ತಲೆಎತ್ತಿದೆ ಹೈಟೆಕ್ ಮಾರ್ಕೆಟ್

7

ತಲೆಎತ್ತಿದೆ ಹೈಟೆಕ್ ಮಾರ್ಕೆಟ್

Published:
Updated:

ಚಿಕ್ಕಮಗಳೂರು: ನಗರದ ಗ್ರಾಹಕರು ಮತ್ತು ವ್ಯಾಪಾರಿಗಳ ಬಹು ವರ್ಷಗಳ ಬೇಡಿಕೆಯೊಂದು ಕೊನೆಗೂ ಈಡೇರಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಮಾರ್ಕೆಟ್ ರಸ್ತೆಯ ಸಂತೆ ಮೈದಾನದಲ್ಲಿ ಮೀನು ಮತ್ತು ಮಾಂಸ ಮಾರಾಟದ ಹೈಟೆಕ್ ವಾಣಿಜ್ಯ ಸಂಕೀರ್ಣ ತಲೆ ಎತ್ತಿದೆ. ಸದ್ಯದಲ್ಲೇ ಮೀನು ಮತ್ತು ಮಾಂಸಾಹಾರಿಗಳಿಗೆ ಒಂದೇ ಸೂರಿನಡಿ ಮೀನು, ಕೋಳಿ ಹಾಗೂ ಕುರಿ ಮಾಂಸ ಲಭ್ಯವಾಗಲಿದೆ.42 ಮಳಿಗೆಗಳ ಬೃಹತ್ ಹಾಗೂ ಸುಸಜ್ಜಿತ ವಾಣಿಜ್ಯ ಸಂಕೀರ್ಣವನ್ನು ಸುಮಾರು 1.35 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ 16ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೈಟೆಕ್ ಮಾರ್ಕೆಟ್ ಅನ್ನು ಉದ್ಘಾಟಿಸಲಿದ್ದಾರೆ. ಈ ಹಿಂದೆ ಸಂತೆ ಮೈದಾನ ಮತ್ತು ಮಾರ್ಕೆಟ್ ರಸ್ತೆಯಲ್ಲಿ ಮೀನು ಮತ್ತು ಮಾಂಸದ ಅಂಗಡಿಗಳನ್ನು ಹೊಂದಿದ್ದ ವ್ಯಾಪಾರಿಗಳಲ್ಲಿ 14 ಮಂದಿಗೆ ಮೊದಲು ಈ ಮಳಿಗೆಗಳನ್ನು ವಿತರಿಸಿ, ಉಳಿದ ಮಳಿಗೆಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲು ನಗರಸಭೆ ಮುಂದಾಗಿದೆ.ನಗರದ ನೈರ್ಮಲ್ಯಕ್ಕೆ ಅಡ್ಡಿಯಾಗಿದ್ದ ಮೀನು ಮತ್ತು ಮಾಂಸದ ಅಂಗಡಿಗಳನ್ನು ಒಂದೇ ಸೂರಿನಡಿ ತಂದು ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂತೆ ಮೈದಾನದಲ್ಲಿ ಪ್ರತ್ಯೇಕವಾದ ಮೀನು ಮತ್ತು ಮಾಂಸ ಮಾರಾಟ ಘಟಕ ಸ್ಥಾಪಿಸಲು ನಗರಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರಂತೆ ಕ್ಷಿಪ್ರ ಅವಧಿಯಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣವಾಗಿ ನಿರ್ಮಿಸಲಾಗಿದೆ. ಮಾರ್ಕೆಟ್ ರಸ್ತೆ, ವಿಜಯಪುರ, ಮಲ್ಲಂದೂರು ರಸ್ತೆ ಹಾಗೂ ನಗರದೊಳಗೆ ಅಲ್ಲಲ್ಲಿ ಇರುವ ಮೀನು ಮತ್ತು ಮಾಂಸ ಮಾರಾಟದ ಅಂಗಡಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು. ನಂತರದ ದಿನಗಳಲ್ಲಿ ಗವನಹಳ್ಳಿ, ರಾಮನಹಳ್ಳಿ, ಉಪ್ಪಹಳ್ಳಿ, ಹೌಸಿಂಗ್ ಬೋರ್ಡ್ ಹಾಗೂ ಹಿರೇಮಗಳೂರಿನಲ್ಲಿ ಇದೇ ರೀತಿಯ ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು ಎಂದು ನಗರಸಭೆ ಆಯುಕ್ತ ಎಚ್.ಜಿ.ಪ್ರಭಾಕರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಮೀನು ಮತ್ತು ಮಾಂಸ ಮಾರಾಟ ಘಟಕದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ನಗರಸಭೆ ವತಿಯಿಂದಲೇ ಸಂಗ್ರಹಿಸಲಾಗುವುದು. ದ್ರವ ರೂಪದ ತ್ಯಾಜ್ಯ ಒಳಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದೊಂದು ಅತ್ಯಂತ ವ್ಯವಸ್ಥಿತವಾದ ಯೋಜನಾಬದ್ಧ ವಾಣಿಜ್ಯ ಸಂಕೀರ್ಣವೆನಿಸಿಕೊಳ್ಳಲಿದೆ.ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಇಂತಹದೊಂದು ಕಾರ್ಯ ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಆಗಬೇಕಿತ್ತು ಎನ್ನುತ್ತಿದ್ದಾರೆ. ಈ ವಾಣಿಜ್ಯ ಸಂಕೀರ್ಣದ ಸ್ವಚ್ಛತೆ ನಿರ್ವಹಣೆ ಮತ್ತು ಭದ್ರತೆಗೆ ಸಿಬ್ಬಂದಿಯನ್ನು ನಗರಸಭೆಯಿಂದಲೇ ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.ಒಂದೇ ಕಡೆ ಮಾರುಕಟ್ಟೆ ಸಂಕೀರ್ಣ ನಿರ್ಮಿಸಿ ರುವುದು ಒಳ್ಳೆಯ ನಿರ್ಧಾರ. ಆದರೆ, ಈಗ ಚಿಕ್ಕಮ ಗಳೂರು ನಗರ ಹೃದಯಭಾಗದಿಂದ ಏಳೆಂಟು ಕಿ.ಮೀ. ದೂರದವರೆಗೆ ಬೆಳೆದಿದೆ. ಮಾರ್ಕೆಟ್ ರಸ್ತೆಗೆ ಮಾತ್ರ ಮೀನು ಮತ್ತು ಮಾಂಸದ ಮಾರುಕಟ್ಟೆ ಸಂಕೀರ್ಣ ಸೀಮಿತಗೊಳಿಸುವುದು ಸರಿಯಲ್ಲ. ನಗರ ಹೊರ ವಲಯ,ದೂರದ ಬಡಾವಣೆಗಳಲ್ಲೂ ಇಂತ ಹದೇ ವಾಣಿಜ್ಯ ಸಂಕೀರ್ಣ ಆದಷ್ಟು ತುರ್ತಾಗಿ ನಿರ್ಮಿಸಬೇಕು. ಇಲ್ಲದಿದ್ದರೆ ಗ್ರಾಹಕರು ಮೀನು, ಮಾಂಸ ಖರೀದಿಸಲು ಹತ್ತಾರು ಕಿ.ಮೀ. ಅಲೆಯ ಬೇಕಾಗುತ್ತದೆ ಎನ್ನುತ್ತಾರೆ ಸಿಪಿಐ ಮುಖಂಡ ಬಿ.ಅಮ್ಜದ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry