ಶನಿವಾರ, ಏಪ್ರಿಲ್ 17, 2021
27 °C

ತಲೆಚಿಟ್ಟು ಹಿಡಿಸುವ ಭವಿಷ್ಯಕಾರರು ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿತ್ಯ ಬೆಳಿಗ್ಗೆ 10 ರವರೆಗೆ ಯಾವುದೇ ಟಿ.ವಿ. ಚಾನಲ್ ಹಾಕಿದರೂ ಅದರಲ್ಲಿ ರಾಶಿಫಲ, ರಾಶಿಭವಿಷ್ಯ, ನಕ್ಷತ್ರ ಫಲ ಇತ್ಯಾದಿ.. ಇದೇ ತರಹದ ಕಾರ‌್ಯಕ್ರಮ ಪ್ರಸಾರವಾಗುತ್ತಿರುತ್ತದೆ. ಅದು ಸದ್ಯ ಸರ್ಕಾರಿ ಒಡೆತನದ ದೂರದರ್ಶನದಲ್ಲಿ   ಬರುವುದಿಲ್ಲ. ಆ ಮಟ್ಟಿಗೆ ನಾವು ಅದೃಷ್ಟವಂತರು.ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಪಲ್ಲಟ ಆಗುತ್ತೆ ಅಂತ ನಿಗದಿ ಆದ ತಕ್ಷಣ ಒಂದು ವಾಹಿನಿಯವರಂತೂ 3 ಜನ ಜ್ಯೋತಿಷಿಗಳನ್ನು ಕೂಡಿಸಿಕೊಂಡು, ಪ್ರಮುಖ 5 ಜನರ ಜಾತಕ ಹಾಕಿ ಯಾರ‌್ಯಾರು ಏನೇನು ಆಗುತ್ತಾರೆ, ಅವರು ಯಾವ ಸ್ಥಾನಕ್ಕೆ ಹೋಗ್ತಾರೆ ಇತ್ಯಾದಿ ದೀರ್ಘಕಾಲ ಚರ್ಚೆ ನಡೀತು.

 

ಒಂದು ಹಂತದಲ್ಲಿ ಒಬ್ಬ ಜ್ಯೋತಿಷಿ ಭಾರತೀಯ ಜನತಾಪಕ್ಷದ ಜಾತಕಾನೇ ಬರೆದಿದ್ದೀನಿ ಅದರ ಪ್ರಕಾರ ಹೀಗೆ ಹೀಗೆ ಅಂತ ಹೇಳುತ್ತಿದ್ದರು. ತೀರಾ ವೈಯಕ್ತಿಕವಾದ ಜಾತಕ ಹೀಗೆ ಸಾರ್ವಜನಿಕ ಯಾಕೆ ಆಗಬೇಕು. ಇದಂತೂ ತೀರ ಅಪಾಯಕಾರಿ ಬೆಳವಣಿಗೆ ಅಲ್ಲದೆ ಆದ ಎಲ್ಲಾ ತಪ್ಪುಗಳನ್ನೂ ಅವರ ಜಾತಕದಲ್ಲಿ ಈ ಥರ ದೋಷ ಇದ್ದಿದ್ದರಿಂದ ಅವರು ತಪ್ಪು ಮಾಡಿದರು ಅಂತ ತಪ್ಪುಗಳನ್ನು ಮುಚ್ಚುವ ಹುನ್ನಾರವನ್ನೂ ನಡೆಸಿದರು.ಈಗಂತೂ ಟಿ.ವಿ. ವಾಹಿನಿಗಳಲ್ಲಿ ಜ್ಯೋತಿಷದ ಅತೀ ವೈಭವೀಕರಣ ನಡೆಯುತ್ತಿದೆ. ಈಗ ಅದು ಒಂದು ಸಾಮೂಹಿಕ ಸನ್ನಿಯಾಗಿ ಮಾರ್ಪಟ್ಟಿದೆ. ಬೆಳಿಗ್ಗೆ ಎದ್ದು ಯಾವ್ಯಾವ ರಾಶಿಯವರು ಯಾವ್ಯಾವ ಬಣ್ಣದ ಬಟ್ಟೆ ಧರಿಸಬೇಕು, ಯಾವ ದೇವರನ್ನು ಪ್ರಾರ್ಥಿಸಬೇಕು, ಏನೇನು ಊಟ ಮಾಡಬೇಕು, ಹೇಗೆ ಹಲ್ಲುಜ್ಜಬೇಕು ಎನ್ನುವುದನ್ನೆಲ್ಲಾ ನೋಡಿದರೆ, ಅಬ್ಬಾ ದುಃಖವಾಗುತ್ತೆ, ಇದರಲ್ಲಿ ಕೆಲವು ನೇರಪ್ರಸಾರ ಇರುತ್ತದೆ.ಅದರಲ್ಲಿ ಕೆಲವು ಮೂರ್ಖ ಪ್ರಶ್ನೆಗಳೂ ಉಂಟು: ಉದಾಹರಣೆ-

(1) ನನ್ನ ಮಗನಿಗೆ ಎರಡು ವರ್ಷ. ಮುಂದೆ ಅವನೇನು ಓದುತ್ತಾನೆ?

(2)ಗುರೂಜಿ ನನ್ನ ಮಗ/ಮಗಳ ಮದುವೆ ಯಾವಾಗ ಆಗುತ್ತೆ?

(3) ನನ್ನ ಆರೋಗ್ಯದಲ್ಲಿ ಸಮಸ್ಯೆ ಇದೆ.

(4) ನನ್ನ ಗಂಡನಿಗೆ ಕೆಲಸ ಇಲ್ಲ.

(5) ದುಡಿದ ದುಡ್ಡು ಕೈಹತ್ತುತ್ತಿಲ್ಲ......ಏನಾದರೂ ಹೇಳಿ ಇತ್ಯಾದಿ.ಈ ಪ್ರಶ್ನೆಗಳನ್ನು ಗಮನಿಸಿದರೆ ಅವರು ಎಷ್ಟು ದುರ್ಬಲ ಮನಸ್ಸಿನವರು ಅಂತ ಗೊತ್ತಾಗುತ್ತೆ. ಈ ಥರ ಪ್ರಶ್ನೆ ಕೇಳುವವರು ಗುರಿ ಇಲ್ಲದವರು, ರಿಸ್ಕ್ ತೆಗೆದುಕೊಳ್ಳದವರು ಅಂತ ಗೊತ್ತಾಗುತ್ತದೆ.ಇನ್ನೂ ಕೆಲ ಅಮ್ಮಂದಿರು ಸೇರಿದಾಗ ಮಾತನಾಡುವುದನ್ನು ಕೇಳಬೇಕು, ನೀಚಗುರು, ವಕ್ರಬುಧ, ಸಪ್ತಮಾಧಿಪತಿ ಚಂದ್ರ, ಬಾವದಲ್ಲಿ ರವಿ, ಲಗ್ನದಲ್ಲಿ ಶನಿ ಇತ್ಯಾದಿ ಇದೊಂದು ಉದಾಹರಣೆ ಅಷ್ಟೆ. ಇವರ‌್ಯಾರಿಗೂ ಜ್ಯೋತಿಷ್ಯ ವಿಜ್ಞಾನದ ಸ್ಪಷ್ಟ ಅರಿವಿರುವುದಿಲ್ಲ. ಇದೆಲ್ಲಾ ಗ್ರಹಗಳೂ ಸರಿಯಾದ ಮನೆಯಲ್ಲಿ ಇಲ್ಲದಿರುವುದರಿಂದ ಮಾರ್ಕ್ಸ್ ಕಡಿಮೆ ಬಂದಿದೆ ಅಂತ ಗುರೂಜಿ ಹೇಳಿದರು.

 

ಅದಕ್ಕೆ ಇನ್ನೊಬ್ಬರ ಸಾಥ್ ಹೌದು ನೋಡಿ ನನ್ನ ಮಗಳು ವಿಪರೀತ ಹಟ ಮಾಡ್ತಾಳೆ ಕೇಳಿದ್ದಕ್ಕೆ ಶನಿಕಾಟ ಅಂದ್ರು ಅಂತಾರೆ. ಒಟ್ಟಲ್ಲಿ ಇವರಿಗೆ ಮಕ್ಕಳ ತಪ್ಪನ್ನು ಸುಲಭವಾಗಿ ದಾಟಿಸಲಿಕ್ಕೆ ಈ ಗ್ರಹ, ನಕ್ಷತ್ರ ಬೇಕಾಗುತ್ತೆ. ಈಗಿವರು ಮಕ್ಕಳನ್ನು ಬೈಯಲಾರರು, ಗದರಲಾರರು, ಹೊಡಿಯೋದಂತೂ ದೂರ ಉಳೀತು. ಇನ್ನು ಮಕ್ಕಳ ಜೊತೆ ಕಳೆಯಬಹುದಾದ ಅಮೂಲ್ಯ ಕ್ಷಣಗಳನ್ನೆಲ್ಲಾ ಟಿ.ವಿ. ಮುಂದೆ ಕಳೆದುಬಿಡ್ತಾರೆ.ಹೀಗಾದರೆ ಗತಿ ಏನು? ಇದಕ್ಕೆಲ್ಲಿ ಬ್ರೇಕು?

ಎಲ್ಲಾ 12 ರಾಶಿಗಳ ಪ್ರಕಾರ, 27 ನಕ್ಷತ್ರಗಳ ಪ್ರಕಾರ ಆಗುವಂತಿದ್ದರೆ ವ್ಯಕ್ತಿ ವ್ಯಕ್ತಿಗಳಲ್ಲಿ ಭಿನ್ನತೆ ಯಾಕಿರುತ್ತಿತ್ತು. ಯಾಕೆ ಈ ಟಿ.ವಿ. ವಾಹಿನಿಯವರು ಈ ಜ್ಯೋತಿಷದ ಹಿಂದೆ ಬಿದ್ದಿದ್ದಾರೆ. ಈ ಜಾತಕ, ಭವಿಷ್ಯ ಇದೆಲ್ಲಾ ವೈಯಕ್ತಿಕ, ಖಾಸಗಿ ವಿಚಾರ. ಬೇಕಾದವರು ಅವರ ಜಾತಕ ತೆಗೆದುಕೊಂಡು ಹೋಗಿ ಅವರಿಚ್ಛೆಯಂತೆ ಬೇಕಾದವರಿಗೆ ತೋರಿಸಲಿ. ಯಾಕೆ ಈ ಟಿ.ವಿ. ವಾಹಿನಿಯವರು ಜ್ಯೋತಿಷಿಗಳಿಗೆ ಇಷ್ಟೊಂದು ಮನ್ನಣೆ ಕೊಡುತ್ತಿದ್ದಾರೆ?ನಮ್ಮ ಶಾಲಾ ದಿನಗಳಲ್ಲಿ ಒಬ್ಬ ಗಿಳಿ ಶಾಸ್ತ್ರದವನು ಶಾಲೆಯ ಹತ್ತಿರ ಮರದ ಕೆಳಗೆ ಕುಳಿತಿದ್ದ. ನಮ್ಮ ಹೆಡ್‌ಮಾಸ್ಟರ್ ಜೋಯಿಸ್ ಸರ್ ಅವನನ್ನು ಅಲ್ಲಿಂದ ಬೇರೆ ಕಡೆ ಕಳುಹಿಸಿ, ಪ್ರತೀ ತರಗತಿಯ ಬೋರ್ಡ್ ಮೇಲೆ “ಕಳೆದದ್ದು ಕಳೆದುಹೋಗಿದೆ, ಮುಂದಿನ ಭವಿಷ್ಯಕ್ಕೆ ಇಂದಿನ ದಿನವೇ ಶುಭದಿನ~ ಎಂಬ ಅರ್ಥ ಬರುವಂತೆ ಬರೆಸಿದ್ದರು.ಆವತ್ತು ನನಗೆ ಅದು ಸರಿಯಾಗಿ ಅರ್ಥವಾಗದಿದ್ದರೂ, ಮರೆತು ಹೋಗಿದ್ದ ಈ ವಿಷಯ ಈಗ ಮತ್ತೆ ಮತ್ತೆ ಜ್ಞಾಪಕಕ್ಕೆ ಬಂದು ನಮ್ಮ ಸರ್ ಬಗ್ಗೆ ಹೆಮ್ಮೆಪಡುವಂತಾಗುತ್ತದೆ. ದಿನಾ ಒಂದೊಂದು ಕ್ಷೇತ್ರದಲ್ಲಿ ಅದ್ವಿತೀಯ ಸಾಧಕರನ್ನು ಗುರುತಿಸಿ, ಒಂದೊಂದು ಗಂಟೆ ಕಾರ್ಯಕ್ರಮ ಮಾಡಿ ದಿನದ 24 ಗಂಟೆ ತೋರಿಸಿದರೂ  ಮುಗಿಯದಷ್ಟು ಸಾಧಕರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ.ಹಿರಿಯರಿಗೆ, ಮಕ್ಕಳಿಗೆ, ಮಧ್ಯವಯಸ್ಕರಿಗೆ ಎಲ್ಲರಿಗೂ ಮಾದರಿಯಾದ ಕಾರ್ಯಕ್ರಮ ಮಾಡುವುದು ಬಿಟ್ಟು ಇದೇನು ಎಡವಟ್ಟು? ಒಂದೋ ಆಸ್ತಿಕರಾಗಿ, ಇಲ್ಲ ನಾಸ್ತಿಕರಾಗಿ, ಇದೇನು ಈ ಎಡಬಿಡಂಗಿ ಸೋಗು. ಆಸ್ತಿಕರಾದರೆ ನಮ್ಮ ಪ್ರತಿ ಉಸಿರಾಟವೂ ಹೆಜ್ಜೆಯೂ, ಕ್ರಿಯೆಯೂ ದೈವಾಧೀನ? ನಮ್ಮೆಲ್ಲ ಕೆಲಸಗಳೂ ಆ ಪರಮಾತ್ಮನ ಇಚ್ಛೆಯಂತೆ ನಡೆಯುತ್ತದೆ ಅಂತ ದೇವರ ಮೇಲೆ ಭಾರ ಹಾಕಲಿ. ಇಲ್ಲವೇ ನಾಸ್ತಿಕರಾದರೆ ಸ್ವಂತ ಶಕ್ತಿ, ಸಾಮರ್ಥ್ಯ, ಪರಿಶ್ರಮದ ಮೂಲಕ ಮುಂದಡಿಯಿಡಲಿ.ಈ ಎಡಬಿಡಂಗಿ ಸೋಗು ನಿಲ್ಲದಿದ್ದರೆ ಜೀವನದಲ್ಲಿ ಏನೂ ಸಾಧಿಸಲಾಗುವುದಿಲ್ಲ. ಮಕ್ಕಳ ಮುಂದೆ ಈಗ ಏನು ಮಾದರಿ ಇದೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.