ತಲೆಮಾರುಗಳ ಅಪನಂಬಿಕೆಗೆ ಹೊಸ ಭಾಷ್ಯ!

7

ತಲೆಮಾರುಗಳ ಅಪನಂಬಿಕೆಗೆ ಹೊಸ ಭಾಷ್ಯ!

Published:
Updated:
ತಲೆಮಾರುಗಳ ಅಪನಂಬಿಕೆಗೆ ಹೊಸ ಭಾಷ್ಯ!

ಧಾರವಾಡದಲ್ಲಿ ನಡೆದ (ಜ.25-27) ಸಾಹಿತ್ಯ ಸಂಭ್ರಮದಲ್ಲಿನ `ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು' ಎನ್ನುವ ಗೋಷ್ಠಿಯಲ್ಲಿ ಕನ್ನಡದ ಹಿರಿಯ ವಿದ್ವಾಂಸರಾದ ಜಿ.ಎಸ್. ಆಮೂರರು ಹೇಳಿದ್ದೆಂದು ಪ್ರಕಟವಾದ ಮಾತು- “ಇವರನ್ನು ನಾವು ಅನುಮಾನದಿಂದಲೇ ನೋಡಬೇಕಿದೆ.

ಕಾರ್ಪೊರೇಟ್ ಜಗತ್ತಿನ ಸಕಲ ಸವಲತ್ತು ಪಡೆದುಕೊಂಡು, ಆರ್ಥಿಕವಾಗಿ ಸಬಲರಾದ ಇವರು ಈಗ ಸಾಹಿತ್ಯದಲ್ಲಿ ಹೆಸರು ಮತ್ತು ಕೀರ್ತಿ ಗಳಿಸಲು ಸಾಹಿತ್ಯ ಕೃಷಿ ಮಾಡುತ್ತಿರುವಂತಿದೆ. ಪಾಪ ಪರಿಮಾರ್ಜನೆಗೆ ಸಾಹಿತ್ಯಕ್ಕೆ ಬಂದಿದ್ದಾರೋ ಹೇಗೆ? ಇವರ‌್ಯಾರೂ ನಮ್ಮ ಹಿಂದಿನ ಸಾಹಿತಿಗಳಂತೆ ಬಡತನ, ಕಷ್ಟ ಕಂಡವರಲ್ಲ.

ಇವರು ನಮ್ಮ ಪ್ರಾತಿನಿಧಿಕ ಸಾಹಿತಿಗಳಲ್ಲ”. ಇದಕ್ಕೆ ಪೂರಕವಾಗಿ ಚಂದ್ರಶೇಖರ ಪಾಟೀಲರು (ಚಂಪಾ) ಕೇಳಿದ ಪ್ರಶ್ನೆ- “ನೀವೆಲ್ಲ ಕಾರ್ಪೊರೇಟ್ ಜಗತ್ತಿನ ಪ್ರತಿಪಾದಕರೋ? ಅಥವಾ ವ್ಯವಸ್ಥೆಯನ್ನು ಧ್ವಂಸ ಮಾಡಿ ನಮ್ಮ ಕುತ್ತಿಗೆ ಕೊಯ್ಯುವ ಒಳಗಿನ ದ್ರೋಹಿಗಳೋ?”. ಈ ಮಾತುಗಳನ್ನು ಓದಿದ ಮೇಲೆ `ಕಾರ್ಪೊರೇಟ್ ಮತ್ತು ನಾನ್-ಕಾರ್ಪೊರೇಟ್' ಎನ್ನುವಲ್ಲಿನ ಗೊಂದಲವೇ ಈ ಮಾತುಗಳ ಮೂಲ ಪ್ರೇರಣೆ ಆಗಿರಬಹುದು ಎಂದು ನನಗನ್ನಿಸಿತು.

`ಕಾರ್ಪೊರೇಷನ್' ಎನ್ನುವ ಪದಕ್ಕೆ ನಿಘಂಟಿನಲ್ಲಿ `ಸಂಸ್ಥೆಯಾಗಿ ಏರ್ಪಟ್ಟ; ಒಂದು ವ್ಯಕ್ತಿಯಂತೆ ಕಾರ್ಯ ನಿರ್ವಹಿಸಲು ಅಧಿಕಾರ ಪಡೆದ ಸಂಸ್ಥೆ' ಎನ್ನುವ ಅರ್ಥಗಳಿವೆ. ವ್ಯವಹಾರದ ದೃಷ್ಟಿಯಲ್ಲಿ `ಒಂದು ಸಂಸ್ಥೆಯಾಗಿ ಕರ ಪಾವತಿ ಮಾಡುವ' ವ್ಯವಸ್ಥೆಯನ್ನು ಕಾರ್ಪೊರೇಷನ್ ಎನ್ನುವುದಾದರೂ, ಸಾಮಾಜಿಕ ದೃಷ್ಟಿಕೋನದಿಂದ ಅರ್ಥೈಸಲು `ಲಾಭ ನಷ್ಟಗಳ ಕಾಳಜಿಯಿಂದ ನಡೆಯುವ ಸಂಸ್ಥೆ' ಎನ್ನುವುದು ಹೆಚ್ಚು ಸಮಂಜಸವಾದೀತೇನೋ.

ಲಾಭ ನಷ್ಟಗಳ ಗರಜಿಲ್ಲದೆ ಕಾರ್ಪೊರೇಷನ್‌ನ ಮೇಲ್ಮಟ್ಟದ ವ್ಯಾಖ್ಯೆಯನ್ನೇ ಉಪಯೋಗಿಸಿಕೊಂಡಲ್ಲಿ ಮತ್ತು ಅದನ್ನು ್ಙಚ್ಞ ಜ್ಟಟ್ಠ ಟ್ಛ ಛ್ಟಿಟ್ಞ ್ಠ್ಞಜಿಠಿಛಿ ಟ್ಟ ್ಟಛಿಜಚ್ಟಛಿ  ್ಠ್ಞಜಿಠಿಛಿ ಜ್ಞಿ ಟ್ಞಛಿ ಚಿಟ' ಎನ್ನುವ ನಿಘಂಟಿನ ಅರ್ಥವನ್ನು ಬಳಸಿಕೊಂಡಲ್ಲಿ ವಿಶ್ವವಿದ್ಯಾಲಯಗಳು ಮತ್ತು ಶಾಲಾಕಾಲೇಜುಗಳೂ ಕಾರ್ಪೊರೇಷನ್‌ನ ವೃತ್ತದೊಳಗೇ ಬಂದಾವು.

ಈ ಅರ್ಥವ್ಯಾಪ್ತಿಯಲ್ಲಿ ಯಾವ ಸಂಸ್ಥೆಯೊಂದಿಗೂ ಹೊಟ್ಟೆಪಾಡಿಗಾಗಿ ಒಂದಾಗದೆ ಮನದಿಚ್ಛೆಯಂತೆ ಸಾಹಿತ್ಯ ಸೃಷ್ಟಿಸುವ ವ್ಯಕ್ತಿ ಮಾತ್ರ `ನಾನ್-ಕಾರ್ಪೊರೇಟ್' ಸಾಹಿತಿ ಎಂದೆನಿಸಿಕೊಂಡಾನು. ಶಿವರಾಮ ಕಾರಂತರು, ತರಾಸು ಮತ್ತು ತೇಜಸ್ವಿ ಆ ಬಗೆಯವರು. ಬಹುಶಃ, ಯಾವ ಸಂಸ್ಥೆಯ ಹಂಗೂ ಇಲ್ಲದೆ ಬಾಳು ನಡೆಸಿದ ಕಾರಣಕ್ಕೇ ಕಾರಂತರಿಂದ ನಿರ್ಭಿಡೆಯ ಮತ್ತು ಆತ್ಮವಿಶ್ವಾಸದ ಸಾಹಿತ್ಯ ರಚನೆ ಸಾಧ್ಯವಾದದ್ದೇನೋ.

ಜೊತೆಯಲ್ಲಿ, ಅವರ ನಿಷ್ಠುರ ಮಾತುಗಳಿಗೆ ಭಾವಮೂಲವೂ ಇದೇ ಆಗಿರಬಹುದೇನೋ.

ಆಮೂರರು `ಇವರನ್ನು ನಾವು ಅನುಮಾನದಿಂದಲೇ ನೋಡಬೇಕಿದೆ' ಎಂದೆನ್ನುವಾಗ ಅವರು ಕಾರ್ಪೊರೇಷನ್ನಿನ ಮೇಲ್ಮಟ್ಟದ ಅರ್ಥವನ್ನು ಗ್ರಹಿಕೆಯಲ್ಲಿಟ್ಟುಕೊಂಡಂತಿಲ್ಲ. ಏಕೆಂದರೆ, ಹಾಗೇನಾದರೂ ಆಗಿದ್ದರೆ ಅವರು ತಮ್ಮ ಸುತ್ತಲಿನ ನಾಲ್ಕು ಮಂದಿ ಸಾಹಿತಿಗಳಲ್ಲಿ ಕೊನೆಪಕ್ಷ ಮೂವರನ್ನು ಅನುಮಾನದಲ್ಲಿ ನೋಡಬೇಕಾಗುತ್ತದೆ.

ಸರಕಾರಿ ಬಸ್ಸಿನ ಒಬ್ಬ ಡ್ರೈವರ್ ಕೂಡ ಲಾಭ ನಷ್ಟಗಳ ಗ್ರಹಿಕೆಯಲ್ಲಿ ವ್ಯವಹಾರ ನಡೆಸುವ ಕೆಎಸ್‌ಆರ್‌ಟಿಸಿ ಎನ್ನುವ ಕಾರ್ಪೊರೇಟ್ ವ್ಯವಸ್ಥೆಯ ನೌಕರನಾಗಿರುತ್ತಾನೆ ಮತ್ತು ಕಾರ್ಪೊರೇಟ್ ಜಗತ್ತಿನ ಒಬ್ಬ ಒಳವ್ಯಕ್ತಿಯಾಗುತ್ತಾನೆ.

ಈ ಬಗೆಯ ಮುಕ್ತ ಸಾಧ್ಯತೆಯನ್ನು ತೆಗೆದುಹಾಕಿದರೆ ಆಮೂರರು ಮತ್ತು ಚಂಪಾ `ಕಾರ್ಪೊರೇಟ್ ಮಂದಿ'ಗಳೆಂದು ಭಾವಿಸಿರುವುದು ಇತ್ತೀಚಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಕೆಲಸವನ್ನು ಮಾಡುತ್ತಿರುವವರನ್ನು.

`ಆರ್ಥಿಕವಾಗಿ ಸಬಲರು' ಎಂದಾಗ ಈವತ್ತಿನ `ಹೈಟೆಕ್ ಉದ್ಯೋಗ' ಅವರ ಮನಸ್ಸಿನಲ್ಲಿರುವುದು ಹೆಚ್ಚು ಸಂಭವನೀಯ. ಹಾಗಾಗಿ, ಈ ಲೇಖನದ ಮುಂದಿನ ಬರವಣಿಗೆಯಲ್ಲಿ ವಿಶಾಲ ಅರ್ಥದ ಕಾರ್ಪೊರೇಟ್ ಅಥವ ಕಾರ್ಪೊರೇಷನ್ ಬದಲು `ವಾಣಿಜ್ಯ ಸಂಸ್ಥೆ' ಎನ್ನುವ ಕೊಂಚ ಸಂಕುಚಿತ ಅರ್ಥವ್ಯಾಪ್ತಿಯನ್ನು ಬಳಸುತ್ತೇನೆ.\

`ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು' ಎನ್ನುವ ಗೋಷ್ಠಿಯ ಶೀರ್ಷಿಕೆ ಗಮನಿಸಿದರೆ, ಎರಡು ಅಸಂಬಂಧಗಳನ್ನು ಪ್ರಯಾಸದಿಂದ ಎಳೆದುತಂದು `ಮತ್ತು' ಎನ್ನುವ ಕೊಂಡಿಯಿಂದ ಕೂಡಿಸುವ ಬಲವಂತದ ಪ್ರಯತ್ನ ಇದಾಗಿದೆ ಎನ್ನದೆ ವಿಧಿಯಿಲ್ಲ. ಸಾಹಿತ್ಯವನ್ನೂ ಒಳಗೊಂಡಂತೆ ಯಾವುದೇ ಕಲೆಯ ಸೃಷ್ಟಿಕ್ರಿಯೆಗೂ, ಲಾಭ ನಷ್ಟದ ಒಂದು ವಾಣಿಜ್ಯ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ.

ಸಾಹಿತ್ಯ ಅಥವಾ ಸಾಹಿತಿಯನ್ನು ಗುರುತಿಸುವುದು ಒಂದು ವಾಣಿಜ್ಯ ಸಂಸ್ಥೆಗೆ ಐಚ್ಛಿಕ ಸಾಮಾಜಿಕ ಜವಾಬ್ದಾರಿ ಆಗಬಹುದೇ ಹೊರತು ಅದರ ವ್ಯವಹಾರಗಳಲ್ಲಿ ಯಾವ ರೀತಿಯ ನೇರ ಸಂಬಂಧವನ್ನು ಹೊಂದಿರುವಂತದ್ದಲ್ಲ.

ಹೇಗೆ ಒಂದು ವಿಶ್ವವಿದ್ಯಾಲಯವು ತನ್ನ ನಿಜೋದ್ದೇಶಗಳಿಗಾಗಿ ವಾಣಿಜ್ಯವಲ್ಲದ ರೀತಿಯಲ್ಲಿ (ಲಾಭ ನಷ್ಟಗಳ ಸೋಂಕಿಲ್ಲದೆ) ಇರಬೇಕಾಗುತ್ತದೆಯೋ, ಹಾಗೆಯೇ ಒಂದು ವಾಣಿಜ್ಯ ವ್ಯವಹಾರಿಕೆಯ ಸಂಸ್ಥೆಗೆ ತನ್ನ ಮೂಲೋದ್ದೇಶಗಳಿಗಾಗಿ ವಾಣಿಜ್ಯೇತರ ವ್ಯವಹಾರಗಳಿಂದ ದೂರ ಉಳಿಯುವ ಅವಶ್ಯಕತೆಯು ಅಷ್ಟೇ ಇರುತ್ತದೆ.

 `we don't run a charity here'' ಎಂದು ವೃತ್ತಿಪರತೆಯನ್ನು ಆಗಾಗ ತನ್ನ ನೌಕರರಿಗೆ ಜ್ಞಾಪಿಸುವಂತ ಮಾತುಗಳು ಕಂಪನಿಗಳಲ್ಲಿ ಕೇಳಿಬರುತ್ತವೆ. ಸಾಹಿತ್ಯ ಅಥವಾ ಇನ್ನಾವುದೇ ಕಲೆಯೊಂದಿಗೆ ತನ್ನನ್ನು ತೊಡಗಿಸಿಕೊಳ್ಳುವುದು ಒಂದುಬಗೆಯ ಚಾರಿಟಿಯೇ ಅಲ್ಲಿ. ಜಗದ್ವಿಖ್ಯಾತ ಗೂಗಲ್ ಕಂಪನಿ ತನ್ನ ಕ್ಯಾಲಿಫೋರ್ನಿಯಾದ ಮುಖ್ಯ ಕಚೇರಿಯಲ್ಲಿ ನಡೆಸುವ `ಆಥರ್ಸ್‌ ಎಟ್ ಗೂಗಲ್' ಆ ಬಗೆಯದು. ಇಂಗ್ಲಿಷಿನ ಪ್ರಖ್ಯಾತ ಸಾಹಿತಿಗಳು ಅಲ್ಲಿಗೆ ಬಂದು ತಮ್ಮ ಸಾಹಿತ್ಯದ ಬಗ್ಗೆ, ಸೃಷ್ಟಿಕ್ರಿಯೆಯ ಬಗ್ಗೆ ಮಾತನಾಡಿ ಹೋಗುತ್ತಾರೆ.

ಗೂಗಲ್ ಅಂತಹ ಕಾರ್ಯಕ್ರಮಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಪ್ರಪಂಚಾದ್ಯಂತ ಸಾಹಿತ್ಯಾಸಕ್ತರೆಲ್ಲರಿಗೂ ದೊರೆಯುವಂತೆ ಮಾಡುತ್ತದೆ. ಗೂಗಲ್‌ನ ಸಾಮಾಜಿಕ ಹೊಣೆಗಾರಿಕೆಯ ಒಂದು ಕಾರ್ಯಕ್ರಮವಿದು. ಕಂಪನಿಯಲ್ಲಿ ಇದು ಇಷ್ಟಕ್ಕೆ ನಿಲ್ಲುತ್ತದೆ. ಒಂದು ವಿಶ್ವವಿದ್ಯಾಲಯಕ್ಕೆ ಸಾಹಿತ್ಯವು ಅಭ್ಯಾಸದ ವಸ್ತುವಾಗುವಂತೆ ಒಂದು ಕಂಪನಿಗೆ ಆಗಲು ಸಾಧ್ಯವಿಲ್ಲ.

ಇದು ಬರೀ ಇಂದಿನ ಕಂಪನಿಗಳ ವರ್ತನೆಯಲ್ಲ. ಸ್ವಾತಂತ್ರ್ಯಾನಂತರ ಬೃಹತ್ ಉದ್ದಿಮೆಗಳು ಭಾರತಾದ್ಯಂತ ಸ್ಥಾಪನೆಯಾಗಿ ಬೆಂಗಳೂರಿನಲ್ಲಿ ಎಚ್‌ಎಎಲ್, ಎಚ್‌ಎಂಟಿ, ಐಟಿಐ, ಬಿಇಎಲ್, ಬಿಇಎಂಎಲ್, ಬಿಎಚ್‌ಇಎಲ್‌ಗಳಂತಹ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಿ ಐವತ್ತು ವರ್ಷಗಳು ಮೀರಿದವು.

ಜೊತೆಯಲ್ಲಿ ರೈಲ್ವೇಸ್ ಮತ್ತು ಕರ್ನಾಟಕ ಸಾರಿಗೆ. ಇವೆಲ್ಲಾ ಲಾಭ ನಷ್ಟ ತೋರಿಸಬೇಕಾದ ವಾಣಿಜ್ಯ ಸಂಸ್ಥೆಗಳೇ. ಹೆಚ್ಚೆಂದರೆ, ಕನ್ನಡ ಸಂಘಗಳನ್ನು ಹುಟ್ಟು ಹಾಕಲು ಆಸ್ಪದ ಕೊಟ್ಟು ಅವು ನಡೆಸಬಹುದಾದ ಕಾರ್ಯಕ್ರಮಗಳಿಗೆ ಸಂಪನ್ಮೂಲಗಳನ್ನು ಒದಗಿಸಬಹುದಾದ ಒಲವನ್ನು ಬಿಟ್ಟರೆ ಸಾಹಿತ್ಯ ರಚನೆಯ ಕಾರ್ಯಕ್ಕೆ ಅವುಗಳಿಂದ ಗಣನೀಯವಾದದ್ದೇನೂ ಆಗಲಿಲ್ಲ.

ಅನೇಕ ಸಂದರ್ಭಗಳಲ್ಲಿ, ವ್ಯತಿರಿಕ್ತವಾಗಿ, ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುವ ವಿಚಾರದಲ್ಲಿ ಮತ್ತು ಭಾಷೆಯನ್ನೊಳಗೊಂಡಂತೆ ಪ್ರಾದೇಶಿಕತೆಯನ್ನು ಉಳಿಸಿಕೊಳ್ಳುವಲ್ಲಿ ಸ್ಥಳೀಯರಿಂದ ಅನೇಕ ಕಂಪನಿಗಳ ವಿರುದ್ಧ ಹೋರಾಟಗಳೇ ನಡೆಯಬೇಕಾಯಿತು. ಭಾಷೆಯೆಡೆಗಿನ ಈ ನಿಲುವು ಕೇವಲ ಸರಕಾರಿ ಸಂಸ್ಥೆಗಳಿಗೆ ಮತ್ತು ಕನ್ನಡಕ್ಕೆ ಮಾತ್ರವೆಂದು ಭಾವಿಸಬಾರದು.

ಪುಣೆಯ ಟಾಟಾ ಮೋಟಾರ್ಸ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಕಂಪನಿಯಲ್ಲಿ ಮರಾಠಿ ಪರಿಸ್ಥಿತಿ ಬೆಂಗಳೂರಿನ ಕಂಪನಿಗಳಲ್ಲಿ ಕನ್ನಡಕ್ಕಿಂತ ಉತ್ತಮವಾಗೇನೂ ಇರಲಿಲ್ಲ. ಆ ದೃಷ್ಟಿಯಲ್ಲಿ ಕಂಪನಿಗಳೆಲ್ಲ ಒಂದೇ.

ಭಾಷೆಯ ಈ ಪರಿಸ್ಥಿತಿಯಲ್ಲಿ ಉದ್ಯೋಗದಲ್ಲಿ ಸಾಹಿತ್ಯಪೂರಕ ವಾತಾವರಣವಿರುವ ಅದೃಷ್ಟ ಎಷ್ಟು ಮಂದಿ ಸಾಹಿತಿಗಳಿಗಿದೆ? ತಮ್ಮ ವೃತ್ತಿಗೂ ಪ್ರವೃತ್ತಿಗೂ ಸಂಬಂಧವಿಲ್ಲದಂತೆ ಸಾಹಿತ್ಯ ರಚಿಸಿದವರಿಲ್ಲವೇ? ಕೆ.ಎಸ್. ನರಸಿಂಹಸ್ವಾಮಿಯವರು ಹೌಸಿಂಗ್‌ಬೋರ್ಡಿನಲ್ಲಿ ಉದ್ಯೋಗಿಯಾಗಿದ್ದರು; ಪುತಿನ ಸೈನ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಸಾಹಿತ್ಯಪೂರಕ ವಾತಾವರಣದಲ್ಲಿ, ಮುಖ್ಯವಾಗಿ ಯೂನಿವರ್ಸಿಟಿಗಳಲ್ಲಿ, ಸಂಶೋಧನೆ ಮತ್ತು ಬರವಣಿಗೆಗೆ ಸಮಯ ಮತ್ತು ಸಂಪನ್ಮೂಲ ಒದಗಬಹುದು ಎನ್ನುವ ನನ್ನ ಅನುಭವರಹಿತ ಊಹೆಯನ್ನು ಬಿಟ್ಟರೆ ಸಾಹಿತ್ಯ ರಚನೆಯು ಹೊಟ್ಟೆಪಾಡಿನ ವೃತ್ತಿಯಿಂದ ಬೇರೆಯಾಗಿ ಕೇವಲ ಪ್ರವೃತ್ತಿಯ ಮೇಲೆ ಅವಲಂಬಿತವಾಗಿರುವಂತದ್ದು ಎನ್ನುವುದು ಗಮನಿಸಬೇಕಾದ ವಿಚಾರ.

ಬರೆಯಬೇಕೆಂಬ ಪ್ರೀತಿ ಮತ್ತು ಒತ್ತಡ ಆಂತರ್ಯದಿಂದ ಬರುತ್ತದೆಯೇ ವಿನಾ ಹೊರಗಿನಿಂದಲ್ಲ. ಕೆಲವು ಉದ್ಯೋಗಗಳು, ಅದರಲ್ಲೂ ಇತ್ತೀಚಿನ ಹೈಟೆಕ್ ಉದ್ಯೋಗ, ದಿನದ ಸಮಯ ಮತ್ತು ಚೈತನ್ಯವನ್ನು ಬಹಳಷ್ಟು ಎಳೆದುಕೊಂಡು ಬರವಣಿಗೆಯ ಅವಕಾಶಗಳನ್ನು ತಪ್ಪಿಸುತ್ತವೆ ಎನ್ನುವುದನ್ನು ಬಿಟ್ಟರೆ ಬರವಣಿಗೆಯನ್ನೇನು ಅವು ಬಹಿಷ್ಕರಿಸುವುದಿಲ್ಲ.

ನಿಮ್ಮ ಪ್ರವೃತ್ತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯವಿರುತ್ತದೆ ಅಲ್ಲಿ. ನಾನು ಕೆಲಸ ಮಾಡಿದ ಕಂಪನಿಗಳಲ್ಲ್ಲ್ಲೆಲೂ ನನ್ನ ಸಹನೌಕರರಿಗೆ ನಾನೊಬ್ಬ ಬರಹಗಾರನೆಂಬ ತಿಳಿವಳಿಕೆ ಮೂಡಲಿಲ್ಲ!

ಉದ್ಯೋಗ ಸನ್ನಿವೇಶದ ಅನೇಕ ಗುಣಧರ್ಮಗಳು ಬರಹಗಾರನ ಸೂಕ್ಷ್ಮ ಮನಸ್ಸನ್ನು ಹಿಂಸಿಸಬಹುದು. ವಾಣಿಜ್ಯ ಸಂಸ್ಥೆಯ ಪರಿಸರದಲ್ಲಿ ಕೆಲಸ ಮಾಡುವವನಿಗೆ ಅಲ್ಲಿಯ ಲಾಭಕೋರತನ, ಸರಕಾರಿ ನೌಕರಿಯಲ್ಲಿದ್ದು ಬರೆಯುವವನಿಗೆ ಅಲ್ಲಿಯ ಭ್ರಷ್ಟಾಚಾರ, ಯೂನಿವರ್ಸಿಟಿಯ ಬರಹಗಾರರಿಗೆ ಅಲ್ಲಿಯ ಲಾಬಿ ಸಂಸ್ಕೃತಿ ಮತ್ತು ಜಾತಿ ಸಂಬಂಧ ಸಮಸ್ಯೆಗಳು, ಪತ್ರಿಕೋದ್ಯಮ ಸಾಹಿತಿಗೆ ಬರವಣಿಗೆಯ ಒತ್ತಡ, ಹೀಗೆ.

ಇವು ಉದ್ಯೋಗವು ಬರಹಗಾರನಿಗೆ ಸೃಷ್ಟಿಸುವ ಅಡೆತಡೆಗಳು, ಮಾನಸಿಕ ಕ್ಲೇಷಗಳು. ಆದರೆ, ಇವೆಲ್ಲವನ್ನೂ ಮೀರಿ ಬರವಣಿಗೆಯ ಹಂಬಲವನ್ನು ಉಳಿಸಿಕೊಳ್ಳುವ ಲೇಖಕವರ್ಗವನ್ನು ನಾವು ಕಾಣುತ್ತೇವೆ ಎನ್ನುವುದು ಸಂತೋಷದ ವಿಚಾರ.

ಸಾಹಿತ್ಯ ಅನುಭವಜನ್ಯವಾದುದರಿಂದ ಲೇಖಕನಿಗೆ ತಾನು ಕಂಡ ಮತ್ತು ಅನುಭವಿಸಿದ ಪರಿಸರವನ್ನೇ ತನ್ನ ಸಾಹಿತ್ಯದ ವಸ್ತುವಾಗಿಸಿಕೊಳ್ಳುವ ಸಹಜ ಪ್ರವೃತ್ತಿಯಿದೆ. `ಶಿಕಾರಿ'ಯು ಚಿತ್ತಾಲರು ಖುದ್ದು ಕಂಡ ಪರಿಸರವಾಗಿಲ್ಲದಿದ್ದಲ್ಲಿ ಅದು ನಮ್ಮನ್ನು ಅಷ್ಟು ತೀವ್ರವಾಗಿ ಕಾಡುತ್ತಿರಲಿಲ್ಲ.

ವಸುಧೇಂದ್ರ ಕಾಲ್ ಸೆಂಟರಿನ ಉದ್ಯೋಗಿಯೊಬ್ಬಳ ಕಥೆ ಬರೆದಾಗ, ನಾಗರಾಜ ವಸ್ತಾರೆ ಒಬ್ಬ ಆರ್ಕಿಟೆಕ್ಟ್‌ನ ದಿನಚರಿಯನ್ನು ಕಥಾನಕವಾಗಿಸಿದಾಗ, ಡಾ. ಗುರುಪ್ರಸಾದ ಕಾಗಿನೆಲೆ ಹೊರದೇಶದಲ್ಲಿ ಕೆಲಸ ಮಾಡುವ ಡಾಕ್ಟರನೊಬ್ಬನ ಮಾನಸಿಕ ತುಮುಲಗಳನ್ನು ಪದಗಳಲ್ಲಿ ಸೆರೆ ಹಿಡಿದಾಗ, ಅವರು ಅದನ್ನು ಬರೀ ಶುದ್ಧ ಕಲ್ಪನೆಯ ಚಿತ್ರವಾಗಿಸದೆ ತಮ್ಮ ನೇರ ಜೀವನಾನುಭವಗಳನ್ನೂ ತುಂಬಿರುತ್ತಾರೆ. ಸಾಹಿತ್ಯವು ಕಲ್ಪನೆ ಮತ್ತು ವಾಸ್ತವಗಳ ಸಮ್ಮಿಶ್ರಣ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡರೆ ನಾವು ರಚಿಸುವ ಸಾಹಿತ್ಯದಲ್ಲಿ ಬದುಕುವ ಪರಿಸರದ ಪ್ರಾಮುಖ್ಯತೆಯನ್ನು ಕಾಣಬಹುದು.

ಸಾಹಿತ್ಯದ ಮೂಲೋದ್ದೇಶವೇ ಭಾಷೆಯ ತಂತಿಯಲ್ಲಿ ಅನುಭವ ಮತ್ತು ಸಂವೇದನೆಗಳನ್ನು ಪ್ರವಹಿಸುವುದಾದರೆ ಆಧುನಿಕ ತಂತ್ರಜ್ಞಾನ ಮತ್ತು ವಾಣಿಜ್ಯ ಸಂಸ್ಥೆಗಳನ್ನು ತಮ್ಮ ಹೊಟ್ಟೆಪಾಡಿಗೆ ನಂಬಿಕೊಂಡ ಲೇಖಕರು ಆ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದಾರಲ್ಲಾ? ನಾವು ಕಂಡರಿಯದ ಬದುಕಿನ ಮುಖಗಳನ್ನು ಮತ್ತು ವಿಚಾರ ಸಂಗತಿಗಳನ್ನು ಅದರಲ್ಲಿಯೇ ತೊಡಗಿಕೊಂಡವರು ತೋರಿಸುವುದೂ ನಮ್ಮ ಸಾಹಿತ್ಯಕ್ಕೆ ಮುಖ್ಯವಾಗುವುದಿಲ್ಲವೇ? ಕಟ್ಟಡ ನಿರ್ಮಾಣ ಮತ್ತು ಸಾಹಿತ್ಯ ಎರಡರಲ್ಲೂ ಸಮಾನ ಆಸಕ್ತಿಯಿದ್ದು ಅವೆರಡರ ನಡುವಿನ ಸೇತುವೆಯಂತಿರುವ ವಸ್ತಾರೆಯವರ ಅನುಭವ ಕನ್ನಡ ಸಾಹಿತ್ಯಕ್ಕೆ ಬೇಕಾದುದು ಎಂದು ಅನ್ನಿಸುವುದೇ ಇಲ್ಲವೇ? ಅಗ್ನಿ ಶ್ರಿಧರರಂತೆ ಭೂಗತ ಜಗತ್ತನ್ನು ಸಾಹಿತ್ಯಕ್ಕೆ ತರಲು ಅಂತಹ ಜಗತ್ತನ್ನು ಕಾಣದವರಿಗೆ ಸಾಧ್ಯವೇ? ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತಾನು ಕಾಣದ ಮತ್ತು ಅನುಭವಿಸದ ಒಬ್ಬ ಕಾಲೇಜು ಪ್ರಾಧ್ಯಾಪಕನ ಲೋಕವನ್ನು ಹೇಗೆ ಸಮರ್ಥವಾಗಿ ಸಾಹಿತ್ಯಕ್ಕೆ ತರಲಾರನೋ ಹಾಗೆಯೇ ಒಬ್ಬ ಕಾಲೇಜು ಪ್ರಾಧ್ಯಾಪಕ ತಾನು ನೋಡದ ಸಾಫ್ಟ್‌ವೇರ್ ಎಂಜಿನಿಯರನ ಲೋಕದ ಸೂಕ್ಷ್ಮಗಳನ್ನು ಸಾಹಿತ್ಯಕ್ಕೆ ತರಲಾರ.

ತಾವು ಕಂಡ ಜಗತ್ತನ್ನು ಬರವಣಿಗೆಯಲ್ಲಿ ದಾಟಿಸುತ್ತಿರುವ ಲೇಖಕರ ಸಾಹಿತ್ಯವನ್ನು ವಿಮರ್ಶೆಗೆ ಒಳಪಡಿಸಬಹುದೇ ಹೊರತು ಒಬ್ಬ ಲೇಖಕನಾಗಿ ಆತನ ಸಮಗ್ರತೆಯನ್ನೇ (integrity) ಪ್ರಶ್ನಿಸಲಾಗುತ್ತದೆಯೇ? ಹಾಗೆ ಪ್ರಶ್ನಿಸುವುದು ಅವನ ಬರಹಗಾರ ವ್ಯಕ್ತಿತ್ವವನ್ನೇ ಅವಮಾನಿಸಿದಂತಾಗುವುದಿಲ್ಲವೇ?

ಚಂಪಾರ ಪ್ರಶ್ನೆ `ಕಾರ್ಪೊರೇಟ್ ಕೆಲಸದ ಸಾಹಿತಿಗಳು ಕಾರ್ಪೊರೇಟ್ ಪ್ರತಿಪಾದಕರೇ?' ಎನ್ನುವುದು ಅಷ್ಟು ಸಮಂಜಸ ಪ್ರಶ್ನೆಯಾಗಿ ನನಗೆ ಕಾಣುತ್ತಿಲ್ಲ. ಒಬ್ಬ ಸರಕಾರಿ ಉದ್ಯೋಗಿ ಸಾಹಿತ್ಯವನ್ನು ಬರೆದರೆ ಅದು ಅಂದಿನ ಸರಕಾರದ ನೀತಿ ನಿಯಮಗಳನ್ನು ಪ್ರತಿಪಾದಿಸುವ ಬರವಣಿಗೆಯೇ ಆಗಿರುತ್ತದೆಯೇ? ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುವ ಕವಿ ಬರೆಯುವ ಕಾವ್ಯ ಬಿಎಸ್‌ಎನ್‌ಎಲ್ ಮತ್ತು ಅನ್ನದಾತ ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಸಾಹಿತ್ಯವಾಗಿರುತ್ತದೆಯೇ? ಸೃಜನಾತ್ಮಕ ಸಾಹಿತ್ಯ ವ್ಯಕ್ತಿಯ ಅಂತರಂಗದಿಂದ ಹುಟ್ಟುವಂತಹದ್ದು.

ರಸಾನುಭವಿ ಕವಿಗೆ ಜಗದ ಅನುಭವಗಳು ಮತ್ತು ಮನುಷ್ಯ ವರ್ತನೆಗಳು ಮುಖ್ಯವಾಗುತ್ತವೆಯೇ ಹೊರತು ಯಾವುದೋ ಸಿದ್ಧಾಂತಕ್ಕೆ ಲಾಬಿ ನಡೆಸುವುದಲ್ಲ. ಲಾಬಿ ನಡೆಸುವ ಸಾಹಿತ್ಯ ಮತ್ತು ಸಾಹಿತಿಗಳೇ ಬೇರೆ ಇದ್ದಾರೆ ಮತ್ತು ಅವರು ಕಾರ್ಪೊರೇಟ್ ಅಥವಾ ನಾನ್-ಕಾರ್ಪೊರೇಟ್ ಭೇದಭಾವವೆಣಿಸದೆ ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ.

ಚಂಪಾರವರಿಗೆ ನಾನು ಹೇಳುವುದೆಂದರೆ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡು ಪ್ರವೃತ್ತಿಯಲ್ಲಿ ಕಲಾವಿದರಾದವರು ಕೂಡ ಇತರ ಕಲಾವಿದರಂತೆ ಮಾನವ ಸಂಬಂಧಗಳಲ್ಲಿ ಮತ್ತು ಸತ್ಯಾನ್ವೇಷಣೆಯಲ್ಲಿ ಆಸಕ್ತಿಯಿಟ್ಟು ತಮ್ಮ ಚಿಂತನೆಗಳನ್ನು ಅಭಿವ್ಯಕ್ತಗೊಳಿಸಲು ಕಲಾಮಾಧ್ಯಮವನ್ನು ಆರಿಸಿಕೊಂಡವರೇ ಹೊರತು ಕಾರ್ಪೊರೇಟ್ ತತ್ವಗಳನ್ನು ಪ್ರತಿಪಾದಿಸಲಿಲ್ಲ.

ಹಾಗೆ ಪ್ರತಿಪಾದಿಸಲು ಬರುವುದೇ ಆಗಿದ್ದಲ್ಲಿ ಸಂವೇದನಾರಹಿತವಾದ ಆ ಕಾರ್ಯಕ್ಕೆ ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚು ಪರಿಣಾಮಕಾರಿಯಾದ ಮತ್ತು ಆಧುನಿಕ ಯುಗದಲ್ಲಿ ಬಹುಜನರನ್ನು ತ್ವರಿತವಾಗಿ ತಲುಪಬಹುದಾದ ಭಾಷೆ ಎಂದು ದಿನಪೂರ್ತೀ ಕಂಪನಿಯ ವಾತಾವರಣದಲ್ಲೇ ಕಳೆಯುವ ಅವರಿಗೆ ಖಂಡಿತಕ್ಕೂ ಗೊತ್ತಿರುತ್ತದೆ.

ಖಾಸಗಿ ಕಂಪನಿಗಳಲ್ಲಿ ಹೈಟೆಕ್ ಕೆಲಸ ಮಾಡುವ ಎಂಜಿನಿಯರ್‌ಗಳು ಬಡತನವನ್ನು ಕಾಣದವರು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಒಬ್ಬ ಕಾಲೇಜು ಪ್ರೊಫೆಸರ್ ಕಂಡಷ್ಟೇ ಬಡತನವನ್ನು ಒಬ್ಬ ಎಂಜಿನಿಯರನೂ ಕಂಡಿರುತ್ತಾನೆ. ವಿವೇಕ ಶಾನಭಾಗರ ಕಾದಂಬರಿ `ಒಂದು ಬದಿ ಕಡಲು' ಉತ್ತರ ಕನ್ನಡದ ಪರಿಸರದಲ್ಲಿ ಒಂದು ಸಾಧಾರಣ ಕುಟುಂಬದ ಸಾಂಸಾರಿಕ ಕಥೆ. ವಸುಧೇಂದ್ರರ ಕಾದಂಬರಿ `ಹರಿಚಿತ್ತ ಸತ್ಯ'ದಲ್ಲಿ ಬಳ್ಳಾರಿಯ ಸುತ್ತಮುತ್ತಲದ ಗ್ರಾಮೀಣ ಸನ್ನಿವೇಶಗಳಲ್ಲಿ ಬಡತನದ ವಾತಾವರಣದ ಸಾಮಾನ್ಯ ಸಂಸಾರ ಒಂದರಲ್ಲಿ ಕಥೆ ಘಟಿಸುತ್ತದೆ.

ಇವರಿಬ್ಬರೂ ಬೆಂಗಳೂರಿನಲ್ಲಿ ತಂತ್ರಜ್ಞಾನ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರು. ಈ ಕೃತಿಗಳಲ್ಲ್ಲೆಲೂ ಅವರು ತಮ್ಮ ಕಾರ್ಪೊರೇಟ್ ಹಿನ್ನಲೆಯನ್ನು ಕತ್ತಿಯಂತೆ ಬಳಸಿ ಸಮಾಜವನ್ನು `ಧ್ವಂಸ' ಮಾಡಲು ಹೋಗಿಲ್ಲ? ಅಷ್ಟಕ್ಕೂ, ಬಡತನವನ್ನು ಕಾಣದ ಲೇಖಕನೊಬ್ಬ ತಾನು ಕಂಡ ಶ್ರಿಮಂತ ಪರಿಸರವನ್ನು ಕಥೆಯಾಗಿಸಿದರೆ ಅದರಲ್ಲಿ ತೊಂದರೆ ಏನು ಬಂತು? ಸ್ವತಃ ದೊಡ್ಡ ಸ್ಥಿತಿವಂತರಾಗಿದ್ದ ಟಾಲ್‌ಸ್ಟಾಯ್ `ಅನ್ನಾ ಕರೇನಿನಾ'ದಲ್ಲಿ ಬರೆದಿರುವುದು ಶ್ರಿಮಂತ ಕುಟುಂಬಗಳ ಕಥೆಯನ್ನೇ ಅಲ್ಲವೇ? ಬರೆದು ನೂರೆಪ್ಪತ್ತೈದು ವರ್ಷಗಳ ನಂತರವೂ ಅದು ಪ್ರಪಂಚದ ಅತ್ಯುತ್ತಮ ಕಾದಂಬರಿಗಳಲ್ಲೊಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವಾಗ ಬಡತನ ಸಿರಿತನದ ಪ್ರಶ್ನೆ ಎಲ್ಲಿ ಬಂತು? ಟಾಲ್‌ಸ್ಟಾಯ್‌ರಿಗೆ ಹೇಳಿದ ಮಾತು ನಮ್ಮ ಕುವೆಂಪುರವರಿಗೂ ಅನ್ವಯವಾಗುತ್ತದೆ.

ಒಬ್ಬ ಸೂಕ್ಷ್ಮ ದೃಷ್ಟಿಯ ಲೇಖಕ ತನ್ನ ಪರಿಸರವನ್ನು ಮೀರಿ ಮಾನವೀಯ ಮೌಲ್ಯಗಳನ್ನು ಮತ್ತು ಭಾವನೆಗಳನ್ನು ಗುರುತಿಸಿಕೊಳ್ಳುತ್ತಾನೆ.

ಸಾಮಾಜಿಕ ಜವಾಬ್ದಾರಿಗಳಿಲ್ಲದ ಕಂಪನಿಗಳಿಂದ ನಮಗೆ ಒಳ್ಳೆಯದಾಗುವುದಕ್ಕಿಂತ ಹೆಚ್ಚಾಗಿ ಕೆಟ್ಟದಾಗುತ್ತದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಆದರೆ, ಹಾಗೆ ಸಾಮಾಜಿಕ ಜವಾಬ್ದಾರಿಯಿಲ್ಲದ ಕಂಪನಿಗಳು ಬರೀ ಇಂದಿನ ಹೈಟೆಕ್ ಕಂಪನಿಗಳಲ್ಲ. ಸಾರಿಗೆ ಉದ್ಯಮಗಳಿಂದ ಹಿಡಿದು, ಪಬ್ಲಿಕ್ ಸೆಕ್ಟರ್ ಕಂಪನಿಗಳು, ನ್ಯೂಸ್‌ಪೇಪರುಗಳು, ವಸ್ತು ಉತ್ಪಾದನಾ ಕಂಪನಿಗಳು, ಕೊನೆಗೆ ಕಂಪನಿಗಳಂತೆ ಕಾರ್ಯ ನಿರ್ವಹಿಸುವ ಸರಕಾರಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಆಗಾಗ ವಿಫಲವಾಗುತ್ತ ಈ ಸಾಲಿನಲ್ಲಿ ನಿಲ್ಲುತ್ತವೆ.

ಸಾಮಾಜಿಕವಾಗಿ ಈ ಕಂಪನಿಗಳು ಹೇಗೆ ವ್ಯವಹರಿಸಬೇಕೆಂದು ನಿರ್ಧರಿಸಲಾಗದ ಗೊಂದಲದಲ್ಲಿ ಸಮಾಜವಿರುವಾಗ ಹೊಟ್ಟೆಪಾಡಿಗಾಗಿ ಅಲ್ಲಿ ಕೆಲಸ ಮಾಡುವವರನ್ನು `ದ್ರೋಹಿ'ಗಳೆಂದು ಕರೆದು ಅವಮಾನ ಮಾಡುವುದರಿಂದ ಏನನ್ನು ಸಾಧಿಸಿದಂತಾಯಿತು? ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ಹೋರಾಟ ಬ್ರಿಟೀಷರ ವಿರುದ್ಧವಿದ್ದಾಗ ಸರಕಾರಿ ಸೇವೆ ಸಲ್ಲಿಸುತ್ತಿದ್ದವರೆಲ್ಲ ದೇಶದ್ರೋಹಿಗಳೇ? ಇಂದಿನ ಶಿಕ್ಷಣ ಕ್ಷೇತ್ರದ ಅನೇಕ ವೈಫಲ್ಯಗಳಿಗೆ ಅದೇ ಕ್ಷೇತ್ರದಲ್ಲಿ ದುಡಿದವರನ್ನು ದೂಷಿಸಲಾಗುತ್ತದೆಯೇ? ಅಷ್ಟಕ್ಕೂ, ಈ ಪರಿಸ್ಥಿತಿಯನ್ನು ತಂದಿಟ್ಟುಕೊಂಡವರು ಯಾರು ಎಂದು ಕ್ಷಣಕಾಲ ಯೋಚಿಸಿದರೆ ಕೇವಲ ಇಂದಿನ ಯುವ ಜನಾಂಗವನ್ನು ಮಾತ್ರ ಟೀಕಿಸುವುದು ಹೇಗೆ ತಪ್ಪು ಎನ್ನುವ ಅರಿವಾಗುತ್ತದೆ.

ಎಪ್ಪತ್ತರ ದಶಕದಲ್ಲಿ, ವಿದ್ಯಾಭ್ಯಾಸವೆಂದರೆ ವಿಜ್ಞಾನ ಮಾತ್ರ ಎನ್ನುವ ಭ್ರಾಂತಿ ಸಮಾಜವನ್ನು ಹಿಡಿದಾಗ ಅದನ್ನು ವಿರೋಧಿಸುವ ಮತ್ತು ಜನಕ್ಕೆ ಸರಿಮಾರ್ಗವನ್ನು ತೋರುವ ಯಾವ ಜನಾಂದೋಳನ ನಡೆಯಿತು? ತ್ಲ್ಲಾಲೂಕು ತ್ಲ್ಲಾಲೂಕುಗಳಲ್ಲೂ ಎಂಜಿನಿಯರಿಂಗ್ ಕಾಲೇಜುಗಳಾಗಬೇಕು ಎಂದು ರಾಮಕೃಷ್ಣ ಹೆಗಡೆಯವರು ಹೇಳಿದಾಗ ಅದೇ ಅಭಿವೃದ್ಧಿಯೆಂದು ಮೇಜು ಕುಟ್ಟಿ ಸ್ವಾಗತಿಸಿದವರು ಚಂಪಾ ಅವರ ವಾರಿಗೆಯವರೇ ಅಲ್ಲವೇ?

ನಲ್ವತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಇಪ್ಪತ್ತು ಎಂಜಿನಿಯರಿಂಗ್ ಕಾಲೇಜುಗಳಿಂದ ಇನ್ನೂರಾದಾಗ `ಇಷ್ಟು ಎಂಜಿನಿಯರುಗಳನ್ನು ಉತ್ಪಾದಿಸಿ ಏನು ಮಾಡುತ್ತೇವೆ? ಉದ್ಯೋಗಕ್ಕಾಗಿ ದೇಶ ವಿದೇಶಗಳ ವಾಣಿಜ್ಯ ಕಂಪನಿಗಳನ್ನು ಆಶ್ರಯಿಸಲೇಬೇಕಾಗುತ್ತದಲ್ಲವೇ?' ಎನ್ನುವ `ಕಾರ್ಪೊರೇಟ್ ಧ್ವಂಸದ' ಮುನ್ಸೂಚನೆ ಯಾರಿಗೂ ಸಿಗಲೇ ಇಲ್ಲವೇ?

ಬರೀ ವಿಜ್ಞಾನ ಮತ್ತು ತಂತ್ರಜ್ಞಾನದ ಓದು ಸಾಹಿತ್ಯವೂ ಸೇರಿದಂತೆ ಉಳಿದ ಮಾನವೀಯ ಚಿಂತನೆಗಳ ಅಭ್ಯಾಸ ಕ್ಷೇತ್ರಗಳನ್ನು ಮುಂದೆ ಭಣಗುಟ್ಟಿಸಬಹುದು ಎನ್ನುವ ಯೋಚನೆಯು ಬರಲೇಯಿಲ್ಲವೇ? ಆಗೆಂದೂ ಬರದ ಅನುಮಾನ ಮತ್ತು ಅಪನಂಬಿಕೆಗಳು ಈಗ ಅದೇ ಎಂಜಿನಿಯರ್ ತಳಿಗಳಲ್ಲಿ ಕೆಲವು ಮುಖವೆತ್ತಿ ನಾವು ಸಾಹಿತ್ಯವನ್ನೂ ಬರೆಯುತ್ತೇವೆ ಎಂದಾಗ ಏಕೆ ನಿಮ್ಮನ್ನು ಕಾಡುತ್ತಿವೆ?

ಮಾತಿನಲ್ಲಷ್ಟೇ ಗಾಂಧಿಯನ್ನು ತೋರಿದಿರಿ ನೀವು. ಆದರೆ ನಿಮ್ಮ ಸಂತಾನಕ್ಕೆ ಗಾಂಧಿಯ ಚಕ್ರವನ್ನು ಮುಟ್ಟಗೊಡಲೇ ಇಲ್ಲ ನೀವು. ಈಗ ದಿಢೀರನೆ ಒಂದು ಭಾನುವಾರ ಮಧ್ಯಾಹ್ನ ಧಾರವಾಡದಲ್ಲಿ ಕಣ್ಣುಜ್ಜಿಕೊಂಡು ಆತಂಕದಲ್ಲಿ, `ನೀವೇನು ನಮ್ಮಂದಿಗೆ ಬದುಕಲು ಬಂದವರೋ ನಮ್ಮ ಕುತ್ತಿಗೆ ಕುಯ್ಯಲು ಬಂದ ದ್ರೋಹಿಗಳೋ' ಎಂದರೆ ನಾವೇನು ಪ್ರತಿಯಾಗಿ ಹೇಳಬೇಕು ಹೇಳಿ? ಅನುಮಾನದ ರಸ್ತೆಗಳು ಸಾಮಾನ್ಯವಾಗಿ ದ್ವಿಮುಖ ಸಂಚಾರಿ ಎನ್ನುವುದನ್ನು ಜ್ಞಾಪಿಸಿಕೊಂಡರೆ ಇದು ತಲೆಮಾರುಗಳ ನಡುವಿನ ಅಪನಂಬಿಕೆಯಾಗುತ್ತದೆ.

ನಾವಿಲ್ಲಿ ಸಾಹಿತ್ಯದ ಚರ್ಚೆಯಲ್ಲಿ ಈ ಮಾತನಾಡುತ್ತಿದ್ದರೂ, ಈ ಅನುಮಾನದ ದೃಷ್ಟಿ ಬರೀ ಸಾಹಿತ್ಯಕ್ಕೆ ಸೀಮಿತವಾಗದೆ ಬಹಳಷ್ಟು ಮೌಲ್ಯಗಳ ನಡುವಿನ ಕಂದಕವಾಗುತ್ತದೆ.

ಈಗಾಗಲೇ ಎಡ ಬಲ ಎಂದು ಸಾಹಿತ್ಯವನ್ನು ಒಡೆದು ಲೇಖಕರನ್ನು ವಿಭಾಗಿಸಿ ಅನುಭವಿಸಿದ್ದೇ ಸಾಕಾಗಿದೆ. ಇನ್ನು, ಕಾರ್ಪೊರೇಟ್ ಮತ್ತು ನಾನ್-ಕಾರ್ಪೊರೇಟ್ ಸಾಹಿತ್ಯವೆಂದು ಮತ್ತೊಮ್ಮೆ ಒಡೆದು ನೋಡುವ ಆಟ ಬೇಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry