ತಾಂತ್ರಿಕಯುಗದಲ್ಲಿ ಗಾಂಧೀಜಿಯ ಪ್ರಸ್ತುತತೆ

7

ತಾಂತ್ರಿಕಯುಗದಲ್ಲಿ ಗಾಂಧೀಜಿಯ ಪ್ರಸ್ತುತತೆ

Published:
Updated:

`ಚರಕ~ದ ಬಾಪುವಿನ ಭಾರತ ಇಂದು `ಚಂದ್ರಯಾನ~ವನ್ನೂ ಯಶಸ್ವಿಯಾಗಿ ಪೂರೈಸಿದೆ. ಸ್ವತಂತ್ರ ಭಾರತದ ಹೆಮ್ಮೆಗಳಲ್ಲಿ ತಾಂತ್ರಿಕ ಸ್ವಾಯತ್ತತೆಯೂ ಒಂದು. ಎಲ್ಲೋ ಯಾರೋ ಕೆಲವರಿಗೆ ಸೀಮಿತವಾಗಿದ್ದ ಉನ್ನತ ತಂತ್ರಜ್ಞಾನ ಇಂದು ಟಿವಿ, ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಮೂಲಕ ಜನಸಾಮಾನ್ಯರನ್ನು ತಲುಪಿದೆ.ದಿನನಿತ್ಯದ ಬದುಕಿನಲ್ಲಿ ತಂತ್ರಜ್ಞಾನದ ಫಲಗಳನ್ನು ಅನುಭವಿಸುತ್ತಲೇ ಇದ್ದರೂ ನಾವು ಎಲ್ಲವನ್ನೂ ಸುಮ್ಮನೆ ಒಪ್ಪಿಕೊಂಡಿಲ್ಲ. ಆಣೆಕಟ್ಟುಗಳ ವಿಚಾರ ಇಂದೂ ಭಾರೀ ಹೋರಾಟವನ್ನು ಎದುರಿಸುತ್ತಿದೆ. ಹಾಗೆಯೇ ಅಣುಸ್ಥಾವರಗಳು, ಜೈವಿಕ ತಂತ್ರಜ್ಞಾನದ ಹತ್ತಿ, ಬದನೆಗಳ ವಿರೋಧವೂ ಇನ್ನೂ ನಿಂತಿಲ್ಲ.

 

ಕಾರ್ಖಾನೆಗಳಿಗೆ ನೆಲ ಕೊಡಲು ಜನ ಒಪ್ಪುತ್ತಿಲ್ಲ. ಈ ಮಧ್ಯೆ ನೈಸರ್ಗಿಕ ಸಂಪನ್ಮೂಲಗಳ ನಿರಂತರ ಲೂಟಿ ನಡೆಯುತ್ತಲೇ ಇದೆ. ಬರ ಮತ್ತು ನೆರೆ ಒಂದಾದ ಮೇಲೆ ಒಂದು ನಮ್ಮನ್ನು ಕಂಗಾಲು ಮಾಡುತ್ತಿವೆ.ಈ ಎಲ್ಲಾ ಸಮಸ್ಯೆಗಳಿಗೂ ಬೇಜವಾಬ್ದಾರಿ ತಂತ್ರಜ್ಞಾನವೇ ಕಾರಣ ಎಂಬ ಕೂಗು ಜೋರಾಗುತ್ತಿದೆ.  ತಂತ್ರಜ್ಞಾನದ ಆಯ್ಕೆ ಮತ್ತು ಬಳಕೆಯ ಗೊಂದಲಗಳಿಗೆ ಗಾಂಧೀಜಿಯವರ ಚಿಂತನೆಯಲ್ಲಿ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.ಇಷ್ಟಕ್ಕೂ ಗಾಂಧೀಜಿಯವರನ್ನು ಈ ವಿಷಯಕ್ಕೆ ಎಳೆದು ತರುವುದು ಸರಿಯೇ? ನಮಗೆ ಗಾಂಧೀಜಿ ಎಂದರೆ ಸ್ವಾತಂತ್ರ ಸೇನಾನಿ ಮಾತ್ರ. ಮತ್ತೂ ಮುಂದುವರೆದರೆ ಸಾಮಾಜಿಕ ನ್ಯಾಯದ ಸಂತ. ಆದರೆ ಈ ಸೀಮಿತ ನೋಟದಿಂದ ನಾವು ಗಾಂಧೀಜಿಯವರ ವ್ಯಕ್ತಿತ್ವದ ಸಂಪೂರ್ಣ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ.

 

ಕಷ್ಟದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿ ಅದನ್ನು ಮುಂದುವರೆಸಿದ ರೀತಿ ಅನನ್ಯ. ಮತ್ತೆ ಅವರು ಒಬ್ಬ ತತ್ವಜ್ಞಾನಿಯಾಗಿ ಸಮಗ್ರ ದರ್ಶನವನ್ನು ರೂಪಿಸಿ, ಅದನ್ನು ಪುಸ್ತಕಕ್ಕೆ ಸೀಮಿತಗೊಳಿಸದೆ ವಿಜ್ಞಾನಿಯಂತೆ ಕಾರ್ಯರೂಪಕ್ಕೆ ತಂದರು.ಹಾಗಾಗಿಯೇ ತಂತ್ರಜ್ಞಾನದ ವಿಷಯದಲ್ಲಿ ಗಾಂಧೀಜಿಯವರ ಅಭಿಪ್ರಾಯವನ್ನು ತಿಳಿಯುವುದು ಮತ್ತು ಅದನ್ನು ಪುನರ್ ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ.`ಹಿಂದ್ ಸ್ವರಾಜ್~ಎಂಬುದು ಗಾಂಧೀಜಿಯವರು ಗುಜರಾತಿ ಪತ್ರಿಕೆ `ಇಂಡಿಯನ್ ಒಪಿನಿಯನ್~ ನಲ್ಲಿ ಬರೆದ ಅಂಕಣಗಳ ಸ್ವಅನುವಾದ. 1910 ರಲ್ಲಿ ಪ್ರಕಟವಾದ ಈ ಪುಸ್ತಕ ಓದುಗ -ಸಂಪಾದಕನ ಸಂವಾದ ರೂಪದಲ್ಲಿದೆ.ಇಲ್ಲಿ ನಮಗೆ ಬಹಳಷ್ಟು ವಿಚಾರಗಳ ಮೇಲೆ ಗಾಂಧೀಜಿಯವರ ಸ್ಪಷ್ಟ ಅಭಿಪ್ರಾಯ ಸಿಗುತ್ತದೆ. ಈ ಪುಸ್ತಕದ 19ನೇ ಅಧ್ಯಾಯದಲ್ಲಿ ಐದು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಗಾಂಧೀಜಿ ಯಂತ್ರಗಳು ಮತ್ತು ತಂತ್ರಜ್ಞಾನದ ಬಗ್ಗೆ ತಮ್ಮ ನೇರ ಅಸಹನೆಯನ್ನು ಹೊರಹಾಕಿದ್ದಾರೆ. ಅವರ ಕೆಲವು ಮಾತುಗಳು ಹೀಗಿವೆ.

“ಯಂತ್ರಗಳು ಆಧುನಿಕ ಸಂಸ್ಕೃತಿಯ ಲಕ್ಷಣ; ಅವು ಬಹಳ ದೊಡ್ಡ ಪಾಪವನ್ನು ಪ್ರತಿನಿಧಿಸುತ್ತವೆ”.“ಜನರು ಯಂತ್ರದಿಂದ ಮಾಡಿದ ವಸ್ತುಗಳನ್ನು ನಿಷೇಧಿಸಬೇಕು”.ಮೇಲಿನ ಎರಡೂ ಹೇಳಿಕೆಗಳು ಯಂತ್ರದಿಂದ ಮಾಡಿದ ಬಟ್ಟೆಗಳ ಬಗೆಗಿನ ಟಿಪ್ಪಣಿಗಳು. ಆದರೆ ಮುಂದೆ ಗಾಂಧೀಜಿ ಯಂತ್ರಗಳಿಂದ ಮಾಡಿದ ಸೂಜಿ, ಬೆಂಕಿ ಕಡ್ಡಿಗಳನ್ನು ಸಹ ಉಪಯೋಗಿಸಬಾರದೆಂದು ಹೇಳುತ್ತಾರೆ.

 

ರೈಲು, ವಿದ್ಯುತ್ ಕೂಡ ಅವರಿಗೆ ಬೇಡ. ಕೊನೆಗೆ ಯಂತ್ರದಿಂದ ಮುದ್ರಿತವಾದ ಪುಸ್ತಕಗಳ ಬಗ್ಗೆಯೂ ಅವರಿಗೆ ಸಮಾಧಾನವಿಲ್ಲ. ಮತ್ತೆ ಅವರದೇ ಮಾತುಗಳಲ್ಲಿ “ನನಗೆ ಯಂತ್ರಗಳ ಬಗ್ಗೆ ಒಂದೇ ಒಂದು ಒಳ್ಳೆಯ ಮಾತು ನೆನಪಾಗುತ್ತಿಲ್ಲ”“ನೆನಪಿಡಿ, ಯಂತ್ರಗಳು ಕೆಟ್ಟವು, ಹಾಗೆಂದು ನಾವು ಪದೇ ಪದೇ ಅಂದುಕೊಳ್ಳುತ್ತಿದ್ದರೆ ಕ್ರಮೇಣ ಅವುಗಳ ಬಳಕೆ ನಿಲ್ಲಿಸಿಬಿಡುತ್ತೇವೆ”ಗಾಂಧೀಜಿ ಎಲ್ಲೋ ಕೂತು ಕೆಲಸ ಮಾಡಿದವರಲ್ಲ. ಅವರು 3 ಖಂಡಗಳನ್ನು ಸುತ್ತಿದವರು. ಭಾರತದ ಮೂಲೆ ಮೂಲೆಗೆ ಅವರ ಪ್ರಯಾಣ ಸಾಗಿತ್ತು. ಅವರ ಬಳಿ ಪುಸ್ತಕದ ದೊಡ್ಡ ಸಂಗ್ರಹವಿತ್ತು.

 

ದಂಡಿ ಸತ್ಯಾಗ್ರಹ ರೈಲ್ವೆ ಹಳಿಗಳ ದಾರಿಯಲ್ಲೇ ನಡೆಯಲು ಕಾರಣ ಮಾಧ್ಯಮದವರಿಗೆ ಅನುಕೂಲವಾಗಲೆಂದು ಮತ್ತೂ ಅವರೇ ಸ್ವತಃ ಪತ್ರಿಕೆ ನಡೆಸಿದವರು. ಅವರು ಎರಡೇ ಸಿನಿಮಾ ನೋಡಿದ್ದರೆಂಬ ಪ್ರತೀತಿ ಇದ್ದರೂ, ಅವರ ಭಾವಚಿತ್ರಗಳೂ, ಧ್ವನಿಮುದ್ರಿಕೆಗಳು ಬಹಳ ಸಿಗುತ್ತವೆ.ಹೋಗಲಿ, ಕನ್ನಡಕವಿಲ್ಲದ ಗಾಂಧಿಯನ್ನು ಕಂಡಿದ್ದೀರಾ? ಹೀಗೆ ಅನೇಕ ಯಂತ್ರೋಪಕರಣಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉಪಯೋಗಿಸುತ್ತಿದ್ದ ಗಾಂಧೀಜಿಯವರಿಗೆ ಸೂಜಿಯ ಮೇಲೆ ಸಿಟ್ಟು ಬಂದದ್ದು ಯಾಕೆ? ಮ್ಯಾಂಚೆಸ್ಟರ್‌ನ ಯಾಂತ್ರೀಕೃತ ಗಿರಣಿಗಳಲ್ಲಿ ತಯಾರಾದ ಬಟ್ಟೆಗಳ ಬಗ್ಗೆ ಗಾಂಧೀಜಿಯವರ ವಿರೋಧ ನಮಗೆ ಸುಲಭವಾಗಿ ಅರ್ಥವಾಗುತ್ತದೆ.

 

ಹಾಗೆ ನೋಡಿದರೆ ಇಂಗ್ಲೆಂಡಿನಲ್ಲಿಯೇ 19ನೇ ಶತಮಾನದಲ್ಲಿ `ಲುದೈತ್~ಎಂಬ ನೇಕಾರರ ಗುಂಪು ಬಟ್ಟೆ ನೇಯುವ ಯಂತ್ರಗಳನ್ನು ನಾಶಪಡಿಸುವ ಕಾರ್ಯದಲ್ಲಿ ತೊಡಗಿತ್ತು. ಅಂದಿನಿಂದ ಯಂತ್ರ ವಿರೋಧಿ ಜನರನ್ನು `ಲುದೈತ್~ ಎಂದು ಕರೆಯುವುದು ವಾಡಿಕೆಯಾಗಿದೆ.ಭಾರತದ ಶ್ರಮಜೀವಿಗಳ ಕೆಲಸ ಕಸಿದುಕೊಂಡ ಮಿಲ್ಲುಗಳ ಮೇಲಿನ ದ್ವೇಷ ಸೂಜಿಯವರೆಗೂ ಹರಡಿದ್ದು ಹೇಗೆ? ಹಾಗಾದರೆ ಗಾಂಧೀಜಿ ಕೂಡ `ಲುದೈತ್~ ಆಗಿದ್ದರೆ? ಅಂತಹ ಗಾಂಧೀಜಿ ಇಂದಿನ ಕಾಲಕ್ಕೆ ಹೀಗೆ ಪ್ರಸ್ತುತವಾಗುತ್ತಾರೆ?ಮೇಲು ನೋಟಕ್ಕೆ ಯಂತ್ರ ವಿರೋಧಿಯೆಂದು ಕಂಡುಬರುವ ಗಾಂಧೀಜಿಯವರನ್ನು ತಂತ್ರಜ್ಞಾನದ ತಕ್ಕೆಗೆ ಕರೆದುಕೊಂಡು ಬಂದದ್ದು `ಆಪಲ್~ ಎಂಬ ಸಂಸ್ಥೆ. ತನ್ನ 1998ರ ಜಾಹಿರಾತಿನಲ್ಲಿ ಪ್ರಪಂಚದ ಮಹಾನ್ ವ್ಯಕ್ತಿಗಳನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿತ್ತು.ಆ ಸಮಯದಲ್ಲಿ ಐ.ಬಿ.ಯಂ. ಎಂಬ ದೈತ್ಯ ಕಂಪನಿಯೊಂದಿಗೆ ಹೋರಾಟ ಮಾಡಬೇಕಿದ್ದ ಆಪಲ್‌ಗೆ ಬ್ರಿಟಿಷ್ ಸತ್ತೆಯ ವಿರುದ್ಧ ಹೋರಾಡಿ ಗೆದ್ದ ಗಾಂಧೀಜಿ ಆಪ್ತರಾಗಿ ಕಂಡಿರಬೇಕು.ಬಹುಶಃ ಲೂಯಿಸ್ ಮುಂಫೋರ್ಡ್ ಅವರ ಚಿಂತನೆಗಳಿಂದ ನಾವು ಗಾಂಧೀಜಿಯವರ ನಿಲುವುಗಳನ್ನು ಅರ್ಥಮಾಡಿಕೊಳ್ಳಬಹುದು. ಮುಂಫೋರ್ಡ್ ಅವರ ಪ್ರಕಾರ ತಂತ್ರಜ್ಞಾನವನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. ಒಂದು `ಪಾಲಿ ಟೆಕ್ನಿಕ್~ ಮತ್ತೊಂದು `ಮೋನೋ ಟೆಕ್ನಿಕ್~ ಮೊದಲನೆಯದು ಪ್ರಕೃತಿಯನ್ನು ಹಾಳುಮಾಡದೆ ಒಟ್ಟು ಜೀವಕುಲದ ಸಮತೋಲನವನ್ನು ಕಾಪಾಡುತ್ತದೆ.ಮೋನೋ ಟೆಕ್ನಿಕ್‌ಗಳು ಕೇಂದ್ರೀಕೃತ ಉತ್ಪಾದನಾ ಪ್ರಕ್ರಿಯೆಯಿಂದ ಆ ನಾಜೂಕಾದ ಸಮತೋಲನವನ್ನು ಕೆಡಿಸಿಬಿಡುತ್ತವೆ. ಹಾಗಾಗಿ ನಾವು ಪಾಲಿಟೆಕ್ನಿಕ್‌ಗಳನ್ನು ಒಪ್ಪಿಕೊಂಡು ಮತ್ತೊಂದನ್ನು ನಿರಾಕರಿಸಬೇಕು. ಗಾಂಧೀಜಿಯವರು ಈ ವಾದವನ್ನು ಒಪ್ಪುತ್ತಿದ್ದರು ಅನಿಸುತ್ತದೆ.ಅವರ ಇಷ್ಟದ ಚರಕ ಕೂಡ ಒಂದು ಯಂತ್ರವೇ ತಾನೇ? ಆದರೆ ಅದು ಜನರು ತಮ್ಮ ಕೈಗಳಿಂದಲೇ ಬಳಸಬಹುದಾದ ಯಂತ್ರ. ಹಾಗಾಗಿ ಅದನ್ನು ಉಪಕರಣ ಎಂದು ಕರೆಯೋಣ. ಗಾಂಧೀಜಿಯವರಿಗೆ ಉಪಕರಣಗಳ ಬಳಕೆಯ ಬಗೆಗೆ ವಿರೋಧ ಇರಲಿಲ್ಲ ಆದರೆ ಬೃಹತ್ ಯಂತ್ರಗಳಿಂದ ಕೂಡಿದ ಕೈಗಾರಿಕೆಗಳ ಬಗೆಗೆ ಅವರಿಗೆ ನಂಬಿಕೆ ಇರಲಿಲ್ಲ.ಸಣ್ಣ ಸಣ್ಣ ಗುಂಪುಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ತಾವೇ ತಯಾರು ಮಾಡುವ `ಗ್ರಾಮ ಸ್ವರಾಜ್ಯ~ ಅವರ ಆದರ್ಶದ ಕಲ್ಪನೆಯಾಗಿತ್ತು. ಹಾಗಾಗಿ ನಾವು ಗಾಂಧೀಜಿಯವರನ್ನು `ಯಂತ್ರ ದ್ವೇಷಿ~ ಎಂದು ನೋಡದೆ `ಜನಪರ ತಂತ್ರಜ್ಞಾನ~ದ ಬೆಂಬಲಿಗರೆಂದು ಗೌರವಿಸಬೇಕಿದೆ.ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಗಾಂಧೀಜಿಯವರ ಈ ತತ್ವವನ್ನು ಪರಿಪಾಲಿಸಿಕೊಂಡು ಬಂದಿರುವ ಗುಂಪು ಒಂದಿದೆ. `ಸ್ವತಂತ್ರ ಮತ್ತು ಮುಕ್ತ ಸಾಫ್ಟ್‌ವೇರ್~  ಗಾಂಧೀಜಿಯವರ ಜನಪರ ನಿಲುವನ್ನು ಜೀವಂತವಾಗಿ ಇಟ್ಟಿದೆ.ಈ ಸಾಫ್ಟ್‌ವೇರ್ ಸಂಸ್ಕೃತಿ ಯಾವುದೇ ದೊಡ್ಡ ಮಾರುಕಟ್ಟೆ ವ್ಯವಸ್ಥೆಗೆ ಒಳಪಡದೆ, ಪ್ರಪಂಚದ ನಾನಾ ಕಡೆಯ ಕಾರ್ಯಕರ್ತರನ್ನು ಸೇರಿಸಿ, ಬಹುಮಟ್ಟಿಗೆ ಯಾವುದೇ ಹಣದ ನಿರೀಕ್ಷೆಯಿಲ್ಲದೆ, ಇದ್ದರೂ ಸ್ವಲ್ಪ ಹಣಕ್ಕೆ ಗುಣಮಟ್ಟದ ಸಾಫ್ಟ್‌ವೇರ್ ತಯಾರಿಸಿ ಜನರಿಗೆ ನಿರಂತರವಾಗಿ ನೀಡುತ್ತಾ ಬಂದಿದೆ.ಗಾಂಧೀಜಿಯವರ ತತ್ವಗಳನ್ನು ತಮ್ಮದೇ ರೀತಿಯಲ್ಲಿ ಕಾರ್ಯರೂಪಕ್ಕೆ ತರುವ ಮೂಲಕ ಈ ಗುಂಪು ಗಾಂಧಿ ದರ್ಶನದ ಸಾರ್ವಕಾಲಿಕತೆಯನ್ನು ಸಾರುತ್ತಿದೆ. ಇದು ಇಂದಿನ ತಾಂತ್ರಿಕ ಮಂದಿಗೆ ಪಾಠವೂ ಆಗಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry