ತಲಕಾವೇರಿ ಸೇರಿ 23 ತಾಣ ಘೋಷಣೆಗೆ ಸಿದ್ಧ: ಅಶೀಸರ

7

ತಲಕಾವೇರಿ ಸೇರಿ 23 ತಾಣ ಘೋಷಣೆಗೆ ಸಿದ್ಧ: ಅಶೀಸರ

Published:
Updated:

ಮಡಿಕೇರಿ: ಅವಸಾನದ ಅಂಚಿನಲ್ಲಿರುವ ಔಷಧಿ ಗಿಡಮೂಲಿಕೆಗಳ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕೊಡಗಿನ ತಲಕಾವೇರಿ ಸೇರಿದಂತೆ ರಾಜ್ಯದ 23 ತಾಣಗಳನ್ನು ಔಷಧಿ ಗಿಡಮೂಲಿಕೆಗಳ ಸಂರಕ್ಷಿತ ಪ್ರದೇಶಗಳೆಂದು ಈ ವರ್ಷದಿಂದಲೇ ಘೋಷಿಸುವ ಸಂಬಂಧ ರೂಪಿಸಿರುವ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಗುರುವಾರ ಇಲ್ಲಿ ತಿಳಿಸಿದರು.ತಲಕಾವೇರಿಗೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ತಲಕಾವೇರಿ ಸೇರಿದಂತೆ ರಾಜ್ಯದ 13 ತಾಣಗಳನ್ನು ಔಷಧಿ ಗಿಡಮೂಲಿಕೆಗಳ ಸಂರಕ್ಷಿತ ಪ್ರದೇಶವೆಂದು ಗುರುತಿಸ ಲಾಗಿದೆ. ಇದೀಗ ಇನ್ನೂ 10 ಹೊಸ ತಾಣಗಳನ್ನು ಸೇರ್ಪಡೆ ಗೊಳಿಸಿ ಒಟ್ಟು 23 ಪ್ರದೇಶಗಳನ್ನು ಔಷಧಿ ಗಿಡಮೂಲಿಕೆಗಳ ಸಂರಕ್ಷಿತ ಪ್ರದೇಶವೆಂದು ಈ ವರ್ಷದಿಂದಲೇ ಘೋಷಣೆ ಮಾಡಲಾಗುತ್ತದೆ’ ಎಂದು ಹೇಳಿದರು.‘ರಾಜ್ಯದ ಶೇ 75ರಷ್ಟು ಫಾರ್ಮಸಿ, ಆಯುರ್ವೇದ ಔಷಧಿ ತಯಾರಿಕಾ ಕಂಪೆನಿಗಳು ಕಳ್ಳಸಾಗಣೆ ಮಾಡಿದಂತಹ ನೈಸರ್ಗಿಕ ಔಷಧಿ ಗಿಡಮೂಲಿಕೆಗಳ ಕಚ್ಚಾ ವಸ್ತುಗಳನ್ನು ಬಳಸುತ್ತಿವೆ. ಈ ರೀತಿ ಔಷಧಿಯುಕ್ತ ಗಿಡಮೂಲಿಕೆಗಳ ಕಳ್ಳ ಸಾಗಣೆ ತಡೆಗೆ ಕೆಳ ಹಂತದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ, ಅರಣ್ಯ ಸಿಬ್ಬಂದಿಗಳಲ್ಲಿಯೂ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಈ ಸಂಬಂಧ ಕಾನೂನು ತಿದ್ದುಪಡಿ ತರಲು ಸರ್ಕಾರದೊಂದಿಗೆ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಅಶೀಸರ ಹೇಳಿದರು.‘ಈ ನಡುವೆ ಕೆಲವು ಔಷಧಿ ಸಸ್ಯಗಳನ್ನು ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅದೇ ರೀತಿ, ಅತಿ ಅಪರೂಪವಾದಂತಹ ಇಂತಹ ಸಸ್ಯಗಳನ್ನು ರಫ್ತು ಮಾಡುವುದನ್ನು ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ದೇವದಾರು, ಸರ್ಪಗಂಧ, ದುರ್ವಾಸನೆ, ಮಾಕಳಿಬೇರಿನಂತಹ ಅತಿ ಅಪರೂಪದ ಸಸ್ಯಗಳ ಕಳ್ಳ ಸಾಗಣೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿಯೂ ಈ ಸಂಬಂಧ ನೀತಿ ರೂಪಿಸಲು ಕಾರ್ಯಪಡೆ ತಯಾರಿ ನಡೆಸಿದೆ. ಈ ಸಂಬಂಧ ಈಗಾಗಲೇ ಶಿವಮೊಗ್ಗ ಜಿಲ್ಲೆಯ ತಜ್ಞರು ಹಾಗೂ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ’ ಎಂದರು.ಗಣಿಗಾರಿಕೆಗೆ ಅನುಮತಿ ಇಲ್ಲ:  ‘ಪಶ್ಚಿಮಘಟ್ಟ ಪ್ರದೇಶದಲ್ಲಿ ಬೃಹತ್ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯಪಡೆ ನಿರಂತರ ಒತ್ತಡ ಹೇರಿದ ಪರಿಣಾಮ ಕೊನೆಗೂ ಸರ್ಕಾರ ಸ್ಪಂದಿಸಿ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡುತ್ತಿಲ್ಲ’ ಎಂದು ಹೇಳಿದರು.‘ಪಶ್ಚಿಮಘಟ್ಟ ಹಾಗೂ ಮಲೆನಾಡಿನ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಕಾರ್ಯಪಡೆ 23 ಅಂಶಗಳನ್ನು ಒಳಗೊಂಡ ಶಿಫಾರಸುಗಳನ್ನು ಈ ತಿಂಗಳ 22ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಜನಸಂಖ್ಯೆ ಆಧಾರಿತ ಅನುದಾನ ನೀಡುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಯಿಂದ ಈ ಭಾಗಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಹಳ್ಳಿಗಳ ಅಭ್ಯುದಯಕ್ಕೆ ವಿಶೇಷ ಅನುದಾನ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲೆನಾಡಿನ ಜಲಮೂಲ, ನದಿ, ಕಣಿವೆಗಳ ಜಲ ಸಂವರ್ಧನೆಗಾಗಿ ನೀರಾವರಿ ಯೋಜನೆಗಳ ಶೇ 20ರಷ್ಟು ಹಣವನ್ನು ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದರು.‘ಚಿಕ್ಕಮಗಳೂರು ಜಿಲ್ಲೆಯ ಹೊಗರೆಕಾಯಿಗಿರಿ, ಕೊಡಚಾದ್ರಿಯ ಅಂಬಾರಗುಡ್ಡ, ಬೆಳಗಾವಿ ಜಿಲ್ಲೆಯ ಭೀಮಘಾಟ್, ಉತ್ತರ ಕನ್ನಡ ಜಿಲ್ಲೆಯ ಕಾಳಿನದಿ ಸಮುದ್ರಕ್ಕೆ ಸೇರುವಂತಹ ಬೇಡ್ತಿ, ಅಘನಾಶಿನಿ ಕಣಿವೆಗಳನ್ನು ಸಂರಕ್ಷಿತ ಜೀವವೈವಿಧ್ಯ ತಾಣಗಳನ್ನಾಗಿ ಘೋಷಿಸಲಾಗುತ್ತಿದೆ. ಆ ಮೂಲಕ ಔಷಧಿ ಗುಣವಿರುವ ಗಿಡಮೂಲಿಕೆಗಳ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ’ ಎಂದು ಜೀವವೈವಿಧ್ಯ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಅನಂತ ಹೆಗಡೆ ತಿಳಿಸಿದರು.‘ಆದರೆ, ವಿಶ್ವ ಪಾರಂಪರಿಕ ತಾಣಗಳ ಹಿನ್ನೆಲೆಯಲ್ಲಿ ಗುರುತಿಸುವಂತಹ ಜೀವ ವೈವಿಧ್ಯ ತಾಣಗಳಿಗೂ ಹಾಗೂ ಕಾರ್ಯಪಡೆ ಗುರುತಿಸುವಂತಹ ಸಂರಕ್ಷಿತ ಜೀವವೈವಿಧ್ಯ ತಾಣಗಳೇ ಬೇರೆ. ಇವೆರಡಕ್ಕೂ ಯಾವುದೇ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.ಪ್ರಸ್ತಾವ ಸಲ್ಲಿಸಿಲ್ಲ; ‘ಕೊಡಗಿನ ತಲಕಾವೇರಿ, ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ಅಭಯಾರಣ್ಯಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಘೋಷಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ಈ ತಾಣಗಳ ಘೋಷಣೆ ಅಸಾಧ್ಯ. ಈ ಬಗ್ಗೆ ಕೊಡಗಿನ ಸ್ಥಳೀಯ ಜನರ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಅರಣ್ಯ ಸಚಿವರ ಮೂಲಕ ಕೇಂದ್ರದ ಗಮನಸೆಳೆಯಲಾಗಿದೆ’ ಎಂದರು.

ಕಾರ್ಯಪಡೆಯ ನಿಲುವಿನ ಕುರಿತು ಸ್ಪಷ್ಟ ಪ್ರತಿಕ್ರಿಯೆ ನೀಡದ ಹೆಗಡೆ, ‘ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸು ವಂತಹ ಯೋಜನೆಗಳ ಜಾರಿಯ ಅವಶ್ಯಕತೆ ಇಲ್ಲ. ಈ ಸಂಬಂಧ ಸರ್ಕಾರ ಕಾರ್ಯಪಡೆಯ ಸಲಹೆ ಕೇಳಿಲ್ಲ. ಹೀಗಾಗಿ, ನಾವು ಕೂಡ ಸಲಹೆಯನ್ನೂ ಕೊಟ್ಟಿಲ್ಲ’ ಎಂದರು.ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದರ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ರೈಲ್ವೆ, ಹೆದ್ದಾರಿಯಂತಹ ಬೃಹತ್ ಯೋಜನೆಗಳನ್ನು ತಡೆಯಲು ಕ್ರಮ ಕೈಗೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಖಂಡಿತಾ ಪಶ್ಚಿಮಘಟ್ಟ ಅಥವಾ ಮಲೆನಾಡು ಉಳಿಯಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಆಹಾರ ಸುರಕ್ಷಿತ ಪ್ರದೇಶಗಳಾಗಿರುವ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸರ್ಕಾರಗಳು ಗಮನಹರಿಸಬೇಕಾಗಿದೆ’ ಎಂದರು.ಇನ್ನೊಂದು ತಿಂಗಳಲ್ಲಿ ಸಮಾವೇಶ: ಗ್ರಾಮ ಅರಣ್ಯ ಹಕ್ಕುಗಳ ಸಮಾವೇಶವನ್ನು ಇನ್ನೊಂದು ತಿಂಗಳಲ್ಲಿ ಮಡಿಕೇರಿಯಲ್ಲಿ ನಡೆಸಲಾಗುತ್ತಿದ್ದು, ಪಶ್ಚಿಮಘಟ್ಟಗಳ ಜೀವವೈವಿಧ್ಯತೆ ಉಳಿಸುವ ಕುರಿತು ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚಿಸಲಾಗುತ್ತದೆ ಎಂದರು.ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ (ವನ್ಯಜೀವಿ ವಿಭಾಗ) ಮೋಟಪ್ಪ, ರಾಜಶೇಖರ್ (ಸಾಮಾಜಿಕ ಅರಣ್ಯ) ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry