ತಾಂತ್ರಿಕ ಕೌಶಲ ಪ್ರಾಯೋಗಿಕ ಅಧ್ಯಯನ

7

ತಾಂತ್ರಿಕ ಕೌಶಲ ಪ್ರಾಯೋಗಿಕ ಅಧ್ಯಯನ

Published:
Updated:
ತಾಂತ್ರಿಕ ಕೌಶಲ ಪ್ರಾಯೋಗಿಕ ಅಧ್ಯಯನ

ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿತೆಂದರೆ ವಿದ್ಯಾರ್ಥಿಗಳಿಗೆ ಸ್ವರ್ಗ ಮೂರೇ ಗೇಣು. ಆ ಖುಷಿಯಲ್ಲಿ, ಇನ್ನೇನು ಎಂಜಿನಿಯರ್ ಆಗೇಬಿಟ್ಟೆ, ಯಾವುದೋ ಕಂಪೆನಿಯಲ್ಲಿ ಹೇಗೋ ನೌಕರಿ ಸಿಗುತ್ತದೆ, ತಂದೆ-ತಾಯಿ ಕಷ್ಟಪಟ್ಟು ಕೊಡಿಸಿದ ಎಂಜಿನಿಯರಿಂಗ್ ಸೀಟಿಗೆ ಫಲ ದೊರೆತೇ ದೊರೆಯುತ್ತದೆ, ಜೀವನ ನಿರಾಳವಾಗುತ್ತದೆ ಎಂದೆಲ್ಲ ದೊಡ್ಡ ಕನಸನ್ನು ಕಟ್ಟಿಕೊಂಡಿರುತ್ತಾರೆ ನಮ್ಮ ಯುವಮಿತ್ರರು. ಆದರೆ, ಬಹುತೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಾಸ್ತವವನ್ನು ತಿಳಿಯದೆ ಹಾಗೇ ಉಳಿದುಬಿಡುತ್ತಾರೆ.ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಹೇಗೋ ಓದಿ ಪಾಸಾಗುವುದೇ ಪುಣ್ಯ ಎಂದು ಭಾವಿಸುತ್ತಾರೆ. ಉತ್ತಮ ಅಂಕ ತೆಗೆಯಲು ಹೆಣಗಾಡುತ್ತಾರೆ. ಕೆಲವರು ಪದೇ ಪದೇ ಓದಿ ಒಳ್ಳೆಯ ಅಂಕ ತೆಗೆಯಬಹುದು. ಇನ್ನು ಕೆಲವರು ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ಸುಮ್ಮನಾಗಿರುತ್ತಾರೆ. ಆಳ ಅಧ್ಯಯನದತ್ತ ಗಮನ ಹರಿಸದೆ, ಮೇಲ್ಮೈ ಓದಿನಲ್ಲೇ ತೃಪ್ತಿಪಟ್ಟುಕೊಳ್ಳುತ್ತಾರೆ.ಅವರಿಗೆಲ್ಲ ಮುಂದೆ ನಿಜವಾದ ಎಚ್ಚರಿಕೆಯ ಗಂಟೆ ಬಾರಿಸುತ್ತದೆ. ಓದಿದ ವಿಷಯಗಳಿಗೂ ಕೇಳುವ ಪ್ರಶ್ನೆಗಳಿಗೂ ತಾಳ-ಮೇಳ ಇಲ್ಲ ಎನಿಸತೊಡಗುತ್ತದೆ. ಓದಿದ್ದೇ ಸತ್ಯ, ಉಳಿದೆಲ್ಲವೂ ಮಿಥ್ಯ ಎಂದು ನಂಬಿಕೊಂಡಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗರಬಡಿದಂತೆ ಮಾಡುವುದು ಕ್ಯಾಂಪಸ್ ಇಂಟರ್‌ವ್ಯೆ. ಉದ್ಯೋಗ ನೀಡುವ ಕಂಪೆನಿಗಳು ತಮಗೆ ಬೇಕಾದ ಅರ್ಹತೆಯುಳ್ಳ ವಿದ್ಯಾರ್ಥಿಗಳನ್ನು ಆಯಾಯ  ಕಾಲೇಜುಗಳಲ್ಲೇ ಪರೀಕ್ಷಿಸುತ್ತವೆ.ಕಂಪೆನಿಗಳ ಕ್ಯಾಂಪಸ್ ಪರೀಕ್ಷೆಗಳಲ್ಲಿ ಪಾಸಾದರೆ ಕೆಲಸ! ಇಲ್ಲದಿದ್ದರೆ ಬದುಕಿನ ಹೋರಾಟ ಆರಂಭ. ಕಂಪೆನಿಯಲ್ಲಿ ಕೆಲಸ ಮಾಡಲು ಬೇಕಾಗಿರುವ ಜ್ಞಾನ, ಕೌಶಲ, ಸನ್ನಡತೆ ಮತ್ತು ಸಕಾಲಿಕ ಬುದ್ಧಿವಂತಿಕೆ ಇಲ್ಲದಿದ್ದರೆ ಅಂಥ ವಿದ್ಯಾರ್ಥಿಗಳನ್ನು ಕಂಪೆನಿಗಳು ಆಯ್ಕೆ ಮಾಡಿಕೊಳ್ಳುವುದಿಲ್ಲ.ಇತ್ತೀಚಿನ ವರದಿಗಳ ಪ್ರಕಾರ, ಹೀಗೆ ಆಯ್ಕೆ ಆಗದ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ಶೇಕಡಾ 75- 80ರಷ್ಟು. ಅಂದರೆ  ಎಂಜಿನಿಯರಿಂಗ್ ಪದವಿ ಪಡೆದು ಹೊರಬಂದ 100 ವಿದ್ಯಾರ್ಥಿಗಳ ಪೈಕಿ ಸೂಕ್ತ ನೌಕರಿ ಸಿಗುವುದು ಕೇವಲ 20- 25 ಮಂದಿಗೆ ಮಾತ್ರ! ಹಾಗಿದ್ದರೆ ಉಳಿದವರ ಗತಿ ಏನು? ಅವರೇನು ಮಾಡುತ್ತಾರೆ? ಇದು ಸಾಮಾಜಿಕ- ಶೈಕ್ಷಣಿಕ- ಔದ್ಯೋಗಿಕ ಪ್ರಶ್ನೆಯಲ್ಲವೇ? ಇದಕ್ಕೆ ಉತ್ತರಿಸುವವರಾರು? ಉತ್ತರದಾಯಿತ್ವ ಯಾರದು?

ತಂತ್ರಜ್ಞಾನ ದಿನೇದಿನೇ ಬದಲಾಗುತ್ತಿದೆ. ನಿನ್ನೆಯದು ಇಂದು ಹಳೆಯದು. ಇಂದಿನದು ನಾಳೆಯ ಹೊತ್ತಿಗೆ ಹಳತು.ಇಂಥ ನಿರಂತರ ಬದಲಾವಣೆಯ ತಾಂತ್ರಿಕ ಸಂಶೋಧನೆಯ ದಿನಗಳಲ್ಲಿ ಉದ್ದಿಮೆ ರಂಗಕ್ಕೆ ಬೇಕಾದ ಜ್ಞಾನ ಸಂಪಾದಿಸುವುದು, ಅದನ್ನು ಕಾರ್ಯಾನುಭವವಾಗಿ ಮನನ ಮಾಡಿಕೊಳ್ಳುವುದು ಹೆಚ್ಚು ಅವಶ್ಯ. ಇಲ್ಲಿ ಕೇವಲ ವಿದ್ಯಾರ್ಥಿಗಳನ್ನು ದೂರಿದರೆ ಸಾಲದು. ಇಡೀ ತಾಂತ್ರಿಕ ಶೈಕ್ಷಣಿಕ ವ್ಯವಸ್ಥೆಯು ಪ್ರಾಯೋಗಿಕವಾಗಿ ಕಲಿಸುವುದನ್ನು, ಕಲಿಯುವುದನ್ನು ನಿತ್ಯದ ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು.ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ಹೇಗೆ ಕಲಿಸಬೇಕು? ಎಂಥ ಪ್ರಯೋಗಗಳನ್ನು ಮಾಡಿಸಲು ಹಚ್ಚಬೇಕು? ಪ್ರತಿ ಪ್ರಯೋಗದ ಮೂಲ ಉದ್ದೇಶ ಏನು? ಪ್ರಯೋಗ ಮಾಡಿ ಮುಗಿಸಿದ ನಂತರದ ಕಲಿಕಾ ಅನುಭವವೇನು? ಇದರಲ್ಲಿ ಶಿಕ್ಷಕರ ಪಾತ್ರವೇನು ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜ.ಇದಕ್ಕೆಲ್ಲ ಒಂದು ಉತ್ತಮ ಉದಾಹರಣೆಯಾಗುವ, ಔದ್ಯೋಗಿಕ- ಶೈಕ್ಷಣಿಕ ಸ್ನೇಹಪರ ಪ್ರಯತ್ನವನ್ನು ವಿಪ್ರೊದ  ““MISSION10X”ಕಾರ್ಯಕ್ರಮದಡಿ ರೂಪಿಸಿ ಕಾರ್ಯಗತಗೊಳಿಸಲಾಗಿದೆ. ಸಂಸ್ಥೆಯು ಕೆಲವು ಆಯ್ದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಪ್ರಯೋಗಗಳನ್ನು ಉದ್ದಿಮೆ ರಂಗ ಅಪೇಕ್ಷಿಸುವ ವಿಧಾನದಲ್ಲಿ ಸಂರಚಿಸಿದೆ.ಈ ಯೋಜನೆಯನ್ನು “MISSION10X Technology Learning Center (MTLC)”ಎಂದು ಕರೆಯಲಾಗುತ್ತಿದೆ. ಎಂಟಿಎಲ್‌ಸಿಯು ಏಕೀಕೃತ ತಂತ್ರಜ್ಞಾನ ಕಲಿಕೆಯ Unified Technology Learning Platform-UTLP) ತಳಹದಿಯ ಮೇಲೆ ಆಯೋಜಿಸಿರುವ ಬೋಧನಾ ಕಲಿಕಾ ಕಾರ್ಯಕ್ರಮ ಇದಾಗಿದೆ.ದೇಶದ 9 ರಾಜ್ಯಗಳಲ್ಲಿ 25 ಎಂಟಿಎಲ್‌ಸಿಗಳನ್ನು ಈಗಾಗಲೇ ಉದ್ಘಾಟಿಸಿ, ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಅನುವು ಮಾಡಿಕೊಡಲಾಗಿದೆ. ಇದರಲ್ಲಿ 120ಕ್ಕೂ ಹೆಚ್ಚು ತಾಂತ್ರಿಕ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ನಡೆಸಿ, ಪಾಠ ಮಾಡುವ ಮತ್ತು ಪ್ರಯೋಗಗಳನ್ನು ನಡೆಸಿಕೊಡುವ ಬಗೆಯನ್ನು ವಿಸ್ತೃತವಾಗಿ ವಿವರಿಸಲಾಗಿದೆ.ಆಯಾ ಕಾಲೇಜಿನಿಂದ ಆಯ್ಕೆಯಾದ ಎಲ್ಲ ಶಿಕ್ಷಕರನ್ನೂ ಒಂದು ವಾರದವರೆಗೆ ಸಂಸ್ಥೆಗೆ ಕರೆಸಿಕೊಂಡು ತರಬೇತಿ ಕೊಡಲಾಗುತ್ತಿದೆ. ಈ ಎಲ್ಲ ಅಧ್ಯಾಪಕರು ಸ್ವತಃ ಪ್ರಾಜೆಕ್ಟ್‌ಗಳನ್ನು ಉದ್ದಿಮೆಯ ಕಾರ್ಯಸೂತ್ರದಡಿ ಅಭಿವೃದ್ಧಿಪಡಿಸುತ್ತಾರೆ. ಈ ಮೂಲಕ, ನೂರಾರು ವಿದ್ಯಾರ್ಥಿಗಳಲ್ಲಿ ಉದ್ದಿಮೆ ರಂಗ ಅಪೇಕ್ಷಿಸುವ ಕೌಶಲ ರೂಪಿಸುವ ಪ್ರಯತ್ನ ಸಾಗಿದೆ. 

(ಲೇಖಕರು `ಮಿಷನ್ 10 ಎಕ್ಸ್' ಕಾರ್ಯಕ್ರಮದ ಮುಖ್ಯಸ್ಥರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry