ಶುಕ್ರವಾರ, ನವೆಂಬರ್ 22, 2019
25 °C

`ತಾಂಡವಾಡುತ್ತಿರುವ ಭ್ರಷ್ಟಾಚಾರ'

Published:
Updated:

ರಾಮದುರ್ಗ: ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರತಿಯೊಬ್ಬರಲ್ಲಿ ಹೋರಾಟದ ಮನೋಭಾವನೆ ಸೃಷ್ಟಿಯಾದರೆ ಮಾತ್ರ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಟಿ.ಆರ್. ಸುಬ್ರಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಬೆಂಬಳಗಿ ಕಾಲೇಜಿನಲ್ಲಿ ಶುಕ್ರವಾರ ಯುಜಿಸಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ `ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ನಾಗರಿಕ ಸಮಾಜದ ಪಾತ್ರ' ಕುರಿತ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಗುಲಾಮಗಿರಿ ಪದ್ಧತಿ ನಿರ್ಮೂಲನೆ ಮಾಡಲು ಸರ್ದಾರ್ ವಲ್ಲಭಬಾಯಿ ಪಟೇಲ್  ಹೋರಾಟ ಮಾಡಿದರು. ಈಗಿನ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳ ಕೊರತೆಯಿಂದಾಗಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ ಎಂದು ಹೇಳಿದರು.ಭ್ರಷ್ಟಾಚಾರದ ಪ್ರಭಾವ ಮತ್ತು ಪ್ರಾದೇಶಿಕ ಅಸಮಾನತೆಯಿಂದಾಗಿ ದೇಶದ ಬಹು ಬಾಗಗಳಲ್ಲಿ ಪ್ರತ್ಯೇಕತೆಯ ಕೂಗ ಕೇಳಿ ಬರುತ್ತಿದೆ. ರಾಜಕಾರಣಿಗಳಲ್ಲಿ ಇಚ್ಚಾಶಕ್ತಿಯ ಕೊರತೆಯಿಂದಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಾಸಂತಿ ರಸಂ ಮಾತನಾಡಿ, ಭ್ರಷ್ಟಾಚಾರವನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ. ಕನಿಷ್ಠ ಭ್ರಷ್ಟಾಚಾರಕ್ಕೆ ಕಡಿವಾಣವಾದರೂ ಅನಿವಾರ್ಯವಾಗಿದೆ ಎಂದು ಹೇಳಿದರು. ಭ್ರಷ್ಟಾಚಾರದ ಪಿಡುಗು ಸ್ಥಳೀಯ ಸಂಸ್ಥೆಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೇರೂರಿದೆ. ಆಡಳಿತ ಯಂತ್ರದ ದುರ್ಬಳಕೆ ಹಾಗೂ ಹಣ ಗಳಿಕೆಯ ದುರಾಸೆಯಿಂದ ಆಡಳಿತ ಯಂತ್ರವೇ ಕುಸಿದು ಬಿದ್ದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರೂ ವಿರೋಧ ವ್ಯಕ್ತಪಡಿಸಬೇಕು ಎಂದು ಹೇಳಿದರು.ಧಾರವಾಡದ ಸಮುದಾಯ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಯತ್ನಿಸಬೇಕಿದ್ದ ರಾಜಕಾರಣಿಗಳು ರಾಜ್ಯದ ಬೊಕ್ಕಸ ಮತ್ತು ನೈಸರ್ಗಿಕ ಸಂಪತ್ತನ್ನು ಹಗಲು ದರೋಡೆ ಮಾಡುವ ಮೂಲಕ ಭ್ರಷ್ಟಾಚಾರವನ್ನು ಜೀವಂತವಾಗಿಟ್ಟಿದ್ದಾರೆ.ಇದನ್ನು ತಡೆ ಗಟ್ಟಲು ಚುನಾವಣೆಯಲ್ಲಿ ಮತದಾರರು ಯೋಗ್ಯ ಅಭ್ಯರ್ಥಿಯ ಆಯ್ಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ವಿದ್ಯಾ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಪಿ.ಎಂ. ಜಗತಾಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ವಿ. ಪಾಟೀಲ ಸ್ವಾಗತಿಸಿದರು. ಡಾ. ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಎಸ್. ಕೊಡತೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಎಸ್.ವಿ. ಕುಲಕರ್ಣಿ ವಂದಿಸಿದರು.

ಪ್ರತಿಕ್ರಿಯಿಸಿ (+)