ತವರಿಗೆ ಬಂದಿಳಿದ ವಿಶ್ವ ಚೆಸ್ ಚಾಂಪಿಯನ್: ವಿಶ್ವನಾಥನ್ ಆನಂದ್‌ಗೆ ಅದ್ದೂರಿ ಸ್ವಾಗತ

7

ತವರಿಗೆ ಬಂದಿಳಿದ ವಿಶ್ವ ಚೆಸ್ ಚಾಂಪಿಯನ್: ವಿಶ್ವನಾಥನ್ ಆನಂದ್‌ಗೆ ಅದ್ದೂರಿ ಸ್ವಾಗತ

Published:
Updated:
ತವರಿಗೆ ಬಂದಿಳಿದ ವಿಶ್ವ ಚೆಸ್ ಚಾಂಪಿಯನ್: ವಿಶ್ವನಾಥನ್ ಆನಂದ್‌ಗೆ ಅದ್ದೂರಿ ಸ್ವಾಗತ

ಚೆನ್ನೈ (ಪಿಟಿಐ): ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಶನಿವಾರ ಚೆನ್ನೈಗೆ ಬಂದಿಳಿದಾಗ ಅದ್ದೂರಿ ಸ್ವಾಗತ ಲಭಿಸಿತು. ಮಾಸ್ಕೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇಸ್ರೇಲ್‌ನ ಬೋರಿಸ್ ಗೆಲ್ಫಾಂಡ್ ಅವರನ್ನು ಮಣಿಸಿ ಆನಂದ್ ಪ್ರಶಸ್ತಿ ಜಯಿಸಿದ್ದರು.ಆನಂದ್‌ಗೆ ಸ್ವಾಗತ ಕೋರಲು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ತಮಿಳುನಾಡು ಸರ್ಕಾರ ಹಾಗೂ ಚೆಸ್ ಫೆಡರೇಷನ್‌ನ ಪ್ರತಿನಿಧಿಗಳು ಹಾಜರಿದ್ದರು. ಆನಂದ್ ಮತ್ತು ಪತ್ನಿ ಅರುಣಾ ಅವರ ಹೆತ್ತವರು ಹಾಗೂ ಹಲವು ಚೆಸ್ ಸ್ಪರ್ಧಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.ಹೆಚ್ಚುವರಿ ಕಾರ್ಯದರ್ಶಿ ರಾಜ್‌ಕುಮಾರ್ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಸರ್ಕಾರದ ಪರವಾಗಿ ಆನಂದ್ ಅವರನ್ನು ಬರಮಾಡಿಕೊಂಡರು. `ನನಗೆ ಸ್ವಾಗತ ನೀಡಲು ಇಷ್ಟೊಂದು ಮಂದಿ ಆಗಮಿಸಿದ್ದನ್ನು ನೋಡಲು ಸಂತಸವಾಗುತ್ತಿದೆ~ ಎಂದು ಆನಂದ್ ಪ್ರತಿಕ್ರಿಯಿಸಿದರು.`ನನ್ನ ಸಾಧನೆಯನ್ನು ಗುರುತಿಸಿ ನಗದು ಬಹುಮಾನ ಪ್ರಕಟಿಸಿರುವ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಎಲ್ಲ ಶಾಲೆಗಳಲ್ಲೂ ಚೆಸ್‌ನ್ನು ಕಲಿಸುವುದು ನನಗೆ ಸಂತಸ ಉಂಟುಮಾಡಿದೆ. ಇದರಿಂದ ಇನ್ನಷ್ಟು ಚಾಂಪಿಯನ್‌ಗಳನ್ನು ಕಾಣಲು ಸಾಧ್ಯ~ ಎಂದು ನುಡಿದರು.ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಅಧ್ಯಕ್ಷ ಜೆಸಿಡಿ ಪ್ರಭಾಕರ್, ಕಾರ್ಯದರ್ಶಿ ಭರತ್ ಸಿಂಗ್ ಮತ್ತು ಫಿಡೆ ಉಪಾಧ್ಯಕ್ಷ ಡಿ.ವಿ. ಸುಂದರ್ ಅವರೂ ಹಾಜರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry