ತಲೆಗೆ ಮುಂಡಾಸು, ಮನೆಗೆ ಸಂಡಾಸು, ಯಾವಾಗ?

7

ತಲೆಗೆ ಮುಂಡಾಸು, ಮನೆಗೆ ಸಂಡಾಸು, ಯಾವಾಗ?

Published:
Updated:

ಕೇಂದ್ರ ಸಚಿವ ಜೈರಾಂ ರಮೇಶ್ ಶೌಚಾಲಯಗಳನ್ನು ದೇವಾಲಯಗಳಿಗೆ ಹೋಲಿಸಿದ್ದು ಈಗ ಟೀಕೆಗೆ ಗುರಿಯಾಗಿದೆ. ದೇಶದ ಹಲವು ಭಾಗಗಳಲ್ಲಿ ಶೌಚಾಲಯ ಅಗತ್ಯದ ಬಗೆಗೆ ಪ್ರಸ್ತಾಪಿಸುತ್ತ ಇಂದು ದೇವಸ್ಥಾನಗಳಿಗಿಂತ  ಶೌಚಾಲಯ ಅವಶ್ಯಕತೆ ಹೆಚ್ಚಿದೆ ಎಂದಿದ್ದಾರೆ.

ದೇವಾಲಯ, ಶೌಚಾಲಯದ ಬಳಕೆ ಉದ್ದೆೀಶ ಬೇರೆ ಬೇರೆಯಾದ್ದರಿಂದ ಹೋಲಿಕೆ ಸರಿಯಲ್ಲ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಟೀಕೆ ವ್ಯಕ್ತಪಡಿಸಿದ್ದಾರೆ. ಹೋಲಿಕೆ ತಪ್ಪು ಎಂದು ಒಪ್ಪೋಣ. ವಿಶೇಷವೆಂದರೆ `ದೇವಾಲಯ ಕೆಲವರಿಗೆ, ಶೌಚಾಲಯ ಎಲ್ಲರಿಗೆ~ ಎಂದು  ಶೌಚಾಲಯ ಜಾಗೃತಿಗೆ ಬಹಳ ವರ್ಷಗಳಿಂದ ಬಳಸುತ್ತಿದ್ದೆೀವೆ.`ತಲೆಗೊಂದು ಮುಂಡಾಸು, ಮನೆಗೊಂದು ಸಂಡಾಸು~ ಎಂಬ ಜಾಹೀರಾತು ಬರಹ ದಕ್ಷಿಣ ಕನ್ನಡದ ಕೆಲವೆಡೆ ಚಾಲ್ತಿಯಲ್ಲಿದೆ. ಸಂಡಾಸನ್ನು ಪ್ರಾಸಬದ್ಧವಾಗಿ ಮುಂಡಾಸಿಗೆ ಹೋಲಿಸಲಾಗಿದೆ. ಆದರೆ ಜಾಗೃತಿಯ ಹೋಲಿಕೆ ಮಾತುಗಳ ಬಗೆಗೆ ಚರ್ಚೆಗಿಂತ ಮೂಲ ಉದ್ದೆೀಶದ ಕಡೆಗೆ ಗಮನಹರಿಸುವ ಅಗತ್ಯವಿದೆ.

ಇತ್ತೀಚೆಗೆ ಹಾವೇರಿ ಸವಣೂರಿನ ಕಳಸೂರಿಗೆ ಹೋಗಿದ್ದೆ. ಊರು ಪ್ರವೇಶದ ಒಂದು ಕಿಲೋ ಮೀಟರ್ ಆಚೀಚೆಯಲ್ಲಿ ಇಂಚು ಜಾಗವೂ ಖಾಲಿಯಿರಲಿಲ್ಲ.ಇಲ್ಲಿ  ಓಡಾಡುವ ಕೃಷಿಕರಿಗೆ,ಮಕ್ಕಳಿಗೆ ಎಂಥ ಸಾಂಕ್ರಾಮಿಕ ರೋಗಬರಬಹುದೆಂದು ಭಯವಾಯ್ತು. ಇದು ಒಂದು ಹಳ್ಳಿಯ ಸ್ಥಿತಿ ಮಾತ್ರ. 

ಬಯಲುಸೀಮೆಯ ಹಲವು ಹಳ್ಳಿ ಪ್ರವೇಶದ ರಸ್ತೆಯ ಕಿಲೋ ಮೀಟರ್ ಉದ್ದಕ್ಕೂ ಈಗಲೂ ಹೊಲಸು ನಾರುತ್ತದೆ. ಕೆಲವರು ಇದನ್ನು ಗ್ರಾಮೀಣ ಬಡತನದ ಸಂಕೇತವೆಂದು ವಿವರಿಸುತ್ತಾರೆ.

ಬಯಲು ಶೌಚಕ್ಕೆ ನೀರಿನ ಕೊರತೆ ಕಾರಣವೆಂಬ ಮಾತಿದೆ. ಇದಕ್ಕೆ ಸೂಕ್ತ ಪರಿಹಾರ ಹುಡುಕುವ ಪ್ರಯತ್ನ ಬೇಕು. ಈ ವರ್ಷ ಮಳೆಯ ಕೊರತೆಯಿಂದ ನೀರಿಲ್ಲ. ಹೀಗಾಗಿ ಸಮಸ್ಯೆ ಇನ್ನಷ್ಟು ಹೆಚ್ಚಬಹುದು ! ಗ್ರಾಮ ಪಂಚಾಯತಿಗಳಿವೆ, ಸದಸ್ಯರಿದ್ದಾರೆ. ಇಷ್ಟು ವರ್ಷಗಳಿಂದ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಸಹಾಯ ನೀಡುತ್ತಿದೆ. ಮಾಧ್ಯಮಗಳಲ್ಲಿ ನೈರ್ಮಲ್ಯ ಗ್ರಾಮಕ್ಕೆ ಎಷ್ಟೊಂದು ಪ್ರಚಾರ ನಡೆಯುತ್ತಿದೆ. ಪರಿಸರ ಬದಲಿಸಲು ಏಕೆ ಸಾಧ್ಯವಾಗಿಲ್ಲ?ಬಯಲಲ್ಲಿ ಹೊಲಸು ಮಾಡುವ ಜನರ ಲಾಗಾಯ್ತಿನ ಅಭ್ಯಾಸ ಬದಲಿಸುವದು ಹೇಗೆ? ಯೋಚಿಸಬೇಕಾಗಿದೆ. ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ಸಾಧನೆ  ಗುರುತಿಸುವಾಗ ಶೌಚಾಲಯ ನಿರ್ಮಾಣವೂ ಒಂದು ಮಾನದಂಡವಾಗಬೇಕು.ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುವವರ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕೆಂದು ಸರ್ಕಾರ ಹೇಳಿದೆ.

ಹೀಗಾಗಿ ಕರ್ನಾಟಕದ ಗ್ರಾಮ ಪಂಚಾಯತಿ ಸದಸ್ಯರೆಲ್ಲ ಸರ್ಕಾರಿ ದಾಖಲೆ ಪ್ರಕಾರ ಶೌಚಾಲಯ ಪಡೆದರು! ಆದರೆ ಸದಸ್ಯರ ಜಾಗೃತಿ ಅಲ್ಲಿನ ಊರಿಗೆ ವಿಸ್ತರಣೆಯಾಗಿಲ್ಲ! ಇನ್ನು  ಈಗ ಯಾವ ಯಾವ ಶಾಸಕರ ಕ್ಷೇತ್ರದ ಎಷ್ಟು ಗ್ರಾಮಗಳಲ್ಲಿ ಬಯಲು ಶೌಚಾಲಯಗಳಿವೆ ಎಂದು ಗಮನಿಸಬೇಕು. ಶಾಸಕರ ಬಯಲು ಶೌಚಾಲಯ ಪಟ್ಟಿ ಮಾಡಬೇಕು! ಆಗ ಗ್ರಾಮೀಣ ಆರೋಗ್ಯದ ಜೊತೆಗೆ ನೇತಾರರ ಕಾಳಜಿ ಕಣ್ಣಿಗೆ ಕಟ್ಟುತ್ತದೆ.ರಾಜ್ಯದ ಶಾಸಕರು, ಸಚಿವರು ಗಾಂಧಿ ಜಯಂತಿಯಂದು ಗ್ರಾಮೀಣ ಆರೋಗ್ಯದ ಬಗೆಗೆ ದೊಡ್ಡ ದೊಡ್ಡ ಭಾಷಣ ಹೊಡೆದಿದ್ದಾರೆ. ಇದಕ್ಕಿಂತ ಅವರು ಹಳ್ಳಿಯ ರಸ್ತೆಯ ಅಂಚಿನಲ್ಲಿ ಒಮ್ಮೆ ಪಾದಯಾತ್ರೆ ಮಾಡಬಹುದಿತ್ತು. ಆಗ ಊರಿನ ಹೀನಾಯ ಸ್ಥಿತಿ ಅರ್ಥವಾಗುತ್ತಿತ್ತು. ಈಗ ಶಾಸಕರು ಯಾವ ಪಕ್ಷದ ಯಾವ ಗುಂಪಿನಲ್ಲಿದ್ದಾರೆಂದು ಗುರುತಿಸುತ್ತೇವೆ.

ಪಕ್ಷ, ರಾಜಕೀಯ ಸ್ಥಾನಕ್ಕಿಂತ ಬಯಲು ಶೌಚಾಲಯ ವಿಚಾರದಲ್ಲಿ ಇವರ ಸ್ಥಾನ ಯಾವುದೆಂದು ಎತ್ತಿ ಹೇಳಬೇಕು !  ಜನ ಅನಾರೋಗ್ಯದಲ್ಲಿದ್ದಾಗ 108 ವಾಹನವನ್ನು ಹಳ್ಳಿಗೆ ಕಳಿಸುವುದು ದೊಡ್ಡ ಸಾಧನೆಯೆಂದು ಸರ್ಕಾರ ಹೇಳಬಹುದು. ಒಳ್ಳೆಯದು ನಿಮ್ಮ ಕೊಡುಗೆ ನಾವು ಮೆಚ್ಚುತ್ತೇವೆ. 

ಆದರೆ ಹಳ್ಳಿಯ ಜನ ಹೆಚ್ಚು ಹೆಚ್ಚು ಅನಾರೋಗ್ಯದಿಂದ ಬಳಲುವುದಕ್ಕೆ  ಸರ್ಕಾರದ ಶೌಚಾಲಯ ನಿರ್ಲಕ್ಷ್ಯದ ಕಾರಣ ದೊಡ್ಡದು ಎಂಬುದನ್ನು ಮರೆಯಬಾರದು. ಹಾಗಂತ ಹೊಣೆಯನ್ನು ಸರ್ಕಾರದ ಹೆಗಲಿಗೆ ಏರಿಸಿ ಗ್ರಾಮಸ್ಥರು ರಸ್ತೆಯಲ್ಲಿ ಮೂಗುಮುಚ್ಚಿ ಓಡಾಡುವದು ಸರಿಯಲ್ಲ.ಕಾರ್ಯ ಸಾಧ್ಯ ಜಾಗೃತಿ, ಪರಿಹಾರ ಹುಡುಕಿದರೆ ಒಂದಿಷ್ಟು ಬದಲಾವಣೆಯಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry