ತರೇವಾರಿ ತುಲಾಭಾರ!

7

ತರೇವಾರಿ ತುಲಾಭಾರ!

Published:
Updated:

ಪರಮೇಶಿ ಮನೆಗೆ ಬಂದಾಗ ಗುಸು ಗುಸು ಮಾತಾಡ್ತಿದ್ದ ಹೆಂಗೆಳೆಯರು ಪರಮೇಶಿ ಮುಖ ಕಂಡ ಕೂಡಲೇ ಏನೂ ನಡೆದೇ ಇಲ್ಲವೆಂಬಂತೆ ಅಲ್ಲಿಂದ `ಬರ‌್ತೀವ್ರೀ, ಯಾವುದಕ್ಕೂ ಕನ್‌ಫರ್ಮ್ ಮಾಡಿ' ಅಂತ ಕೊಡವಿಕೊಂಡು ಮೇಲೆದ್ದರು. ಪರಮೇಶಿಗೆ ಯಾವುದೋ ಐಎಸ್‌ಐ ಸಂಚು ಮನೇಲಿ ನಡೀತಿದೆ ಅನಿಸ್ತು.

`ಏನದು? ಏನು ಹಕೀಕತ್ ನಡೆಸ್ತಿದ್ರಿ?'  ಕೇಳಿದ ಪರಮೇಶಿ. `ರೀ! ಇಂಡಿಯಾದೋರು ಕಲ್ಕತ್ತ ಟೆಸ್ಟ್  ಗೆದ್ರೆ ಒಂದು ಹರಕೆ ತೀರುಸ್ತೀನಿ ಅಂತ ಅಂದ್ಕೊಂಡಿದೀನಿ'

`ಹರಕೆನಾ? ಏನೇ ಅದು? ತಿರುಪತಿಗೆ ನನ್ನನ್ನ ಕರ‌್ಕೊಂಡು ಹೋಗಿ ತಲೆ ಬೋಳುಸ್ತೀನಿ ಅಂತ ಏನಾದರೂ ಹರಕೆ ಕಟ್ಕೊಂಡಿದ್ಯೋ ಹೇಗೆ?'

  `ಯಾರಾದರೂ ಗೃಹಿಣಿ ಗಂಡನ ಜುಟ್ಟು ಹಿಡಿಯೋ ಸೌಭಾಗ್ಯನ  ತಾನಾಗೇ ಕಳ್ಕೊತಾಳೇನ್ರೀ? ನಿಮ್ಮನ್ನ ತಿರುಪತಿಗೆ ಕರ‌್ಕಂಡು ಹೋಗಿ ತಲೆ ಬೋಳಿಸಿಬಿಟ್ರೆ ನಾನು ನಿಮ್ಮ ಜುಟ್ಟು ಹಿಡ್ಕೊಳಕ್ಕಾಗುತ್ತಾ? ನಿಮ್ಮ ತಲೇಲಿ ಕೂದಲಿರೋದು ಅಷ್ಟರಲ್ಲೇ ಇದೆ, ಅದಲ್ಲ ಬಿಡಿ'

`ಮತ್ತಿನ್ನೇನೇ ಅಂಬರೀಶ್ ತರ ಈಡುಗಾಯಿ ಹಾಕ್ತೀನಿ ಅಂತ ಏನಾದರೂ ಹರಕೆ ಕಟ್ಕೊಂಡಿದ್ಯೋ ಹೇಗೆ?'`ಇಲ್ಲಪ್ಪ, ಮನೇಲಿ ಚಟ್ನಿ ಮಾಡಕ್ಕೇ  ಅರ್ಧ ಹೋಳು ಕಾಯಿಲ್ಲ, ಇನ್ನು ಈಡುಗಾಯಿ ಒಡೆಯೋದೆಲ್ಲಿಂದ ಬಂತು?'

`ಯಾವುದಾದರೂ ದೇವಿಗೆ ಸೀರೆ ಉಡುಸ್ತೀನಿ ಅಂದ್ಕೊಂಡಿದ್ಯೋ ಹೇಗೆ?'

  `ಇಲ್ಲರೀ! ಅದೆಲ್ಲಾ ಹಿಂದಿನ ಕಾಲಕ್ಕೆ ಆಗಿಹೋಯ್ತು'

  `ಅಂತ ಯೋಚನೆ ಬರಲ್ಲ ಬಿಡು. ಕೈ ಹಿಡಿದ ಮನೆ ದೇವರಿಗೇ ಸೀರೆ ಉಡಿಸೋ, ಬಳೆ ತೊಡಿಸೋ ಯೋಚನೇಲಿರ‌್ತಾರೆ ಈ ಕಾಲದ ಹುಡುಗೀರು'

`ಅಲ್ಲರೀ, ಹೆಣ್ಣು ಮಕ್ಕಳು ಮರ್ಯಾದೆಯಾಗಿ ಸೀರೆ ಉಟ್ಕಂಡಿರೋದು ಬಿಟ್ಟು ಇಲ್ಲದ ರಗಳೆ ಶುರುಮಾಡಿದಾರೆ. ಅದ್ಯಾರೋ ಮಾಡೆಲ್ ಪೂನಂ ಅನ್ನೋಳು ಟೀಂ ಇಂಡಿಯಾ ಮುಂದೆ ಬೆತ್ತಲಾಗ್ತೀನಿ ಅಂದಿದ್ಲಲ್ಲ ಅಂತಹವರಿಗೆ ಸೀರೆ ಉಡುಸುದ್ರೇ ಸಾಕಾಗಿದೆ. ನೀವು ದೇವಿಗೆ ಸೀರೆ ಉಡಿಸೋಕೆ ಹೋದ್ರಿ'

  `ಅದೂ ಒಂಥರಾ ಹರಕೆ ಕಣೆ! ಲೆಗ್ ಬಿಫೋರ್ ವಿಕೆಟ್ ತರ ಹಗ್ ಬಿಫೋರ್ ವಿಕೆಟ್!'

  `ಹಾಗೆ ಮಾಡುದ್ರೆ ಟೀಂ ಇಂಡಿಯಾ ಹೋಗಿ ಶೇಮ್ ಇಂಡಿಯಾ ಆಗುತ್ತೆ'

  `ಆ ವಿಷಯ ಬಿಡು, ಈಗ ನಿನ್ನ ಹರಕೆ ಏನು ಹೇಳು?'

  `ನಾನು ಇಂಡಿಯಾದೋರು ಕಲ್ಕತ್ತ ಟೆಸ್ಟ್ ಗೆದ್ರೆ  ನಿಮಗೆ ತುಲಾಭಾರ ಮಾಡಿಸ್ತೀನಿ ಅಂತ ಹರಕೆ ಹೊತ್ಕೊಂಡಿದೀನಿ

`

`ಕಲ್ಕತ್ತ ಟೆಸ್ಟ್ ಗೆಲ್ತಾರೇನೇ?'

ವೈ ದಿಸ್ ಕ್ರಿಕೆಟ್‌ವರಿ ಕ್ರಿಕೆಟ್‌ವರಿ ಡಿ

ಪಿಚ್ಚು ಕ್ರಾಕು, ಲೆಗ್‌ಬ್ರೇಕು

ಬುಲೆಟ್ ಬಾಲು ಎಗರೋ ಬೈಲು

ಯಾರೂ ಇಲ್ಲ ಫಿಟ್!

ಪ್ಲೇ ಅಂದ್ರೆ ಫಿಟ್ಸ್!

ಚಿಯರ್ ಗರ್ಲ್ಸ್ ಡಾನ್ಸು ಡಾನ್ಸು

ಫೀಲ್ಡಲ್ಲಿ ಪೂನಂ ಡ್ರೀಮ್ಸು ಡ್ರೀಮ್ಸು!

ಸಚಿನ್ ರಿಟೈರ‌್ಮೆಂಟ್ ವೈಟೋ ವೈಟು

ಯುವಿ ವೀಕು,ದೋಣಿ ತೂತು

ಸೋತು ಸೋತು ಸುಸ್ತು ಸುಸ್ತು

ಆಡ್ಲೇ ಬೇಕಾ? ಆಡ್ಲೇ ಬೇಕಾ ಟೆಸ್ಟ್?

ಅನ್ನೋ ಹಾಗಾಗಿದೆಯಲ್ಲೇ! ನಿಜವಾಗಿಯೂ ನನಗೆ ತುಲಾಭಾರದ ಯೋಗ ಇದೆಯೇನೇ?'

