ತಾಂಡಾ ಅಭಿವೃದ್ಧಿಗೆ ಆದ್ಯತೆ

7

ತಾಂಡಾ ಅಭಿವೃದ್ಧಿಗೆ ಆದ್ಯತೆ

Published:
Updated:

ಬಸವನಬಾಗೇವಾಡಿ: ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕ ಕೆಲಸ ಮಾಡಿ, ಸಮಸ್ಯೆಗೆ ಪರಿಹಾರ ಒದಗಿಸುವುದು ತಮ್ಮ ಆದ್ಯತೆ ಎನ್ನುವ ತಾಲ್ಲೂಕಿನ ಮಸೂತಿ ಜಿಲ್ಲಾ ಪಂಚಾಯಿತಿ (ಪರಿಶಿಷ್ಟ ವರ್ಗ) ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನೂತನವಾಗಿ ಆಯ್ಕೆಯಾದ ವಿಠಲರಾವ್ ಬಾಬುರಾವ್ ಪವಾರ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.*ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ಇಡೀ ತಾಲ್ಲೂಕಿನಲ್ಲಿಯೇ ಅತೀ ದೊಡ್ಡದಾದ ಕ್ಷೇತ್ರದಿಂದ ಆಯ್ಕೆಯಾಗಿರುವುದು ಸಂತಸ ತಂದಿದೆ. ಕ್ಷೇತ್ರದಲ್ಲಿ ಬರುವ ಎಂಟು ತಾಂಡಾಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವದು ಪ್ರಥಮ ಆದ್ಯತೆಯಾಗಿದೆ. ಕುಡಿಯುವ ನೀರು ಪೂರೈಕೆ, ಗ್ರಾಮ ನೈರ್ಮಲ್ಯದ ಕಡೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುವದು ಮುಖ್ಯವಾಗಿದೆ.*ಆರೋಗ್ಯ ಹಾಗೂ ಶೈಕ್ಷಣಿಕ ವಿಷಯಗಳ ಕುರಿತು...?

ದೊಡ್ಡ ಗ್ರಾಮಗಳಲ್ಲಿ ಆದ್ಯತೆಯ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪಿಸಬೇಕಾಗಿದೆ. ಹೆಚ್ಚಿನ ಭಾಗಗಳು ಪುನರ್ವಸತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾಗಿವೆ. ಈಗಿರುವ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆ ಹರಿಸುವ ವಿಶ್ವಾಸವಿದೆ. ಚಿಮ್ಮಲಗಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಹಳೆ ರೊಳ್ಳಿ, ಸಿದ್ಧನಾಥದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಶ್ಯಕತೆ ಪೂರೈಸುವದು, ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಮುಟ್ಟಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡುತ್ತೇನೆ. ರೈತ ಸಂಪರ್ಕ ಕೇಂದ್ರದ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ.*ಕುಡಿಯುವ ನೀರು ಪೂರೈಕೆ ಹಾಗೂ ಗ್ರಾಮೀಣ ಶೌಚಾಲಯ ನಿರ್ಮಾಣಕ್ಕೆ ಕಾರ್ಯಕ್ರಮಗಳೇನು?

ಬಳೂತಿ ಗ್ರಾಮಕ್ಕೆ ಮೊದಲು ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತೇನೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳಿಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದ್ದೇನೆ. ಗ್ರಾಮ ನೈರ್ಮಲ್ಯಕ್ಕೆ ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ಅವರ ಸಹಕಾರ ಪಡೆದು ಕೆಲಸ ಮಾಡುವೆನು. ಕೂಡಗಿ ಗ್ರಾಮದಲ್ಲಿ ತುರ್ತಾಗಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಲು ಕಾರ್ಯ ಪ್ರವೃತ್ತನಾಗುತ್ತೇನೆ.*ಜನ ಸೇವೆಯ ಗುರಿ?

ಜನತೆಯ ಆಶಯಗಳಿಗೆ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಅವರ ಇಚ್ಛಾನುಸಾರ ಸಮಸ್ಯೆಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಮೊದಲ ಕೆಲಸ. ಮಸೂತಿ ಗ್ರಾಮದಲ್ಲಿ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಕುಡಿಯುವ ನೀರು ಪೂರೈಕೆ, ಶೌಚಾಲಯ, ರಸ್ತೆ, ಸಮುದಾಯ ಭವನ ನಿರ್ಮಾಣದಂತಹ ಕೆಲಸಗಳಿಗೆ ಗಮನ  ಹರಿಸುತ್ತೇನೆ. ಜನರ ಹಿತಕ್ಕಾಗಿ, ಸಮಾಜದ ಅಭಿವೃದ್ಧಿಗಾಗಿ ಕಾಲಹರಣ ಮಾಡದೇ ಕೆಲಸ ಮಾಡುವೆ. ಈ ಹಿಂದೆ ಕ್ಷೇತ್ರದಲ್ಲಿ ಯಾರೂ ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಜನ ಮೆಚ್ಚುವ ರೀತಿಯಲ್ಲಿ ಜನರೇ ಕೊಟ್ಟಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry