ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

7

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Published:
Updated:

ಬೆಂಗಳೂರು: ಕೆಂಗೇರಿ ಪೊಲೀಸ್ ಇನ್‌ಸ್ಪೆಕ್ಟರ್ ವಾಸುದೇವ್ ನಾಯಕ್ ಲಾರಿ ಮಾಲೀಕರೊಬ್ಬರಿಂದ 1.25 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಅಂಕೋಲಾದ ಗಣಪತಿ ನಾಯಕ್ ಮೂಲೆಮನೆ ಎಂಬಾತನನ್ನು ಎರಡೂವರೆ ತಿಂಗಳ ಬಳಿಕ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ದಾಖಲೆಗಳ ಕೊರತೆಯ ನೆಪದಲ್ಲಿ ತಮಿಳುನಾಡು ಮೂಲದ ಅರ್ಷದ್ ಷರೀಫ್ ಎಂಬುವರ ಎರಡು ಲಾರಿಗಳನ್ನು ವಾಸುದೇವ ನಾಯಕ್ ವಶಪಡಿಸಿಕೊಂಡಿದ್ದರು. ಲಾರಿಗಳ ಬಿಡುಗಡೆಗೆ ರೂ 1.25 ಲಕ್ಷ ಲಂಚ ನೀಡುವಂತೆ ಒತ್ತಾಯಿಸಿದ್ದರು. ನವೆಂಬರ್ 26ರಂದು ಇನ್‌ಸ್ಪೆಕ್ಟರ್ ಪರವಾಗಿ ಗಣಪತಿ ನಾಯಕ್ ಲಂಚದ ಹಣ ಪಡೆದು ಪರಾರಿಯಾಗಿದ್ದ.ಠಾಣೆಯಲ್ಲಿ ತಪಾಸಣೆ ವೇಳೆ ಜಿಂಕೆ ಚರ್ಮ ಮತ್ತು ಆನೆ ದಂತದ ತುಂಡುಗಳೂ ಪತ್ತೆಯಾಗಿದ್ದವು. ಬಳಿಕ ಗಣಪತಿ ನಾಯಕ್ ಬಗ್ಗೆ ವಿಚಾರಿಸತೊಡಗಿದಾಗ, ಆತ ಕಾರವಾರ ಸುತ್ತಮುತ್ತಲಿನಲ್ಲಿ ಕಾಡುಗಳ್ಳತನದಲ್ಲಿ ಭಾಗಿಯಾಗಿರುವುದು ತಿಳಿದಿತ್ತು. ಆರೋಪಿಯ ಶೋಧಕ್ಕಾಗಿ ಸ್ಥಳೀಯ ಪೊಲೀಸರ ನೆರವನ್ನು ಕೋರಲಾಗಿತ್ತು.ಖಚಿತ ಮಾಹಿತಿ ಮೇಲೆ ಆರೋಪಿಯನ್ನು ವಶಕ್ಕೆ ಪಡೆದಿದ್ದ ಅಂಕೋಲಾ ಪೊಲೀಸರು, ಬುಧವಾರ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದ್ದರು. ಪ್ರಾಥಮಿಕ ವಿಚಾರಣೆ ಬಳಿಕ ಬುಧವಾರವೇ ಆರೋಪಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶ ಹೊರಡಿಸಿದ್ದರು. ಗಣಪತಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry