ತರಹೇವಾರಿ ತರಕಾರಿ ಪಲ್ಲೆ ಸವಿದ ಮಂದಿ

7
ಪರಿಸರ ಮಧ್ಯೆ ತೆರೆದುಕೊಂಡ ಎಳ್ಳಮಾಮಾಸ್ಯೆ

ತರಹೇವಾರಿ ತರಕಾರಿ ಪಲ್ಲೆ ಸವಿದ ಮಂದಿ

Published:
Updated:

ಗುಲ್ಬರ್ಗ: ವರ್ಷವಿಡೀ ಆಹಾರ ಬೆಳೆದು ಕೊಡುವ ಭೂತಾಯಿಗೆ ನಮಸ್ಕರಿಸುವ ದಿನವೆಂದು ಜನಪದರೆಲ್ಲ ನಂಬಿರುವ ಎಳ್ಳಮಾಮಾಸ್ಯೆಯನ್ನು ಬುಧವಾರ ಜಿಲ್ಲೆಯಾದ್ಯಂತ  ಸಂಭ್ರಮದಿಂದ ಆಚರಿಸಲಾಯಿತು.ಬುಧವಾರ ಬೆಳಿಗ್ಗೆಯೇ ರೈತರೆಲ್ಲ ತಮ್ಮ ಹೊಲಗಳಿಗೆ ಕುಟುಂಬ ಸಮೇತ ಎತ್ತಿನಗಾಡಿಗಳಲ್ಲಿ ಹೋಗುವುದು ಗಮನ ಸೆಳೆಯಿತು. ಅಲಂಕೃತ ಹೊದಿಕೆಗಳ ಮಧ್ಯೆ ಬುತ್ತಿಗಂಟುಗಳನ್ನು ಕಟ್ಟಿಕೊಂಡು ಎತ್ತಿನಗಾಡಿಗಳಲ್ಲಿ, ಬೈಕ್‌ನಲ್ಲಿ ಕುಳಿತಿದ್ದ ಮಹಿಳೆಯರು ಹಾಗೂ ಮಕ್ಕಳ ಮುಖದಲ್ಲಿ ಸಂತೋಷದ ಸೆಲೆ ತುಳುಕುತ್ತಿತ್ತು.ಇತ್ತ ನಗರದಲ್ಲೂ ಮಧ್ಯಾಹ್ನದ ಹೊತ್ತಿಗೆ ಸಾರ್ವಜನಿಕ ಉದ್ಯಾನ ಭರ್ತಿಯಾಗಿತ್ತು. ಮಕ್ಕಳ ಸಮೇತ ಅನೇಕ ಕುಟುಂಬಗಳು ಬುತ್ತಿಗಂಟು ಹರಡಿಕೊಂಡು ಕುಳಿತ್ತಿದ್ದರು. ಮಕ್ಕಳೆಲ್ಲ ಜಾತ್ರೆಗೆ ಸೇರಿದವರಂತೆ ನಲಿದಾಡುತ್ತಿದ್ದರು. ಬಾಯಲ್ಲಿ ನೀರು ಬರಿಸುವ ಆಹಾರ ಪದಾರ್ಥಗಳ ಘಮಲು ಉದ್ಯಾನ ತುಂಬ ಹರಡಿತ್ತು.ಶಾಲಾ–ಕಾಲೇಜುಗಳು ಸ್ಥಳೀಯ ರಜೆ ಘೋಷಿಸಿದ್ದರಿಂದ ಮಕ್ಕಳು ಎಳ್ಳಮಾಮಾಸ್ಯೆ ಸವಿಯೂಟದಲ್ಲಿ ಸಕ್ರಿಯರಾಗಿರುವುದು ಎದ್ದು ಕಾಣುತ್ತಿತ್ತು. ಭೂತಾಯಿಗೆ ಆಹಾರದ ಪೂಜೆ ಸಲ್ಲಿಸಿ, ಭೂರಿ ಭೋಜನ ಸವಿದರು.ಜಮೀನಿನ ಒಂದು ಭಾಗದಲ್ಲಿ ಐದು ಸಣ್ಣ ಕಲ್ಲುಗಳನ್ನಿಟ್ಟು ಅದಕ್ಕೆ ಕುಂಕುಮ, ವಿಭೂತಿ ಹಚ್ಚುವುದು. ಆಹಾರವನ್ನು ನೈವೇದ್ಯ ಹಿಡಿದು ಪೂಜೆ ಸಲ್ಲಿಸುವ ಪ್ರಕ್ರಿಯೆ ಗ್ರಾಮಗಳಲ್ಲಿ ನಡೆಯಿತು. ಆನಂತರ ನೈವೇದ್ಯ ಹಿಡಿದ ಆಹಾರವನ್ನು ಚರಗ ಚೆಲ್ಲಲಾಗುತ್ತದೆ. ಅಂದರೆ ಆಹಾರದ ಮುಟ್ಟಿಗೆಗಳನ್ನು ಬೆಳೆಗಳ ಮಧ್ಯೆ ಎಸೆಯಲಾಗುತ್ತದೆ. ಇದು ಹಕ್ಕಿ–ಪಕ್ಷಿಗಳ ಪಾಲಾಗುತ್ತದೆ. ಈ ಮೂಲಕ ಭೂರಮೆಗೆ ನಮಿಸಿದ ಸಂತೃಪ್ತಿ ರೈತರ ಮನಸ್ಸಿನಲ್ಲಿ ಉಳಿಯುತ್ತದೆ. ತಿನ್ನುವ ಆಹಾರದ ಒಂದಿಷ್ಟು ಭಾಗವನ್ನು ನೆಲಕ್ಕೆ ಇಡುವುದು ಅಥವಾ ಪಕ್ಷಿಗಳಿಗೆ ಬಿಸಾಡುವುದು ಇತ್ತ ಗುಲ್ಬರ್ಗದ ಉದ್ಯಾನದಲ್ಲಿ ನಡೆಯಿತು.ಎಳ್ಳಮಾಮಾಸ್ಯೆ ಎಂದರೆ ತರಹೇವಾರಿ ಪಲ್ಲೆಗಳನ್ನು ಕಡ್ಡಾಯವಾಗಿ ತಯಾರಿಸುವುದು ಇನ್ನೊಂದು ವಿಶೇಷ. ಎಳ್ಳಮಾಮಾಸ್ಯೆಯಂದು ಸಿದ್ಧಪಡಿಸುವ ಆಹಾರದಲ್ಲಿ ಎಲ್ಲ ನಮೂನೆಯ ತರಕಾರಿಗಳನ್ನು ಮಿಶ್ರಣ ಮಾಡಿ ತಯಾರಿಸಿದ ಪಲ್ಲೆ ಹಾಗೂ ಮೊಳಕೆ ಕಾಳುಗಳ ಮಿಶ್ರಣದ ಪಲ್ಲೆ ಇದ್ದೇ ಇರುತ್ತದೆ. ಕೆಲವರು ಶಕ್ತ್ಯಾನುಸಾರ ರೊಟ್ಟಿ, ಚಪಾತಿಯೊಂದಿಗೆ ಇನ್ನು ಅನೇಕ ಪದಾರ್ಥಗಳನ್ನು ಮಾಡಿಕೊಳ್ಳುತ್ತಾರೆ. ವೈವಿಧ್ಯಮಯ ಚಟ್ನಿ, ಸಿಹಿ ಪದಾರ್ಥಗಳು, ಅನ್ನದೊಂದಿಗೆ ವೈವಿಧ್ಯಮಯ ಸಾಂಬಾರು, ಮಜ್ಜಿಗೆ, ಸಂಡಿಗೆ, ಉಪ್ಪಿನಕಾಯಿ... ಹೀಗೆ ಒಟ್ಟು ಆಹಾರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry