ತಾಂತ್ರಿಕ ಶಿಕ್ಷಣ ಯಾಂತ್ರಿಕವೇ?

7

ತಾಂತ್ರಿಕ ಶಿಕ್ಷಣ ಯಾಂತ್ರಿಕವೇ?

Published:
Updated:

ದೇಶ ಉದ್ಧಾರ ಆಗಬೇಕಾದರೆ ಕೈಗಾರಿಕೆಗಳು ಬೇಕು ಎಂದು ಸರ್ ಎಂ.ವಿಶ್ವೇಶ್ವರಯ್ಯ ಹೇಳಿದ್ದರು. ಆದರೆ ಅದಕ್ಕೆ ಅಗತ್ಯವಾದ ತಾಂತ್ರಿಕ ಶಿಕ್ಷಣ ನಮ್ಮಲ್ಲಿ ಇದೆಯೇ? ದೇಶದ ಪ್ರಸಿದ್ಧ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.), ಐ.ಐ.ಟಿ ಮತ್ತು ಎನ್.ಐ.ಟಿ.ಗಳಿಗೂ ಪ್ರಪಂಚದ ಅತ್ಯುತ್ತಮ 50 ತಾಂತ್ರಿಕ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಹೆಸರು ಪಡೆಯಲು ಸಾಧ್ಯವಾಗಿಲ್ಲ. ಹಾಗಿದ್ದರೆ ನಮ್ಮ ತಾಂತ್ರಿಕ ಶಿಕ್ಷಣದ ಗುಣಮಟ್ಟ ಸರಿ ಇಲ್ಲವೇ?ಮಾಹಿತಿ ತಂತ್ರಜ್ಞಾನದ ದಿಗ್ಗಜಗಳಾದ ಟಿ.ಸಿ.ಎಸ್, ವಿಪ್ರೊ, ಇನ್ಫೋಸಿಸ್‌ನ ಆಡಳಿತಾಧಿಕಾರಿಗಳು ಸೇರಿದಂತೆ ಖ್ಯಾತ ಉದ್ಯಮಿಗಳು ಆಗಿಂದಾಗ್ಗೆ `ದೇಶದ ತಾಂತ್ರಿಕ ಶಿಕ್ಷಣ ಅಷ್ಟೊಂದು ಆಶಾದಾಯಕವಾಗಿಲ್ಲ' ಎಂದು ಹೇಳುತ್ತಿರುತ್ತಾರೆ. ಅವರ ಪ್ರಕಾರ, ಶೇಕಡಾ 17ರಿಂದ 20ರಷ್ಟು ತಾಂತ್ರಿಕ ಪದವೀಧರರು ಮಾತ್ರ ಕೆಲಸಕ್ಕೆ ಸೇರಿಸಿಕೊಳ್ಳಲು ಯೋಗ್ಯರು. ಅವರಲ್ಲೂ ತಾಂತ್ರಿಕ ವೃತ್ತಿ ನೈಪುಣ್ಯ ಅಷ್ಟಕ್ಕಷ್ಟೆ. ಸುಮಾರು ಹುದ್ದೆಗಳು ಖಾಲಿ ಇದ್ದರೂ, ಅಗತ್ಯವಾದ ನೈಪುಣ್ಯ ಇಲ್ಲದೇ ಇರುವುದರಿಂದ ನಿರುದ್ಯೋಗ ಸಮಸ್ಯೆ ಹಾಗೇ ಇದೆ.ನೈಪುಣ್ಯ ಇರುವ ಬೆರಳೆಣಿಕೆಯಷ್ಟು ಎಂಜಿನಿಯರಿಂಗ್ ಪದವೀಧರರು ವಿದೇಶಗಳಿಗೆ ವಲಸೆ ಹೋಗುವುದು ಹೊಸ ವಿಷಯವೇನಲ್ಲ. ಅಂದರೆ, ನಮ್ಮ ದೇಶದ ಉದ್ಯಮಿಗಳಿಗೆ ಬೇಕಾಗುವಷ್ಟು ತಾಂತ್ರಿಕ ಪದವೀಧರರನ್ನು ಸಿದ್ಧ ಮಾಡಲು ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಿಲ್ಲವೇ? ನಾವು ಎಲ್ಲಿ ಎಡವಿದ್ದೇವೆ, ಎಡವುತ್ತಿದ್ದೇವೆ?- ಇವು ಮೊದಲಿನಿಂದಲೂ ನಮ್ಮ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುವ ಪ್ರಶ್ನೆಗಳಾಗಿಯೇ ಉಳಿದಿವೆ. ಬಹುತೇಕ ಪದವಿ ಕೋರ್ಸ್‌ಗಳಂತೆ ತಾಂತ್ರಿಕ ಶಿಕ್ಷಣವನ್ನು ಸೆಮಿಸ್ಟರ್ ಪದ್ಧತಿಯಲ್ಲಿ (ವರ್ಷಕ್ಕೆ ಎರಡು) ಬೋಧಿಸಲಾಗುತ್ತಿದೆ.ಹೆಚ್ಚಿನ ವಿಷಯಗಳನ್ನು ಕಡಿಮೆ ಅವಧಿಯಲ್ಲಿ ಬೋಧಿಸುವುದು ಇದರ ಗುರಿ. ಆದರೆ ಈ ವ್ಯವಸ್ಥೆ ಸರಿಯಾಗಿ ನಡೆಯುತ್ತಿದೆಯೇ ಎಂದು ನೋಡಿದರೆ, ಬೋಧನೆಗೆ ಸಿಗುವ ಸಮಯ ಕೇವಲ 14ರಿಂದ 16 ವಾರ ಅಷ್ಟೆ! ಅದರಲ್ಲಿ ಕಿರು ಪರೀಕ್ಷೆಗಳಿಗೆ 10 ದಿನ ಹೋಗುತ್ತದೆ. ಇನ್ನು ಸರ್ಕಾರಿ ರಜೆಗಳು, ಬಂದ್‌ನಂತಹ ಕಾರಣಗಳಿಂದ ಅಕಸ್ಮಾತ್ತಾಗಿ ಸಿಗುವ ರಜೆಗಳೆಲ್ಲ ಸೇರಿದರೆ ಒಂದು ಸೆಮಿಸ್ಟರ್‌ಗೆ ಇಟ್ಟಿರುವ ಅಷ್ಟೂ ವಿಷಯಗಳ ಪೂರ್ಣ ಬೋಧನೆ ಕಷ್ಟವೇ ಸರಿ.ಸಾಮಾನ್ಯವಾಗಿ ಡಿಪ್ಲೊಮಾ ಪಡೆದವರು ಎಂಜಿನಿಯರಿಂಗ್ ಸೇರುವಾಗ ಕನಿಷ್ಠ ಒಂದು ತಿಂಗಳು ತಡವಾಗಿಯೇ ಸೇರುತ್ತಾರೆ. ಶೈಕ್ಷಣಿಕ ವರ್ಷ 2012-13ಕ್ಕೆ ಅವರ ಪ್ರವೇಶ ಪ್ರಕ್ರಿಯೆ ಸೆಪ್ಟೆಂಬರ್ ಕೊನೆಗೆ ಮುಗಿದಿದೆ. ಅಂದರೆ ಈ ವಿದ್ಯಾರ್ಥಿಗಳಿಗೆ ಕೇವಲ 40 ದಿನಗಳ ಬೋಧನೆ ಲಭ್ಯವಾಗಲಿದೆ ಅಷ್ಟೆ. ಇಷ್ಟು ಕಡಿವೆು ಅವಧಿಯಲ್ಲಿ ಅವರು ಹೇಗೆ ತಾನೇ ಎಲ್ಲ ವಿಷಯಗಳನ್ನೂ ಓದಿ ಅರ್ಥ ಮಾಡಿಕೊಳ್ಳಬಲ್ಲರು? ಹೀಗಿರುವಾಗ ಪ್ರತಿ ವಿಷಯದಲ್ಲೂ ಶೇಕಡಾ 65 ಅಂಕ ಗಳಿಸಲು ಸಾಧ್ಯವೇ? (ಉದಾಹರಣೆಗೆ ಇನ್ಫೋಸಿಸ್ ಕಂಪೆನಿಗೆ ಸೇರಲು ಎಲ್ಲ ಸೆಮಿಸ್ಟರ್‌ಗಳಲ್ಲೂ ಕನಿಷ್ಠ  ಶೇಕಡಾ 65 ಅಂಕ ಗಳಿಸಿರಬೇಕು) ವಿದ್ಯಾರ್ಥಿಗಳಿಗೆ ಕಲಿಯುವ ಆಸೆ ಇದ್ದರೂ ಪೂರ್ಣ ಪ್ರಮಾಣದ ವಿಷಯ ಬೋಧನೆಗೆ ಸಮಯಾವಕಾಶ ಇರುವುದಿಲ್ಲ.ತಾಂತ್ರಿಕ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಗುಣಮಟ್ಟ ಒಂದೇ ರೀತಿ ಇರುವುದಿಲ್ಲ. ಹಾಗೆಯೇ ಅಧ್ಯಾಪಕರ ಬೋಧನಾ ಮಟ್ಟದಲ್ಲೂ ಕಾಲೇಜಿನಿಂದ ಕಾಲೇಜಿಗೆ ವ್ಯತ್ಯಾಸ ಇರುತ್ತದೆ. ಅನೇಕ ಕಾಲೇಜುಗಳಲ್ಲಿ ಶ್ರಮಪಟ್ಟು ಬೋಧಿಸುವ ಅಧ್ಯಾಪಕರಿದ್ದರೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಷ್ಟಕ್ಕಷ್ಟೆ ಎಂಬಂತಿರುತ್ತದೆ. ಕೆಲವೊಮ್ಮೆ, ಸಿಗುವ ಸಮಯದಲ್ಲೇ ವಿಶೇಷ ತರಗತಿ ತೆಗೆದುಕೊಂಡು ಪಠ್ಯಕ್ರಮ ಪೂರ್ಣಗೊಳಿಸುವ ಇರಾದೆ ಬೋಧಕರಿಗೆ ಇದ್ದರೂ ವಿದ್ಯಾರ್ಥಿಗಳಿಗೆ ಶ್ರದ್ಧೆ/ ಆಸಕ್ತಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ವಿಷಯವನ್ನು ಇಚ್ಛೆಪಟ್ಟು ಕಲಿಯದಿದ್ದರೆ ತಾಂತ್ರಿಕ ನೈಪುಣ್ಯ ಬರುವುದಿಲ್ಲ. ಅಂತಹವರನ್ನು ಉದ್ಯಮಿಗಳು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ.ಒಟ್ಟಾರೆ, ಸೆಮಿಸ್ಟರ್ ಪದ್ಧತಿಯಿಂದ ತಾಂತ್ರಿಕ ಶಿಕ್ಷಣ ಯಾಂತ್ರಿಕವಾಗಿ ನಡೆಯುತ್ತಿದೆ. ಈ ವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ  ಪಠ್ಯೇತರ ವಿಷಯಗಳ ಕಡೆ ಗಮನ ಕೊಡಲು ಸಮಯವೇ ಇರುವುದಿಲ್ಲ. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹ ಹಲವು ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ.ಹಾಗಿದ್ದರೆ ಇದಕ್ಕೆಲ್ಲ ಪರಿಹಾರ ಇಲ್ಲವೇ? ಇದೆ ಎನ್ನುತ್ತಾರೆ ತಾಂತ್ರಿಕ ಶಿಕ್ಷಣ ತಜ್ಞರು. ಐ.ಐ.ಟಿ. ಬಾಂಬೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ದೀಪಕ್ ಬಿ. ಪಾಠಕ್ ಅವರ ಪ್ರಕಾರ `ಎಂಜಿನಿಯರಿಂಗ್ ಶಿಕ್ಷಣವನ್ನು ಈಗಿನ ನಾಲ್ಕು ವರ್ಷಗಳ ಬದಲಿಗೆ 5 ವರ್ಷದ ಕೋರ್ಸಾಗಿ ಬದಲಿಸಿದರೆ ಬೋಧಕರಿಗೆ ಪಠ್ಯದ ಸಂಪೂರ್ಣ ಬೋಧನೆಗೆ ಅವಕಾಶ ಸಿಗುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೂ ಜ್ಞಾನ ಸಂಪಾದನೆಗೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ'`ಅರೆಬೆಂದ ಅನ್ನ ಆರೋಗ್ಯಕ್ಕೆ ಮಾರಕ' ಎಂಬುದು ದೀಪಕ್ ಅವರ ಇಂಗಿತ. ಹಿಂದೆ ಐದು ವರ್ಷದ ಕೋರ್ಸ್ ಇದ್ದಾಗ ಎಂಜಿನಿಯರಿಂಗ್ ಕಲಿತಿರುವ ಅವರು `ಆಗಿನಂತೆ ವಿಷಯಗಳನ್ನು ಮನದಟ್ಟು ಮಾಡಿಸಲು ಈಗ ಸಾಧ್ಯವಿಲ್ಲ. ಹಾಗೆಂದರೆ ಒಳ್ಳೆಯ ಬೋಧಕರು ಇಲ್ಲ ಎಂದು ಅರ್ಥವಲ್ಲ. ಕಲಿಸಲು- ಕಲಿಯಲು ಈಗಿರುವ ನಾಲ್ಕು ವರ್ಷದ ಕೋರ್ಸ್ ಅನುಕೂಲಕರ ಆಗಿಲ್ಲ' ಎಂದು ಹೇಳುತ್ತಾರೆ.ಇದಕ್ಕೆ ದನಿಗೂಡಿಸುವ ವಿವಿಧ ತಾಂತ್ರಿಕ ಶಿಕ್ಷಣ ತಜ್ಞರು, ಈ ಬಗ್ಗೆ ದೇಶದ ಉನ್ನತ ಶಿಕ್ಷಣ ಸಚಿವರಿಗೆ ಎಷ್ಟೋ ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ದೊರೆತಿಲ್ಲ  ಎಂದು ವಿಷಾದಿಸುತ್ತಾರೆ.

ಹಾಗಿದ್ದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಶಿಕ್ಷಣ ಎಂದರೆ...

ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಜ್ಞಾನದ ಮೂಲಕ ಸಂತೋಷವನ್ನು ಉದ್ದೀಪಿಸುವುದೇ ಶಿಕ್ಷಕರ ಅತ್ಯುನ್ನತ ಕೌಶಲ.

-ಆಲ್ಬರ್ಟ್ ಐನ್‌ಸ್ಟೀನ್, ವಿಜ್ಞಾನಿ

***

ಶಿಕ್ಷಣದ ಬೇರುಗಳು ಕಹಿಯಾಗಿ ಇರುತ್ತವೆ, ಆದರೆ ಅದರ ಹಣ್ಣುಗಳು ಮಾತ್ರ ಸಿಹಿಯಾಗಿರುತ್ತವೆ.

-ಅರಿಸ್ಟಾಟಲ್

***

ಆಧುನಿಕ ಶಿಕ್ಷಿತನ ಕೆಲಸ ಮರಳುಗಾಡಿಗೆ ನೀರುಣಿಸುವುದೇ ಹೊರತು ಅರಣ್ಯಗಳನ್ನು ಕಡಿಯುವುದಲ್ಲ.

-ಸಿ.ಎಸ್.ಲೆವಿಸ್

***

ಕೆಲವು ವಿಷಯಗಳ ಬಗ್ಗೆ  ಎಲ್ಲವನ್ನೂ, ಎಲ್ಲ ವಿಷಯಗಳ ಬಗ್ಗೆ ಕೆಲವನ್ನು ತಿಳಿಯಲು ಪ್ರಯತ್ನ ಪಡಿ.

-ಥಾಮಸ್ ಎಚ್.ಹಕ್ಸಲೆ

***

ಶಿಕ್ಷಣ ಎಂದರೆ ಪಡೆಯುವುದಲ್ಲ, ಸಾಧಿಸುವುದು.

-ಅನಾಮಿಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry