ಸೋಮವಾರ, ಜನವರಿ 20, 2020
21 °C

ತಹಶೀಲ್ದಾರ್ ವರ್ಗಾವಣೆಗೆ ಆಗ್ರಹ: ಡಿಸಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಹಾಸನ ತಹಶೀಲ್ದಾರ್ ಕೆ. ಮಥಾಯಿ ಅವರನ್ನು ಕೂಡಲೇ ವರ್ಗ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಕಂದಾಯ ಇಲಾಖೆಯ ನೌಕರರು ಹಾಗೂ ಗ್ರಾಮ ಲೆಕ್ಕಿಗರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹಾಸನದಲ್ಲಿ ಗ್ರಾಮ ಲೆಕ್ಕಿಗರು ಹಾಗೂ ತಹಶೀಲ್ದಾರರ ಮಧ್ಯೆ ಹಲವು ದಿನಗಳಿಂದ ಶೀತಲ ಸಮರ ನಡೆಯುತ್ತಿದ್ದು, ಸೋಮವಾರ ಎಲ್ಲರೂ ಅರ್ಧ ದಿನದ ರಜೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ, ಪದಾಧಿಕಾರಿಗಳು ಮಾತ್ರ ಬಂದು ಮನವಿ ಕೊಡಿ ಎಂದು ಸೂಚನೆ ನೀಡಿದ್ದರಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ಸಂಘಗಳ ಪದಾಧಿಕಾರಿಗಳು ಬಂದು ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದ ಗ್ರಾಮ ಲೆಕ್ಕಿಗರು, `ತಹಶೀಲ್ದಾರ್ ಮಥಾಯಿ ಸಿಬ್ಬಂದಿಗೆ ಇಲ್ಲ ಸಲ್ಲದ ಕಿರುಕುಳ ನೀಡುತ್ತಿದ್ದಾರೆ. 2010ರ ನವೆಂಬರ್  ತಿಂಗಳಲ್ಲಿ ಬಂದ ಅವರು ಈವರೆಗೆ 20 ಜನರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ. ಶಬರಿಮಲೆಗೆ ಹೋಗಲು ರಜೆ ಹಾಕಿದ್ದ ನೌಕರರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೆಲವು ತಿಂಗಳ ಹಿಂದೆ ಗ್ರಾಮ ಲೆಕ್ಕಿಗ ಚಂದ್ರಶೇಖರ್ ಎಂಬುವವರಿಗೆ ನೋಟಿಸ್ ನೀಡಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಚಂದ್ರಶೇಖರ್ ಬೈಕ್ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು~ ಎಂದು ಆರೋಪಿಸಿದರು.`ಗ್ರಾಮ ಲೆಕ್ಕಿಗರು ಸಣ್ಣ ಪುಟ್ಟ ತಪ್ಪು ಮಾಡಿದರೂ ಸಸ್ಪೆಂಡ್  ಮಾಡುವ ಮಥಾಯಿ, ತಾವೇ ಭಾರಿ ಅಪರಾಧಗಳನ್ನು ಮಾಡಿದ್ದಾರೆ. ಹಾಸನಕ್ಕೆ ಬಂದು ಕೆಲವೇ ತಿಂಗಳಲ್ಲಿ ಇವರ ವರ್ಗಾವಣೆಯಾದಾಗ ಅದನ್ನು ತಡೆಯುವಂತೆ ಕೆಎಟಿಗೆ ಮೊರೆ ಹೋಗಿದ್ದರು. ಈ ಸಂಬಂಧ ದಾಖಲೆಗಳನ್ನು ನೀಡಲು 2011ರ ಮೇ 9ರಂದು  ಬೆಂಗಳೂರಿಗೆ ಹೋಗಿದ್ದರು. ಆದರೆ ಇಲ್ಲಿನ ಕಚೇರಿ ದಿನಚರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಎಂದು ದಾಖಲಿಸಿದ್ದರು. ಏಕಕಾಲಕ್ಕೆ ಅವರು ಎರಡೂ ಕಡೆ ಇದ್ದಂತಾಗಿದೆ.ವರ್ಗಾವಣೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ಕೆಎಟಿಗೆ ಹೇಳಿಕೆ ನೀಡಿದ್ದರು. ಆದರೆ ಅವರು ಹಾಸನದಲ್ಲಿ ಏಕಾಂಗಿ ಯಾಗಿದ್ದು, ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿಲ್ಲ. ಅಲ್ಲಿಗೂ ಸುಳ್ಳು ಮಾಹಿತಿ ನೀಡಿದ್ದಾರೆ.`ಈಚೆಗೆ ಗ್ರಾಮದಲ್ಲಿ ಸಭೆ ನಡೆದಾಗ ಎಲ್ಲರ ಸಮ್ಮುಖದಲ್ಲೇ ಗ್ರಾಮ ಲೆಕ್ಕಿಗದ ಸಂಘದ ಅಧ್ಯಕ್ಷರೂ ಆಗಿರುವ ಎನ್. ನಾರಾಯಣ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.  ಹಲವು ತೊಂದರೆ ನೀಡುತ್ತಿದ್ದಾರೆ. ಇಲಾಖೆ ಸಿಬ್ಬಂದಿಯನ್ನು ಆಗಾಗ ಸಭೆಗಳಿಗೆ ಕರೆಸುತ್ತಾರೆ. ಆದರೆ ಅಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇಲ್ಲದೆ ಸಭೆ ಮುಗಿಯುವವರೆಗೆ ನಿಂತುಕೊಂಡೇ ಇರಬೇಕಾಗುತ್ತದೆ. ಇಂಥ ತಹಶೀಲ್ದಾರರನ್ನು ಹಾಸನದಲ್ಲಿ ಈ ಹಿಂದೆ ಕಂಡಿರಲಿಲ್ಲ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸಿಬ್ಬಂದಿ ಆಗ್ರಹಿಸಿದರು.ಸ್ಟೇಶನರಿ ಹಣದ ದುರ್ಬಳಕೆ, ಇಲಾಖೆಯ ಸಿಬ್ಬಂದಿಗೆ ಬೆದರಿಕೆ ಹಾಕುವುದು, ಕಂದಾಯ ನಿರೀಕ್ಷಕರಿಗೆ ಕಿರುಕುಳ ನೀಡುವುದು ಇಂಥ ಹತ್ತು ಹಲವು ವಿಚಾರಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೆವು. ಈ ಹಿನ್ನೆಲೆಯಲ್ಲಿ ಅವರು ಒಂದು ಸಭೆ ಕರೆದು ಹೊಂದಿಕೊಂಡು ಹೂಗುವಂತೆ ಸೂಚನೆ ನೀಡಿದ್ದರೂ ತಹಶೀಲ್ದಾರರು ಅವರ ಮಾತಿಗೂ ಬೆಲೆ ಕೊಡಲಿಲ್ಲ. ಬದಲಿಗೆ ಮರುದಿನವೇ ತಮ್ಮ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ 11 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ನೀಡಿದ್ದಾರೆ. ಇಂಥ ತಹಶೀಲ್ದಾರರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಬೆಳಿಗ್ಗೆ 11.30ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಂದಾಯ ಇಲಾಖೆ ನೌಕರರ ಸಂಘ, ಗ್ರಾಮ ಲೆಕ್ಕಿಗರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಸದಸ್ಯರು ತಹಶೀಲ್ದಾರರ ವಿರುದ್ಧ ಐದು ಪುಟಗಳ ದೂರನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)