ಸೋಮವಾರ, ಜನವರಿ 20, 2020
17 °C

ತಲಕಾಡು ಪಂಚಲಿಂಗ ದರ್ಶನ ಇಂದಿನಿಂದ

ಪ್ರಜಾವಾಣಿ ವಾರ್ತೆ / ಬಿ.ಜೆ. ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

ಮೈಸೂರು: ಹಸಿರುಟ್ಟ ಭೂರಮೆ, ಮೈದುಂಬಿದ ಕಾವೇರಿ ನದಿ ಸುತ್ತುವರಿದಿರುವ ತಿ. ನರಸೀಪುರ ತಾಲ್ಲೂಕಿನ ‘ಪರ್ಯಾಯ ದ್ವೀಪ’ ಗ್ರಾಮ ತಲಕಾಡಿನಲ್ಲಿ ಡಿ. 2ರಂದು ಬೆಳಿಗ್ಗೆ 7.30ಕ್ಕೆ ಪಂಚಲಿಂಗ ದರ್ಶನ ಮಹೋತ್ಸವದ ಮಹಾಭಿಷೇಕ ಪೂಜೆ ಆರಂಭಗೊಳ್ಳಲಿದೆ. ನಸುಕಿನ 5 ಗಂಟೆಗೆ ಅರ್ಚಕರು ಗೋಕರ್ಣ ಸರೋವರದಲ್ಲಿ ಮಜ್ಜನ ಮಾಡಿ ನಂತರ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.

ನಂತರ ಪವಿತ್ರ ಗಂಗಾಜಲವನ್ನು ವೈದ್ಯನಾಥೇಶ್ವರ ಪ್ರಧಾನ ದೇಗುಲಕ್ಕೆ ಒಯ್ದು ಮಹಾ­ಮಂಗಳಾರತಿ ನೆರವೇರಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹ­ದೇವಪ್ಪ, ಸಹಕಾರ ಸಚಿವ ಎಚ್‌.ಎಸ್‌. ಮಹ­ದೇವ­­ಪ್ರಸಾದ್‌, ಸಂಸದ ಆರ್‌. ಧ್ರುವ­ನಾರಾಯಣ ಇತರರು ಪಂಚಲಿಂಗ ದರ್ಶನ ಮಹೋತ್ಸವದ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಳ್ಳುವರು ಎಂದು ದೇಗುಲದ ಅರ್ಚಕ ಆನಂದ್‌ ದೀಕ್ಷಿತ್‌ ತಿಳಿಸಿದ್ದಾರೆ.ದೇಗುಲಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಈ ಅವಧಿಯಲ್ಲಿ ಸಾರ್ವ­ಜನಿಕ­ರಿಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸ­ಲಾಗಿದೆ. ದೇಗುಲಗಳ ದರ್ಶನಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ ತಲಕಾಡಿನ ಮುಖ್ಯ­ರಸ್ತೆ­ಯಿಂದ ದೇಗುಲದವರೆಗಿನ ಸುಮಾರು 1.5 ಕಿಲೋ ಮೀಟರ್‌ ಮಾರ್ಗ­ವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸ­ಲಾಗಿದೆ.

ವೈದ್ಯನಾಥೇಶ್ವರ ಪ್ರಧಾನ ದೇಗುಲದಲ್ಲಿ ದೇವರ ದರ್ಶನ ಪಡೆದ ನಂತರ ಪಾತಾಳೇಶ್ವರ ಮತ್ತು ಮರಳೇಶ್ವರ, ಚೌಡೇಶ್ವರಿ ದೇಗುಲಗಳಿಗೆ ಮರಳಿನ ದಂಡೆ ಮೇಲೆ ವ್ಯವಸ್ಥಿತ ಮಾರ್ಗ ರೂಪಿಸಿ, ಮಾರ್ಗದುದ್ದಕ್ಕೂ ಛಾವಣಿ ಅಳವಡಿಸಲಾಗಿದೆ. ಅಲ್ಲಲ್ಲಿ ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆ, ಶೌಚಾಲಯ ವ್ಯವಸ್ಥೆ ಕಲ್‍ಪಿಸಲಾಗಿದೆ. ಸ್ನಾನಘಟ್ಟಗಳಲ್ಲಿ ಮೀಯಲು, ಬಟ್ಟೆ ಬದಲಿಸಲು ಸಕಲ ವ್ಯವಸ್ಥೆ ಇದೆ.

11 ಕಡೆ ವಾಹನ ನಿಲುಗಡೆಗೆ  ತಾತ್ಕಾಲಿಕ ಸೌಕರ್ಯ ಕಲ್ಪಿಸಲಾಗಿದೆ. ಒಂಬತ್ತು ಕಡೆ ಮಾಹಿತಿ– ಮಾರ್ಗದರ್ಶನ ಕೇಂದ್ರಗಳನ್ನು ತೆರೆಯಲಾಗಿದೆ. 50 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸ­ಲಾಗಿದೆ. ಭದ್ರತಾ ಕಾರ್ಯಕ್ಕೆ 3,500 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ ತಿಳಿಸಿದ್ದಾರೆ.ತಲಕಾಡಿನಿಂದ ಉತ್ತರಕ್ಕೆ ನಾಲ್ಕು ಕಿಲೋ ಮೀಟರ್‌ ದೂರದಲ್ಲಿರುವ ಮುಡುಕು­ತೊರೆಯಲ್ಲಿ ನೆಲೆಸಿರುವ ಮಲ್ಲಿಕಾರ್ಜುನೇಶ್ವರ ಮತ್ತು ಪಶ್ಚಿಮಕ್ಕೆ 5 ಕಿಲೋ ಮೀಟರ್‌ ದೂರದ ವಿಜಯಪುರದಲ್ಲಿ ನೆಲೆಸಿರುವ ಅರ್ಕೇಶ್ವರ ದೇಗಲ ಮತ್ತು ಮಹೋತ್ಸವದ ವಿವಿಧ ಸ್ಥಳಗಳಿಗೆ ತೆರಳಲು 100 ಬಸ್‌ ವ್ಯವಸ್ಥೆ ಮಾಡಲಾಗಿದೆ. ಪಂಚಲಿಂಗ ಮಹೋತ್ಸವ ದರ್ಶನಕ್ಕೆ ಮೈಸೂರಿನಿಂದ 40, ಬೆಂಗಳೂರು, ಮಂಡ್ಯ ಇತರೆಡೆಗಳಿಂದ 60 ಸೇರಿದಂತೆ ಒಟ್ಟು 100 ಬಸ್ಸುಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಕ ಬಿ.ವಿ. ಶ್ರೀನಿವಾಸ್‌ ತಿಳಿಸಿದ್ದಾರೆ.ಡಿ. 2ರಂದು ಚಾಮುಂಡಿ ಬೆಟ್ಟ, 3ರಂದು ನಂಜನಗೂಡು, 4ರಂದು ಮಹದೇಶ್ವರ ಬೆಟ್ಟದ ದೇಗುಲ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದ (ಪುಳಿಯೊಗರೆ/ಬಿಸಿ ಬೇಳೆಬಾತ್‌/ ಕೇಸರಿ­ಬಾತ್‌/ಮೊಸರನ್ನ ) ವಿತರಿಸಲಾಗುವುದು. ಕಾರ್ತಿಕ ಮಾಸ ವಿಶಾಖ, ಅನುರಾಧ  ನಕ್ಷತ್ರ, ಕುಹೂ ಯೋಗ, ಕಡೇ ಅಮಾವಾಸ್ಯೆ ಐದನೇ ಸೋಮವಾರದ ದಿನ ಸೇರಿದ ಸಂವತ್ಸರದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಆಚರಿಸಲಾಗುತ್ತದೆ. ಈ ಉತ್ಸವವನ್ನು ನಿಗದಿತವಾಗಿ ಇಂತಿಷ್ಟು ವರ್ಷಗಳಿಗೊಮ್ಮೆ ಆಚರಿಸುವುದಿಲ್ಲ. ಇದು ಖಗೋಳಶಾಸ್ತ್ರ ಆಧಾರಿತ ಹಬ್ಬವಾಗಿದೆ. ಈ ಹಿಂದೆ 97 ವರ್ಷಗಳಿಂದ ಈಚೆಗೆ 1911, 1924, 1938, 1952, 1959, 1965, 1979, 1986, 1993, 2006, 2009ರಲ್ಲಿ ನಡೆದಿದೆ. ಪಂಚಬ್ರಹ್ಮ ಮಯನಾದ ಪರಮೇಶ್ವರನ ಐದು ಮುಖಗಳಾದ (ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ) ಪ್ರತೀಕವಾಗಿ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನೇಶ್ವರ ಲಿಂಗಗಳು ಇಲ್ಲಿ ಆವಿರ್ಭವಿಸಿವೆ. ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಈ ಲಿಂಗಗಳ ದರ್ಶನ ಮಾಡಿದರೆ ಜನ್ಮಜನ್ಮಾಂತರ ಪಾಪಗಳು ನಶಿಸುತ್ತವೆ, ಭವಿಷ್ಯದಲ್ಲಿ ಉತ್ತಮ ಫಲಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ.ನ. 28ರಿಂದಲೇ ಈ ಹಬ್ಬದ ವಿಧಿಗಳು ಆರಂಭವಾಗಿವೆ. ಡಿ. 2 ಪ್ರಮುಖ ದಿನವಾಗಿದ್ದು, 7 ರವರೆಗೂ ವಿವಿಧ ಉತ್ಸವಗಳು ನೆರವೇರಲಿವೆ. 2ರಂದು ಎರಡು ಲಕ್ಷ ಭಕ್ತರು ಮತ್ತು ಎಲ್ಲ ದಿನಗಳು ಸೇರಿ ಒಟ್ಟಾರೆ 25 ಲಕ್ಷ ಮಂದಿ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸಹಾಯವಾಣಿ ಸಂಖ್ಯೆ:  08227– 260210.

ಪ್ರತಿಕ್ರಿಯಿಸಿ (+)