ತಾಕತ್ತಿದ್ದರೆ ಶಾಸಕರನ್ನುವೇದಿಕೆ ಹತ್ತಿಸಿ

7
ಯಡಿಯೂರಪ್ಪಗೆ ಈಶ್ವರಪ್ಪ ಸವಾಲು

ತಾಕತ್ತಿದ್ದರೆ ಶಾಸಕರನ್ನುವೇದಿಕೆ ಹತ್ತಿಸಿ

Published:
Updated:

ಸುವರ್ಣ ವಿಧಾನಸೌಧ: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಹಾವೇರಿ ಸಮಾವೇಶದಲ್ಲಿ ಬಿಜೆಪಿ ಶಾಸಕರನ್ನು ವೇದಿಕೆಗೆ ಹತ್ತಿಸಲಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.ವಿಧಾನಸೌಧದ ಮೊಗಸಾಲೆಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.       

`ಹಾವೇರಿ ಸಮಾವೇಶದಲ್ಲಿ ವೇದಿಕೆ ಏರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಬಿಜೆಪಿ ತನ್ನ ಶಕ್ತಿ ಏನೆಂಬುದನ್ನು ತೋರಿಸಲಿದೆ' ಎಂದರು.ಸುಳ್ಳು ಮಾಹಿತಿ: `ಯಡಿಯೂರಪ್ಪ ಈಗ ನಮ್ಮ ಪಕ್ಷದ ನಾಯಕರಲ್ಲ. ಅವರ ವಿರುದ್ಧ ಮಾತನಾಡಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಚಹಾ ಕುಡಿಯಲು ಹೋದವರು, ವಿಮಾನ ನಿಲ್ದಾಣಕ್ಕೆ ಬಂದವರನ್ನೆಲ್ಲ ತೋರಿಸಿ ನನ್ನ ಬೆಂಬಲಕ್ಕೆ 60 ಜನ ಶಾಸಕರು ಇದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.`ಕದ್ದು-ಮುಚ್ಚಿ ಕೆಲಸ ಮಾಡುವವರಿಗೆ ನಮ್ಮ ಕಡೆ ಕೈಲಾಗದವರು ಎನ್ನುತ್ತಾರೆ. ಕೆಜೆಪಿ ಕಾರ್ಯವೈಖರಿ ಅದೇ ರೀತಿ ಇದೆ. ಯಡಿಯೂರಪ್ಪ ಜೊತೆ ಹೆಚ್ಚೆಂದರೆ 2-3 ಜನ ಶಾಸಕರು ಇದ್ದಾರೆ. ಅವರಿಗೂ ಯಾವ ಕಡೆ ಹೋಗಬೇಕು ಎಂಬ ಗೊಂದಲವಿದೆ' ಎಂದರು.`ಬಿಜೆಪಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದ ಪಕ್ಷ. ಕೆಜೆಪಿ ಏಕವ್ಯಕ್ತಿ ಪಕ್ಷ. ಯಡಿಯೂರಪ್ಪ ಆ ಪಕ್ಷದಿಂದ ಹೊರಟುಹೋದರೆ ಅದರ ಕತೆ ಮುಗಿದಂತೆ. ಅಂತಹ ಪಕ್ಷಕ್ಕೆ ಯಾರು ಹೋಗಲು ಮನಸ್ಸು ಮಾಡುತ್ತಾರೆ' ಎಂದು ಪ್ರಶ್ನಿಸಿದರು.`ಭಾನುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬ. ಅವತ್ತೇ ಹೊಸ ಪಕ್ಷದ ಸಮಾವೇಶ ನಡೆಯಲಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ' ಎಂದು ಅವರು ಹೇಳಿದರು.ಕಾಂಗ್ರೆಸ್ ರಾಜಕೀಯ: `ಕಾವೇರಿ ವಿವಾದವನ್ನು ಕಾಂಗ್ರೆಸ್, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ' ಎಂದು ಈಶ್ವರಪ್ಪ ಆರೋಪಿಸಿದರು. `ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕಿದ್ದರಿಂದ ನೀರು ಬಿಡಲಾಗಿದೆ. ನಮ್ಮ ಸರ್ಕಾರ ರೈತರ ಪರವಾಗಿದ್ದು, ಕಾವೇರಿ ವಿಷಯದಲ್ಲಿ ಅವರ ಹಿತ ರಕ್ಷಣೆ ಮಾಡಲಿದೆ' ಎಂದು ಹೇಳಿದರು.

`ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಕೋರ್ಟ್ ಆದೇಶ ಪಾಲನೆ ಮಾಡಲು ಅವರು ಕದ್ದು-ಮುಚ್ಚಿ ನೀರು ಬಿಟ್ಟಿದ್ದರು. ಅದನ್ನು ಆ ಪಕ್ಷದ ಮುಖಂಡರು ಮರೆತುಬಿಟ್ಟಿದ್ದಾರೆ' ಎಂದು ಈಶ್ವರಪ್ಪ ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry