ಗುರುವಾರ , ಮೇ 19, 2022
25 °C
ಮಹಿಳೆಯ ಮೇಲೆ ಹಲ್ಲೆ, ಪತಿಯತ್ತ ಗುಂಡು-ಸ್ಥಳೀಯರಿಗೆ ಆತಂಕ

ತಲಪಾಡಿ: ಪಿಸ್ತೂಲ್ ತೋರಿಸಿ ದರೋಡೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಮನೆಯೊಳಗೆ ಒಂಟಿಯಾಗಿದ್ದ ಮಹಿಳೆಗೆ ಪಿಸ್ತೂಲು ತೋರಿಸಿ ಬೆದರಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಿ, ಮಹಿಳೆಯ ಪತಿಗೆ ಗುಂಡು ಹಾರಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯ ತಚ್ಚಣಿ ಸಮೀಪದ ಮಂಡಿಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.ದುಷ್ಕರ್ಮಿಗಳು ಇನ್ನೊಂದು ಮನೆಗೆ ಹೋಗಬೇಕಿತ್ತು, ಗುರಿ ತಪ್ಪಿ ಅವರು ಈ ಮನೆಗೆ ಬಂದಿದ್ದಾರೆ ಎಂಬ ಗುಮಾನಿ ಇದ್ದು, ಅವರು ತೋರಿಸಿದ ಪಿಸ್ತೂಲಿ ಆಟಿಕೆಯದೇ, ನಿಜವಾದ ಪಿಸ್ತೂಲೇ ಎಂಬ ಬಗ್ಗೆಯೂ ಶಂಕೆ ಮೂಡಿದೆ. ಆದರೆ ಬೆಳ್ಳಂಬೆಳಗ್ಗೆ ನಡೆದ ಈ ಘಟನೆಯಿಂದ ಸ್ಥಳೀಯರು ಭಯಗೊಂಡಿದ್ದಾರೆ.ಘಟನೆ ವಿವರ

ಕೇರಳ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಕೇಶವ ಬಿ. ಅವರು ಮಂಡಿಕಟ್ಟೆಯಲ್ಲಿ ವಾಸಿಸುತ್ತಿರುವ ಓಂ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿದ್ದ ಕೇಶವ ಅವರ ಪತ್ನಿ ಸಾಧನಾ ಅವರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾನೆ. ಮನೆಯೊಳಗೆ `ಯಾರಿದ್ದಾರೆ' ಎಂದು ಪ್ರಶ್ನಿಸಿ ಅವರ ಮೊಬೈಲ್‌ನಿಂದ ತಾನು ಹೇಳುವ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಹೇಳಿದ್ದಾನೆ. ಗಾಬರಿಯಾದ ಸಾಧನಾ ಅವರು ಕೋಣೆಯೊಳಗಿದ್ದ ಮೊಬೈಲ್ ತರಲು ಹೋದಂತೆ ನಟಿಸಿ ಮನೆಯ ಹೊರಗೆ ಓಡಲು ಯತ್ನಿಸಿದರು. ಅದೇ ಸಂದರ್ಭದಲ್ಲಿ ಅವರ ಹಿಂದಿನಿಂದಲೇ ಬಂದ ದುಷ್ಕರ್ಮಿ ಬೆನ್ನಿಗೆ ಪಿಸ್ತೂಲು ಹಿಡಿದು ಅವರ ತಲೆಕೂದಲನ್ನು ಹಿಡಿದೆಳೆದು ಕೆನ್ನೆಗೆ ಥಳಿಸಿದ್ದಾನೆ. ಈ ವೇಳೆ ಪತ್ನಿಯ ಕೂಗು ಕೇಳಿ ಸಮೀಪದ ಪಂಪ್‌ಹೌಸ್‌ನಿಂದ ಮನೆಯತ್ತ ಓಡಿಬಂದ ಪತಿ ಕೇಶವ ಅವರು ದುಷ್ಕರ್ಮಿಗೆ ಕಟ್ಟಿಗೆಯಿಂದ ಬಡಿಯಲು ಪ್ರಯತ್ನಿಸಿದರು. ಅಷ್ಟರಲ್ಲಿ ಬೈಕ್‌ನಲ್ಲಿ ಕಾದು ಕುಳಿತಿದ್ದ ಮತ್ತೊಬ್ಬ ದುಷ್ಕರ್ಮಿ ಓಡಿಬಂದು ಕೈಯಲ್ಲಿದ್ದ ಪಿಸ್ತೂಲಿನಿಂದ ಕೇಶವ ಅವರಿಗೆ ಗುಂಡು ಹಾರಿಸಿದ್ದಾನೆ. ಆದರೆ ಪವಾಡ ಸದೃಶವಾಗಿ ಗುಂಡು ತಪ್ಪಿ ಬೇರೆಡೆ ಸಿಡಿದಿದೆ. ದುಷ್ಕರ್ಮಿಯ ಹಲ್ಲೆಯಿಂದ ಮಹಿಳೆಯ ಕೆನ್ನೆಯ ಭಾಗಕ್ಕೆ ಗಾಯವಾಗಿದೆ.ತಪ್ಪಿ ಬಂದರು

ತಲಪಾಡಿಯಿಂದ ದೇವಿನಗರ ರಸ್ತೆಯಾಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳಿಬ್ಬರು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ತೆರಳಿದ್ದರು. ಅಲ್ಲಿ ದೇವಸ್ಥಾನದ ಸಿಬ್ಬಂದಿ ವೇಣುಗೋಪಾಲ್ ಎಂಬವರಲ್ಲಿ ಬಸ್ ಮಾಲೀಕ ಜಯಪ್ರಕಾಶ್ ಅವರ ಮನೆಗೆ ಹೋಗುವ ದಾರಿ ಕೇಳಿದ್ದರು. ಮತ್ತೆ ದೇವಿನಗರ ರಸ್ತೆಯಿಂದ ತಲಪಾಡಿವರೆಗೆ ಬಂದವರು ರಸ್ತೆಯಲ್ಲಿ ಹೊಂಡಕ್ಕೆ ಕಲ್ಲು ಹಾಕುತ್ತಿದ್ದ ಶ್ರಿಧರ್ ಎಂಬವರಲ್ಲೂ ಜಯಪ್ರಕಾಶ್ ಮನೆಯ ದಾರಿ ಕೇಳಿದ್ದರು. ಅಲ್ಲಿಂದ ನೇರ ಕೇಶವ ಅವರ ಮನೆಗೆ ಬಂದು ಈ  ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ಜಯಪ್ರಕಾಶ್ ಎಂಬವರ ಮನೆಯೆಂದು ತಪ್ಪಿ ಕೇಶವ ಅವರ ಮನೆಗೆ ಬಂದು ದಾಳಿ ನಡೆಸಿದರೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ದರೋಡೆ ನಡೆಸಲು ಬಂದರೇ?

`ಮನೆಯೊಡತಿ ಸಾಧನಾ ಅವರಲ್ಲಿ ಮೊಬೈಲ್ ಕರೆ ಮಾಡುವಂತೆ ಹೇಳಿ ಅವರಲ್ಲಿರುವ ಆಭರಣ ಮತ್ತು ಮನೆಯೊಳಗಿನ ಸ್ವತ್ತುಗಳನ್ನು ಕಳವು ನಡೆಸಲು ಬಂದಿರಬಹುದು. ಎರಡು ದಿನಗಳಿಂದ ಮನೆ ಹೊರಗೆ ನಿಲ್ಲಿಸುತ್ತಿದ್ದ ಕಾರನ್ನು ಅಳಿಯ ತೆಗೆದುಕೊಂಡು ಹೋಗಿದ್ದರು. ಬೈಕನ್ನು ಮಂಗಳೂರಿಗೆ ಕೆಲಸಕ್ಕೆ ಹೋಗುವ ಮಗ ಕೊಂಡೊಯ್ದಿದ್ದ. ಇದನ್ನು ಗಮನಿಸಿದ ಕಳ್ಳರು ಮನೆಯಲ್ಲಿ ಗಂಡಸರು ಯಾರೂ ಇಲ್ಲ ಎಂಬುದನ್ನು ಅರಿತು ದರೋಡೆ ಮಾಡಲು ಸಂಚು ರೂಪಿಸಿರಬಹುದು' ಎಂದು ಕೇಶವ ಹೇಳಿದ್ದಾರೆ.ಬೆದರಿಕೆ ಕರೆ

ಮಂಡಿಕಟ್ಟೆಯ ವ್ಯಕ್ತಿಯೊಬ್ಬರ ಪತ್ನಿಯ ಮೊಬೈಲ್‌ಗೆ ಕಳೆದ ತಿಂಗಳು ಕರೆ ಮಾಡಿದ್ದ ವ್ಯಕ್ತಿ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಮಂಗಳವಾರ ಬೆಳಿಗ್ಗೆ 7.30ರ ಸುಮಾರಿಗೆ ಮತ್ತೆ ಕರೆ ಮಾಡಿ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆದರೆ ಆ ಮಹಿಳೆ ಹಣ ನೀಡಲು ನಿರಾಕರಿಸಿದ್ದರೆನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ತಪ್ಪಿ ಬೇರೆ ಮನೆಗೆ ನುಗ್ಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.ಪೊಲೀಸರ ನಿರ್ಲಕ್ಷ್ಯ: ಆರೋಪ

ಘಟನಾ ಸ್ಥಳದಲ್ಲಿ ಪಿಸ್ತೂಲಿನಿಂದ ದಾಳಿ ನಡೆದಿದೆ ಎಂದು ಮನೆ ಮಾಲೀಕರು ಉಳ್ಳಾಲ ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಸಿಡಿದಿರುವ ಗುಂಡು ಆಟಿಕೆ ಪಿಸ್ತೂಲಿನದ್ದಾಗಿರಬಹುದು ಎಂದು ಪ್ರಕರಣ ದಾಖಲಿಸುವಾಗ ಪೊಲೀಸರು ಬರೆದಿದ್ದಾರೆ. ಸಿಡಿದಿರುವ ಗುಂಡಿನ ಬಗ್ಗೆ ತನಿಖೆಯಾಗಲಿ, ಅದನ್ನು ಹುಡುಕುವ ಪ್ರಯತ್ನವನ್ನಾಗಲಿ ಪೊಲೀಸರು ಮಾಡದೇ ಪ್ರಕರಣದ ಬಗ್ಗೆ ಅಸಡ್ಡೆ ವಹಿಸಿದ್ದಾರೆ.ಸ್ಥಳಕ್ಕೆ ಶ್ವಾನದಳವಾಗಲಿ, ಬೆರಳಚ್ಚು ತಜ್ಞರಾಗಲಿ ಭೇಟಿ ನೀಡಲಿಲ್ಲ. ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಹೆಚ್ಚಿನ ಕಾವಲು ಇರಬೇಕು. ಸಿ.ಸಿ.ಟಿವಿಯನ್ನೂ ಅಳವಡಿಸಬೇಕು. ತಲಪಾಡಿ ಚೆಕ್‌ಪೋಸ್ಟ್ ಬಳಿ ಸಿ.ಸಿ ಟಿ.ವಿ. ಇದ್ದರೂ ಮರಳು ದಂದೆ ಹಿನ್ನೆಲೆಯಲ್ಲಿ ಅದನ್ನು ಕೆಡವಿ ಹಾಕಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.