭಾವನೆಯಿಂದ ಭಾವೈಕ್ಯವನ್ನೇ  ಮರೆಯುತ್ತಿದ್ದೇವೆ.  ಒಬ್ಬ ಭಗವಂತನನ್ನು ಹಲವೆಡೆ ಹಂಚಿ ಸಂಕುಚಿತ ಸ್ಥಿತಿ ತಲುಪಿದ್ದೇವೆ ಎಂದು ವಿಷಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.