ಗುರುವಾರ , ಮೇ 6, 2021
26 °C

ತಾಂತ್ರಿಕ ಅಡಚಣೆ: ರೈಲು ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿಗೆ ಸಮೀಪದ ನಾಗನಹಳ್ಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಉಂಟಾದ ತಾಂತ್ರಿಕ ಅಡಚಣೆಯಿಂದ ಮೈಸೂರು-ಬೆಂಗಳೂರು ಮಧ್ಯೆ ಸಂಚರಿಸುವ 6 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು.ಬೆಳಿಗ್ಗೆ 6.45 ಗಂಟೆಗೆ ಮೈಸೂರಿನಿಂದ ಹೊರಟ ಚಾಮುಂಡಿ ಎಕ್ಸ್‌ಪ್ರೆಸ್ ರೈಲು ನಾಗನಹಳ್ಳಿ ತಲುಪಿದಾಗ ನಿಲ್ದಾಣದಲ್ಲಿರುವ ಸಿಗ್ನಲ್ ಕೆಂಪು ದೀಪ ತೋರಿದ್ದರಿಂದ ನಿಲುಗಡೆ ಇಲ್ಲದಿದ್ದರೂ ರೈಲು ನಿಲ್ಲಬೇಕಾಯಿತು. ಇದರಿಂದಾಗಿ ಮೈಸೂರು-ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳು ಮದ್ದೂರು, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ರಾಮನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ಕೆಲಹೊತ್ತು ನಿಲುಗಡೆ ಹೊಂದಬೇಕಾಯಿತು.ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಿಗ್ನಲ್ ದೀಪಗಳ ತಾಂತ್ರಿಕ ತಜ್ಞರು ಪರಿಶೀಲನೆ ನಡೆಸಿದಾಗ ಸಿಗ್ನಲ್ ದೀಪದಲ್ಲಿ ವ್ಯತ್ಯಾಸವಾಗಿ ಹಸಿರು ದೀಪದ ಬದಲು ಕೆಂಪು ದೀಪ ತೋರಿಸಿರುವುದು ಕಂಡು ಬಂದಿತು.

`ಇದೇ ಮೊದಲ ಬಾರಿಗೆ ಸಿಗ್ನಲ್ ದೀಪದ ಕಂಬಗಳಲ್ಲಿನ ತಾಂತ್ರಿಕ ದೋಷದಿಂದ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು~ ಎಂದು ನೈರುತ್ಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನೂಪ್ ದಯಾನಂದ ಸಾದು ತಿಳಿಸಿದರು.ಸುಮಾರು 3 ಗಂಟೆಗೂ ಹೆಚ್ಚು ಕಾಲ ಮೈಸೂರು-ಬೆಂಗಳೂರು ಮಧ್ಯೆ ರೈಲುಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ದಿನ ನಿತ್ಯದ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ಪರದಾಡಿದರು. ತಾಂತ್ರಿಕ ತಜ್ಞರು ಸಿಗ್ನಲ್ ದೀಪವನ್ನು ದುರಸ್ತಿ ಮಾಡಿದ ಬಳಿಕ, ಬೆಳಿಗ್ಗೆ 10.15ರಿಂದ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.ಪರದಾಡಿದ ಸಾವಿರಾರು ಪ್ರಯಾಣಿಕರು

ಮಂಡ್ಯ: ಸಿಗ್ನಲ್ ದೀಪದಲ್ಲಿ ಕಾಣಿಸಿಕೊಂಡ ದೋಷ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಮಂಡ್ಯ ಮತ್ತು ಬೆಂಗಳೂರು ನಡುವಣ ರೈಲ್ವೆ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದ್ದು, ಉಭಯ ನಗರಗಳ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರು ಇದರಿಂದ ತೊಂದರೆಗೆ ಒಳಗಾದರು.ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಮೈಸೂರು-ತೂತುಕುಡಿ ಎಕ್ಸ್‌ಪ್ರೆಸ್ ರೈಲು ಮಂಡ್ಯ ನಿಲ್ದಾಣದಲ್ಲಿಯೇ ಕೆಲ ಹೊತ್ತು ನಿಲ್ಲಬೇಕಾಯಿತು. ಚಾಮುಂಡಿ ಎಕ್ಸೆಪ್ರೆಸ್ ರೈಲು ಮದ್ದೂರಿನ ನಿಲ್ದಾಣದ ಬಳಿಯೇ ನಿಲ್ಲಬೇಕಾಯಿತು.ನೌಕರರು ಸೇರಿ ಮೈಸೂರು, ಮಂಡ್ಯದಿಂದ ನೂರಾರು ಪ್ರಯಾಣಿಕರು ನಿತ್ಯ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಸರ್ಕಾರಿ ನೌಕರರು ಇದ್ದಾರೆ. ಆದರೆ, ಗುಡ್‌ಫ್ರೈಡೆ ಅನ್ವಯ ರಜೆ ದಿನ ಇದ್ದ ಕಾರಣ ಪ್ರಯಾಣಿಕರ ಒತ್ತಡ  ಕಡಿಮೆ ಇತ್ತು. ಸಿಗ್ನಲ್ ದೀಪದ ದೋಷ ಸರಿಪಡಿಸಿದ ಬಳಿಕ ಮತ್ತೆ ರೈಲು ಸಂಚಾರ ಯಥಾಸ್ಥಿತಿಗೆ ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.