ಗುರುವಾರ , ನವೆಂಬರ್ 21, 2019
26 °C
ಅಕ್ರಮ-ಸಕ್ರಮ ಅವ್ಯವಹಾರ ಪ್ರಕರಣ

ತಹಶೀಲ್ದಾರರು ಸೇರಿ 8 ಮಂದಿ ಮೇಲೆ ಕೇಸ್

Published:
Updated:

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನಲ್ಲಿ ಅಕ್ರಮ-ಸಕ್ರಮ ಸಮಿತಿಯು ಅಕ್ರಮವಾಗಿ ಭೂ ಮಂಜೂರು ಮಾಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಪಿ. ಕುಶಾಲಪ್ಪ ಸೇರಿದಂತೆ ಸಮಿತಿಯ ಮೂರು ಜನ ಸದಸ್ಯರು ಹಾಗೂ ನಾಲ್ವರು ತಹಶೀಲ್ದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ಲಂಚ ನಿರೋಧ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದರು.ಸಮಿತಿ ಅಧ್ಯಕ್ಷ ಎಂ.ಪಿ. ಕುಶಾಲಪ್ಪ, ವಿರಾಜಪೇಟೆಯ ಹಿಂದಿನ ತಹಶೀಲ್ದಾರರಾದ ವಿ.ಹನುಮಂತರಾಯಪ್ಪ, ಎಚ್.ಸಿ. ಚಾಮು (ಪ್ರಭಾರ), ಹನುಮಂತಯ್ಯ, ಸಿ.ನಾಗರಾಜು ಹಾಗೂ ಸಮಿತಿ ಸದಸ್ಯರಾದ ಕಾಳಪಂಡ ಸುಧೀರ್, ಪುಟ್ಟಸ್ವಾಮಿ ಹಾಗೂ ಮಂಡೇಪಂಡ  ಮೈನಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.ತಮ್ಮನ್ನು ಭೇಟಿ ಮಾಡಿದ `ಪ್ರಜಾವಾಣಿ' ಪ್ರತಿನಿಧಿ ಜೊತೆ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ (ಪ್ರಭಾರ) ವಿಕ್ಟರ್ ಸೈಮನ್, ಸೋಮವಾರ ಎಫ್‌ಐಆರ್ ದಾಖಲಿಸಿರುವುದನ್ನು ಖಚಿತಪಡಿಸಿದರು.`ಹೈಕೋರ್ಟ್ ವಕೀಲ ಎ.ಕೆ. ಸುಬ್ಬಯ್ಯ ಅವರು ಮಾರ್ಚ್ 20ರಂದು ಬೆಂಗಳೂರಿನ ಲೋಕಾಯುಕ್ತ ಎಡಿಜಿ ಅವರಿಗೆ ಅಕ್ರಮ- ಸಕ್ರಮ ಸಮಿತಿಯ ವಿರುದ್ಧ ದೂರು ಸಲ್ಲಿಸಿದ್ದರು. ಇದರಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು' ಎಂದು ಹೇಳಿದರು.ಮೊದಲ ಅಂಶ- 2010ರ ಮಾರ್ಚ್ 15ರಿಂದ ಇಲ್ಲಿಯವರೆಗೆ ವಿರಾಜಪೇಟೆ ತಾಲ್ಲೂಕು ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಎಂ.ಪಿ. ಕುಶಾಲಪ್ಪ ಅವರ ಅಧಿಕಾರದ ಅವಧಿಯಲ್ಲಿ ಫಾರ್ಮ್ 50 ಹಾಗೂ 53 ಅನ್ನು ನಕಲಿ ಸೃಷ್ಟಿಸಿ, ಅವುಗಳಿಗೆ ಭೂ ಮಂಜೂರಾತಿ ನೀಡಲಾಗಿದೆ. ಇದಕ್ಕಾಗಿ ಅವರು ಪ್ರತಿಯೊಬ್ಬ ಫಲಾನುಭವಿಗಳಿಂದ ಪ್ರತಿ ಎಕರೆಗೆ 70,000 ದಿಂದ 2 ಲಕ್ಷ ರೂಪಾಯಿವರೆಗೆ ಹಣ ಪಡೆದಿದ್ದಾರೆ.ಎರಡನೇ ಅಂಶ- ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಸಮಿತಿ ಅಧ್ಯಕ್ಷ ಎಂ.ಪಿ. ಕುಶಾಲಪ್ಪ ಅವರು ತಮ್ಮ ಹತ್ತಿರದ ಸಂಬಂಧಿಕರಿಗೆ ಭೂ ಮಂಜೂರಾತಿ ಮಾಡಿದ್ದಾರೆ ಎಂದು ಸುಬ್ಬಯ್ಯ ದೂರಿನಲ್ಲಿ ಆರೋಪಿಸಿದ್ದರು.`ಇದರ ಆಧಾರದ ಮೇಲೆ ವರದಿ ನೀಡುವಂತೆ ನಮಗೆ ಎಡಿಜಿ ಕಚೇರಿಯಿಂದ ನಮಗೆ ಸೂಚನೆ ಬಂದಿತ್ತು. ಅದರನ್ವಯ ಇದೇ ತಿಂಗಳ 2 ಹಾಗೂ 3ರಂದು ವಿರಾಜಪೇಟೆ ತಹಶೀಲ್ದಾರ್ ಕಚೇರಿಗೆ ತೆರಳಿ ಭೂ ಮಂಜೂರಾತಿ ದಾಖಲೆಗಳನ್ನು  ಪರಿಶೀಲಿಸಿದೇವು' ಎಂದು ಹೇಳಿದರು.ದಾಖಲೆಗಳನ್ನು ಪರಿಶೀಲಿಸಿದಾಗ ಭೂ ಮಂಜೂರಾತಿಯಲ್ಲಿ ಏರುಪೇರು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಲಂಚ ನಿರೋಧ ಕಾಯಿದೆ 1988, ಭಾರತ ದಂಡ ಸಂಹಿತೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)