ತಹಸೀಲದಾರ್ ಅಮಾನತಿಗೆ ಬಿಜೆಪಿ ಆಗ್ರಹ

7

ತಹಸೀಲದಾರ್ ಅಮಾನತಿಗೆ ಬಿಜೆಪಿ ಆಗ್ರಹ

Published:
Updated:
ತಹಸೀಲದಾರ್ ಅಮಾನತಿಗೆ ಬಿಜೆಪಿ ಆಗ್ರಹ

ರಾಯಚೂರು: ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ರಾಯಚೂರು ತಹಸೀಲದಾರ ಅವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ರಾಯಚೂರು ಗ್ರಾಮೀಣ ಘಟಕದ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

 

ವೃದ್ಧಾಪ್ಯ  ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳು ಬಡ ಜನತೆಗೆ ಸಮರ್ಪಕ ರೀತಿಯಲ್ಲಿ ತಲುಪಿಸುವಲ್ಲಿ ತಹಸೀಲದಾರ ಮಧುಕೇಶ್ವರ್ ವಿಫಲರಾಗಿದ್ದಾರೆ. ಬಡ ಜನರ ಬಗ್ಗೆ ಕಳಕಳಿ ಇಲ್ಲ. ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕಳೆದ ಒಂದು ವರ್ಷದಿಂದ ಹಣ ಬಿಡುಗಡೆಗೊಳಿಸಿಲ್ಲ. ಈ  ಸರ್ಕಾರದ ಯೋಜನೆಗಳ ಮೂಲ ಉದ್ದೇಶವನ್ನು ತಲೆ ಕೆಳಗಾಗಿಸಿದ್ದಾರೆ ಎಂದು ದೂರಿದರು.

 

ಏತನ್ಮಧ್ಯೆ ಸರ್ಕಾರವು ಕಳೆದ ಒಂದು ತಿಂಗಳ ಹಿಂದೆ ಹೊಸ ಆದೇಶ ಹೊರಡಿಸಿದೆ. ಇದರ ಪ್ರಕಾರ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಹೊಸದಾಗಿ ಬರುವ ಅರ್ಜಿ ಸ್ವೀಕರಿಸಬಾರದು ಎಂಬ ಆದೇಶ ಇದಾಗಿದೆ. ಈ ಪ್ರತಿಯನ್ನೇ ಮುಂದಿಟ್ಟುಕೊಂಡು ಹಳೆಯ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ತಹಸೀಲದಾರರು ಸಾರ್ವಜನಿಕರ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

 

ತಾಲ್ಲೂಕಿನ ಜಾಗೀರ ವೆಂಕಟಾಪುರ ಗ್ರಾಮದಲ್ಲಿ ಆಸರೆ ಮನೆ ಹಂಚಿಕೆ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸಿದ್ದಾರೆ. ಭ್ರಷ್ಟಾಚಾರ ನಡೆಸಿದ್ದಾರೆ. ಗ್ರಾಮದ ನೈಜ ಫಲಾನುಭವಿಗಳಿಗೆ  ಆಸರೆ ಮನೆ ದೊರಕಿಸದೇ ಬೇರೆ ಗ್ರಾಮದಲ್ಲಿರುವ ಮತ್ತು ನಾಲ್ಕು ಮನೆ ಹೊಂದಿರುವವರಿಗೆ ಮನೆ ದೊರಕಿಸಿದ್ದಾರೆ. ತನಿಖೆಯಿಂದ ಬಹಿರಂಗವಾಗಿದೆ. ಆದರೆ ಇವರ ಮೇಲೆ ಕ್ರಮ ಜರುಗಿಸಲು ಮೇಲಧಿಕಾರಿಗಳು ಮೌನ ವಹಿಸಿದ್ದಾರೆ. ಇವರೂ ತಹಸೀಲದಾರ ಜೊತೆ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂಬುದು ಸಂಶಯಕ್ಕೆಡೆ ಮಾಡಿದೆ ಎಂದು ಹೇಳಿದರು.

 

ಮಾಜಿ ಶಾಸಕ ಎ ಪಾಪಾರೆಡ್ಡಿ, ಬಿಜೆಪಿ ರಾಯಚೂರು ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಮರ್ಚಟಾಳ, ನಗರ ಘಟಕದ ಅಧ್ಯಕ್ಷ ಜಿ ಶೇಖರರೆಡ್ಡಿ, ಜಿ ಭೀಮಣ್ಣ, ಜೆ ಪರಶುರಾಮ, ಬಿ.ಎಸ್ ಸುರಗಿಮಠ, ರಾಜಶೇಖರ ಪಾಟೀಲ್, ಚಂದ್ರಕಾಂತ, ವೆಂಕೋಬ, ಟಿ ಮಲ್ಲೇಶ, ತಾಯಪ್ಪ, ಸುಗೂರಪ್ಪ, ಶಶಿಕಲಾ ಭೀಮರಾಯ, ಆಂಜನೇಯ, ಲಕ್ಷ್ಮಣ, ಕೆ ರವಿ, ಶಿವಕುಮಾರ, ನರಸಪ್ಪ, ಶಶಿರಾಜ ಏಗನೂರು, ತಾಯಪ್ಪ, ರಾಜು ಗದ್ವಾಲಕರ್ ಧರಣಿಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry