ಶುಕ್ರವಾರ, ನವೆಂಬರ್ 15, 2019
24 °C
ನನ್ನ ಕಥೆ ನಂದಿನಿ

ತರ್ಕಬದ್ಧ ಪಾತ್ರವಷ್ಟೇ ನನ್ನ ಆಯ್ಕೆ

Published:
Updated:

ಚಿಕ್ಕಂದಿನಲ್ಲಿ ಅಮ್ಮ ಬೈದಾಗಲ್ಲೆಲ್ಲಾ ನಾನು ಕನ್ನಡಿ ಮುಂದೆ ನಿಂತ್ಕೊಂಡು ಅಳ್ತಾ ಇದ್ದೆ. ಅಳುವಾಗ ಹೇಗೆ ಕಾಣಿಸ್ತೀನಿ ಎಂದು ಬೇರೆ ಬೇರೆ ಕೋನಗಳಲ್ಲಿ ನಿಂತು ನೋಡಿಕೊಳ್ತಿದ್ದೆ. ಅಷ್ಟೇ ಅಲ್ಲ ಆಟವಾಡುವಾಗಲೂ ನಾನು ಕನ್ನಡಿಯ ಎದುರೇ ಇರುತ್ತಿದ್ದೆ. ಅದಕ್ಕೆ ಅಮ್ಮ, ಆಗಲೇ ನಿನ್ನೊಳಗೆ ಅಭಿನಯ ಇಳಿಯುತ್ತಿತ್ತೇನೋ? ಎನ್ನುತ್ತಾರೆ. ಏಕೆಂದರೆ ಅಭಿನಯದ ವಾತಾವರಣದಿಂದ ನಮ್ಮ ಕುಟುಂಬ ತುಂಬಾ ದೂರ ಇತ್ತು. ಅಲ್ಲಿಂದ ನಟಿಯಾಗಿ ಹೊರಬಂದವಳು ನಾನೊಬ್ಬಳೇ. ಇದೆಲ್ಲಾ ವಿಚಿತ್ರ ಎನಿಸಿದರೂ ವಿಶಿಷ್ಟ ಅನುಭವ ಕಟ್ಟಿಕೊಟ್ಟಿದೆ.ನಾನು ಓದಿರುವುದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್. ಶ್ರೀಕಾಂತ್ ಹೆಬ್ಳೀಕರ್ ಅವರ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್, ಧಾರಾವಾಹಿಯೊಂದರಲ್ಲಿ ನಟಿಸಲು ಕರೆದರು. ಮೊದಲು ಹಿಂಜರಿದೆ. ಆದರೆ ಅವರು ಪಟ್ಟುಬಿಡದೇ `ಹೇಳಿಕೊಟ್ಟಿದ್ದನ್ನು ಮಾಡು' ಎಂದು ಹೇಳಿ ಕರೆದುಕೊಂಡು ಹೋದರು. ಸೆಟ್‌ನಲ್ಲಿ ಸುಮನ್ ನಗರ್‌ಕರ್ ಇದ್ದರು. ಅವರೊಂದಿಗೆ ನಟಿಸಿದೆ. ಆಗಿನ್ನೂ ನಾನು ಮೊದಲ ವರ್ಷದ ಡಿಪ್ಲೊಮಾ ಓದುತ್ತಿದ್ದೆ. ಶಿಕ್ಷಣ ಪೂರ್ಣಗೊಳಿಸಬೇಕು ಎಂಬ ಕಾರಣಕ್ಕೆ ಧಾರಾವಾಹಿ ನಂಟು ಕಡಿದುಕೊಂಡೆ. ಶಿಕ್ಷಣ ಮುಗಿದ ನಂತರ ಮತ್ತೆ ಶ್ರೀಕಾಂತ್ ಕರೆದರು. ಜೊತೆಗೆ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಸಿನಿಮಾ ಮಾಡ್ತಿದ್ದಾರೆ. ನಟಿಸುವೆಯಾ? ಎಂದರು. ನನ್ನ ಅಪ್ಪ-ಅಮ್ಮ `ಅವಳಿಗೆ ಇಷ್ಟವಾದರೆ ನಟಿಸಲಿ. ನಮ್ಮ ಅಭ್ಯಂತರವಿಲ್ಲ' ಎಂದರು.ನನಗೆ ಸಿನಿಮಾ ಶೂಟಿಂಗ್ ಹೇಗಿರುತ್ತದೆ ಎಂದು ನೋಡುವ ಕುತೂಹಲ. ಅದಕ್ಕೆ ಸಿದ್ದಲಿಂಗಯ್ಯ ಅವರ `ಪ್ರೇಮಾ ಪ್ರೇಮಾ ಪ್ರೇಮಾ' ಸಿನಿಮಾ ಒಪ್ಪಿಕೊಂಡೆ. ಶಿವಮೊಗ್ಗದಲ್ಲಿ ಶೂಟಿಂಗ್ ಇತ್ತು. ಆಗೊಮ್ಮೆ ಕಿರುತೆರೆ ನಿರ್ದೇಶಕ ಸಕ್ರೆಬೈಲು ಶ್ರೀನಿವಾಸ್ ಸೆಟ್‌ಗೆ ಬಂದಿದ್ದರು. ಬಿ. ಸುರೇಶ್ ಅವರ ಧಾರಾವಾಹಿ ಆರಂಭವಾಗುತ್ತಿದೆ, ಆಸಕ್ತಿ ಇದ್ದರೆ ಬನ್ನಿ ಎಂದರು. ಆಗ ನಾನು ವೃತ್ತಿ ಬದುಕಿನ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿದ್ದೆ. ಬಿಸಿಎ ಮಾಡಬೇಕೆಂಬ ಆಸೆ ಒಂದು ಕಡೆ ಇತ್ತು. ಇನ್ನೊಂದು ಕಡೆ ಅಭಿನಯ ಸಣ್ಣದಾಗಿ ಸೆಳೆಯುತ್ತಿತ್ತು.ಬಿ.ಸುರೇಶ್ ಅವರ `ಸಾಧನೆ' ಧಾರಾವಾಹಿ ಬೆಂಗಳೂರಿನ ಪದ್ಮನಾಭನಗರದಲ್ಲಿ ಇರುವ ನಮ್ಮ ಮನೆಯ ಹತ್ತಿರದಲ್ಲಿಯೇ ನಡೆಯುತ್ತಿತ್ತು. ಅದರಿಂದ ತೊಂದರೆಯಾಗಲ್ಲ ಎನಿಸಿ ಒಪ್ಪಿಕೊಂಡೆ. `ಸಾಧನೆ'ಯಲ್ಲಿ ನಟಿಸಿದ ನಂತರ ನನಗೆ ಅವಕಾಶಗಳು ಬರತೊಡಗಿದವು. `ಅರ್ಧಸತ್ಯ', `ಇತಿಹಾಸ' ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಆಗ ಬಿಡುವಿಲ್ಲದೆ ಅಭಿನಯಿಸತೊಡಗಿದ್ದೆ. ಯಾವುದೇ ನಟನೆಯ ತರಬೇತಿ ಇಲ್ಲದೇ ಹಿರಿಯ ನಟರ ಸಲಹೆ ಸಹಕಾರದಿಂದಷ್ಟೇ ನಾನು ನಟಿಯಾಗಿದ್ದೆ. ಆದರೆ ನನಗೆ ಜ್ಞಾಪಕಶಕ್ತಿ ಚೆನ್ನಾಗಿತ್ತು. ನಿರ್ದೇಶಕರು ಹೇಳಿದ್ದನ್ನು ಚೆನ್ನಾಗಿ ಗ್ರಹಿಸುತ್ತಿದ್ದೆ.ಆರ್.ಎನ್.ಜಯಗೋಪಾಲ್ ಅವರ `ಇತಿಹಾಸ' ಧಾರಾವಾಹಿಯಲ್ಲಿ ನಟಿಸುವಾಗ ಅವರ ವಿನಯ ಅರ್ಥವಾಯಿತು. ಅವರು ತಾಳ್ಮೆಯಿಂದ  ತಾರತಮ್ಯ ಮಾಡದೇ ಪಾತ್ರವನ್ನು ವಿವರಿಸುತ್ತಿದ್ದರು. ನಿಧಾನವಾಗಿ ನನ್ನೊಳಗೆ ನಟಿ ಬೆಳೆಯುತ್ತಾ ಹೋದಳು.ಆಗ ನನಗೆ ಪೂರ್ಣಿಮಾ ಪ್ರೊಡಕ್ಷನ್‌ನಿಂದ ಕರೆ ಬಂತು. ಎ.ವಿ.ಶೇಷಾದ್ರಿ ನಿರ್ದೇಶನದ `ಬೆಳದಿಂಗಳಾಗಿ ಬಾ' ಧಾರಾವಾಹಿಯ ಪ್ರಮುಖ ಪಾತ್ರ ಸಿಕ್ಕಿತು. ತಮ್ಮ ನಿರ್ಮಾಣ ಸಂಸ್ಥೆಯಿಂದ ಯಾವುದೇ ಸಿನಿಮಾ ಅಥವಾ ಧಾರಾವಾಹಿ ಮಾಡಿದರೂ ಅದರ ಪ್ರಮುಖ ನಟರನ್ನು ಮನೆಗೆ ಕರೆಸಿ ಮಾತನಾಡುವ ಅಭ್ಯಾಸ ಇಟ್ಟುಕೊಂಡ ಸಂಸ್ಥೆ ಅದು. `ಬೆಳದಿಂಗಳಾಗಿ ಬಾ' ಧಾರಾವಾಹಿಗೆ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ನಿರ್ಮಾಪಕರು. ಒಮ್ಮೆ ಅವರು ಮನೆಗೆ ಬರಲು ಹೇಳಿದರು. ಅಲ್ಲಿ ಮೇರುನಟ ಡಾ.ರಾಜ್‌ಕುಮಾರ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ನನ್ನೊಂದಿಗೆ ತುಂಬಾ ಹೊತ್ತು ಮಾತನಾಡಿದರು. ಅದು ನನ್ನ ಬದುಕಿನ ಸುವರ್ಣ ಗಳಿಗೆ. ನನಗೆ ಗಾಳಿಯಲ್ಲಿ ತೇಲಾಡಿದಂಥ ಅನುಭವವಾಯ್ತು. ಅವರ ಮನೆಯವರು ಅರಿಶಿನ-ಕುಂಕುಮ, ತಾಂಬೂಲ ಕೊಟ್ಟರು. ಅಷ್ಟೇ ಅಲ್ಲ, ರಾಜ್‌ಕುಮಾರ್ ಅವರು ಬಾಗಿಲವರೆಗೆ ಬಂದು ನನ್ನನ್ನು ಬೀಳ್ಕೊಟ್ಟರು. ಅಂಥ ದೊಡ್ಡ ನಟನ ದೊಡ್ಡತನ ಕಂಡು ನಾನು ಮೂಕಳಾಗಿ ಹೋಗಿದ್ದೆ. ಅಷ್ಟೇ ಅಲ್ಲ `ಬೆಳದಿಂಗಳಾಗಿ ಬಾ' ಧಾರಾವಾಹಿಯ ಪಾತ್ರ ನನ್ನ ವೃತ್ತಿಬದುಕಿಗೆ ವೈಶಿಷ್ಟ್ಯ ನೀಡಿತು.ನಂತರ ನಾನು ಬಾಲಾಜಿ ಪ್ರೊಡಕ್ಷನ್ ಅವರ `ಕನ್ನಡಿ', `ಕ್ಷಣ ಕ್ಷಣ', `ಲಾಲಿ' ಧಾರಾವಾಹಿಗಳಲ್ಲಿ ನಟಿಸಿದೆ. `ಕನಕ' ಧಾರಾವಾಹಿಯಲ್ಲಿ ನಟಿಸುವಾಗ ಟಿ.ಎನ್.ಸೀತಾರಾಂ ಅವರ `ಮುಕ್ತ'ದಲ್ಲಿ ನಟಿಸುವ ಅವಕಾಶ ಬಂತು. ಸಹಾಯಕ ನಿರ್ದೇಶಕರಾಗಿದ್ದ ವಿನು ಬಳಂಜ, ನಟ ಸೇತುರಾಂ, ನಟಿಯರಾದ ಭಾರ್ಗವಿ ನಾರಾಯಣ್ ನನಗೆ ಸಾಕಷ್ಟು ಸಲಹೆ ಸೂಚನೆ ನೀಡಿದರು. ಅಲ್ಲಿ ಸ್ಪಷ್ಟ ಮಾತುಗಾರಿಕೆ, ಉತ್ತಮ ದೇಹಭಾಷೆ ನನಗೆ ರೂಢಿಯಾಯ್ತು.ಬಳಿಕ ಸೇತುರಾಂ ಅವರ `ಮಂಥನ'ದ ಅವಕಾಶ ಬಂತು. ಅದರಲ್ಲಿ ಜಿಲ್ಲಾಧಿಕಾರಿ ಪಾತ್ರ. ತುಂಬಾ ಮಾನಸಿಕ ದೃಢತೆ ಇರುವ ಪಾತ್ರ. ಸಂಭಾಷಣೆ ಹೇಳುವಾಗ ನಾನು ಅವರ ನಿರೀಕ್ಷೆಗೆ ಮುಟ್ತೀನಾ? ಎನಿಸುತ್ತಿತ್ತು. ಪಾತ್ರ ಅರ್ಥಮಾಡಿಕೊಳ್ಳಲು ಸಮಯ ಕೊಡಿ ಎಂದೆ. ಗಟ್ಟಿಮನಸ್ಸು ಮಾಡಿ ನಿಭಾಯಿಸಿದೆ. ಅದು ನನ್ನ ವೃತ್ತಿ ಬದುಕಿನ ಮೈಲುಗಲ್ಲಾಯ್ತು. ನಂತರ ಅದೇ ರೀತಿಯ ಪಾತ್ರಗಳು ಬಂದವು. ನಾನು ಒಪ್ಪಿಕೊಳ್ಳಲಿಲ್ಲ.ಅಶೋಕ್ ಕಶ್ಯಪ್ ಅವರ `ನಂದಗೋಕುಲ'ದಲ್ಲಿ ಖಳನಟಿಯಾಗಿ ನಟಿಸುವ ಅವಕಾಶ ಬಂತು. ಗೆಳೆಯ ಚಂದ್ರು ಅವರ ಬಲವಂತಕ್ಕೆ ತುಂಬಾ ಗ್ಲಾಮರಸ್, ಬೋಲ್ಡ್ ಆಗಿದ್ದ ಆ ಪಾತ್ರ ಮಾಡಲು ಒಪ್ಪಿದೆ. ಜನರಿಗೆ ನಮ್ಮನ್ನು ಬೇರೆ ರೀತಿ ನೋಡಬೇಕು ಎನಿಸಿರುತ್ತದೆ ಎನ್ನುವುದಕ್ಕಿಂಥ ಕಲಾವಿದರಾಗಿ ನಮಗೇ ಬದಲಾವಣೆ ಬೇಕಿರುತ್ತದೆ. ಇದರ ಹೊರತಾಗಿ ನಮಗೆ ಬೇರೆ ಪಾತ್ರ ಮಾಡಲು ಬರಲ್ವಾ? ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಅದರಿಂದ ನಾನು `ನಂದಗೋಕುಲ' ಒಪ್ಪಿಕೊಂಡೆ. ಅದು ಖುಷಿ ಕೊಡ್ತು. ಒಂದರ ಹಿಂದೆ ಒಂದರಂತೆ `ಮಿಂಚು', `ಜೋಗುಳ', `ಅನಾವರಣ' ಧಾರಾವಾಹಿಗಳಲ್ಲಿ ನಟಿಸಿದೆ. ಸದ್ಯಕ್ಕೆ `ಚಿತ್ರಲೇಖಾ'ದಲ್ಲಿ ನಟಿಸುತ್ತಿರುವೆ. ಈಗಲೂ ನನಗೆ ಒಂದೇ ರೀತಿಯ ಪಾತ್ರಗಳಿಗೆ ಕರೆ ಬರುತ್ತದೆ. ಅವುಗಳನ್ನು ತಿರಸ್ಕರಿಸುತ್ತಿರುತ್ತೇನೆ. ದೇವರು ಇದುವರೆಗೂ ನನಗೆ ಒಳ್ಳೆಯ ಅವಕಾಶಗಳನ್ನೇ ಕೊಟ್ಟಿದ್ದಾನೆ. ಒಳ್ಳೆಯ ಅವಕಾಶಗಳಿಗೆ ಕೊಂಚ ಕಾಯಬೇಕು ಎಂಬ ಅನುಭವ ಆಗಿದೆ.ನನಗೆ ತ್ಯಾಗ ಮಾಡುತ್ತಾ, ಅಳ್ತಾ ಕೂರೋ ಪಾತ್ರಗಳು ಇಷ್ಟವಿಲ್ಲ. ಅಂದಹಾಗೆ ನಿಮಗೆ ಗೊತ್ತಾ? ನಾನು ಕಾಮಿಡಿ ಪಾತ್ರವನ್ನು ಇದುವರೆಗೂ ಪ್ರಯತ್ನಿಸಿಲ್ಲ. ಯಾಕೆಂದರೆ ಹಾಸ್ಯಕ್ಕೂ ಹಾಸ್ಯಾಸ್ಪದಕ್ಕೂ ತೆಳುವಾದ ಗೆರೆ ಇರುತ್ತದೆ. ನನಗೆ ಹಾಸ್ಯಾಸ್ಪದವಾಗಲು ಇಷ್ಟವಾಗದೆ ಅಂಥ ಪ್ರಯತ್ನವನ್ನೇ ಮಾಡಲಿಲ್ಲ.ಇನ್ನು `ಪ್ರೇಮಾ ಪ್ರೇಮಾ ಪ್ರೇಮಾ' ಚಿತ್ರದ ನಂತರ ಸಿನಿಮಾದಲ್ಲಿ ನಟಿಸುವ ಮನಸ್ಸು ನನಗಿರಲಿಲ್ಲ. ಆದರೆ `ಹೃದಯಾ ಹೃದಯಾ' ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು. ನಟಿಸಿದ್ದೆ. ಬರಗೂರು ರಾಮಚಂದ್ರಪ್ಪ ಅವರು `ತಾಯಿ' ಸಿನಿಮಾ ಮಾಡ್ತಿದ್ದರು. ನನ್ನನ್ನು ಅದರಲ್ಲಿ ನಟಿಸಲು ಕರೆದರು. ನಾನು `ಸರ್, ಸಿನಿಮಾಗಳಲ್ಲಿ ನಾಯಕ- ನಾಯಕಿ ಡೇಟ್ ನೋಡಿಕೊಂಡು ನಮಗೆ ಡೇಟ್ ಕೊಡ್ತಾರೆ. ಅದು ನನಗೆ ಅನ್‌ಕಂಫರ್ಟ್ ಎನಿಸುತ್ತದೆ. ಜೊತೆಗೆ ಕುಟುಂಬದೊಂದಿಗೆ ಕುಳಿತು ನೋಡಲು ಮುಜುಗರ ಪಟ್ಟುಕೊಳ್ಳುವಂಥ ಪಾತ್ರ ನಾನು ಮಾಡಲ್ಲ' ಎಂದೆ. ಅದಕ್ಕೆ ಅವರು `ನನ್ನ ಸಿನಿಮಾದಲ್ಲಿ ರಾವಣ, ದುಶ್ಯಾಸನ ಯಾರೂ ಇರಲ್ಲ' ಎಂದು ಹೇಳಿ ಚಿತ್ರದ ಕತೆ ಹೇಳಿದರು. ನಾನು ನಟಿಸಲು ಒಪ್ಪಿದೆ.ಅದರಲ್ಲಿ ಧಾರಾವಾಹಿ ನಟರೇ ಹೆಚ್ಚು ನಟಿಸಿದ್ದರಿಂದ ನನಗೆ ಕಷ್ಟ ಎನಿಸಲಿಲ್ಲ. ಮತ್ತೆ ಬರಗೂರು ರಾಮಚಂದ್ರಪ್ಪ ಅವರು `ಜನಪದ' ಚಿತ್ರದಲ್ಲಿ ನಟಿಸಲು ಕರೆದರು. ನಾಯಕಿಗೆ ಸಮನಾದ ಪಾತ್ರ ಇದೆ ಎಂದು ಒಪ್ಪಿಸಿದರು. ಅದರ ನನ್ನ ಪಾತ್ರಕ್ಕೆ ಒಳ್ಳೆಯ ವಿಮರ್ಶೆಗಳು ಬಂದವು.ಏನೇ ಮಾಡಿದರು ಅದರಲ್ಲಿ ಗುಣಮಟ್ಟ ಮುಖ್ಯ ಎಂದು ಹಂಬಲಿಸುವವಳು ನಾನು. ಹಣಕ್ಕಾಗಿ ಅಥವಾ ಬಿಜಿಯಾಗಿರಬೇಕು ಎನಿಸಿಕೊಳ್ಳುವುದಕ್ಕಾಗಿ ನಟಿಸಲು ಇಷ್ಟವಿಲ್ಲ. ನನ್ನ ಕೆಲಸ ನನಗೆ ತೃಪ್ತಿ ಕೊಡಬೇಕು. ಹಿಂತಿರುಗಿ ನೋಡಿಕೊಂಡಾಗ ಹೆಮ್ಮೆ ಎನಿಸಬೇಕು. ಅಂಥದೇ ಪಾತ್ರಗಳನ್ನು ನಿರ್ವಹಿಸಿದ ಖುಷಿ ನನಗಿದೆ. ಅಂಥ ಗಟ್ಟಿ ವ್ಯಕ್ತಿತ್ವದ ಪಾತ್ರಗಳನ್ನು ನಿರ್ವಹಿಸಿದ್ದರಿಂದ ನನ್ನ ವ್ಯಕ್ತಿತ್ವವೂ ಗಟ್ಟಿಯಾಯ್ತು ಎನಿಸುತ್ತದೆ.ನಟನೆ ಬಿಟ್ಟರೆ ನನಗೆ ಓದೋದು ತುಂಬಾ ಇಷ್ಟ. ಪುಸ್ತಕಗಳ ದೊಡ್ಡ ಭಂಡಾರವೇ ನನ್ನ ಬಳಿ ಇದೆ. ಜಾಸ್ತಿ ಇಂಗ್ಲಿಷ್ ಸಾಹಿತ್ಯ ಓದ್ತೀನಿ. ಬರವಣಿಗೆಯೂ ಇಷ್ಟ. ಒಂದಲ್ಲಾ ಒಂದು ದಿನ ಧಾರಾವಾಹಿ ನಿರ್ದೇಶನ ಮಾಡುವಾಸೆಯೂ ಇದೆ. ನಾನು ಏನೇ ಮಾಡಿದರೂ ಅದು ತರ್ಕಬದ್ಧವಾಗಿರುತ್ತದೆ ಎಂಬ ಭರವಸೆ ನೀಡಬಲ್ಲೆ. ಸಂಕಲನಕಾರ ರಾಜು ಆರ್ಯನ್ ಅವರನ್ನು ಮದುವೆಯಾಗಿರುವೆ. ಅಪ್ಪ- ಅಮ್ಮನಂತೆ ಅವರೂ ನನ್ನಿಷ್ಟವನ್ನು ಗೌರವಿಸುತ್ತಾರೆ.  

ಪ್ರತಿಕ್ರಿಯಿಸಿ (+)