ಭಾನುವಾರ, ನವೆಂಬರ್ 17, 2019
23 °C

ತಳ್ಳುಗಾಡಿಯಲ್ಲಿ ಮಜ್ಜಿಗೆ, ಅಂಬಲಿ

Published:
Updated:
ತಳ್ಳುಗಾಡಿಯಲ್ಲಿ ಮಜ್ಜಿಗೆ, ಅಂಬಲಿ

ಇತ್ತೀಚೆಗೆ ಅಂಗಡಿ ಬೀದಿಯಲ್ಲಿ ನಿಂತಿದ್ದ ಕೆಂಪು ಬಟ್ಟೆ ಹೊದಿಸಿದ್ದ ಎರಡು ಮಣ್ಣಿನ ಗಡಿಗೆ ಮತ್ತು ಬಣ್ಣ ಬಣ್ಣದ ಪ್ಲಾಸ್ಟಿಕ್ ಬಿಂದಿಗೆಗಳಿದ್ದ ತಳ್ಳುಗಾಡಿಯೊಂದು ನನ್ನನ್ನು ಆಕರ್ಷಿಸಿತು. ಹತ್ತಿರ ಹೋಗಿ ಗಾಡಿಯ ಮಾಲೀಕಳ ಜೊತೆ ಮಾತನಾಡಿದಾಗ ದೊರೆತ ಮಾಹಿತಿ ಆಸಕ್ತಿಕರವಾಗಿತ್ತು.ಗಾಡಿಯಲ್ಲಿನ ಒಂದು ಗಡಿಗೆಯಲ್ಲಿ ಕೊತ್ತಂಬರಿ ಸೊಪ್ಪು, ಈರುಳ್ಳಿ ಮತು ಒಗ್ಗರಣೆಯನ್ನು ಹಾಕಿದ್ದ ಮಜ್ಜಿಗೆಯಿದ್ದರೆ, ಇನ್ನೊಂದು ಗಡಿಗೆಯಲ್ಲಿ ರಾಗಿ, ಸಜ್ಜೆ ಮತ್ತು ಜೋಳವನ್ನು ಬೆರೆಸಿ ಮಾಡಿದ ಹಿಟ್ಟಿನ ಅಂಬಲಿ ಅರ್ಥಾತ್ ಗಂಜಿ ಇತ್ತು.ಪ್ಲಾಸ್ಟಿಕ್ ಬಿಂದಿಗೆ ಮತ್ತು ಬಾಟಲಿಗಳಲ್ಲಿ ಶುದ್ಧವಾದ ನೀರನ್ನು ತುಂಬಿಸಿಟ್ಟಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬೋರಲಾಗಿ ಇಟ್ಟಿದ್ದ ಫಳಫಳ ಹೊಳೆಯುವ ಸ್ಟೀಲಿನ ಪುಟ್ಟಪುಟ್ಟ ತಪ್ಪಲೆಗಳು ಗಮನ ಸೆಳೆದವು. ಒಂದು ಪುಟ್ಟ ತಪ್ಪಲೆ ಮಜ್ಜಿಗೆಗೆ ಹತ್ತು ರೂಪಾಯಿ. ಮಜ್ಜಿಗೆ ಮತ್ತು ಅಂಬಲಿಯನ್ನು ಬೇರೆ ಬೇರೆಯಾಗಿ ಅಥವಾ ಎರಡನ್ನೂ ಬೆರೆಸಿಯಾದರೂ ಕುಡಿಯಬಹುದು. ಮುಚ್ಚಿಟ್ಟಿರುವ ಗಡಿಗೆಯಿಂದ ಮಜ್ಜಿಗೆ/ಅಂಬಲಿಯನ್ನು ಸೌಟಿನಿಂದ ತಪ್ಪಲೆಗೆ ತುಂಬಿಸಿಕೊಡುತ್ತಾರೆ.ಪ್ರತಿಯೊಬ್ಬರೂ ತಪ್ಪಲೆಯನ್ನು ಎಂಜಲು ಮಾಡದೆ ಮೇಲಿಂದ ಬಾಯಿಗೆ ಸುರಿದುಕೊಳ್ಳುವುದು ಕಡ್ಡಾಯ. ಬಳಸಿದ ತಪ್ಪಲೆಯನ್ನು ನೀರಿನಲ್ಲಿ ತೊಳೆದು ಮತ್ತೆ ಬೋರಲು ಹಾಕಿಡಲಾಗುತ್ತದೆ.ಮಜ್ಜಿಗೆ ಮತ್ತು ಅಂಬಲಿಗಳ ಜೊತೆ ನೆಂಚಿಕೊಳ್ಳಲು ಕರಿದ ಮೆಣಸಿನಕಾಯಿ ಮತ್ತು ಹುರಿದ ಮೂಲಂಗಿ ಹೋಳುಗಳೂ ಉಂಟು!  ಪಾನೀಯಗಳನ್ನು ಗಡಿಗೆಗೆ ಒದ್ದೆ ಬಟ್ಟೆಯನ್ನು ಹೊದೆಸುವ ಮೂಲಕ ತಂಪಾಗಿಡಲಾಗುತ್ತದೆ.ಕೃತಕ ಪರಿಮಳ, ಬಣ್ಣ, ಸಕ್ಕರೆ, ಕ್ರಿಮಿನಾಶಕ ಮುಂತಾದ ಯಾವುದೇ ಹಾನಿಕಾರಕ ವಸ್ತುಗಳಿಲ್ಲದ ಬಹುಧಾನ್ಯಗಳಿಂದ ಮಾಡಿರುವ ಅಂಬಲಿ ಮತ್ತು ತಣ್ಣನೆಯ ಮಜ್ಜಿಗೆ ಸಿಲಿಕಾನ್ ಸಿಟಿಯಲ್ಲಿ ದೊರೆಯುವ ಅಪ್ಪಟ ದೇಸಿ ಹಾಗೂ ಆರೋಗ್ಯದಾಯಕ ಪಾನೀಯಗಳಾಗಿವೆ.  

 

ಪ್ರತಿಕ್ರಿಯಿಸಿ (+)