ಬುಧವಾರ, ಜೂನ್ 23, 2021
22 °C

ತಾಂಡಾ ಸರ್ಕಾರಿ ಶಾಲೆಯಲ್ಲಿ ಆದರ್ಶ ಶಿಕ್ಷಕ

ಜಗನ್ನಾಥ ಡಿ. ಶೇರಿಕಾರ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತರಗತಿ ಪ್ರವೇಶಿಸುತ್ತಿದ್ದಂತೆ ಮಕ್ಕಳು ’ಗುರುಬ್ರಹ್ಮ, ಗುರುವಿಷ್ಣು ಗುರುದೇವೋ ಮಹೇಶ್ವರಾ.....’ಶ್ಲೋಕ ಹೇಳಿ ಸಮಯಕ್ಕೆ ಅನುಗುಣವಾಗಿ ’ಗುಡ್‌ ಮಾರ್ನಿಂಗ್‌, ಗುಡ್‌ ಆಫ್ಟರ್‌ನೂನ್‌’ ಎನ್ನುತ್ತ ’ವೆಲ್‌ಕಮ್‌ ಸರ್‌’ ಎಂದು ಸ್ವಾಗತಿಸುತ್ತಾರೆ.ಶಾಲೆಗೆ ಬಂದ ಅತಿಥಿ ಅಭ್ಯಾಗ­ತರನ್ನು ಸ್ವಾಗತಿಸುವ ಮಕ್ಕಳು, ’ನಾವು ನಗರ, ಪಟ್ಟಣದ ಮಕ್ಕಳಿಗಿಂತಲೂ ಕಡಿಮೆಯಿಲ್ಲ’ ಎಂದು ಸಾರುತ್ತಾರೆ.ಈ ಶಾಲೆಯ ಕೊಠಡಿಯನ್ನು ಪ್ರವೇಶಸಿದರೆ, ’ಅರೆ ಇದು ತಾಂಡಾ ಶಾಲೆಯೋ ಅಥವಾ ನಗರ ಪಟ್ಟಣದ ಶಾಲೆಯೋ?’ ಎಂಬ ಅನುಮಾನ ಹುಟ್ಟುತ್ತದೆ. ಆದರೆ, ವಾಸ್ತವವಾಗಿ ಇದೊಂದು ಪುಟ್ಟ ತಾಂಡಾದ ಪುಟ್ಟ ಶಾಲೆ.ಇದು, ಗೊಂದಲಶೇತ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಕನ್ನಡ ಕಡ್ಡಾಯ. ಜತೆಗೆ ಒಂದಿಷ್ಟು ಇಂಗ್ಲಿಷ್‌ ಮಕ್ಕಳಿಗೆ ಹೇಳಿ ಕೊಡ­ಲಾ­ಗಿದೆ. ಹೀಗಾಗಿ ಈ ಶಾಲೆ ಇತರ ಸರ್ಕಾರಿ ಶಾಲೆಗಳಿಗಿಂತ ಭಿನ್ನ­ವಾಗಿ ಗೋಚ­­ರಿಸುತ್ತದೆ.

ನೋಡಲು ಅಷ್ಟೇನು ಸುಂದರವಲ್ಲದ ಹಾಗೂ ಹರಕು–ಮುರುಕು ಕಟ್ಟಡದಲ್ಲಿ ನಡೆಯುವ ಈ ಸರ್ಕಾರಿ ಶಾಲೆ, ಶಿಕ್ಷಣ ಸಾರ್ವತ್ರೀಕರಣದಲ್ಲಿ ಉತ್ತಮ ಹೆಜ್ಜೆಯನ್ನಿರಿಸಿದೆ. ಇದಕ್ಕೆ ಕಾರಣಿಕರ್ತ ಅಲ್ಲಿನ ಶಿಕ್ಷಕ ಆನಂದ ಚವ್ಹಾಣ. ಗೊಂದಲಶೇತ ತಾಂಡಾದಿಂದ 1 ಕಿ.ಮೀ. ದೂರದ ಜಂಗ್ಲಿಪೀರ ತಾಂಡಾದ ನಿವಾಸಿಯಾದ ಅವರು, ವಿದ್ಯಾರ್ಥಿ ದಿಸೆ­ಯಿಂದಲೂ ಪ್ರತಿಭಾವಂತ ವಿದ್ಯಾರ್ಥಿ­ ಎಂದು ಹೆಸರು ಗಳಿಸಿದ್ದರು.ಶಿಕ್ಷಕ ತರಬೇತಿ ಮುಗಿಸಿದ ಮೇಲೆ 2010ರಲ್ಲಿ ಶಿಕ್ಷಕರಾಗಿ ನೇಮಕಗೊಂಡು ಇತರರಿಗೆ ಮಾದರಿಯಾಗುವಂತೆ ಸೇವೆ ಸಲ್ಲಿಸುತ್ತಾ ಗಮನ ಸೆಳೆಯುತ್ತಿದ್ದಾರೆ.ತಾಂಡಾ ಬಂಜಾರಾ (ಲಂಬಾಣಿ) ಬಾಂಧವರು ನೆಲೆಸಿದ ಜನವಸತಿ ಪ್ರದೇಶ. ಮನೆಗಳಲ್ಲಿ ಲಂಬಾಣಿ ಭಾಷೆ­ಯನ್ನು ಬಳಸುತ್ತಾರೆ. ಇದು ಶಾಲೆ­ಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಡ್ಡಿ ಎಂಬುದು ಬಹುತೇಕ ಶಿಕ್ಷಕರ ಅಭಿಪ್ರಾಯ. ಹೀಗಾಗಿಯೇ ತಾಂಡಾ­ಗಳ ಅನೇಕ ಶಾಲೆಗಳಲ್ಲಿ 5/6 ನೇ ತರಗತಿಯ ಮಕ್ಕಳು ಸರಿಯಾಗಿ ಕನ್ನಡ ಮಾತನಾಡಲು ಮತ್ತು ಬರೆಯಲು, ಓದಲು ತಡವರಿಸುವುದನ್ನು ಕಾಣು­ತ್ತೇವೆ. 5ನೇ ತರಗತಿವರೆಗೆ 74 ಮಕ್ಕಳು ದಾಖಲಾಗಿದ್ದಾರೆ. ಪ್ರತಿದಿನವೂ 65–68 ಮಕ್ಕಳು ತಪ್ಪದೇ ಶಾಲೆಗೆ ಬರು­ತ್ತಾರೆ. ಒಟ್ಟು ಮೂರು ಕೊಠಡಿಗಳ ಈ ಶಾಲೆಯಲ್ಲಿ ಒಂದು ಕೊಠಡಿ ರಿಪೇರಿಯಲ್ಲಿದ್ದು, ಇನ್ನೆರಡು ಕೊಠಡಿ­ಗಳಲ್ಲಿ 1 ರಿಂದ 5ನೇ ತರಗತಿಯ ಪಾಠಗಳು ನಡೆಯುತ್ತವೆ.5ನೇ ತರಗತಿ ಅಭ್ಯಾಸ ಮಾಡುವ 5 ಬಾಲಕಿಯರು ಶಾಲೆಗೆ ಬರುತ್ತಿಲ್ಲ. ಪಾಲ­-­ಕರಿಗೆ ಎಷ್ಟು ತಿಳಿವಳಿಕೆ ನೀಡಿ­ದರೂ ಪ್ರಯೋಜನವಾಗಿಲ್ಲ’ ಎಂಬುದು ಶಿಕ್ಷಕ ಚವ್ಹಾಣರ ನೋವು.ಯಾರು ಶಾಲೆಗೆ ಬಂದಿಲ್ಲವೋ ಅವರ ಮನೆಗೆ ತೆರಳಿ ಪಾಲಕರಿಗೆ ತಿಳಿ­ವಳಿಕೆ ನೀಡುತ್ತಾರೆ. 5ನೇ ತರಗತಿ ನಂತರ ಶಾಲೆಗೆ ಹೋಗುವುದನ್ನು ಬಿಟ್ಟ ಮಕ್ಕಳನ್ನೂ ಶಾಲೆಗೆ ಕಳುಹಿಸಲು ಮನವಿ ಮಾಡುತ್ತಾರೆ.ಆನಂದ ಚವ್ಹಾಣ ಎಂದರೇ ಇಲ್ಲಿನ ಜನರಿಗೂ ಅಚ್ಚುಮೆಚ್ಚು. ’ನಮ್ಮ ಮಕ್ಕಳಿ­ಗೆ ಬರೆಯಲು ಓದಲು ಏನು ಬರು­ತ್ತಿರಲಿಲ್ಲ ಇವರು ಬಂದ ಮೇಲೆ ಮಕ್ಕಳು ಬರೆಯುತ್ತಾರೆ ಓದುತ್ತಾರೆ ಎನ್ನುತ್ತಾರೆ’ ಬಾಲುಸಿಂಗ್‌ ರಾಠೋಡ್‌ ಮತ್ತು ವೀರ-­ಶೆಟ್ಟಿ ಮಾಸ್ತರ್‌,ಇಲ್ಲಿನ ಮಕ್ಕಳು ಪ್ರತಿಭಾ ಕಾರಂಜಿ, ಕಲಿಕೋತ್ಸವ ಮತ್ತಿತರ ಸ್ಪರ್ಧೆಗಳಲ್ಲಿ ತಾಲ್ಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮೌಲ್ಯಾಂಕನ ಪರೀಕ್ಷೆ ಕಿರಿ­ಯ ಪ್ರಾಥಮಿಕ ಶಾಲೆಗೆ ­ನಡೆ­ಸುವುದಿಲ್ಲ.ಆದರೆ, ಈ ಶಿಕ್ಷಕನ ಪರಿಶ್ರಮದಿಂದ ಇಲ್ಲಿ ನ ಮಕ್ಕಳು ಮೌಲ್ಯಾಂಕನ ಪರೀಕ್ಷೆ ಬರೆದಿದ್ದಾರೆ. ನವೋದಯ, ಮೊರಾರ್ಜಿ ದೇಸಾಯಿ, ಆದರ್ಶ ವಿದ್ಯಾಲಯಗಳ ಪ್ರವೇಶ ಪರೀ­ಕ್ಷೆಗಳನ್ನು ಇಲ್ಲಿನ ಮಕ್ಕಳು ಎದು­ರಿಸುವಂತೆ ಇಲ್ಲಿನ ಶಿಕ್ಷಕರು ಮಕ್ಕಳನ್ನು ಸಜ್ಜುಗೊಳಿಸಿದ್ದಾರೆ.ತರಗತಿ ಕೊಠಡಿ, ಶಿಕ್ಷಕರ ಕೊರತೆ ಹಾಗೂ ಭಾಷೆಯ ಗೊಂದಲದ ನೆಪ ಹೇಳಿ ಜಾರಿಕೊಳ್ಳುವವರೇ ಹೆಚ್ಚಾಗಿ­ರುವಾಗ, ’ಮನಸ್ಸಿದ್ದಲ್ಲಿ ಮಾರ್ಗ’ ಎಂಬಂತೆ ಆನಂದ ಚವ್ಹಾಣ ’ಕಾಯಕ ಪ್ರಜ್ಞೆ’ ಮೆರೆದು ಇತರರಿಗೆ ಮಾದ­ರಿಯಾಗಿ ’ಮಗು ಕೇಂದ್ರಿತ ಶಿಕ್ಷಣ ವ್ಯವಸ್ಥೆ’ ಜಾರಿಗೆ ಶ್ರಮಿಸುತ್ತಿದ್ದಾರೆ ಎನ­್ನುವುದು ಇಲ್ಲಿನ ತಾಂಡಾ ನಿವಾಸಿಗಳ ಅಭಿಮತ.‘ವಸತಿ ನಿಲಯ ಬೇಕು’

ಗೊಂದಲಶೇತ ತಾಂಡಾವು ಜಂಗ್ಲಿಪೀರ, ಗೌಡಪಗೌಡಿ, ರಾಮಶೆಟ್ಟಿ ನಾಯಕ, ಭಿಕ್ಕು ನಾಯಕ, ಗುಂಡು ನಾಯಕ್‌, ಮೋಕಿನ ತಾಂಡಾ, ಜಾನು ನಾಯಕ ತಾಂಡಾಗಳ ಮಧ್ಯದಲ್ಲಿದೆ. ಇಲ್ಲಿನ ಸರ್ಕಾರಿ ಕಿರಿಯ ಶಾಲೆಯನ್ನು ಮೇಲ್ದರ್ಜೆಗೇರಿಸಿ ಇಲ್ಲಿ ವಸತಿ ನಿಲಯ ಮಂಜೂರು ಮಾಡಿದರೆ, ಅದರ ನಿರ್ಮಾಣಕ್ಕೆ ನನ್ನ ಸ್ವಂತ ಜಮೀನು ದಾನ ಮಾಡುತ್ತೇನೆ

–ಡಾ. ಧಾರಾಸಿಂಗ್‌ ರಾಠೋಡ್‌

ಸ್ಥಳೀಯ ಮುಖಂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.