`ಖಂಡಿತಾ ಆ ಛಾನ್ಸ್ ಇದೆ. ಕಲ್ಕತ್ತ ಪಿಚ್‌ನ ದೋಣಿಗೆ ಇಷ್ಟ ಆಗೋ ಹಾಗೆ ಸ್ಪಿನ್ನರ್‌ಗಳಿಗೆ ಅನುಕೂಲ ಆಗೋ ಹಾಗೆ ಮಾಡಿದಾರಂತೆ'

`ಬಾಲ್ ತಿರುಗುದ್ರೆ ಆಗಲಿಲ್ಲ ಕಣೆ, ಒಳ್ಳೊಳ್ಳೆ ಚಿಯರ್‌ಗರ್ಲ್ಸ್ ತಿರುಗೋ ಹಾಗೆ ಮಾಡಬೇಕು'

`ನೀವು ಗಂಡಸರು ಮೂರು ಹೊತ್ತೂ ಅದರಲ್ಲೇ ಇರ‌್ತೀರ. ಒಟ್ಟಿನಲ್ಲಿ  ಗ್ರಹಗತಿ ತಿರುಗಬೇಕು ಅಂತ ನಿಮಗೆ ಅನಿಸೋದೇ ಇಲ್ಲ. ಅದಕ್ಕೇ ನಿಮಗೆ ತುಲಾಭಾರ ಮಾಡ್ತಿರೋದು!'

`ಹೋಗಲಿ ಬಿಡು, ಒಳ್ಳೇ ಕೆಲಸ ಮಾಡಿದೀಯ! ಮನೆಗೋಸ್ಕರ ಅಲ್ಲದಿದ್ದರೂ ದೇಶಕ್ಕೋಸ್ಕರ ಇಂತಹ ದೊಡ್ಡ ಔದಾರ್ಯ ಮೆರೀತಿದೀಯಲ್ಲ! ಹಾಗೇ ಕಾವೇರಿ ಕರ್ನಾಟಕಕ್ಕೆ ಕೊಲ್ಲೋವರಿ ಆಗದಿರಲಿ, 371 ಜೆ ಇಂದ ಮುಂದಕ್ಕಿರೋ ಇನ್ನೂ ಒಂದಿಷ್ಟು ಆಲ್ಫಬೆಟ್‌ನಡಿ ವಿಶೇಷ ಪ್ಯಾಕೇಜ್ ಸಿಗಲಿ ಅಂತ ಕೇಳ್ಕೊ. ಅದರ‌್ಲಿ, ಯಾವುದರಲ್ಲಿ ನನ್ನ ತುಲಾಭಾರ ಮಾಡಿಸಬೇಕು ಅಂದ್ಕೊಂಡಿದೀಯ?'

`ಪಲ್ಲದ ಮೂಟೆ ತರ ಇದೀರ, ನಿಮಗೇನು ಚಿನ್ನದ ನಾಣ್ಯದಲ್ಲಿ ತುಲಾಭಾರ ಮಾಡಿಸೋಕೆ ಆಗುತ್ತಾ?'

`ಅದೆಲ್ಲಾ ಆಗೋದಲ್ಲ, ಹೋಗೋದಲ್ಲ ಅಂತ ನನಗೆ ಗೊತ್ತು. ನಾನೇನು ಸ್ವಾಮೀಜೀನಾ ಚಿನ್ನದ ನಾಣ್ಯದಲ್ಲಿ ತುಲಾಭಾರ ಮಾಡಿಸಿಕೊಳ್ಳೋಕೆ?' `ಆದರೂ ವಿಶೇಷವಾಗಿ  ಪೇಪರ‌್ರಲ್ಲಿ  ಬರೋ ಹಾಗೆ ತುಲಾಭಾರ ಮಾಡಿಸ್ಕೊಬೇಕು ಅನ್ನೋ ಆಸೆ ಇದೆ ಕಣೆ'

  `ವಿಶೇಷವಾಗಿ ಅಂದ್ರೆ?'

  `ಹಿಂದೆ ಒಬ್ಬರು ಮುಖ್ಯಮಂತ್ರಿಗಳು ಒಣದ್ರಾಕ್ಷಿಲಿ ತುಲಾಭಾರ ಮಾಡಿಸಿಕೊಂಡಿದ್ರು. ಮತ್ತೊಬ್ಬ ದೊಡ್ಡ ಮನುಷ್ಯರು ಕಾಯಿನ್‌ಗಳಲ್ಲಿ ತುಲಾಭಾರ ಮಾಡಿಸಿಕೊಂಡಿದ್ರು.ಕೇರಳದಲ್ಲಿ ಒಬ್ಬರು ನೋಟಿನ ಕಂತೇಲಿ ತುಲಾಭಾರ ಮಾಡಿಸಿಕೊಂಡಿದ್ರಂತೆ. ಅಷ್ಟೇಕೆ ಒಬ್ಬರು ಶಾಸಕರು ಖಾರ, ಬೂಂದಿಲೂ ತುಲಾಭಾರ ಮಾಡಿಸಿಕೊಂಡಿದ್ರು'

  `ಖಾರಾ ಬೂಂದಿಲಾ?'

`ಹೌದು ಕಣೆ! ಸಮ್ಮಿಶ್ರ ಸರ್ಕಾರದ ಶಾಸಕರು  ಬೂಂದಿ ಮಿಕ್ಸ್ಚರ್‌ನಲ್ಲಿ ತುಲಾಭಾರ ಮಾಡಿಸಿಕೊಳ್ಳೋದು ಸಮ್ಮಿಶ್ರ ಸರ್ಕಾರಕ್ಕೆ ಅನ್ವರ್ಥ ಅನಿಸುವಂತ ಚಿಂದಿ ಸೂಪರ್ ಐಡಿಯಾ ಅಲ್ಲವೇನೇ?'

  `ಇದ್ರೂ ಇರಬಹುದು ಬಿಡಿ. ಇನ್ನೂ ಎಂತೆಂಥ ತುಲಾಭಾರಗಳು ಬರುತ್ತೋ ಏನೋ?'

`ತರೇವಾರಿ ತುಲಾಭಾರಗಳು ಬರಬಹುದು. ಗಣಿ ಅಗೆದೋರು ಅದುರಲ್ಲಿ ಮಾಡಿಸ್ಕೊಬಹುದು, ಕಾಡು ಗುಳುಂ ಅನಿಸಿದೋರು ಬಿದಿರಲ್ಲಿ ಮಾಡಿಸ್ಕೊಬಹುದು, ಲೋಕಾಯುಕ್ತದ ಕೈಲಿ ಸಿಕ್ಕಿಕೊಂಡೋರು ಹಳೇ ಪೇಪರ್, ಖಾಲಿ ಸೀಸದಲ್ಲಿ  ಮಾಡಿಸ್ಕೊಬಹುದು, ಮತ್ತೂ ಕೆಲವರು  ತಮ್ಮ ಖಾತೆಯ ಕಡತಗಳನ್ನೇ ತೂಕಕ್ಕೆ ಹಾಕಿ ಮಾಡಿಸ್ಕೊಬಹುದು, ಜಯಲಲಿತಾ ಮೇಡಂ ಸೀರೆಪಿಂಡಿಲೇ ತುಲಾಭಾರ ಮಾಡುಸ್ಕೊಬಹುದು. ಉಳ್ಳವರು   ನೋಟಿನ ಕಂತೆಯಲಿ ತುಲಾಭಾರ ಮಾಡಿಸಿಕೊಳ್ಳುವರು, ನಾನೇತರಲ್ಲಿ ಮಾಡಿಸಿಕೊಳ್ಳಲಯ್ಯ, ಬಡ ಸಾಹಿತಿ ನಾನು?'  ಹಲುಬಿದ ಪರಮೇಶಿ.

`ರೀ! ಅಷ್ಟೊಂದು ಬೇಜಾರು ಮಾಡ್ಕೊಬೇಡಿ ! ನಿಮ್ಮ ತುಲಾಭಾರನೂ ವಿಶೇಷವಾಗಿಯೇ ಮಾಡಬೇಕು ಅಂದ್ಕೊಂಡಿದೀನಿ'

`ಹೌದಾ? ನೀವು ಕನ್ಯಾಮಣಿಗಳೆಲ್ಲ ಸೇರಿದ್ದು ನೋಡೇ ಅಂದ್ಕೊಂಡೆ, ಏನೋ ವಿಶೇಷ ಇದೆ ಅಂತ. ಹೌದು ಯಾವುದರಲ್ಲಿ ನನ್ನನ್ನ ತೂಗಬೇಕು ಅಂತಿದೀರಿ?'

`ಭೂಮಿನ ತೂಗೋಕೆ ಆಗುತ್ತೇನ್ರೀ? ಆ ತರ ನೀವು ಭೂತೂಕದ ಮನುಷ್ಯರು. ನಿಮಗೆ ನೀವೇ ಸಾಟಿ, ಅದಕ್ಕೇ ಸಾಹಿತ್ಯದಿಂದಲೇ ನಿಮ್ಮನ್ನ ತೂಗಬೇಕು ಅಂತ ತೀರ್ಮಾನಿಸಿದೀನಿ ರೀ' `ಏನು ಹೇಳ್ತಿದೀಯೇ ನೀನು?'

  `ಹೌದು ರೀ! ಈಚೆಗೆ ಒಬ್ಬರು ಸಾಹಿತಿಗಳಿಗೆ ಪುಸ್ತಕಗಳಲ್ಲಿ ತುಲಾಭಾರ ಮಾಡುದ್ರಲ್ಲ, ಹಾಗೆ! ನಿಮಗೂ ಗ್ರಂಥಗಳಲ್ಲೇ ತುಲಾಭಾರ ಮಾಡೋದು ಅಂದ್ಕೊಂಡಿದೀನಿ'

  `ಹೌದಾ? ಅಷ್ಟೊಂದು ಪುಸ್ತಕಗಳನ್ನ ಯಾರೇ ಕೊಡ್ತಾರೆ?'

`ಯಾರು ಯಾಕ್ರೀ ಕೊಡಬೇಕು? ನೀವು ಬರೆದಿರೋದೇ ಮನೆ ತುಂಬಾ ಬಿದ್ದು ಒದ್ದಾಡ್ತಿವೆಯ್ಲ್ಲಲ, ಅದರಲ್ಲೇ ತುಲಾಭಾರ ಮಾಡೋದು?'

`ಏನು ನನ್ನ ಪುಸ್ತಕಗಳಲ್ಲಿ ನನ್ನನ್ನೇ ತುಲಾಭಾರ ಮಾಡೋದಾ?'

`ಹೌದು ರೀ! ಪುಸ್ತಕ, ಮಸ್ತಕ ಎರಡೂ ಕ್ಲೀನಾಗಿ ತಲೆಭಾರ ಇಳಿಯುತ್ತೆ'

`ಸರಿ, ಅದನ್ನ ಜೋಪಾನವಾಗಿ ವಾಪಸ್ ತರೋ ವ್ಯವಸ್ಥೆ ಮಾಡು'

  `ಎಲ್ಲಾದರೂ ಉಂಟಾ? ಹರಕೆ ತೀರಿಸಿದ ಮೇಲೆ ಅವನ್ನ ವಾಪಸ್ ತರೋ ಹಾಗಿಲ್ಲ, ಅಲ್ಲೇ ಎಲ್ಲರಿಗೂ ಹಂಚಿಬಿಡಬೇಕು ಇಲ್ಲ ಮಂತ್ರಿಸಿದ ನಿಂಬೆಹಣ್ಣಿನ ತರ ಎಲ್ಲಾದರೂ ಒಗೆದು ಬಂದು ಬಿಡಬೇಕು. ಗುಜರಿಗೆ ಹಾಕಕ್ಕೆ ನೀವು ಬಿಡಲ್ಲವಲ್ಲ, ಅದಕ್ಕೇ ಹರಕೆನೂ ತೀರಿದ ಹಾಗೆ ಆಗಬೇಕು, ಮನೆಲಿ ಪೊರಕೆ ಆಡಿಸಿದ ಹಾಗೂ ಆಗಬೇಕು ಅಂತ ಈ ಐಡಿಯಾ? ಹೇಗಿದೆ?'

ಪರಮೇಶಿ ತಟ್ಟನೆ ಕೆಳಗೆ ಬಿದ್ದು ಮೂರ್ಛೆ ಹೋದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry