ಸೋಮವಾರ, ಮೇ 23, 2022
21 °C

ತರೀಕೆರೆ: ಆತ್ಮಹತ್ಯೆಗೆ ಯತ್ನಿಸಿದ ಮೂಳೆತಜ್ಞ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಕ್ಷುಲ್ಲಕ ಕಾರಣಕ್ಕಾಗಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞರು ತಮ್ಮ ಕೊಠಡಿಯಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ತರೀಕೆರೆಯಲ್ಲಿ ಶುಕ್ರವಾರ  ನಡೆಯಿತು.ಘಟನೆ ವಿವರ: ಆಸ್ಪತ್ರೆಯ ಸರ್ಜನ್ ಡಾ.ಸದಾನಂದ ಪೂಜಾರ್ ಮತ್ತು ಮೂಳೆ ತಜ್ಞ ಡಾ.ದೇವರಾಜ್ ಮಧ್ಯೆ ಗುರುವಾರ ಬೆಳಿಗ್ಗೆ ರೋಗಿಗಳನ್ನು ದಾಖಲು ಮಾಡಿ ಬೆಡ್ ನೀಡುವ ವಿಚಾರವಾಗಿ ಮಾತುಕತೆ ನಡೆದಿತ್ತು. ಇದನ್ನು ಯಶೋಧರ ಮೂರ್ತಿ ಎಂಬವರು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದರು.ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಸಮಕ್ಷಮದಲ್ಲಿ ಸಮಸ್ಯೆ ಬಗೆಹರಿದು ಇಬ್ಬರು ವೈದ್ಯರ ನಡುವಿನ ವೈಮನಸ್ಸು ರಾಜಿಯಲ್ಲಿ ಮುಕ್ತಾಯಗೊಂಡಿತ್ತು. ಆದರೆ ಡಾ.ದೇವರಾಜ್ ವಿಷಯವನ್ನು  ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರಿಂದ ಪೊಲೀಸ್ ಅಧಿಕಾರಿಗಳ ಸಮಕ್ಷಮ ರಾಜಿ ಸಂಧಾನ ಆಗಿತ್ತು.ಶುಕ್ರವಾರ ಬೆಳಿಗ್ಗೆ ದೇವರಾಜ್, ಸಾರ್ವಜನಿಕರ ಎದುರಿನಲ್ಲಿ ನನಗೆ ಅವಮಾನ ಮಾಡಿದ ಸದಾನಂದ ಪೂಜಾರ್ ಮತ್ತು ಯಶೋಧರ ಮೂರ್ತಿ ಅವರು ನನ್ನ ಸಾವಿಗೆ ಕಾರಣ ಎಂದು  ಡೆತ್ ನೋಟ್ ಬರೆದು ಅದನ್ನು ನೇರವಾಗಿ ತರೀಕೆರೆ ನ್ಯಾಯಾಲಯಕ್ಕೆ ರವಾನಿಸಿ ಆಸ್ಪತ್ರೆಯ ತಮ್ಮ ಕೊಠಡಿಯಲ್ಲಿ ರೋಗಿಗಳನ್ನು ತಪಾಸಣೆ ಮಾಡುವ ಕೋಣೆಯ ಚಿಲಕ ಹಾಕಿ  ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.ನ್ಯಾಯಾಧೀಶರು ದೇವರಾಜ್ ಅವರ ಪತ್ರವನ್ನು ಪೊಲೀಸ್ ಠಾಣೆಗೆ ರವಾನಿಸಿದ್ದು, ಅದರ  ಆಧಾರದಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಡಾ.ದೇವರಾಜ್ ಅವರಿಗೆ ತರೀಕೆರೆ ಸುತ್ತ ಶೋಧ ನಡೆಸಿ, ಅವರ ಮೊಬೈಲ್ ಟ್ರ್ಯಾಪ್ ಮಾಡಿದರೂ ಪತ್ತೆ ಆಗಿರಲಿಲ್ಲ.ಡಾ. ರವಿಕೀರ್ತಿ ಅವರ ಪೋನ್‌ಗೆ ದೇವರಾಜ್ ಅವರ ಮೊಬೈಲ್‌ನಿಂದ ಬಂದಿದ್ದ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ ಎಂಬ ಸಂದೇಶ ಆಧರಿಸಿ ಆಸ್ಪತ್ರೆಯಲ್ಲಿಯೇ ಇರಬಹುದೆಂದು ಶೋಧ ನಡೆಸಿದಾಗ ಆಸ್ಪತ್ರೆಯ ಒಳಕೊಠಡಿಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಯಿತು. ತಕ್ಷಣವೇ ತುರ್ತು ಚಿಕಿತ್ಸೆಗೆ ಒಳಪಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.ದೇವರಾಜ್ ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತರೀಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಘಟನೆಗೆ ಕಾರಣ: ಘಟನೆಗೆ ಈ ಹಿಂದೆ ಸದಾನಂದ್ ಪೂಜಾರ್ ಆಸ್ಪತ್ರೆಯ ಆಡಳಿತಾತ್ಮಕ ವೈದ್ಯರಾಗಿದ್ದ ಸಂದರ್ಭದಲ್ಲಿ ದೇವರಾಜ್ ಮೇಲೆ ಸಾರ್ವಜನಿಕರಿಂದ ಬರುತ್ತಿದ್ದ ಆರೋಪಗಳ ವಿರುದ್ಧ ತೆಗೆದುಕೊಂಡಿದ್ದ ಕೆಲವು ಕಠಿಣ ನಿಲುವುಗಳೇ  ಕಾರಣ ಎಂಬುದು  ಆಸ್ಪತ್ರೆಯ ಬಹುತೇಕ ಸಿಬ್ಬಂದಿ ಮತ್ತು ನಾಗರಿಕರ ಅಭಿಪ್ರಾಯವಾಗಿದೆ. ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ ಪೂಜಾರ್ ಬಗ್ಗೆ ತಾಲ್ಲೂಕಿನಾದ್ಯಂತ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯವಿದೆ. ತಾಲ್ಲೂಕಿನ  ಹಾಗೂ ಅನ್ಯ ತಾಲ್ಲೂಕಿನ ವಿವಿಧ ಭಾಗಗಳಿಂದ ರೋಗಿಗಳು ಅವರ ಬಳಿ ಬರುತ್ತಿದ್ದ ಸಾಕಷ್ಟು ಉದಾಹರಣೆಗಳು ಇದ್ದವು.ಅವರನ್ನು ಆಸ್ಪತ್ರೆಯಿಂದ ಹೊರ ಕಳುಹಿಸುವ ಹುನ್ನಾರ ನಡೆಯುತ್ತಿರುವುದು ನಿಜಕ್ಕೂ ವಿಷಾದಕರ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಲವು ರೋಗಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.