ತಾಂಬಾ: ಕುಸಿಯುವ ಸ್ಥಿತಿಯಲ್ಲಿ ಮತ್ತೊಂದು ಟ್ಯಾಂಕ್!

ಗುರುವಾರ , ಜೂಲೈ 18, 2019
22 °C

ತಾಂಬಾ: ಕುಸಿಯುವ ಸ್ಥಿತಿಯಲ್ಲಿ ಮತ್ತೊಂದು ಟ್ಯಾಂಕ್!

Published:
Updated:

ತಾಂಬಾ: ಬೇಸಿಗೆ ಮುಗಿದರೂ ವಿಜಾಪುರ ಜಿಲ್ಲೆಯ ನೀರಿನ ಬವಣೆ (ಸಮಸ್ಯೆ) ಇನ್ನೂ ತೀರಿಲ್ಲ.  ಅದರಲ್ಲೂ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ನೀರಿನ ತೊಂದರೆ ಜಿಲ್ಲೆಯ ನೀರಿನ ಸಮಸ್ಯೆಗೆ ಹಿಡಿದ ಕೈಗನ್ನಡಿಯಂತಿದೆ.ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಇಂದಿಗೂ ಪರದಾಡುವಂತಾಗಿದೆ.  ಹತ್ತಾರು ವರ್ಷಗಳ ಹಿಂದೆ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ಇಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ.ಅಲ್ಲಲ್ಲಿ ಇರುವ ಕೈ ಪಂಪುಗಳಿಂದ ನೀರು ತರಲು ಹೋದರೆ ಅಲ್ಲಿ ಒಂದು ಕೊಡ ನೀರು ತುಂಬಲು ಕನಿಷ್ಠ ಅರ್ಧಗಂಟೆ ಬೇಕು.  ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಕೊಳವೆ ಬಾವಿ ಇಲ್ಲಿಯ ಜನರ ನೀರಿನ ದಾಹ ನೀಗಿಸಲು ಆಧಾರವಾಗಿದೆ.  ವಿದ್ಯುತ್ ಕೈಕೊಟ್ಟರೆ,  ಆ ನೀರೂ ಇಲ್ಲ. ಕೊಳವೆಬಾವಿ ಹೊರತುಪಡಿಸಿದರೆ, ಗ್ರಾಮಸ್ಥರು ಕುಡಿಯುವ ನೀರಿಗಾಗಿ ದಿನಾಲು 2-3 ಕಿ.ಮೀ.ವರೆಗೆ ಹೋಗಿ ನೀರು ತರುವುದು ಸಾಮಾನ್ಯವಾಗಿದೆ.ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂಬ ನಿಟ್ಟಿನಲ್ಲಿ, ಜಿಲ್ಲಾ ಪಂಚಾತಿ ಡಿ.ಡಿ.ಪಿ. ಯೋಜನೆಯಡಿಯಲ್ಲಿ 31 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮೀಪದ ಗೂಗಿಹಾಳ ಕೆರೆಯಲ್ಲಿ ಕೊಳವೆ ಬಾವಿ ತೆರೆದು ನೀರು ಸರಬರಾಜು ಮಾಡುವ ಯೋಜನೆ ರೂಪಿಸಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಕ್ಕೆ ಹನಿ ನೀರೂ ಬರಲಿಲ್ಲ. ಆದರೆ ಇತ್ತೀಚೆಗೆ ಶಾಶ್ವತ ಕುಡಿಯುವ ನೀರು  ಯೋಜನೆಯಡಿಯಲ್ಲಿ 84 ಲಕ್ಷ ರೂ.ಗಳ ಕುಡಿಯುವ ನೀರನ ಯೋಜನೆಗೆ ಶಾಸಕರು ಚಾಲನೆ ನೀಡಿದ್ದಾರೆ.  ಆದರೆ ಅದು ಕೂಡ ಮಂದಗತಿಯಲ್ಲೇ ಸಾಗಿದೆ.`ಮನೆ, ಹೊಲದಲ್ಲಿನ ಕೆಲಸಬಿಟ್ಟು ಕೊಡ ನೀರಿಗಾಗಿ ಪಾಳೆ ನಿಲ್ಲಬೇಕಾಗೈತ್ರಿ~  ಎನ್ನುತ್ತಾರೆ ಗ್ರಾಮದ ರೈತರು.  ಇದೇ ಪರಿಸ್ಥಿತಿ ಮುಂದುವರಿದರೆ ಸಂಬಂಧಿಸಿದ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಇಂಡಿಯ ಬೀರಪ್ಪ ನಗರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್ ಭಾನುವಾರವಷ್ಟೇ ಕುಸಿದುಬಿದ್ದಿದ್ದು, ತಾಂಬಾದಲ್ಲಿಯೂ ಕುಸಿಯುವ ಹಂತದಲ್ಲಿರುವ ಟ್ಯಾಂಕ್ ಬಗ್ಗೆ ಎಚ್ಚರ ವಹಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry