ತಹಶೀಲ್ದಾರ್‌ಗೆ ಕಾಂಗ್ರೆಸ್ ಕಾರ್ಯಕರ್ತರ ದಿಗ್ಭಂಧನ

7
ಗ್ರಾಮ ಪಂಚಾಯ್ತಿ ಅಧ್ಯಕ್ಷ,ಉಪಾಧ್ಯಕ್ಷರನ್ನು ಅಸಿಂಧುಗೊಳಿಸಲು ಆಗ್ರಹ

ತಹಶೀಲ್ದಾರ್‌ಗೆ ಕಾಂಗ್ರೆಸ್ ಕಾರ್ಯಕರ್ತರ ದಿಗ್ಭಂಧನ

Published:
Updated:

ಮರಿಯಮ್ಮನಹಳ್ಳಿ :  ಸಮೀಪದ ಚಿಲಕನಹಟ್ಟಿ ಗ್ರಾಮ ಪಂಚಾಯ್ತಿಗೆ  ಎರಡನೇ ಅವಧಿಗೆ ಮಂಗಳವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ  ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಸಿಂಧು ಗೊಳಿಸಬೇಕು ಎಂದು  ಎದುರು ಗುಂಪಿನ ಗ್ರಾಮ ಪಂಚಾಯ್ತಿ ಸದಸ್ಯರು ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ,  ಚುನಾವಣೆ ಅಧಿಕಾರಿ ಮತ್ತು ತಹಶೀಲ್ದಾರರನ್ನು ಕೊಠಡಿಯಲ್ಲಿ ಕೂಡಿಹಾಕಿ ದಿಗ್ಬಂಧನ ನಡೆಸಿದ ಘಟನೆ ಜರುಗಿತು.

 

ಘಟನೆಯ ವಿವರ:  22 ಸದಸ್ಯ ಬಲದ  ಸಮೀಪದ ಚಿಲಕನಹಟ್ಟಿ ಗ್ರಾಮ ಪಂಚಾಯ್ತಿಗೆ 2ನೇ ಅವಧಿಗೆ  ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಪ್ರಕ್ರಿಯೆಯು ಸಮಯಕ್ಕೆ ಸರಿಯಾಗಿ ಆರಂಭವಾಗಿ  ಅಧ್ಯಕ್ಷ  ಸ್ಥಾನಕ್ಕೆ ಗಂಗೀಬಾಯಿ ಮತ್ತು ಜಿ.ಕೆ. ಮಂಜುಳ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ  ಎಚ್. ಲಕ್ಷ್ಮಣ, ದೀಪ್ಲಿ ಬಾಯಿ, ಸಾಮ್ಯೋ ನಾಯ್ಕ ನಾಮಪತ್ರ ಸಲ್ಲಿಸಿದ್ದರು.  ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾಮ್ಯೋನಾಯ್ಕ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು.ನಂತರ ಮಧ್ಯಾಹ್ನ 1ಗಂಟೆಗೆ ಆರಂಭವಾದ  ಚುನಾವಣೆ ಪ್ರಕ್ರಿಯೆಯಲ್ಲಿ ಸದಸ್ಯರು ಮೊದಲು ಅಧ್ಯಕ್ಷ ಸ್ಥಾನಕ್ಕೆ ಗುಪ್ತ ಮತದಾನ ಮಾಡುವ ವೇಳೆ ಕೆಲ ಸದಸ್ಯರು, ಮತಪತ್ರವನ್ನು ನೆರೆದಿದ್ದ ಎಲ್ಲಾ ಸದಸ್ಯರಿಗೆ ತೋರಿಸಿದ್ದರಿಂದ ಉಳಿದ ಸದಸ್ಯರು  ಆಕ್ಷೇಪ ವ್ಯಕ್ತಪಡಿಸಿ, ಮತದಾನ ನಿಲ್ಲಿಸುವಂತೆ ಚುನಾವಣಾಧಿಕಾರಿ ಎಲ್.ಡಿ.ಜೋಶಿ ಅವರನ್ನು ಆಗ್ರಹಿಸಿದರು.   ಈ ಸಂದರ್ಭದಲ್ಲಿ ಅರ್ಧದಷ್ಟು ಸದಸ್ಯರು ಮತ ಚಲಾಯಿಸಿದ್ದರು. ನಂತರ  ಸದಸ್ಯರು ನಡೆಸಿದ ಗದ್ದಲ ಗೊಂದಲದಿಂದಾಗಿ ಸುಮಾರು ಮೂರು ತಾಸಿಗೂ ಹೆಚ್ಚುಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಿದರು.ನಂತರ ಚುನಾವಣಾಧಿಕಾರಿ ಎಲ್.ಡಿ.ಜೋಶಿ ಅವರು ತಹಶೀಲ್ದಾರ ಬಸವರಾಜ ಸೋಮಣ್ಣನವರ್‌ಗೆ ವಿಷಯ ತಿಳಿಸಿದರು.  ಸಂಜೆ 4ಗಂಟೆಗೆ ಆಗಮಿಸಿದ ತಹಶೀಲ್ದಾರರು ಚುನಾವಣೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಗಿತಗೊಂಡಿದ್ದ  ಚುನಾವಣೆಯ ಅರ್ಧಕ್ಕೆ ನಿಂತ  ಮತದಾನ ಪ್ರಕ್ರಿಯೆಗೆ ಪುನರಾರಂಭಿಸಿದರು. ನಂತರ ನಡೆದ ಮತಗಳ ಎಣಿಕೆಯ ವೇಳೆ ಒಬ್ಬ ಸದಸ್ಯ ಮತಪತ್ರವನ್ನು ಬಹಿರಂಗವಾಗಿ ತೋರಿಸಿದ್ದರಿಂದ ಅವರ ಮತವನ್ನು ಅಸಿಂಧುಗೊಳಿಸಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗಂಗೀಬಾಯಿ ರಾಮನಾಯ್ಕ 11 ಮತಗಳನ್ನು ಪಡೆದು ಅಧ್ಯಕ್ಷರಾಗಿ, ಮತ್ತು ದೀಪ್ಲಿಬಾಯಿ 12ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆಂದು ಸಂಜೆ 5ಕ್ಕೆ ಘೋಷಿಸಿದರು.ಘೋಷಣೆಯಾದ ನಂತರ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ.ಕೆ.ಮಂಜುಳ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್. ಲಕ್ಷ್ಮಣ ಮತ್ತು ಇತರೆ ಸದಸ್ಯರು ಆಯ್ಕೆ ಘೋಷಣೆಯನ್ನು ಆಕ್ಷೇಪಿಸಿ, ಮೂವರು ಮತಪತ್ರವನ್ನು ಬಹಿರಂಗವಾಗಿ ತೋರಿಸಿದ್ದಾರೆ,  ಒಟ್ಟಾರೆ  ಆಯ್ಕೆ ಪ್ರಕ್ರಿಯೆಯನ್ನು ಅನೂರ್ಜಿತ ಗೊಳಿಸಬೇಕೆಂದು ಒತ್ತಾಯಿಸಿ, ತಹಶೀಲ್ದಾರರನ್ನು ಮತ್ತು ಚುನಾವಣಾಧಿಕಾರಿಗಳನ್ನು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಇವರಿಬ್ಬರನ್ನೂ  ಎರಡು ತಾಸಿಗೂ ಹೆಚ್ಚು ಕಾಲ ಪಂಚಾಯ್ತಿ ಕೊಠಡಿಯೊಳಗೆ ಕೂಡಿಹಾಕಿ ದಿಗ್ಬಂಧನ ಗೊಳಿಸಿದರು.

 

ನಂತರ ಪಂಚಾಯ್ತಿ ಸದಸ್ಯರು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಯ್ಕೆಯನ್ನು ರದ್ದುಗೊಳಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ,  ತಹಶೀಲ್ದಾರ ಮತ್ತು ಚುನಾವಣಾಧಿಕಾರಿಗಳ ವಿರುದ್ಧ ಧಿಕ್ಕಾರದ  ಘೋಷಣೆ ಕೂಗಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ಸಂಜೆ ಏಳು ಗಂಟೆಯ ನಂತರವೂ ಧರಣಿ ಮುಂದುವರಿಸಿದ್ದರು. ಅಲ್ಲದೇ ನ್ಯಾಯ ಸಿಗುವವರೆಗೂ ಸ್ಥಳಬಿಟ್ಟು ಕದಲುವುದಿಲ್ಲ.  ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ಕಾರ್ಯಕರ್ತರು ಬೆದರಿಕೆ ಒಡ್ಡಿ ಧರಣಿ ಮುಂದುವರಿಸಿದರು.ಈ ಸಂದರ್ಭದಲ್ಲಿ  ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪಟ್ಟಣದ ಠಾಣೆಯ ಪಿಎಸ್‌ಐ ಕೆ.ಜಯಪ್ರಕಾಶ ಮತ್ತು  ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಪಿ.ಡಿ.ಗಜಕೋಶ ಸಿ.ಪಿ.ಐ ಆಶೋಕ್ ಕುಮಾರ್ ಮತ್ತು ಕಲ್ಲೆೀಶಪ್ಪ ಹಾಗೂ ಉಪವಿಭಾಗಾಧಿಕಾರಿ ಡಿ.ಆರ್.ಅಶೋಕ್ ಆಗಮಿಸಿದರು.ಸದಸ್ಯರಾದ ಜಿ.ಕೆ.ಮಂಜುಳ, ಎಚ್. ಲಕ್ಷ್ಮಣ,  ಕಷ್ಣಪ್ಪ, ಪಾಂಡುರಂಗ, ಶರಣಪ್ಪ, ಶಾರದಮ್ಮ, ಗೋವಿಂದಪ್ಪ, ರೇಖಮ್ಮ, ಜಿ.ನಾಗರಾಜ, ರಾಮಪ್ಪ ಸೇರಿದಂತೆ ಕೆಪಿಸಿಸಿ ಸದಸ್ಯ ಎಸ್.ಕೃಷ್ಣಾನಾಯ್ಕ ಮುಖಂಡರಾದ ಬೋಸಪ್ಪ, ಕನ್ನಳೆಪ್ಪ, ರಾಮನಾಯ್ಕ, ಜಿ.ಕೆ. ಬಾಲ ಮಂಜುನಾಥ, ಏಕಾಂಬ್ರೇಶ ನಾಯ್ಕ,  ಬುಡೇನ್ ಸಾಬ್,  ರಾಮಣ್ಣ,  ಚಂದ್ರಶೇಖರಯ್ಯ,  ದೇವೇಂದ್ರಪ್ಪ, ಈರಣ್ಣ, ಸತೀಶ, ಕಸ್ತೂರಮ್ಮ  ಹಾಗೂ ಹಲವಾರು ಕಾರ್ಯಕರ್ತರು ಧರಣಿ ಕುಳಿತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry