ಮಂಗಳವಾರ, ಮೇ 24, 2022
25 °C
ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ತಹಶೀಲ್ದಾರ್ ಎದುರು ಗೋಳು ತೋಡಿಕೊಂಡ ಮಾೀಲಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: `ಆಹಾರ ಇಲಾಖೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲಿಕರಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ನಾವು ನಮ್ಮ ಸಮಸ್ಯೆ ಹೇಳಲು ಹೋದರೆ ಪೊಲೀಸರಂತೆ ಮುಖ ತಿರುವುತ್ತಾರೆ. ಪ್ರತಿ ತಿಂಗಳು ನೀಡುವ ಆಹಾರ ಧಾನ್ಯದ (ಅಲಾಟಮೆಂಟ್) ಮಂಜೂರಾತಿ ಪಟ್ಟಿ ನೀಡುವುದಿಲ್ಲ. ಗೋದಾಮಿನ ಮ್ಯಾನೇಜರ್ ಕೊಡುವ ಪ್ರತಿ ಕ್ವಿಂಟಾಲ್ ಚೀಲ 8ರಿಂದ10ಕೆ.ಜಿ ಕಡಿಮೆ ತೂಗುತ್ತದೆ'.ಇದು ಚಿಂಚೋಳಿ ತಾಲ್ಲೂಕು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಗೋಳು. ` ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಗ್ರಾಮ ಮಟ್ಟದಲ್ಲಿ ಇರುವ ನಾವು ಒಂದೆಡೆ ಜನತೆಯಿಂದಲೂ ಹಾಗೂ ಅಧಿಕಾರಿಗಳಿಂದಲೂ ತೊಂದರೆ ಅನುಭವಿಸುತ್ತಿದ್ದೇವೆ. ನಮಗೆ ನ್ಯಾಯವೊದಗಿಸಿ' ಎಂದು ಚಿಂಚೋಳಿ ತಾಲ್ಲೂಕು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಬುಧವಾರ ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ತಹಶೀಲ್ದಾರ್ ಮೋಹನ ಜೋಷಿ ಎದುರು ಅಳಲು ತೊಡಿಕೊಂಡರು.`ಪ್ರತಿ ತಿಂಗಳು ನಗರದಲ್ಲಿ ಪ್ರತಿ ಕಾರ್ಡಿಗೆ 5 ಲೀಟರ್ ಸೀಮೆ ಎಣ್ಣೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ 3 ಲೀಟರ್ ಸೀಮೆ ಎಣ್ಣೆ ನೀಡುತ್ತಿದ್ದೇವು. ಆದರೆ ಸರ್ಕಾರದ ಹೊಸ ಆದೇಶದಂತೆ ಈಗ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿ ಕಾರ್ಡುದಾರರಿಗೆ 5 ಲೀಟರ್ ಸೀಮೆ ಎಣ್ಣೆ ನೀಡಬೇಕು. ಆದರೆ ನಮಗೆ ಸೀಮೆ ಎಣ್ಣೆ ಪ್ರತಿ ಕಾರ್ಡಿಗೆ 4 ಲೀಟರ್‌ನಂತೆ ಟ್ಯಾಂಕರ್‌ನಿಂದ ಇಳಿಸಿ ಹೋಗುತ್ತಾರೆ. ನಮಗೆ 4 ಲೀಟರ್ ಪ್ರತಿ ಕಾರ್ಡಿಗೆ ನೀಡಿದರೆ, ನಾವು 5 ಲೀಟರ್ ಎಲ್ಲಿಂದ ಕೊಡಬೇಕು?' ಎಂದು ಅವರು ಪ್ರಶ್ನಿಸಿದರು.ಪಡಿತರ ಚೀಟಿಗಳ ಪಟ್ಟಿ ನೀಡುವುದಿಲ್ಲ ನಾವು ಯಾರಿಗೆ ಧಾನ್ಯ ವಿತರಿಸಬೇಕು. ಒಂಮ್ಮಮ್ಮೆ ಪಟ್ಟಿ ನೀಡಿದರೆ 275 ಕಾರ್ಡಿನ ಪಟ್ಟಿ ನೀಡುತ್ತಾರೆ. ಆದರೆ ಪಡಿತರ ಮಾತ್ರ 250 ಕಾರ್ಡಿಗೆ ನೀಡುತ್ತಾರೆ. ಹೀಗಾದರೆ ನಾವು ಜನರಿಂದ ಒದೆ ತಿನ್ನುವಂತಾಗಿದೆ. ಗ್ರಾಮದ ಸ್ಥಿತಿವಂತರ ಬಳಿ ಎರಡುಮೂರು ಕಾರ್ಡಗಳಿವೆ. ಅವು ಅಮಾನತುಗೊಂಡಿಲ್ಲ.

  ಆದರೆ ವಿಪರ್ಯಾಸವೆಂದರೆ, ಅತಿ ಬಡವರು, ನಿರ್ಗತಿಕರ ಕಾರ್ಡ ಅಮಾನತುಗೊಳಿಸಲಾಗಿದೆ. ಈಗ ನಮಗೆ ಆಹಾರ ಧಾನ್ಯ ತೂಗಿ ಗೋದಾಮಿನಿಂದ ನೀಡಬೇಕು. ಪಡಿತರ ಕಾರ್ಡಿನ ಪಟ್ಟಿ ಕೊಡಬೇಕು. ಜತೆಗೆ ಕಾರ್ಡ್ ಅಮಾನತುಗೊಳಿಸಿದ್ದಕ್ಕೆ ಅಥವಾ ರದ್ದಾಗಿದ್ದಕ್ಕೆ ಕಾರಣ ತಿಳಿಸಬೇಕು. ಕೆಲ ತಿಂಗಳಿನಿಂದ ಬಾಕಿ ಇರುವ ಎಪಿಎಲ್ ಕಾರ್ಡಿನ ಸೀಮೆ ಎಣ್ಣೆ ಬಿಡುಗಡೆ ಮಾಡಬೇಕು ಎಂಬ ಮನವಿಯನ್ನು ನ್ಯಾಯಬೆಲೆ ಅಂಗಡಿಗಳ ಮಾಲಿಕರು ತಹಶೀಲ್ದಾರರಿಗೆ ಸಲ್ಲಿಸಿದರು.ಮನವಿ ಸ್ವೀಕರಿಸಿದ ತಹಶೀಲ್ದಾರ್ ಮೋಹನ ಜೋಶಿ ಪ್ರಜಾವಾಣಿ ಜತೆಗೆ ಮಾತನಾಡಿ, ಡೀಲರ್‌ಗಳು ಸೋಮವಾರ ನೀಡಿದ ಮಾಹಿತಿಗೆ ಸಂಬಂಧಿಸಿದಂತೆ ವರದಿ ತಯಾರಿಸಲಾಗಿದೆ. ಜತೆಗೆ ಬುಧವಾರ ನೀಡಿದ ಮನವಿಯ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದರು.ತಹಶೀಲ್ದಾರ್ ಶ್ರೇಣಿ-2 ಜಗನ್ನಾಥರೆಡ್ಡಿ, ಸಂಘದ ಅಧ್ಯಕ್ಷ ಕಾಳೇಶ್ವರ ರಾಮಗೊಂಡ, ಕಾರ್ಯದರ್ಶಿ ರೇವಣಸಿದ್ದಪ್ಪ ಮಜ್ಜಗಿ, ಜಾಲೇಂದ್ರ ಸರಡಗಿ, ಸಿದ್ದಣ್ಣಗೌಡ ಯಲಕಪಳ್ಳಿ, ಅಣ್ಣರಾವ್ ಸಾಸರಗಾಂವ್, ಶಿವಶರಣಪ್ಪ ಪಾರಾ, ತಿಪ್ಪಾರೆಡ್ಡಿ ನಾಗ ಈದಲಾಯಿ, ಮಹಾಂತೇಶ ಸುಂಕದ್, ರಾಜು ಉಪ್ಪಿನ್, ಮಹೇಂದ್ರ ಯಾಕಾಪುರ, ಬಾಬುರಾವ್ ಬೋಯಿ, ಶಾಂತಾಬಾಯಿ, ಗೋಪಾಲರೆಡ್ಡಿ ಶೇರಿಕಾರ, ನಾಗಶೆಟ್ಟಿ ಉಪ್ಪಿನ್, ಗಣಪತಿ ಪಸ್ತಪೂರ, ಸಾಯಬಣ್ಣ ಪೂಜಾರಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.