ಭಾನುವಾರ, ಡಿಸೆಂಬರ್ 8, 2019
25 °C
ಈಜಿಪುರ ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ವಲಸಿಗರ ಕತೆ-ವ್ಯಥೆ

ತಾತ್ಕಾಲಿಕ ಸೂರಿಗೂ ಸಂಚಕಾರ

ಎಂ.ಸಿ.ಮಂಜುನಾಥ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾತ್ಕಾಲಿಕ ಸೂರಿಗೂ ಸಂಚಕಾರ

ಈಜಿಪುರ ಗೋಜಲು-1

ಬೆಂಗಳೂರು: ಉದ್ಯಾನನಗರಿಯಲ್ಲಿ ಸ್ವಂತ ಸೂರು ಹೊಂದುವ ಕನಸು ಕಂಡು ಇಲ್ಲಿಗೆ ಬಂದವರ ಕನಸು ಈಗ ಮಣ್ಣುಪಾಲಾಗಿದೆ. ಯಾವ ಹೊತ್ತಿನಲ್ಲಿ ತಾತ್ಕಾಲಿಕ ಶೆಡ್‌ಗಳಿಗೆ ಕುತ್ತು ಬರುತ್ತದೋ ಎಂಬ ಆತಂಕ ಮತ್ತೊಂದು ಕಡೆ. ಮುಂದೇನು ಎಂದು ದಿಕ್ಕುತೋಚದ ಸ್ಥಿತಿ.ಈಜಿಪುರ ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗದವರು) ವಸತಿ ಸಮುಚ್ಚಯದಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯವಿದು. ಸೂರಿನ ಆಸೆಗಾಗಿ ನಗರದ ವಿವಿಧ ಕೊಳೆಗೇರಿಗಳಿಂದ ಇಲ್ಲಿಗೆ ವಲಸೆ ಬಂದಿರುವ ಜನರ ಕಣ್ಣೀರ ಕಥನ ಕೂಡ. ಮತ್ತೊಂದೆಡೆ ಇಲ್ಲಿನ ನಿವಾಸಿಗಳು ಹಾಗೂ ವಲಸೆ ಬಂದವರ ನಡುವೆ ಜಟಾಪಟಿ ನಡೆದಿದೆ. ಪುನರ್ವಸತಿ ಯೋಜನೆಗಾಗಿ ಈಜಿಪುರದ ಕೊಳೆಗೇರಿಯಲ್ಲಿನ ಶೆಡ್‌ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವುಗೊಳಿಸಿದ ನಂತರ ನಗರದ ವಿವಿಧ ಕೊಳೆಗೇರಿಗಳಿಂದ ಬಂದು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವ ಜನರು ನೆರವಿಗಾಗಿ ಹಾತೊರೆಯುತ್ತಿದ್ದಾರೆ.ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ಸುತ್ತಮುತ್ತಲ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ವಾಸವಿರುವ ಬಹುತೇಕ ಮಂದಿ ಇಲ್ಲಿನವರಲ್ಲ. ಹಕ್ಕುಪತ್ರ ಹೊಂದಿಲ್ಲದಿದ್ದರೂ ಸರ್ಕಾರದಿಂದ ಸಿಗಬಹುದಾದ ಮನೆಗಳನ್ನು ತಮ್ಮದಾಗಿಸಿಕೊಳ್ಳಲು ಇಲ್ಲಿಗೆ ಬಂದು ಶೆಡ್‌ಗಳನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ ಮೂಲನಿವಾಸಿಗಳದ್ದು.ಆದರೆ, ಈ ಆರೋಪವನ್ನು ಶೆಡ್ ವಾಸಿಗಳು ಒಪ್ಪುವುದಿಲ್ಲ. `ನಾವು ಹಲವು ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿದ್ದೇವೆ. ವಸತಿ ಸಮುಚ್ಚಯದಿಂದ ಹೊರ ಹಾಕಿದ ನಂತರ ಬೀದಿಗೆ ಬಿದ್ದಿದ್ದೇವೆ. ಶೆಡ್ ಹಾಕಿಕೊಂಡಿದ್ದರೂ ಚಳಿ ಮಳೆಗೆ ನಲುಗಿ ಹೋಗಿದ್ದೇವೆ. ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಶೆಡ್‌ನಲ್ಲಿ ಜಾಗ ಸಾಕಾಗದೆ ನೀರಿನ ಕೊಳವೆಯಲ್ಲಿ ಮಲಗುತ್ತಿದ್ದೇವೆ. ನಮಗೂ ಸೂರು ಕಲ್ಪಿಸಿಕೊಡಿ' ಎಂದು ಆಗ್ರಹಿಸುತ್ತಿದ್ದಾರೆ.`ವಸತಿ ಸಮುಚ್ಚಯದಲ್ಲಿ 15 ವರ್ಷಗಳಿಂದ ಶೆಡ್ ಬಾಡಿಗೆ ಪಡೆದು ವಾಸ ಮಾಡುತ್ತಿದ್ದೆವು. ಅಲ್ಲಿಂದ ಹೊರ ಹಾಕಿದ ನಂತರ ಪಾದಚಾರಿ ಮಾರ್ಗದ ಮೇಲೆ ಬಂದು ನೆಲೆಸಿದ್ದೇವೆ. ಈಗ ಇಲ್ಲಿಂದಲೂ ಜಾಗ ಖಾಲಿ ಮಾಡಿ ಎಂದು ಪೊಲೀಸರು ಸೂಚನೆ ನೀಡಿ ಹೋಗಿದ್ದಾರೆ. ಮುಂದೆ ಎಲ್ಲಿಗೆ ಹೋಗಬೇಕು ತೋಚುತ್ತಿಲ್ಲ. ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಮಗಳಿದ್ದು, ರಸ್ತೆ ಬದಿ ಮಲಗಲು ಧೈರ್ಯವಿಲ್ಲ. ಈ ಪ್ರದೇಶದಲ್ಲಿ ಕೊಲೆ, ಸುಲಿಗೆ, ದರೋಡೆಗಳು ನಡೆಯುತ್ತಲೇ ಇರುತ್ತವೆ. ಬಾಡಿಗೆ ಮನೆ ಪಡೆಯುವಷ್ಟು ಶಕ್ತಿಯೂ ನಮಗಿಲ್ಲ. ನಮ್ಮ ಸಮಸ್ಯೆಗಳನ್ನು ಅರಿತು ಸರ್ಕಾರ ಶೀಘ್ರವೇ ಮನೆ ಕಟ್ಟಿಕೊಡಬೇಕು. ಅಲ್ಲಿಯವರೆಗೆ  ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕು' ಎಂಬುದು ಮೇರಿ ಅವರ ಒತ್ತಾಯ.ಪಾಲಿಕೆ ಅಧಿಕಾರಿಗಳು ಚಂದಾಪುರ ಸಮೀಪದ ಇಗ್ಗಲೂರು ಗ್ರಾಮದಲ್ಲಿ ಶೆಡ್ ಹಾಕಿಸಿಕೊಡುವುದಾಗಿ 5 ಬಸ್‌ಗಳಲ್ಲಿ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅವರು ತೋರಿಸಿದ ಜಾಗದಲ್ಲಿ ಶೆಡ್‌ಗಳೇ ಇರಲಿಲ್ಲ. ಪಕ್ಕದಲ್ಲೇ ಸ್ಮಶಾನವಿತ್ತು. ಆ ಬಯಲು ಪ್ರದೇಶದಲ್ಲಿ ಒತ್ತೊತ್ತಾಗಿ ಮಲಗಬೇಕಿತ್ತು. ಹೀಗಾಗಿ, ಅಲ್ಲಿಂದ ಭಯಬಿದ್ದು ವಾಪಸ್ ಬಂದೆವು. ಈಗ ನಾವು ಇಲ್ಲಿನ ನಿವಾಸಿಗಳೇ ಅಲ್ಲ ಎಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.`ಮನೆಗೆಲಸಕ್ಕೆ ಹೋಗುವ ನಮಗೆ ವ್ಯವಸ್ಥಿತ ಸೂರು ಇಲ್ಲ. ಆಗಾಗ ಸುರಿಯುವ ಮಳೆಯಿಂದ ಶೆಡ್‌ಗಳು ಹಾಳಾಗುತ್ತವೆ. 5 ಹಾಗೂ 12 ವರ್ಷದ  ಮಕ್ಕಳಿದ್ದು, ನಿತ್ಯ ಅವರನ್ನು ಸ್ಥಳೀಯರ ಮನೆಯಲ್ಲಿ ಮಲಗಿಸುತ್ತಿದ್ದೇವೆ. ಸರ್ಕಾರ ನಮಗೆ ಯಾವುದೇ ಹಕ್ಕು ಪತ್ರವನ್ನು ಕೊಟ್ಟಿಲ್ಲ. ಆದರೆ, ಈಗ ಹಕ್ಕು ಪತ್ರವಿದ್ದವರಿಗೆ ಮಾತ್ರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಹಣ ಕೊಟ್ಟಿದೆ' ಎಂದು ಶಬೀರಾ ಆಕ್ರೋಶ ವ್ಯಕ್ತಪಡಿಸಿದರು.`ನಾನು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ರೂ.5,000 ವೇತನ ಸಿಗುತ್ತಿದೆ. ಶೆಡ್‌ಗಳನ್ನು ತೆರವುಗೊಳಿಸಿ ನಮ್ಮನ್ನು ವಸತಿ ಸಮುಚ್ಚಯದಿಂದ ಹೊರ ಹಾಕಿದ ನಂತರ ಪತ್ನಿ ಹಾಗೂ ಒಂದು ವರ್ಷದ ಮಗನೊಂದಿಗೆ ಪಾದಚಾರಿ ಮಾರ್ಗದಲ್ಲೇ ಶೆಡ್ ಹಾಕಿಕೊಂಡು ವಾಸವಾಗಿದ್ದೇನೆ. ಪತ್ನಿ, ಮಗುವನ್ನು ಕರೆದುಕೊಂಡು ಆರ್. ಟಿ.ನಗರದಲ್ಲಿರುವ ಅವರ ತಾಯಿಮನೆಗೆ ಹೋಗಿದ್ದಾಳೆ. ಹೀಗೆ ನಮ್ಮ ಕುಟುಂಬವನ್ನು ರಸ್ತೆಗೆ ತಂದು ನಿಲ್ಲಿಸುವುದಾಗಿ ಮೊದಲೇ ಹೇಳಿದ್ದರೆ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳುತ್ತಿದ್ದೆವು' ಎಂದು ಸುಸೈರಾಜ್ ಆಕ್ರೋಶದಿಂದ ನುಡಿದರು.

ಮನೆ ಆಸೆಗೆ ತಾತ್ಕಾಲಿಕ ಶೆಡ್

`ಇನ್ನೂ ಮೂವತ್ತು ತಿಂಗಳಲ್ಲಿ ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲಿ 1512 ಮನೆಗಳನ್ನು ಕಟ್ಟಿಸಿಕೊಡುವುದಾಗಿ ಪಾಲಿಕೆ ಭರವಸೆ ನೀಡಿದೆ. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಹಕ್ಕು ಪತ್ರ ಹೊಂದಿರುವವರಿಗೆ 30 ಸಾವಿರ ರೂಪಾಯಿ ಕೊಡಲಾಗಿದೆ. ಈ ವಿಷಯ ತಿಳಿದ ಒಂದಷ್ಟು ಜನ ಹಣ, ವಸತಿ ಸೇರಿದಂತೆ ವಿವಿಧ ಸವಲತ್ತುಗಳ ಲಾಭ ಪಡೆಯಲು ಶೆಡ್ ಹಾಕಿಕೊಂಡು ಕೂತಿದ್ದಾರೆ. ವಸತಿ ಸಮುಚ್ಚಯದಲ್ಲಿ ವಾಸ ಮಾಡುತ್ತಿದ್ದರು ಎಂಬುದಕ್ಕೆ ಅವರ ಬಳಿ ಯಾವುದೇ ದಾಖಲೆಗಳೂ ಇಲ್ಲ. ಇತ್ತೀಚೆಗೆ ಅಪರಿಚಿತರು ಸಹ ಶೆಡ್‌ಗಳನ್ನು ಹಾಕಿಕೊಂಡಿದ್ದಾರೆ'

ಲೂಯಿಸ್, ಈಜಿಪುರ ಕೊಳೆಗೇರಿ ನಿವಾಸಿಗಳ ಹೋರಾಟ ಸಮಿತಿ ಅಧ್ಯಕ್ಷ 

 

ಪ್ರತಿಕ್ರಿಯಿಸಿ (+)